ಮುಸ್ಲಿಮರ ಮನೆಯಲ್ಲಿ 2-3 ಪತ್ನಿಯರು ಇರುತ್ತಾರೆ, ಯಾರು ಯಜಮಾನಿ ಆಗುತ್ತಾರೆ; ಪ್ರತಾಪ್ ಸಿಂಹ ವ್ಯಂಗ್ಯ
ಸ್ವಾತಂತ್ರ್ಯ ಪೂರ್ವದಲ್ಲಿ ತಲೆ ಮೇಲೆ ಟೋಪಿ ಹಾಕಿಕೊಂಡವರನ್ನು ಕಾಂಗ್ರೆಸ್‌ನವರು ಎನ್ನುತ್ತಿದ್ದರು. ಈಗ ಕಾಂಗ್ರೆಸ್‌ನವರನ್ನು ಜನರಿಗೆ ಟೋಪಿ ಹಾಕುವವರು ಎನ್ನುತ್ತಾರೆ; ಪ್ರತಾಪ್ ಸಿಂಹ ವ್ಯಂಗ್ಯ
ಮೈಸೂರು: ಕಾಂಗ್ರೆಸ್ ಸರ್ಕಾರ ಗ್ಯಾರಂಟಿ (Guarantee Scheme) ಜಾರಿ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಬಿಜೆಪಿ ಸಂಸದ ಪ್ರತಾಪ್ ಸಿಂಹ (Pratap Simha) ಮುಸ್ಲಿಮರ ಮನೆಯಲ್ಲಿ 2-3 ಪತ್ನಿಯರು ಇರುತ್ತಾರೆ. ಆ ಪೈಕಿ ಯಾರು ಯಜಮಾನಿಯಾಗುತ್ತಾರೆ? ಯಾರಿಗೆ 2,000 ರೂ. ನೀಡಲಾಗುತ್ತದೆ ಎಂದು ಪ್ರಶ್ನಿಸುವ ಮೂಲಕ ವ್ಯಂಗ್ಯವಾಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಚುನಾವಣೆಗೆ ಮೊದಲು ಕಾಂಗ್ರೆಸ್‌ನವರು ಎದೆ ಬಡಿದುಕೊಂಡು ಊರು ಊರಿಗೆ ಹೋಗಿ ತಮಟೆ ಬಾರಿಸಿದ್ದರು. ವಿದ್ಯುತ್ ಎಲ್ಲರಿಗೂ ಉಚಿತ ಅಂದಿದ್ದರು. ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಇನ್ನೂ ಮಾಹಿತಿ ಕೊಟ್ಟಿಲ್ಲ ಎಂದು ಟೀಕಿಸಿದ್ದಾರೆ.
ಸ್ವಾತಂತ್ರ್ಯ ಪೂರ್ವದಲ್ಲಿ ತಲೆ ಮೇಲೆ ಟೋಪಿ ಹಾಕಿಕೊಂಡವರನ್ನು ಕಾಂಗ್ರೆಸ್‌ನವರು ಎನ್ನುತ್ತಿದ್ದರು. ಈಗ ಕಾಂಗ್ರೆಸ್‌ನವರನ್ನು ಜನರಿಗೆ ಟೋಪಿ ಹಾಕುವವರು ಎನ್ನುತ್ತಾರೆ. ಎಲ್ಲರಿಗೂ 200 ಯೂನಿಟ್ ವಿದ್ಯುತ್ ಉಚಿತ ಎಂದು ಹೇಳಿದ್ದರು. ಈಗ ಸರಾಸರಿ ತೆಗೆದು ಉಚಿತ ಕೊಡುತ್ತೇವೆ ಅಂತಾ ಹೇಳಿದ್ದಾರೆ. ಇದು ಮೋಸ ಅಲ್ವಾ? ಯಾವುದೇ ಷರತ್ತು ಇಲ್ಲದೆ ಎಲ್ಲರಿಗೂ 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಡಲೇಬೇಕು ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.
