AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mallikarjun Kharge: ಕಾಂಗ್ರೆಸ್ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅಧಿಕಾರ ಸ್ವೀಕಾರ; ಸೋನಿಯಾ, ರಾಹುಲ್ ಗಾಂಧಿ ಅಭಿನಂದನೆ

ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದು, 24 ವರ್ಷಗಳ ನಂತರ ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಗಾಂಧಿಯೇತರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Mallikarjun Kharge: ಕಾಂಗ್ರೆಸ್ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅಧಿಕಾರ ಸ್ವೀಕಾರ; ಸೋನಿಯಾ, ರಾಹುಲ್ ಗಾಂಧಿ ಅಭಿನಂದನೆ
ಕಾಂಗ್ರೆಸ್ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅಧಿಕಾರ ಸ್ವೀಕಾರ; ಸೋನಿಯಾ, ರಾಹುಲ್ ಗಾಂಧಿ ಅಭಿನಂದನೆ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Oct 26, 2022 | 11:44 AM

ನವದೆಹಲಿ: ಕಾಂಗ್ರೆಸ್​ ಪಕ್ಷದ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅಧಿಕಾರ ಸ್ವೀಕರಿಸಿದ್ದಾರೆ. ಕಳೆದ ವಾರವಷ್ಟೇ ನಡೆದ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ 66 ವರ್ಷದ ಶಶಿ ತರೂರ್ ಅವರನ್ನು ಸೋಲಿಸಿದ ಕರ್ನಾಟಕದ ಹಿರಿಯ ನಾಯಕ 80 ವರ್ಷದ ಮಲ್ಲಿಕಾರ್ಜುನ ಖರ್ಗೆ ಇಂದು ದೆಹಲಿಯಲ್ಲಿ ಸೋನಿಯಾ ಗಾಂಧಿ ಅವರಿಂದ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ವೇಳೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಕಾರ್ಮಿಕನ ಮಗನನ್ನು ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಏರಿಸಿದೆ. ಇದು ನನಗೆ ಅತ್ಯಂತ ಭಾವುಕ ಕ್ಷಣ ಎಂದಿದ್ದಾರೆ.

ಕಳೆದ 24 ವರ್ಷಗಳಲ್ಲಿ ಗಾಂಧಿಯೇತರ ಮೊದಲ ಕಾಂಗ್ರೆಸ್ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದಾರೆ. ಈ ಸಮಾರಂಭದಲ್ಲಿ ಕೆಸಿ ವೇಣುಗೋಪಾಲ್, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತಿತರ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು. ನೂತನವಾಗಿ ಆಯ್ಕೆಯಾದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋನಿಯಾ ಗಾಂಧಿ ಅಭಿನಂದಿಸಿದರು.

ಈ ವೇಳೆ ಮಾತನಾಡಿದ ಸೋನಿಯಾ ಗಾಂಧಿ, “ಹೊಸದಾಗಿ ಆಯ್ಕೆಯಾದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ನಾನು ನನ್ನ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಬದಲಾವಣೆ ಜಗದ ನಿಯಮ. ಕಾಂಗ್ರೆಸ್ ಈ ಹಿಂದಿನ ವರ್ಷಗಳಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದೆ. ಮುಂದಿನ ದಿನಗಳಲ್ಲೂ ನಾವು ಎಲ್ಲ ರೀತಿಯ ಸಮಸ್ಯೆಗಳನ್ನು ಎದುರಿಸಿ ಮುನ್ನುಗ್ಗುತ್ತೇವೆ ಎಂಬ ನಂಬಿಕೆ ನನಗಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Congress President Election Result: ಬಿಜೆಪಿ ವಿರುದ್ಧ ಪುಟಿದೇಳುವ ಕನಸು ಹೊತ್ತ ಕಾಂಗ್ರೆಸ್​ಗೆ ಮಲ್ಲಿಕಾರ್ಜುನ ಖರ್ಗೆ ಸಾರಥ್ಯ

ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದು, 24 ವರ್ಷಗಳ ನಂತರ ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಗಾಂಧಿಯೇತರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 80ರ ಹರೆಯದ ಖರ್ಗೆ ಅವರಿಗೆ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಬುಧವಾರ ಸೋನಿಯಾ ಗಾಂಧಿ ಅವರು ಚುನಾವಣಾ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು.

