ಪಕ್ಷಕ್ಕೆ ಬರುವಾಗ ಬಿಜೆಪಿಯವರು ಜಾಮೂನು ಕೊಡುತ್ತಾರೆ, ಅಧಿಕಾರ ಮುಗಿದ ಮೇಲೆ ವಿಷ ಕೊಡ್ತಾರೆ: ಸ್ವಪಕ್ಷದ ವಿರುದ್ಧ ಗುಡುಗಿದ ಸೋಮಶೇಖರ್

| Updated By: ರಮೇಶ್ ಬಿ. ಜವಳಗೇರಾ

Updated on: Nov 08, 2023 | 3:14 PM

ಬಿಜೆಪಿ ಶಾಸಕ ಎಸ್​​ಟಿ ಸೋಮಶೇಖರ್ ಸ್ವಪಕ್ಷದ ವಿರುದ್ಧವೇ ಮತ್ತೆ ಸಿಡಿದೆದ್ದು, ಕೆಲ ನಾಯಕರ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿದ್ದಾರೆ. ಇನ್ನು ಬಿಜೆಪಿ ನಾಯಕರ ಬರ ಅಧ್ಯಾಯನಕ್ಕೂ ಸಹ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕಾಂಗ್ರೆಸ್​ ಹೋದರೆ ಹೋಗಲಿ ಎಂದಿದ್ದ ಈಶ್ವರಪ್ಪಗೆ ತಿರುಗೇಟು ನೀಡಿದ್ದಾರೆ. ಇನ್ನು ಕಾಂಗ್ರೆಸ್​ ಸೇರ್ಪಡೆಗೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇದರ ಎಲ್ಲಾ ವಿವರ ಈ ಕೆಳಗಿನಂತಿದೆ .

ಪಕ್ಷಕ್ಕೆ ಬರುವಾಗ ಬಿಜೆಪಿಯವರು ಜಾಮೂನು ಕೊಡುತ್ತಾರೆ, ಅಧಿಕಾರ ಮುಗಿದ ಮೇಲೆ ವಿಷ ಕೊಡ್ತಾರೆ: ಸ್ವಪಕ್ಷದ ವಿರುದ್ಧ ಗುಡುಗಿದ ಸೋಮಶೇಖರ್
ಬಿಜೆಪಿ ಶಾಸಕ ಎಸ್​ಟಿ ಸೋಮಶೇಖರ್
Follow us on

ಮೈಸೂರು, (ನವೆಂಬರ್ 08): ಬೆಂಗಳೂರಿನ ಯಶವಂತಪುರ ಬಿಜೆಪಿ ಶಾಸಕ ಎಸ್​ಟಿ ಸೋಮಶೇಖರ್ (st somashekar)ಅವರು ಪಕ್ಷದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದಾರೆ. ಡಿಕೆ ಶಿವಕುಮಾರ್ ಜೊತೆ ಉತ್ತರ ಒಡನಾಟ ಹೊಂದಿರುವ ಸೋಮಶೇಖರ್ ಅವರು ಕಾಂಗ್ರೆಸ್​ಗೆ ಹೋಗುತ್ತಾರೆ ಅಂತೆಲ್ಲಾ ಗುಲ್ಲೆದ್ದಿದೆ. ಇದರ ಬೆನ್ನಲ್ಲೇ ಇದೀಗ ಎಸ್​ಟಿ ಸೋಮಶೇಖರ್ ಸ್ವಪಕ್ಷದ ವಿರುದ್ಧ ಮತ್ತೆ ಗುಡುಗಿದ್ದಾರೆ. ಪಕ್ಷಕ್ಕೆ ಬರುವಾಗ ಬಿಜೆಪಿಯವರು ಜಾಮೂನು ಕೊಡುತ್ತಾರೆ, ಅಧಿಕಾರ ಮುಗಿದ ಮೇಲೆ ವಿಷ ಕೊಡುತ್ತಾರೆ ಎಂದು ಸ್ವಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ್, ನಾನು ಕಾಂಗ್ರೆಸ್​ನಲ್ಲಿದ್ದವನು, ಅವರಾಗಿತೇ ಪಕ್ಷಕ್ಕೆ ಸೇರಿಸಿಕೊಂಡರು. ಈಗ ಎಸ್​ಟಿಎಸ್​ ಹೋದರೆ ಹೋಗಲಿ ಎಂದು ಮಾತನಾಡುತ್ತಿದ್ದಾರೆ. ನನ್ನನ್ನು ಪಕ್ಷದಿಂದ ಬಿಡಿಸಲು ರೆಡಿಯಾಗಿದ್ದಾರೆ.​ ನನ್ನ ಕ್ಷೇತ್ರದ ಅಭಿವೃದ್ಧಿಗೆ ಸಿಎಂ, ಡಿಸಿಎಂ ಬಳಿ ಹೋಗುತ್ತೇನೆ ತಪ್ಪೇನು? ನಾನು ಸಿಎಂ, ಡಿಸಿಎಂ ಹೊಗಳುವುದನ್ನು ಬಿಜೆಪಿಯವರು ಸಹಿಸುತ್ತಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಏಕೆ ಉತ್ತೇಜನ ನೀಡ್ತೀರಿ ಅಂತಾ ಪ್ರಶ್ನಿಸ್ತಾರೆ. ನನ್ನ ಕ್ಷೇತ್ರದ ಜನರಿಗೆ ಒಳ್ಳೆಯದು ಮಾಡುವುದು ಬೇಡ್ವಾ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಎಸ್​ಟಿ ಸೋಮಶೇಖರ್​​ ಬಿಜೆಪಿ ತೊರೆಯುವುದು ಪಕ್ಕನಾ? ಸಂಚಲನ ಮೂಡಿಸಿದ ಸಿಟಿ ರವಿ ಮಾತು

