Vijaya Sankalp Yatra: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ; ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ನಡ್ಡಾ ಹೇಳಿಕೆ

|

Updated on: Mar 01, 2023 | 4:00 PM

ಮೈಸೂರಿಗೆ ವಿಮಾನದಲ್ಲಿ ಬಂದ ನಡ್ಡಾ ಅಲ್ಲಿಂದ ಮಲೆಮಹದೇಶ್ವರ ಬೆಟ್ಟಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದರು. ನಂತರ ಮಲೆಮಹದೇಶ್ವರನ ದರ್ಶನ ಪಡೆದರು. ಬಳಿಕ ಯಾತ್ರೆಗೆ ಚಾಲನೆ ನೀಡಲಾಯಿತು.

ಚಾಮರಾಜನಗರ: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Election) ರಣ ಕಹಳೆ ಮೊಳಗಿಸಿರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ (Vijaya Sankalp Rath Yatra) ಮೂಲಕ ಮತದಾರರನ್ನು ಸೆಳೆಯಲು ಮುಂದಾಗಿದೆ. ಪಕ್ಷದ ಮಹತ್ವದ ಚುನಾವಣಾ ಪ್ರಚಾರ ಅಭಿಯಾನವಾಗಿರುವ ವಿಜಯ ಸಂಕಲ್ಪ ಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಬುಧವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮಲೆಮಹದೇಶ್ವರ ಬೆಟ್ಟದಂತಹ ಪುಣ್ಯ ಕ್ಷೇತ್ರದಲ್ಲಿ ಯಾತ್ರೆ ಪ್ರಾರಂಭವಾಗಿದೆ. ರಾಜ್ಯದಲ್ಲಿ ಬಿಜೆಪಿಗೆ ನಿಶ್ಚಿತವಾಗಿ ಜಯ ಸಿಗಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ ಸಶಕ್ತೀಕರಣ ಆಗುತ್ತಿದೆ. ಮೋದಿ ಬಂದ ಮೇಲೆ ಸಬ್ ಕಾ ಸಾಥ್ ಸಬ್ ಕ ವಿಕಾಸ್​ ಶುರುವಾಗಿದೆ. ದೇಶ ಅತ್ಯಂತ ವೇಗವಾಗಿ ಪ್ರಗತಿ ಸಾಧಿಸುತ್ತಿದೆ. ದಲಿತ, ಹಿಂದುಳಿದ ವರ್ಗಗಳ ಪ್ರಗತಿಗೆ ಮೋದಿ ಸರ್ಕಾರ ಪಣತೊಟ್ಟಿದೆ ಎಂದು ಹೇಳಿದರು.

ಕಾಡಂಚಿನ ಸಮುದಾಯ ನಿವಾಸಿಗಳ ಜತೆ ಸಂವಾದ ನಡೆಸಿದ ಅವರು, ಆದಿವಾಸಿ ಸಮುದಾಯದ ದ್ರೌಪದಿ ಮುರ್ಮು ರಾಷ್ಟ್ರಪತಿ ಮಾಡಿದ್ದೇವೆ. ಈ ಪ್ರದೇಶದ ಚಿತ್ರಣವನ್ನೇ ಬದಲಿಸುವ ಸಂಕಲ್ಪ ಮಾಡಲು ಬಂದಿದ್ದೇನೆ ಎಂದು ಹೇಳಿದರು.

ಡ್ರಮ್​ ಬಾರಿಸುವ ಮೂಲಕ ಅವರು ಯಾತ್ರೆಗೆ ಚಾಲನೆ ನೀಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಗೃಹಸಚಿವ ಆರಗ ಜ್ಞಾನೇಂದ್ರ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾರ್ಯಕ್ರಮದಲ್ಲಿ ಹಾಜರಿದ್ದರು. ಮೈಸೂರಿಗೆ ವಿಮಾನದಲ್ಲಿ ಬಂದ ನಡ್ಡಾ ಅಲ್ಲಿಂದ ಮಲೆಮಹದೇಶ್ವರ ಬೆಟ್ಟಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದರು. ನಂತರ ಮಲೆಮಹದೇಶ್ವರನ ದರ್ಶನ ಪಡೆದರು. ಬಳಿಕ ಯಾತ್ರೆಗೆ ಚಾಲನೆ ನೀಡಲಾಯಿತು.

ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ ನಡ್ಡಾ


ಇದನ್ನೂ ಓದಿ: ಎಸ್​ಪಿಜಿ ಅನುಮತಿ ಕೊಟ್ಟರೆ ಬೆಂಗಳೂರು-ಮೈಸೂರು ಹೈವೇಯಲ್ಲಿ ಪ್ರಧಾನಿ ಮೋದಿ ರೋಡ್ ಶೋ: ಪ್ರತಾಪ್ ಸಿಂಹ

ರಾಜ್ಯ ಮತ್ತು ಕೇಂದ್ರ ಡಬಲ್​ ಇಂಜಿನ್​ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ದೃಷ್ಟಿಯಿಂದ ಬಿಜೆಪಿ 224 ವಿಧಾನಸಭಾ ಕ್ಷೇತ್ರಗಳಲ್ಲಿ ವಿಜಯ ಸಂಕಲ್ಪ ರಥ ಯಾತ್ರೆ ಮಾಡಲಿದೆ. ಬೆಂಗಳೂರಿನ ಕೆಂಪೇಗೌಡ ಪ್ರತಿಮೆ, ಚಾಮರಾಜನಗರದ ಮಹದೇಶ್ವರ ಬೆಟ್ಟ. ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮತ್ತು ಬೀದರ್ ಜಿಲ್ಲೆ ಬಸವಕಲ್ಯಾಣದ ಅನುಭವ ಮಂಟಪದಿಂದ ಯಾತ್ರೆ ನಡೆಯಲಿದೆ.

ಸಚಿವ ಸೋಮಣ್ಣ ನಿಗೂಢ ನಡೆ

ವಿಜಯಸಂಕಲ್ಪ ರಥ ಯಾತ್ರೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಸಚಿವ ವಿ. ಸೋಮಣ್ಣ ಭಾಗವಹಿಸಲಿಲ್ಲ. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಅವರು ಕಾರ್ಯಕ್ರಮದಲ್ಲಿ ಭಾಗವಹಿಸದೆ ಅಚ್ಚರಿ ಮೂಡಿಸಿದರು. ವಿಜಯ ಸಂಕಲ್ಪ ರಥ ಯಾತ್ರೆಯ ಈಶ್ವರಪ್ಪ ನೇತೃತ್ವದ ತಂಡದಲ್ಲಿರುವ ವಿ. ಸೋಮಣ್ಣ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರೇ ತಾವು ಉಸ್ತುವಾರಿ ಹೊಂದಿರುವ ಜಿಲ್ಲೆಯಲ್ಲಿ ಭಾಗಿಯಾದ ಕಾರ್ಯಕ್ರಮಕ್ಕೆ ಗೈರಾಗಿರುವುದು ಕುತೂಹಲ ಮೂಡಿಸಿದೆ.

ಮುಷ್ಕರ ವಾಪಸ್; ಸಿಎಂ ಬೊಮ್ಮಾಯಿ ಧನ್ಯವಾದ

ರಾಜ್ಯ ಸರ್ಕಾರಿ ನೌಕರರು ಮುಱಷ್ಕರ ವಾಪಸ್ ಪಡೆದಿರುವುದಕ್ಕೆ ಬೊಮ್ಮಾಯಿ ಧನ್ಯವಾದ ತಿಳಿಸಿದ್ದಾರೆ. ಮಲೆಮಹದೇಶ್ವರ ಬೆಟ್ಟದಲ್ಲಿ ಮಾತನಾಡಿದ ಅವರು, ವೇತನ ಹೆಚ್ಚಳಕ್ಕೆ ಸಂಬಂಧಿಸಿ ಸರ್ಕಾರದ ಆದೇಶ ಬಂದಮೇಲೆ ನೌಕರರು ಮುಷ್ಕರ ವಾಪಸ್ ಪಡೆದಿದ್ದಾರೆ. ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗಾಗಿ ಇನ್ನೂ ಉತ್ತಮವಾಗಿ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ‌. ಇದಕ್ಕಾಗಿ ಅವರಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:12 pm, Wed, 1 March 23