ಮಾಜಿ ಸಚಿವ ಯುಟರ್ನ್: ಲೋಕಸಭಾ ಟಿಕೆಟ್ ಮೇಲೆ ಮಾಜಿ ಸಚಿವ ವಿ.ಸೋಮಣ್ಣ ಕಣ್ಣು​, ಯಾವ ಕ್ಷೇತ್ರ?

| Updated By: ರಮೇಶ್ ಬಿ. ಜವಳಗೇರಾ

Updated on: Jul 15, 2023 | 10:34 AM

ಕರ್ನಾಟಕ ಬಿಜೆಪಿ ಅಧ್ಯಕ್ಷ ಸ್ಥಾನದ ಬೇಡಿಕೆಯ ನಂತರ ಇದೀಗ ಮಾಜಿ ಸಚಿವ ವಿ ಸೋಮಣ್ಣ ಕಣ್ಣು ಮುಂಬರುವ ಲೋಕಸಭಾ ಚುನಾವಣೆ ಮೇಲೆ ಬಿದ್ದಿದೆ.

ಮಾಜಿ ಸಚಿವ ಯುಟರ್ನ್:  ಲೋಕಸಭಾ ಟಿಕೆಟ್ ಮೇಲೆ ಮಾಜಿ ಸಚಿವ ವಿ.ಸೋಮಣ್ಣ ಕಣ್ಣು​, ಯಾವ ಕ್ಷೇತ್ರ?
ಗೋವಿಂದರಾಜನಗರ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಸೋಮಣ್ಣ
Follow us on

ಬೆಂಗಳೂರು, (ಜುಲೈ 15): ನಾನು ಲೋಕಸಭಾ ಚುನಾವಣೆಯ (Lok Sabha Elections 2024) ಆಕಾಂಕ್ಷಿ ಅಲ್ಲ. ಅದರ ಅವಶ್ಯಕತೆಯೂ ನನಗಿಲ್ಲ. ಮೊನ್ನೆಯಾಗಿರುವ ಪೆಟ್ಟು ತಡೆದುಕೊಂಡರೆ ಸಾಕಾಗಿದೆ. ಮತ್ತೆ ಅಂತಹ ಪೆಟ್ಟು ತಿನ್ನಲು ಹೋಗುವುದಿಲ್ಲ ಎಂದಿದ್ದ ಮಾಜಿ ಸಚಿವ ವಿ.ಸೋಮಣ್ಣ (V Somanna) ಇದೀಗ ಮನಸ್ಸು ಬದಲಿಸಿದ್ದು, ಮುಂಬರುವ 2024ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಹೌದು…ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಮೊದಲು ತುಮಕೂರು ಲೋಕಸಭಾ ಕ್ಷೇತ್ರದಿಂದ ಅಖಾಡಕ್ಕಿಳಿಯುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಆದ್ರೆ, ಇದೀಗ ಹಾಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಬೆಂಗಳೂರು ದಕ್ಷಿಣ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ.

ಇದನ್ನೂ ಓದಿ: ಮುಂದಿನ ಲೋಕಸಭಾ ಚುನಾವಣೆಗೆ ವಿ ಸೋಮಣ್ಣ ಸ್ಪರ್ಧೆ: ಯಾವ ಕ್ಷೇತ್ರ? ಬಿಜೆಪಿ ನಾಯಕನ ಆಡಿಯೋ ವೈರಲ್

ಹೌದು.. ಕರ್ನಾಟಕ ಬಿಜೆಪಿ ಅಧ್ಯಕ್ಷ ಸ್ಥಾನದ ಬೇಡಿಕೆಯ ನಂತರ ವಿ ಸೋಮಣ್ಣ ಕಣ್ಣು ಇದೀಗ ಈಗ ಬೆಂಗಳೂರು ದಕ್ಷಿಣ ಕ್ಷೇತ್ರದ ಲೋಕಸಭಾ ಟಿಕೆಟ್​​ಗೆ ಬೇಡಿಕೆ ಇಟ್ಟಿದ್ದಾರೆ. ನಿನ್ನೆ (ಜುಲೈ 14) ಗೋವಿಂದರಾಜನಗರ ಕ್ಷೇತ್ರದ ವಾರ್ಡವಾರು ಬಿಜೆಪಿ ಸಭೆಯಲ್ಲಿ ಬಹಿರಂಗಪಡಿಸಿದ್ದು, ನಾನು ಕೂಡಾ ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದಿದ್ದಾರೆ.

