ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆ ರೇಣುಕಾಚಾರ್ಯ ಅಚ್ಚರಿಯ ಹೇಳಿಕೆ; ರಾಜ್ಯಾಧ್ಯಕ್ಷ ರಾಜೀನಾಮೆ ನೀಡದ್ದಕ್ಕೂ ಕಿಡಿ

| Updated By: ಗಣಪತಿ ಶರ್ಮ

Updated on: Sep 29, 2023 | 3:11 PM

ಒಂದು ಪಕ್ಷದ ವಿರುದ್ಧ ನಾವು ಮೈತ್ರಿಯಾಗಬಾರದು. ರಾಜ್ಯದ ಅಭಿವೃದ್ಧಿಗೆ ಮೈತ್ರಿ ಮಾಡಿಕೊಂಡು ಒಂದಾಗಬೇಕು ಅಥವಾ ನೆಲ ಜಲದ ವಿಚಾರದ ಬಗ್ಗೆ ಮೈತ್ರಿಯಾಗಬೇಕು. ಅದನ್ನು ಬಿಟ್ಟು ಒಂದು ಸರ್ಕಾರ, ಪಕ್ಷವನ್ನು ಸೋಲಿಸಲು ಒಂದಾಗೋದು ಸರಿಯಲ್ಲ ಎಂದು ರೇಣುಕಾಚಾರ್ಯ ಹೇಳಿದರು.

ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆ ರೇಣುಕಾಚಾರ್ಯ ಅಚ್ಚರಿಯ ಹೇಳಿಕೆ; ರಾಜ್ಯಾಧ್ಯಕ್ಷ ರಾಜೀನಾಮೆ ನೀಡದ್ದಕ್ಕೂ ಕಿಡಿ
ರೇಣುಕಾಚಾರ್ಯ
Follow us on

ದಾವಣಗೆರೆ, ಸೆಪ್ಟೆಂಬರ್​ 29: ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಬಗ್ಗೆ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ (MP Renukacharya) ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಜತೆಗೆ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಇನ್ನೂ ರಾಜೀನಾಮೆ ನೀಡದಿರುವ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ಪ್ರತಿಪಕ್ಷದ ನಾಯಕರನ್ನು ಇನ್ನೂ ಆಯ್ಕೆ ಮಾಡಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ನೈತಿಕ ಹೊಣೆ ಹೊತ್ತು ರಾಜೀನಾಮೆ ‌ನೀಡಿಲ್ಲ. ಅತ್ಮಾವಲೋಕನ ಮಾಡಿಕೊಂಡು ಮುನ್ನಡೆದರೆ ಬಿಜೆಪಿಗೆ ಒಳಿತು. ಅದನ್ನು ಬಿಟ್ಟು ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಹೇಳಿಕೊಂಡು ಹೋಗುತ್ತಿದ್ದಾರೆ. ಇಲ್ಲಿ ಅದನ್ನು ಮತಗಳಾಗಿ ಪರಿವರ್ತನೆ ಮಾಡೋದು ರಾಜ್ಯ ನಾಯಕರ ಕರ್ತವ್ಯವಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಯಡಿಯೂರಪ್ಪ ಕಣ್ಣೀರಿಂದ ಹಾಳಾದ ಬಿಜೆಪಿ: ರೇಣುಕಾಚಾರ್ಯ

ಬಿಜೆಪಿ ಇನ್ನು 10 ವರ್ಷ ಅಧಿಕಾರಕ್ಕೆ ಬರಬಾರದು ಎಂದು ನಮ್ಮ ನಾಯಕರೇ ಹೀಗೆ ಮಾಡಿರಬಹುದು. ಬಿಜೆಪಿಗೆ ಸಮರ್ಥ ನಾಯಕರ ಅಡಳಿತ ಬೇಕಾಗಿದೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಕಣ್ಣೀರಿನಿಂದ ಬಿಜೆಪಿ ಹಾಳಾಗಿದೆ ಎಂದು ರೇಣುಕಾಚಾರ್ಯ ಹೇಳಿದರು.

ರಾಜ್ಯದ ಅಭಿವೃದ್ಧಿಗೆ ಮೈತ್ರಿಯಾಗಬೇಕೇ ವಿನಃ ಒಂದು ಪಕ್ಷವ ಸೋಲಿಸುವುದಕ್ಕಲ್ಲ: ರೇಣುಕಾಚಾರ್ಯ

ಬಿಜೆಪಿ- ಜೆಡಿಎಸ್ ಮೈತ್ರಿಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ರೇಣುಕಾಚಾರ್ಯ, ಬಿಜೆಪಿ ಕಾರ್ಯಕರ್ತರಿಗೆ ಈಗ ಅಸ್ತಿತ್ವದ ಪ್ರಶ್ನೆಯಾಗುತ್ತದೆ. ಒಂದು ಪಕ್ಷದ ವಿರುದ್ಧ ನಾವು ಮೈತ್ರಿಯಾಗಬಾರದು. ರಾಜ್ಯದ ಅಭಿವೃದ್ಧಿಗೆ ಮೈತ್ರಿ ಮಾಡಿಕೊಂಡು ಒಂದಾಗಬೇಕು ಅಥವಾ ನೆಲ ಜಲದ ವಿಚಾರದ ಬಗ್ಗೆ ಮೈತ್ರಿಯಾಗಬೇಕು. ಅದನ್ನು ಬಿಟ್ಟು ಒಂದು ಸರ್ಕಾರ, ಪಕ್ಷವನ್ನು ಸೋಲಿಸಲು ಒಂದಾಗೋದು ಸರಿಯಲ್ಲ ಎಂದು ಹೇಳಿದರು.

ಇದನ್ನೂ ಓದಿ: ಕರ್ನಾಟಕದಲ್ಲಿ ಕಾವೇರಿ ಕಿಚ್ಚಿನ ಮಧ್ಯೆ ರಾಜ್ಯ ರಾಜಕಾರಣದಲ್ಲಿ ಹಲ್ ಚಲ್ ಎಬ್ಬಿಸಿದ ರೇಣುಕಾಚಾರ್ಯ

ಕಾಂಗ್ರೆಸ್ ಬಗ್ಗೆ ರೇಣುಕಾಚಾರ್ಯ ಸಾಫ್ಟ್ ಕಾರ್ನರ್ ಹೊಂದಿದ್ದಾರೆ ಎಂಬ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನೇನು ಕಾಂಗ್ರೆಸ್ ವಕ್ತಾರ ಅಲ್ಲ. ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯ ಮಾತನಾಡಬೇಕು. ತೀವ್ರವಾದ ಸಂಕಷ್ಟವನ್ನು ರೈತರು ಎದುರಿಸುತ್ತಿದ್ದಾರೆ. ಸರ್ಕಾರ ಕೂಡಲೇ ಬರ ಪರಿಹಾರ ನೀಡಬೇಕು. ಬೆಳೆ ಹಾನಿಯಾದ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಬೇಕು. ರೈತರ ಪರವಾಗಿ ಸರ್ಕಾರ ನಿಲ್ಲಬೇಕಿದೆ ಎಂದು ಆಗ್ರಹಿಸಿದರು.

ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