ಎಲ್ಲರಿಗೂ 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಟ್ಟು ಅದಕ್ಕಿಂತ ಹೆಚ್ಚಿಗೆ ಬಂದದಕ್ಕೆ ಬಿಲ್ ನೀಡಿ. ಜನ್ ಧನ್ ಅಕೌಂಟ್ ಓಪನ್ ಆಗಿದೆ. ಅದಕ್ಕೆ ಆಧಾರ್ ಕಾರ್ಡ್ ಲಿಂಕ್ ಆಗಿದೆ. ಹೀಗಿದ್ದರೂ ಗೃಹಲಕ್ಷ್ಮೀ ಯೋಜನೆ ಜಾರಿ ಯಾಕೆ ಆಗುತ್ತಿಲ್ಲ ? ಗೃಹಲಕ್ಷ್ಮೀ ಯೋಜನೆ ಮುಂದೂಡಲು ಕುಂಟು ನೆಪ ಹೇಳಲಾಗುತ್ತಿದೆ. ಮನೆ ಯಜಮಾನಿ ಯಾರು ಅಂತಾ ತೀರ್ಮಾನ ಮಾಡಬೇಕಂತೆ? ಮನೆಯೊಳಗೆ ಅತ್ತೆ ಸೊಸೆ ಕೂತು ಈ ತೀರ್ಮಾನ ಮಾಡಲು ಸಾಧ್ಯವಾ? ಹಿಂದೂಗಳ ಮನೆಯಲ್ಲದರೂ ಅತ್ತೆ – ಸೊಸೆ ನಡುವೆ ಯಜಮಾನಿಗೆ ಪೈಪೋಟಿ ಇರುತ್ತೆ. ಮುಸ್ಲಿಮರ ಮನೆಯಲ್ಲಿ ಎರಡು ಹೆಂಡ್ತಿ ಮೂರು ಹೆಂಡ್ತಿ ಇದ್ದಾರೆ. ಅವರಲ್ಲಿ ಯಾರು ಯಜಮಾನಿ ಆಗುತ್ತಾರೆ? ಅವರ ಮನೆಯೊಳಗೆ ಬೆಂಕಿ ಹಾಕುತ್ತಿದ್ದೀರಿ. ಮುಸ್ಲಿಂ ಕುಟುಂಬ ಒಡೆಯುವ ಕೆಲಸ ಆಗುತ್ತಿದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಇದನ್ನೂ ಓದಿ: Gruha Jyothi scheme: ಗೃಹಜ್ಯೋತಿ ಯೋಜನೆ ಅಡಿ ವಿದ್ಯುತ್ ಬಿಲ್ ಲೆಕ್ಕಾಚಾರ ಹೇಗೆ? ಇಲ್ಲಿದೆ ಸ್ಪಷ್ಟ ಚಿತ್ರಣ
6 ಕೆಜಿ ಅಕ್ಕಿಯನ್ನು ಕೇಂದ್ರ ಸರಕಾರ ಕೊಡುತ್ತಿದೆ. ಇದಕ್ಕೆ ನಾಲ್ಕು ಕೆಜಿ ಸೇರಿಸಿ 10 ಕೆಜಿ ಕೊಟ್ಟರೆ ಅದು ನಿಮ್ಮ ಗ್ಯಾರಂಟಿ ಹೇಗೆ ಆಗುತ್ತೆ? ಇದು ಮೋಸ ಅಲ್ವಾ? ಯುವ ನಿಧಿ ಹೆಸರಲ್ಲೂ ಸರ್ಕಾರ ಜನರಿಗೆ ಮೋಸ ಮಾಡುತ್ತಿದೆ. ಮತಗಳ ಹಗಲು ದರೋಡೆ ಮಾಡಿ ಈಗ ಜನರಿಗೆ ಟೋಪಿ ಹಾಕುವ ಕೆಲಸ ಆಗುತ್ತಿದೆ. ಸುಭಿಕ್ಷ ರಾಜ್ಯ ಕರ್ನಾಟಕವನ್ನು ಕಾಂಗ್ರೆಸ್ ಭಿಕ್ಷಾ ರಾಜ್ಯ ಮಾಡುತ್ತಿದೆ. ಲೋಕಸಭಾ ಚುನಾವಣೆ ವರೆಗೂ ಜನರನ್ನು ಗ್ಯಾರಂಟಿ ಜಾರಿ ಹೆಸರಿನಲ್ಲಿ ಮಂಗ್ಯಾ ಮಾಡುತ್ತಾರೆ. ಕಾಂಗ್ರೆಸ್ ನೀತಿಗಳಿಂದ ರಾಜ್ಯ ದಿವಾಳಿ ಆಗುತ್ತಿದೆ. ಸದ್ಯದಲೇ ಎಲ್ಲಾ ರೀತಿಯ ತೆರಿಗೆ ಹೆಚ್ಚು ಮಾಡುತ್ತಾರೆ. ಆಸ್ತಿ ನೋಂದಣಿ, ಮದ್ಯದ ತೆರಿಗೆ ಹೀಗೆ ಎಲ್ಲವೂ ಹೆಚ್ಚಾಗುತ್ತದೆ. ಕರ್ನಾಟಕಕ್ಕೆ ಶ್ರೀಲಂಕಾ, ಬಾಂಗ್ಲಾದೇಶದ ಸ್ಥಿತಿ ಬರುವ ಕಾಲ ದೂರವಿಲ್ಲ. ಕೇಜ್ರಿವಾಲ್ 2013ರಲ್ಲಿ ಕಳಪೆ ಫ್ರೀ ಯೋಜನೆ ತಂದಿದ್ದರು. ಈಗ ಅದನ್ನೆ ಕಾಂಗ್ರೆಸ್ ಸರ್ಕಾರ ಮಾಡಿದೆ. ಇದು ಕರ್ನಾಟಕ ಮಾಡೆಲ್ ಅಲ್ಲ ಇದನ್ನು ಹಲವರು ರಾಜ್ಯದಲ್ಲಿ ಮಾಡಿ ಜನರನ್ನು ಮಂಗ ಮಾಡಲಾಗಿದೆ. ಕಾಂಗ್ರೆಸ್ನ ಪ್ರಣಾಳಿಕೆ ಈಡೇರಿಸಲು ಕೇಂದ್ರ ಬಜೆಟ್ ಹಣ ತಂದರು ಆಗಲ್ಲ. ಮುಂದಿನ ದಿನದಲ್ಲಿ ಅಂಗನವಾಡಿ ಆಶಾ ಕಾರ್ಯಕರ್ತೆಯರ ಭರವಸೆ ಬಗ್ಗೆಯೂ ಹೋರಾಟ ಮಾಡಲಾಗುವುದು ಎಂದು ಪ್ರತಾಪಸಿಂಹ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