20 ವರ್ಷಗಳಿಂದ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಒಂದೇ ಸಮುದಾಯಕ್ಕೆ ಟಿಕೆಟ್ ನೀಡಲಾಗುತ್ತಿದೆ. ಈ ಬಾರಿ ಬೇರೆ ಸಮುದಾಯಕ್ಕೆ ಕೊಡಲಿ. ನಾನು ಕೂಡ ಆಕಾಂಕ್ಷಿ ಎಂದು ಹೇಳಿದ್ದಾರೆ. ಈ ಮೂಲಕ ತೇಜಸ್ವಿ ಸೂರ್ಯ ಕ್ಷೇತ್ರದ ಟಿಕೆಟ್​ ಈ ತಮಗೆ ಬೇಕೆಂದು ಬಹಿರಂಗವಾಗಿ ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ ವಿಧಾನಸಭಾ ಚುನಾವಣೆಯಲ್ಲಿಯಾರ್ಯಾರು ಸೋಲಿಗೆ ಕಾರಣರಾದರೋ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲೇಬೇಕು. ಮತ್ತೊಂದು ಬಾರಿ ನಿಮ್ಮನ್ನೆಲ್ಲಾ ಕರೆದು ಚರ್ಚೆ ನಡೆಸುತ್ತೇನೆ ಎಂದು ಸಭೆಯಲ್ಲಿ ಭಾವುಕರಾಗಿ ಮಾತನಾಡಿದರು.

ಸೋಮಣ್ಣ ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್​ ಬೇಡಿಕೆ ಇಟ್ಟಿದ್ದಾರೆ. ಆದ್ರೆ, ಹೈಕಮಾಂಡ್, ​ ಹಾಲಿ ಸಂಸದ, ಬಿಜೆಪಿ ರಾಷ್ಟ್ರೀಯ ಯುವ ಘಟಕದ ಸಾರಥಿ ತೇಜಸ್ವಿ ಸೂರ್ಯ ಅವರನ್ನು ಬಿಟ್ಟು ಸೋಮಣ್ಣಗೆ ಮಣೆ ಹಾಕುವುದು ಕಷ್ಟ ಸಾಧ್ಯ. ಆದರೂ ಬಿಜೆಪಿ ಹೈಕಮಾಂಡ್​ ಹೊಸ ಪರೀಕ್ಷೆ ಮಾಡಿದರೂ ಅಚ್ಚರಿ ಪಡಬೇಕಿಲ್ಲ.

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋಮಣ್ಣ, ಹೈಕಮಾಂಡ್​ ಸೂಚನೆ ಮೇರೆಗೆ ಗೋವಿಂದರಾಜನಗರ ಬಿಟ್ಟು ಸಿದ್ದರಾಮಯ್ಯ ವಿರುದ್ಧ ವರುಣಾ ಕ್ಷೇತ್ರ ಹಾಗೂ ಚಾಮರಾಜನಗರದ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದ್ರೆ, ಎರಡೂ ಕಡೆ ಅವರು ಸೋಲುಕಂಡಿದ್ದಾರೆ. ಇದರಿಂದ ಬೇಸರಗೊಂಡಿರುವ ಸೋಮಣ್ಣ ಬಿಜೆಪಿ ರಾಜ್ಯಾಧ್ಯಕ್ಷದ ಬೇಡಿಕೆ ಇಟ್ಟಿದ್ದಾರೆ.

ಇನ್ನು ತುಮಕೂತು ಬಿಜೆಪಿ ಸಂಸದ ಜಿಎಸ್ ಬಸವರಾಜು ಅವರು ತಮ್ಮ ಕ್ಷೇತ್ರವನ್ನು ಸೋಮಣ್ಣನವರಿಗೆ ಬಿಟ್ಟು ಕೊಡುತ್ತೇನೆ. ಹಾಗಾಗಿ ಮುಂದಿನ ಸಲ ಅವರನ್ನು ತುಮಕೂರಿನಲ್ಲಿ ಗೆಲ್ಲಿಸಿ ಎಂದು ಸ್ವತಃ ಜಿಎಸ್ ಬಸವರಾಜು ಹೇಳಿದ್ದರು. ಇತ್ತೀಚೆಗೆ ವೀರಶೈವ ಲಿಂಗಾಯತ ಮುಖಂಡರ ಸಭೆಯಲ್ಲಿ ಮಾತನಾಡಿದ್ದ ಬಸವರಾಜು, ನಾನು ನಿವೃತ್ತಿಯಾಗುತ್ತಿದ್ದಂತೆ ಸೋಮಣ್ಣ ಅವರನ್ನು ತುಮಕೂರಿನಿಂದ ಕಣಕ್ಕಿಳಿಸುವುದಾಗಿ ಹೈಕಮಾಂಡ್‌ ಹೇಳಿತ್ತು. ವೀರಶೈವ ಲಿಂಗಾಯತ ಸಮಾಜದವರು ಒಗ್ಗೂಡಿ ಅವರನ್ನು ಆಯ್ಕೆ ಮಾಡಬೇಕು. ನೀವು ವೀರಶೈವ ಸಮಾಜದವರು ಒಡೆದು ಹೋದರೆ ಸಂಸದ ಸ್ಥಾನವನ್ನು ಬೇರೆಯವರು ಆಕ್ರಮಿಸಿಕೊಳ್ಳುತ್ತಾರೆ ಎಂದು ಅವರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

Published On - 10:27 am, Sat, 15 July 23