ಸೋನಿಯಾ, ರಾಹುಲ್ ರಿಮೋಟ್ ಪರದಿ ಒಳಗೆ ಇದ್ದರಷ್ಟೇ ನಿಮ್ಮ ಕೈಯಲ್ಲಿ ಅಧಿಕಾರ: ಖರ್ಗೆಗೆ ಸಿಟಿ ರವಿ ಟಾಂಗ್

ಇಂದು ಕಾಂಗ್ರೆಸ್​ನ ರಾಷ್ಟ್ರೀಯ ಅಧ್ಯಕ್ಷರಾಗಿ ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಇವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅಧಿಕಾರ ಉಳಿಸಿಕೊಳ್ಳಲು ಕಿವಿ ಮಾತು ಹೇಳಿದ್ದಾರೆ.

ಸೋನಿಯಾ, ರಾಹುಲ್ ರಿಮೋಟ್ ಪರದಿ ಒಳಗೆ ಇದ್ದರಷ್ಟೇ ನಿಮ್ಮ ಕೈಯಲ್ಲಿ ಅಧಿಕಾರ: ಖರ್ಗೆಗೆ ಸಿಟಿ ರವಿ ಟಾಂಗ್
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ
Follow us
TV9 Web
| Updated By: Rakesh Nayak Manchi

Updated on:Oct 26, 2022 | 1:23 PM

ಹಾಸನ: ಇಂದು ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಕಳೆದ 24 ವರ್ಷಗಳಲ್ಲಿ ಗಾಂಧಿಯೇತರ ಮೊದಲ ಕಾಂಗ್ರೆಸ್ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಆಯ್ಕೆಯಾಗಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C.T.Ravi), ದಶಕಗಳ ನಂತರ ಪಕ್ಷದ ಗಾಂಧಿಯೇತರ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ್ದಾರೆ.

ನಮ್ಮ ರಾಜ್ಯದ ಒಬ್ಬರು ಐವತ್ತು ವರ್ಷಗಳ ನಂತರ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ನಾನು ಅವರಿಗೆ ಅವರ ಹಿರಿಯ ಅನುಭವವನ್ನು ಗಮನದಲ್ಲಿಟ್ಟುಕೊಂಡು ನಾನು ಕಿರಿಯನಾಗಿ ಒಂದು ಮಾತು ಹೇಳಲು‌ ಬಯಸುತ್ತೇನೆ. ನೀವು ರಿಮೋಟ್ ಪರದಿಯಿಂದ ಹೊರಗೆ ಹೋಗುವ ಪ್ರಯತ್ನ ಮಾಡಿದರೆ ಸೀತರಾಂ ಕೇಸರಿ ಏನು ಮಾಡಿದರು ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಂಡಿರಿ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ರಿಮೋಟ್ ಪರದಿ ಒಳಗೆ ಇರಿ, ಹಾಗಿದ್ದರೆ ಮಾತ್ರ ನಿಮ್ಮನ್ನ ಉಳಿಸುತ್ತಾರೆ. ನೀವು ಸ್ವಂತಿಕೆ ತೋರಿಸುವ ಪ್ರಯತ್ನ ಮಾಡಿದರೆ ಆ ಗಳಿಗೆ ಅಪಮಾನ ಮಾಡಿ ಕಿತ್ತು ಹಾಕುತ್ತಾರೆ ಎಂದರು.

ಈ‌ ಹಿಂದೆ ನಿಜಲಿಂಗಪ್ಪ, ಸೀತಾರಂ ಕೇಸರಿ ಅವರಿಗೆ ಅದೇ ರೀತಿ ಮಾಡಿದ್ದರು. ಯಾರು ಸ್ವಾತಂತ್ರ್ಯ ಅಸ್ತಿತ್ವವನ್ನ ತೋರಿಸುವ ಪ್ರಯತ್ನ ಮಾಡುತ್ತಾರೆ ಅವರನ್ನ ಕಾಂಗ್ರೆಸ್‌ನ ಸೋನಿಯಾಜಿ, ರಾಹುಲ್‌ಜಿ ಕುಟುಂಬ ಸಹಿಸುವುದಿಲ್ಲ. ನಿಮ್ಮ ಸ್ವತಂತ್ರ ಅಸ್ತಿತ್ವವನ್ನು ಯಾವುದೇ ಕಾರಣಕ್ಕೂ ತೋರಿಸಲು ಹೋಗಬೇಡಿ. ಸ್ವತಂತ್ರ ಅಸ್ತಿತ್ವವನ್ನು ಮರೆತು ಇದ್ದರೆ ಇರುವಷ್ಟು ದಿನ ಅಧಿಕಾರದಲ್ಲಿ ಇರಬಹುದು ಎಂದರು.

ಗಾಂಧಿ ಕುಟುಂಬದ ಟೀಕೆ ಇದ್ದ ಹಿನ್ನೆಲೆ ಗಾಂಧಿಯೇತರ ನಾಯಕನನ್ನು ಪಕ್ಷದ ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಪರಿಣಾಮವಾಗಿ ಪಕ್ಷದಲ್ಲಿ ಬದಲಾವಣೆಗಳು ಆಗಬಹುದು ಎಂದು ಕೈ ನಾಯಕರು ಹೇಳುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಸಿ.ಟಿ.ರವಿ, ರಾಜಕೀಯವಾಗಿ ಏನು ಪರಿಣಾಮ ಆಗುತ್ತದೆ ಅಂತ ಇವತ್ತು ಹೇಳಲು‌ ಆಗಲ್ಲ. ಅವರನ್ನು ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಮಾಡಿಲ್ಲ. ಸೋತು ನೆಲಕಚ್ಚಿ, ಸೋಲಿನ ಮೇಲೆ ಸೋಲಿನ ಅನುಭವಿಸುತ್ತಿರುವ ಕಾಂಗ್ರೆಸ್‌ಗೆ ಮುಳುಗುವ ಹಡಗಿಗೆ ಕ್ಯಾಪ್ಟನ್ ಆಗಿದ್ದಾರೆ ಎಂದರು.

ಕಾಂಗ್ರೆಸ್ ಒಂದು ಮುಳುಗುವ ಹಡಗು, ಹಡಗನ್ನು ಉಳಿಸುವುದು ಪ್ರಶ್ನಾರ್ಥಕ ಚಿಹ್ನೆಯಾಗಿದೆ. ಲೈಫ್ ಜಾಕೆಟ್ ಹಾಕಿಕೊಂಡರೆ ಅವರು ಉಳಿದುಕೊಳ್ಳಬಹುದು, ಹಡಗು ಉಳಿಯಲ್ಲ. ಇಷ್ಟು ಮುಂದಾಲೋಚನೆ, ಅನುಭವ ಖಂಡಿತ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇದೆ ಎಂದು ಭಾವಿಸುತ್ತೇನೆ. ಸತತ ಐವತ್ತು ವರ್ಷಗಳ ಕಾಲ ಅಧಿಕಾರದ ರಾಜಕಾರಣದ ರುಚಿ ಕಂಡಿದ್ದಾರೆ ಎಂದರು.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:23 pm, Wed, 26 October 22