ಸ್ವಪಕ್ಷದ ಬರ ಅಧ್ಯಯನಕ್ಕೆ ಸೋಮಶೇಖರ್ ವಿರೋಧ

ಇನ್ನು ಬಿಜೆಪಿ ಬರ ಅಧ್ಯಯನಕ್ಕೆ ಎಸ್​.ಟಿ.ಸೋಮಶೇಖರ್ ವಿರೋಧ ವ್ಯಕ್ತಪಡಿಸಿದ್ದು, ಕೇಂದ್ರದ ಅಧಿಕಾರಿಗಳು ಬರ ಅಧ್ಯಯನ ಮಾಡಿ ಹೋಗಿದ್ದಾರೆ. ರಾಜ್ಯ ನಾಯಕರು ಕೇಂದ್ರಕ್ಕೆ ಮನವರಿಕೆ ಮಾಡುವ ಕೆಲಸ ಮಾಡಲಿ. ಅದನ್ನು ಬಿಟ್ಟು ಇಲ್ಲಿ ಪ್ರವಾಸ ಮಾಡಿದರೆ ಏನು ಪ್ರಯೋಜನ? ನಿಮ್ಮ ಬರ ಅಧ್ಯಯನ ಪ್ರವಾಸದಿಂದ ಯಾವ ಪ್ರಯೋಜನವಿಲ್ಲ ಎಂದು ಸ್ವಪಕ್ಷದ ವಿರುದ್ಧವೇ ಬಿಜೆಪಿ ಶಾಸಕ ಎಸ್​.ಟಿ.ಸೋಮಶೇಖರ್ ಕಿಡಿಕಾರಿದ್ದಾರೆ.

ನಾನು ಬಿಜೆಪಿ ಪಕ್ಷ ಬಿಟ್ಟು ಹೋಗಲ್ಲ

ಇನ್ನು ಇದೇ ವೇಳೆ ನಾನು ಬಿಜೆಪಿ ಪಕ್ಷ ಬಿಟ್ಟು ಹೋಗಲ್ಲ ಎಂದು ಸ್ಪಷ್ಟಪಡಿಸಿರುವ ಎಸ್​ಟಿ ಸೋಮಶೇಖರ್, ನಾನು ಮಾನಸಿಕವಾಗಿ ದೈಹಿಕವಾಗಿ ನಾನು ಪಕ್ಷದಲ್ಲೆ ಇದ್ದೇನೆ. ಕಾಂಗ್ರೆಸ್ ಸೇರುತ್ತಾರೆ ಎಂಬುದ್ದೆಲ್ಲ ಊಹಾಪೋಹಗಳು. ನಾನು ಯಡಿಯೂರಪ್ಪ ಮಾತು ನಂಬಿ ಬಿಜೆಪಿಯಲ್ಲಿದ್ದೇ‌ನೆ. ಆದ್ರೆ ಇವರೆ ಪಕ್ಷದಿಂದ ಓಡಿಸುವ ಕೆಲಸ ಮಾಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷದವರೆ ನನ್ನ ವಿರುದ್ಧ ಕೆಲಸ ಮಾಡಿದ್ರು. ಈ ಬಗ್ಗೆ ದಾಖಲೆ ಸಮೇತ ದೂರು ಕೊಟ್ಟೆ,ಆದ್ರೆ ಪ್ರಯೋಜನವಾಗಲಿಲ್ಲ. ಅವರ ಹುಟ್ಟಹಬ್ಬವನ್ನೆ ಕ್ಷೇತ್ರದಲ್ಲಿ ಅದ್ದೂರಿಯಾಗಿ ಮಾಡಿದ್ರು ಇದೆಲ್ಲ ಏನ್ ಅರ್ಥ ಎಂದು ಅಸಮಾಧಾನ ಹೊರಹಾಕಿದರು.