ಕಾಂಗ್ರೆಸ್ ಮುಖ್ಯಸ್ಥರಾದ ಬಳಿಕ ತಮ್ಮ ಭಾಷಣದಲ್ಲಿ, ಪಕ್ಷದ ಚುನಾವಣೆಯಲ್ಲಿ ತನಗೆ ಮತ ಹಾಕಿದ ಎಲ್ಲಾ ಪ್ರತಿನಿಧಿಗಳನ್ನು ಮಲ್ಲಿಕಾರ್ಜುನ ಖರ್ಗೆ ಅಭಿನಂದಿಸಿದರು. ಅಧಿಕಾರ ವಹಿಸಿಕೊಳ್ಳುವ ಮುನ್ನ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಅವರಿಗೆ ನಮನ ಸಲ್ಲಿಸಿದರು.

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ 7,897 ಮತಗಳನ್ನು ಪಡೆದರೆ, ಶಶಿ ತರೂರ್ 1,072 ಮತ ಪಡೆದಿದ್ದರು. ಈ ಚುನಾವಣೆಯಲ್ಲಿ ಒಟ್ಟು 9,385 ಮತಗಳು ಚಲಾವಣೆಯಾಗಿದ್ದವು ಈ ಪೈಕಿ 416 ಮತಗಳು ಅಮಾನ್ಯಗೊಂಡಿದ್ದವು. ಈವರೆಗೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ 6 ಬಾರಿ ಚುನಾವಣೆ ನಡೆದಿತ್ತು.

ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ ಮುಂದಿರುವ ಸವಾಲುಗಳು!

5 ದಶಕಗಳಿಗೂ ಹೆಚ್ಚು ಕಾಲದಿಂದ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿರುವ ಕರ್ನಾಟಕದ ಬೀದರ್‌ ಜಿಲ್ಲೆಯವರಾದ ಮಲ್ಲಿಕಾರ್ಜುನ್ ಖರ್ಗೆ ರಾಷ್ಟ್ರ ರಾಜಕಾರಣದಲ್ಲಿ ಪ್ರಭಾವಿ ನಾಯಕರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಅವರ ನಿಷ್ಟೆಯಿಂದಾಗಿಯೇ ಅವರು ಗಾಂಧಿ ಕುಟುಂಬಕ್ಕೆ ಬಹಳ ಆಪ್ತರಾಗಿದ್ದಾರೆ. 8 ಬಾರಿ ಕಾಂಗ್ರೆಸ್ ಶಾಸಕರಾಗಿ, 2 ಬಾರಿ ಲೋಕಸಭಾ ಸಂಸದರಾಗಿ, 1 ಬಾರಿ ರಾಜ್ಯಸಭಾ ಸಂಸದರಾಗಿರುವ ಮಲ್ಲಿಕಾರ್ಜುನ್ ಖರ್ಗೆ ಸೋಲಿಲ್ಲದ ಸರದಾರ ಎಂದೇ ಹೆಸರಾದವರು. ಅವರು 2019ರ ಚುನಾವಣೆಯಲ್ಲಿ ಮಾತ್ರ ಸೋಲನ್ನು ಅನುಭವಿಸಿದ್ದರು ಎಂಬುದನ್ನು ಬಿಟ್ಟರೆ ಉಳಿದಂತೆ ಎಲ್ಲ ಚುನಾವಣೆಗಳಲ್ಲೂ ಗೆಲುವಿನ ರುಚಿ ಕಂಡವರು. ಕಾಂಗ್ರೆಸ್​ನ ಕರ್ನಾಟಕದ ರಾಜ್ಯಾಧ್ಯಕ್ಷ ಮತ್ತು ಕೇಂದ್ರ ಸಚಿವರಾಗಿಯೂ ಮಲ್ಲಿಕಾರ್ಜುನ್ ಖರ್ಗೆ ಸೇವೆ ಸಲ್ಲಿಸಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಪಕ್ಷದ ಎರಡನೇ ದಲಿತ ಸಮುದಾಯದ ಅಧ್ಯಕ್ಷರಾಗಿದ್ದಾರೆ. ಈ ಹಿಂದೆ ಜಗಜೀವನ್ ರಾಮ್ ಅವರು ಮೊದಲ ದಲಿತ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದರು. ಹಾಗೇ, ಕರ್ನಾಟಕದಿಂದ ಕಾಂಗ್ರೆಸ್ ಅಧ್ಯಕರಾಗಿ ಆಯ್ಕೆಯಾದ ಎರಡನೇ ವ್ಯಕ್ತಿ ಎಂಬ ಹೆಗ್ಗಳಿಕೆಯೂ ಮಲ್ಲಿಕಾರ್ಜುನ್ ಖರ್ಗೆ ಅವರದ್ದು. ಇದಕ್ಕೂ ಮೊದಲು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್​. ನಿಜಲಿಂಗಪ್ಪ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು.

