
ಮಂತ್ರಾಲಯ (ಆಂಧ್ರ ಪ್ರದೇಶ): ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರು ಕುಟುಂಬ ಸಮೇತ ಮಂತ್ರಾಲಯಕ್ಕೆ ಬಂದಿದ್ದು, ರಾಘವೇಂದ್ರ ಸ್ವಾಮಿಗಳ ಆರಾಧನೆ ಮಹೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ರಾಯರ ದರ್ಶನ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಸಂಸದ ಬಿ.ವೈ.ರಾಘವೇಂದ್ರ (BY Raghavendra), ಗುರುರಾಯರ ಕ್ಷೇತ್ರದಲ್ಲಿ 351ನೇ ಆರಾಧನಾ ಮಹೋತ್ಸವ ನಡೆಯುತ್ತಿದೆ. ಎರಡು ವರ್ಷ ಕೊರೊನಾ ಪಿಡುಗು ಇದ್ದ ಕಾರಣ ಸಂಭ್ರಮದಿಂದ ಆರಾಧನಾ ಮಹೋತ್ಸವ ಆಚರಿಸಲು ಸಾಧ್ಯವಾಗಿರಲಿಲ್ಲ. ತಂದೆಯವರು ನನಗೆ ಗುರು ರಾಘವೇಂದ್ರ ರಾಯರ ಹೆಸರಿನ ನಾಮಕರಣ ಮಾಡಿದ್ದಾರೆ. ನನ್ನ ತಮ್ಮನಿಗೆ ರಾಯರ ಗುರುಗಳಾದ ವಿಜಯೇಂದ್ರರ (VY Vijayendra) ಹೆಸರಿಡಲಾಗಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಮತ್ತು ದೇಶದಲ್ಲಿ ಅತಿವೃಷ್ಟಿ, ಅನಾವೃಷ್ಟಿ ಸಮಸ್ಯೆ ಕಾಣಿಸಿಕೊಂಡಿದೆ. ದೇವರು ಸಮವಾದ ಫಲ ಕೊಟ್ಟಾಗ, ಪ್ರಕೃತಿ ಅನುಗ್ರಹಿಸಿದಾಗ ರೈತ ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗುತ್ತದೆ. ಸಾಕಷ್ಟು ಮಳೆಯಾಗಿ, ಬೆಳೆನಾಶವಾಗಿದೆ. ರೈತರು ಸ್ವಾಭಿಮಾನದಿಂದ ಬದುಕು ನಡೆಸುವಂಥ ವರವನ್ನು ರಾಯರು ಕರುಣಿಸಲಿ ಎಂದು ಕೋರಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮಾಧ್ಯಮ ಪ್ರತಿನಿಧಿಗಳು ‘ಕೇಂದ್ರಕ್ಕೆ ರಾಘವೇಂದ್ರ, ರಾಜ್ಯಕ್ಕೆ ವಿಜಯೇಂದ್ರ’ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸುವಂತೆ ಕೋರಿದರು. ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರಾಗಿದ್ದಾರೆ. ರಾಜ್ಯದ ಉದ್ದಗಲಕ್ಕೂ ಓಡಾಡುತ್ತಾ ಕೆಲಸ ಮಾಡುತ್ತಿದ್ದಾರೆ. ಅವರು ಮುಂದೇನು ಮಾಡಬೇಕೆಂದು ವರಿಷ್ಠರು ತೀರ್ಮಾನಿಸುತ್ತಾರೆ. ಅಲ್ಲಿಯವರೆಗೂ ನಾವು ಕಾಯುತ್ತೇವೆ, ನಮಗೇನು ಅವಸರವಿಲ್ಲ ಎಂದು ಯಡಿಯೂರಪ್ಪ ಹೇಳಿದರು.
ರಾಯರ ದರ್ಶನಕ್ಕೆ ಬಂದಿದ್ದ ಯಡಿಯೂರಪ್ಪ ಅವರ ಮತ್ತೋರ್ವ ಮಗ ಬಿ.ವೈ.ವಿಜಯೇಂದ್ರ ಮಾತನಾಡಿ, ಯಾರೋ ಒಂದಿಬ್ಬರು ಹೇಳಿದ ತಕ್ಷಣ ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ. ಇವೆಲ್ಲವೂ ಕೇವಲ ಊಹಾಪೋಹ. ಸಿಎಂ ಮುಂದುವರಿಕೆ ಬಗ್ಗೆ ಪಕ್ಷದ ವರಿಷ್ಠರು ಹೇಳಿದ್ದಾರೆ. ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ರಾಜ್ಯಪ್ರವಾಸ ಮಾಡುತ್ತಿದ್ದೇನೆ ಎಂದರು. ತಂದೆಯವರು ಹಿಂದಿನಿಂದಲೂ ರಾಘವೇಂದ್ರ ಸ್ವಾಮಿಗಳಿಗೆ ನಡೆದುಕೊಳ್ಳುತ್ತಿದ್ದಾರೆ ಎಂದು ನೆನಪಿಸಿಕೊಂಡರು.
ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲಾಗುತ್ತಿದೆ. ಕಾರ್ಯಕರ್ತರ ಸಂಘಟನೆ ಬಲಗೊಳಿಸುತ್ತಿದ್ದೇವೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಯಡಿಯೂರಪ್ಪ ನೇತೃತ್ವದಲ್ಲಿ ಮೂರು ಪ್ರತ್ಯೇಕ ತಂಡಗಳು ರಾಜ್ಯ ಪ್ರವಾಸ ನಡೆಸಲಿವೆ. ಈ ಬಗ್ಗೆ ರಾಜ್ಯ ನಾಯಕರು ಮತ್ತು ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.
Published On - 11:50 am, Thu, 11 August 22