ಮೈಸೂರು, ಜ.13: ಕೊಚ್ಚೆಗೆ ನಾನು ಯಾವತ್ತೂ ಕಲ್ಲು ಹಾಕಲ್ಲ ಎಂದು ಹೇಳುವ ಮೂಲಕ ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ (Pratap Simha) ಅವರು ತನ್ನ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಕೆ ಮಾಡಿದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಅವರಿಗೆ ಕೌಂಟರ್ ಕೊಟ್ಟರು.
ಮೈಸೂರಿನಲ್ಲಿ ಮಾತನಾಡಿದ ಅವರು, ಕೊಚ್ಚೆಗೆ ನಾನು ಯಾವತ್ತೂ ಕಲ್ಲು ಹಾಕಲ್ಲ ಎಂದರು. ತಿಳಿಗೇಡಿಗಳು ಮಾತ್ರ ಕೊಚ್ಚೆಗೆ ಕಲ್ಲು ಹಾಕುತ್ತಾರೆ. ನಾನು ತಿಳಿಗೇಡಿಯಲ್ಲ, ನಾನು ಆ ಕೊಚ್ಚೆಗೆ ಕಲ್ಲು ಹಾಕಲ್ಲ ಎಂದು ಹೇಳುವ ಮೂಳಕ ಪ್ರದೀಶ್ ಈಶ್ವರ್ ಹೇಳಿಕೆಗಳಿಗೆ ಪ್ರತಾಪ್ ಸಿಂಹ ತಿರುಗೇಟು ನೀಡಿದರು.
ಮೈಸೂರು-ಕೊಡಗು ಕ್ಷೇತ್ರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಸ್ಪರ್ಧಿಸುವ ಬಗ್ಗೆ ಕಾಂಗ್ರೆಸ್ ನಾಯಕರು ಹೇಳಿಕೆ ನೀಡಿದ್ದರು. ಲೋಕಸಭೆ ಚುನಾವಣೆಯಲ್ಲಿ ಯತೀಂದ್ರ ಅವರ ಗೆಲುವು ನಿಶ್ಚಿತ ಎಂದು ಹೇಳುವ ಮೂಲಕ ಪ್ರದೀಪ್ ಈಶ್ವರ್ ಅವರು ಯತೀಂದ್ರ ಲೋಕಸಭೆ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಿಂದ ಕಣಕ್ಕಿಳಿಯುವ ಬಗ್ಗೆ ಸುಳಿವು ನೀಡಿದ್ದರು.
ಇದನ್ನೂ ಓದಿ: ಕುಮಾರಸ್ವಾಮಿ ಬಿಡದಿ ಮನೆಗೆ ತೆರಳಿ ಶುಭಕೋರಿ ಆಶೀರ್ವಾದ ಪಡೆದ ಸಂಸದ ಪ್ರತಾಪ್ ಸಿಂಹ
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ, ಚುನಾವಣೆಯಲ್ಲಿ ಯತೀಂದ್ರ ಅವರು ಪ್ರತಿಸ್ಪರ್ಧಿಯಾದರೆ ಉತ್ತಮ ಎಂದರು. ಯಾವತ್ತೂ ಎದುರಾಳಿಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಎದುರು ಯಾವ ಎದುರಾಳಿಯ ಹೆಸರು ಕೂಡ ನಡೆಯುವುದಿಲ್ಲ. ನನ್ನ ಪರ ಎರಡು ಪಕ್ಷದ (ಬಿಜೆಪಿ-ಜೆಡಿಎಸ್) ನಾಯಕರ ಆಶೀರ್ವಾದವಿದೆ ಎಂದು ಹೇಳಿದ್ದಾರೆ.
ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಹೋಗದಿರಲು ಕಾಂಗ್ರೆಸ್ ನಿರ್ಣಯಿಸಿದ ಬಗ್ಗೆ ಮಾತನಾಡಿದ ಪ್ರತಾಪ್ ಸಿಂಹ, ರಾಮ ಜನ್ಮಭೂಮಿಗಾಗಿ ಎಲ್ಕೆ ಅಡ್ವಾಣಿ ರಥಯಾತ್ರೆ ಮಾಡಿದ್ದರು. ರವಿಶಂಕರ್ ಪ್ರಸಾದ್ ಕಾನೂನು ಹೋರಾಟ ಮಾಡಿದವರು. ಪ್ರಧಾನಿ ಮೋದಿ ಅವರು ದೇಶಾದ್ಯಂತ ಜಾಗೃತಿ ಮೂಡಿಸಿದವರು. ಅಡ್ವಾಣಿಯಿಂದ ಮೋದಿವರೆಗೆ ರಾಮ ಜನ್ಮಭೂಮಿ ವಿಚಾರದಲ್ಲಿ ಬಿಜೆಪಿಯ ಪಾತ್ರ ದೊಡ್ಡದಿದೆ. ಆದರೆ ಕಾಂಗ್ರೆಸ್ ಪಕ್ಷದ ಯಾವ ಪಾತ್ರವೂ ಇಲ್ಲ. ಹೀಗಾಗಿ ಅವರಿಗೆ ಅಪರಾಧಿ ಪ್ರಜ್ಞೆ ಇದೆ. ಈ ಕಾರಣಕ್ಕೆ ಅವರು ಉದ್ಘಾಟನೆಯಿಂದ ಹಿಂದೆ ಸರಿದಿದ್ದಾರೆ ಎಂದರು.
ಅಯೋಧ್ಯೆಗೆ ಬಿಡಿಗಾಸು ಕೊಡಲ್ಲ ಎಂದು ಹೇಳಿದ್ದ ಸಿದ್ದರಾಮಯ್ಯ ಅವರು ಉದ್ಘಾಟನೆ ನಂತರ ಅಯೋಧ್ಯೆಗೆ ಹೋಗುವುದಾಗಿ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ತಿರುಗೇಟು ನೀಡಿದ ಪ್ರತಾಪ್ ಸಿಂಹ, ರಾಮನ ಅಸ್ತಿತ್ವವನ್ನೇ ಪ್ರಶ್ನೆ ಮಾಡಿದ ಕಾಂಗ್ರೆಸ್ನ ಪಾಪ ತೊಳೆದುಕೊಳ್ಳಲು ಸಿದ್ದರಾಮಯ್ಯ ಅವರು ತಮ್ಮ ಶಿಷ್ಯರ ಜೊತೆ ಅಯೋಧ್ಯೆಗೆ ಹೋಗಿ ಬರಲಿ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:34 pm, Sat, 13 January 24