1942ರ ಜುಲೈ 21ರಂದು ಬೀದರ್‌ನಲ್ಲಿ ಜನಿಸಿದ ಮಲ್ಲಿಕಾರ್ಜುನ ಖರ್ಗೆ ಕಲಬುರಗಿಯ ಸೇಟ್‌ ಶಂಕರಲಾಲ್‌ ಲಹೋತಿ ಕಾಲೇಜ್‌ನಲ್ಲಿ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದಾಗ ರಾಜಕೀಯ ಪ್ರವೇಶಿಸಿದರು. ಕಾರ್ಮಿಕ ಸಂಘದ ನಾಯಕರಾಗಿದ್ದ ಅವರು 1969ರಲ್ಲಿ ಗುಲ್ಬರ್ಗಾ ನಗರ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಮಲ್ಲಿಕಾರ್ಜುನ್ ಖರ್ಗೆ ಕರ್ನಾಟಕ ಸರ್ಕಾರದಲ್ಲಿ ಗೃಹ, ಕಂದಾಯ, ಪ್ರಾಥಮಿಕ ಶಿಕ್ಷಣ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಹಲವು ಪ್ರಮುಖ ಖಾತೆಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:38 am, Wed, 26 October 22

ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’
‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’
ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ
ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ
ಲಾಡ್ ಮತ್ತು ತಿಮ್ಮಾಪುರ ಮೈಲೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ: ಶಾಸಕ
ಲಾಡ್ ಮತ್ತು ತಿಮ್ಮಾಪುರ ಮೈಲೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ: ಶಾಸಕ
ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ
ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ
ಕಾಶಪ್ಪನವರ್ ಮತ್ತು ಯತ್ನಾಳ್ ಮಾತಿನಲ್ಲಿ ಭಾಷಾ ಮರ್ಯಾದೆ ಮೀರುತ್ತಿದ್ದಾರೆ
ಕಾಶಪ್ಪನವರ್ ಮತ್ತು ಯತ್ನಾಳ್ ಮಾತಿನಲ್ಲಿ ಭಾಷಾ ಮರ್ಯಾದೆ ಮೀರುತ್ತಿದ್ದಾರೆ
ಪೆಹಲ್ಗಾಮ್ ಉಗ್ರರ ದಾಳಿ: ಉತ್ತರ ಕನ್ನಡ ಪ್ರವಾಸಿ ಸ್ಥಳಗಳಲ್ಲಿ ಹೈಅಲರ್ಟ್​
ಪೆಹಲ್ಗಾಮ್ ಉಗ್ರರ ದಾಳಿ: ಉತ್ತರ ಕನ್ನಡ ಪ್ರವಾಸಿ ಸ್ಥಳಗಳಲ್ಲಿ ಹೈಅಲರ್ಟ್​
ಸೇನಾ ಭಾಷೆಯಲ್ಲಿ ಡಿ ಡೇ, ಎಚ್ ಫ್ಯಾಕ್ಟರ್ ಅಂದರೆ ಏನು? ಇಲ್ಲಿದೆ ನೋಡಿ
ಸೇನಾ ಭಾಷೆಯಲ್ಲಿ ಡಿ ಡೇ, ಎಚ್ ಫ್ಯಾಕ್ಟರ್ ಅಂದರೆ ಏನು? ಇಲ್ಲಿದೆ ನೋಡಿ