ಬಸವರಾಜು ಬೊಮ್ಮಯಿ ಅವರು ಮುಖ್ಯಮಂತ್ರಿಯಾದಾಗ ನನ್ನನ್ನು ಯಡಿಯೂರಪ್ಪ ಉಳಿಸಿಕೊಂಡರು. ಯಡಿಯೂರಪ್ಪನವರ ವಿರುದ್ಧ ಐದಾರು ಜನರು ಮಾತನಾಡಿದ್ರು. ಅವರ ವಿರುದ್ಧ ಪಕ್ಷದಲ್ಲಿ ಕ್ರಮ ತೆಗೆದುಕೊಳ್ಳಲಿಲ್ಲ. ಇದು ಕೂಡ ಪಕ್ಷದ ಹಿನ್ನೆಡೆಗೆ ಕಾರಣ ಎಂದು ಯಡಿಯೂರಪ್ಪರನ್ನ ಪಕ್ಷದಲ್ಲಿ ಮೂಲೆಗುಂಪು ಮಾಡಿರುವುದಕ್ಕೆ ಎಸ್.ಟಿ.ಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.

ನನ್ನನ್ನು ಪಕ್ಷದಿಂದ ಹೋಗು ಅಂತಾ ಹೇಳಲು ಈಶ್ವರಪ್ಪ ಯಾರು?

ಇನ್ನು ಸೋಮಶೇಖರ್ ಕಾಂಗ್ರೆಸ್​ಗೆ ಹೋಗುವುದಾದರೆ ಹೋಗಲಿ ಎನ್ನುವ ಕೆಎಸ್ ಈಶ್ವರಪ್ಪ ಹೇಳಿಕೆಗೆ ಸ್ವತಃ ಎಸ್​ಟಿ ಸೋಮಶೇಖರ್ ಗರಂ ಆಗಿದ್ದು, ನನ್ನನ್ನು ಪಕ್ಷದಿಂದ ಹೋಗು ಅಂತಾ ಹೇಳಲು ಈಶ್ವರಪ್ಪ ಯಾರು? ಬೆಲೆ ಇಲ್ಲದವರ ಹೇಳಿಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ.​ ಈಶ್ವರಪ್ಪ ಏನು ರಾಜ್ಯಾಧ್ಯಕ್ಷನಾ? ಈಶ್ವರಪ್ಪ ನಂಬಿ ಪಕ್ಷಕ್ಕೆ ಬರಲಿಲ್ಲ. ಯಡಿಯೂರಪ್ಪರನ್ನು ನಂಬಿ ಬಿಜೆಪಿಗೆ ಸೇರಿದ್ದೇನೆ ಎಂದು ಈಶ್ವರಪ್ಪ ಅವರಿಗೆ ತಿರುಗೇಟು ನೀಡಿದರು.

ಎಲ್ಲಾ ಬೆಳವಣಿಗೆಯಾದ ಮೇಲೆ ಬಿಎಸ್​ ಯಡಿಯೂರಪ್ಪನವರ ಜೊತೆ ಮಾತನಾಡಿದ್ದೇನೆ. ಯಾವುದೇ ಕಾರಣಕ್ಕೂ ಪಕ್ಷ ಬಿಡಬೇಡ ಎಂದು ಅವರು ಹೇಳಿದ್ದಾರೆ. ಯಡಿಯೂರಪ್ಪ ಮಾತಿಗೆ ಬೆಲೆಕೊಟ್ಟು ಪಕ್ಷದಲ್ಲಿದ್ದೇನೆ‌. ಯಾರೋ 5 ಜನ ಮಾತನಾಡುತ್ತಿರುವ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ಎಸ್.ಟಿ.ಸೋಮಶೇಖರ್ ಬೆಂಬಲಿಗರು ಮಾತ್ರ ಪಕ್ಷ ಬಿಟ್ಟಿಲ್ಲ. ಆರ್​.ಅಶೋಕ್​ ಕ್ಷೇತ್ರ, ಮುನಿರತ್ನ ಕ್ಷೇತ್ರದಲ್ಲಿ ಪಕ್ಷ ಬಿಟ್ಟಿಲ್ವಾ? ಕೇವಲ ನನ್ನನ್ನೇ ಏಕೆ ಟಾರ್ಗೆಟ್​ ಮಾಡ್ತೀರಾ ಎಂದು ಸ್ವಪಕ್ಷದ ನಾಯಕರ ವಿರುದ್ಧವೇ ವಾಗ್ದಾಳಿ ನಡೆಸಿದರು.

ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:13 pm, Wed, 8 November 23