AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Belagavi: ರೈತರ ರಕ್ತಹೀರಿ, ಸುಲಿಗೆ ಮಾಡಿ 6 ಸಾವಿರ ಕೊಟ್ಟಿದ್ದೇನೆ ಎನ್ನುವ ಮೋದಿ; ಸಿದ್ದರಾಮಯ್ಯ ಕಿಡಿ

ಐದು ವರ್ಷದಲ್ಲಿ ಬಿಜೆಪಿ 3.22 ಲಕ್ಷ ಕೋಟಿ ಸಾಲ ಮಾಡಿದೆ. ಪ್ರತಿಯೊಬ್ಬರ ತಲೆ ಮೇಲೆ 78 ಸಾವಿರ ಸಾಲ ಇದೆ ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

Ganapathi Sharma
|

Updated on: Mar 01, 2023 | 3:48 PM

Share

ಬೆಳಗಾವಿ: ಬೆಲೆ ಏರಿಕೆಯಿಂದ (Price Raise) ಜನ ಸಂಕಷ್ಟಕ್ಕೀಡಾಗಿದ್ದಾರೆ. ಹೆಣ್ಣುಮಕ್ಕಳೂ ಹೈರಾಣಾಗಿದ್ದಾರೆ. ಇದೀಗ ಮತ್ತೆ ಗೃಹ ಬಳಕೆಯ ಎಲ್​ಪಿಜಿ ಸಿಲಿಂಡರ್ (LPG Cylinder) ಬೆಲೆ 50 ರೂ. ಹೆಚ್ಚಳ ಮಾಡಲಾಗಿದೆ. ರೈತರ ರಕ್ತಹೀರಿ, ಸುಲಿಗೆ ಮಾಡಿ 6 ಸಾವಿರ ಕೊಟ್ಟಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ (Siddaramaiah) ವಾಗ್ದಾಳಿ ನಡೆಸಿದ್ದಾರೆ. ಬೆಳಗಾವಿಯ ಪಂಥಬಾಳೇಕುಂದ್ರಿ ಪ್ರಜಾಧ್ವನಿ ಯಾತ್ರೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮೋದಿ ವಿರುದ್ಧ ನೇರ ಟೀಕೆ ಮಾಡಿದ ಅವರು, ಮಜ್ಜಿಗೆ ಮೇಲೆ, ಪೆನ್ಸಿಲ್ ಮೇಲೆ, ಗೊಬ್ಬರದ ಮೇಲೆ ತೆರಿಗೆ ಬರೆ ಹಾಕಿ ರೈತರ ರಕ್ತ ಕುಡಿಯುತ್ತಿದ್ದೀರಿ ನೀವು. ನಾಲ್ಕೂವರೆ ಲಕ್ಷ ಕೋಟಿ ಕರ್ನಾಟಕದ ಜನರಿಂದ‌ ಸುಲಿಗೆ ಮಾಡುತ್ತಿದ್ದೀರಿ. ನಮಗೆ ವಾಪಾಸ್ ಕೊಡುವುದು ಬರೀ ಐವತ್ತು ಸಾವಿರ ಕೋಟಿ ಎಂದು ಟೀಕಿಸಿದರು. ಜತೆಗೆ, ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ರಾಜ್ಯ ಸರ್ಕಾರಕ್ಕೆ ಕೊಡುವ ಅನುದಾನ ಕಡಿಮೆ ಆಗಿದೆ. ಈ ಕಾರಣಕ್ಕೆ ರಾಜ್ಯ ಸರ್ಕಾರ ಸಾಲ ತೆಗೆದುಕೊಳ್ಳುವ ಸ್ಥಿತಿ ಇದೆ. ಈ ಬಾರಿ 77,755 ಕೋಟಿ ರೂ. ಸಾಲ ತೆಗೆದುಕೊಳ್ಳುತ್ತಿದ್ದಾರೆ. ಕರ್ನಾಟಕದ ಇತಿಹಾಸದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸಾಲ ಮಾಡಿಲ್ಲ ಎಂದು ಹೇಳಿದರು.

ಐದು ವರ್ಷದಲ್ಲಿ ಬಿಜೆಪಿ 3.22 ಲಕ್ಷ ಕೋಟಿ ಸಾಲ ಮಾಡಿದೆ. ಪ್ರತಿಯೊಬ್ಬರ ತಲೆ ಮೇಲೆ 78 ಸಾವಿರ ಸಾಲ ಇದೆ ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ಅಧಿಕಾರದ ರಿಮೋಟ್ ಪರಿವಾರದ ಕೈಯಲ್ಲಿ; ಪ್ರಧಾನಿ ಮೋದಿ ವಾಗ್ದಾಳಿ

ಕಾಂಗ್ರೆಸ್​​ನಿಂದ ಲಕ್ಷ್ಮೀ ಹೆಬ್ಬಾಳ್ಕರ್ ಒಬ್ಬರೇ ಟಿಕೆಟ್​​ಗೆ ಅರ್ಜಿ ಸಲ್ಲಿಸಿದ್ದಾರೆ. ಅವರನ್ನು ಕಣಕ್ಕಿಳಿಸಲಾಗುವುದು, ಗೆಲ್ಲಿಸಿ ಎಂದು ಜನರಲ್ಲಿ ಸಿದ್ದರಾಮಯ್ಯ ಮನವಿ ಮಾಡಿದರು.

ಅಡ್ವಾಣಿ, ಜೋಶಿಯನ್ನು ಕಡೆಗಣಿಸಿದ್ದು ಯಾರು?

ಕಾಂಗ್ರೆಸ್​ನಿಂದ ಮಲ್ಲಿಕಾರ್ಜುನ ಖರ್ಗೆಗೆ ಅಪಮಾನ ಆಗಿದೆ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಹಿರಿಯ ನಾಯಕರಾದ ಮುರಳಿ ಮನೋಹರ್ ಜೋಶಿ, ಎಲ್​ಕೆ ಅಡ್ವಾಣಿ ಅವರನ್ನು ಕಡೆಗಣಿಸಿದ್ದು ಯಾರು? ಬಿಎಸ್​ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದ್ದು ಯಾರು? ಮೋದಿ ಹಾಗೂ ಅಮಿತ್ ಶಾ ಅಲ್ಲವೇ? ಈಗವರು ನಾಟಕ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ವಿಶ್ರಾಂತಿ ತೆಗೆದುಕೊಳ್ಳದೆ ಕೆಲಸ ಮಾಡಿದ್ದೇನೆ; ಲಕ್ಷ್ಮೀ ಹೆಬ್ಬಾಳ್ಕರ್

ವಿಶ್ರಾಂತಿ ತೆಗೆದುಕೊಳ್ಳದೆ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ. ನಿಮ್ಮ ಸಮಸ್ಯೆಗೆ ಸ್ಪಂದಿಸಿದ್ದೇನೆ. ಆದರೂ ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ನಾನು ಕ್ಷೇತ್ರದ ಮನೆ ಮಗಳಾಗಿ ಅಭಿವೃದ್ಧಿ ಮಾಡಿದ್ದೇನೆ. ಇದನ್ನು ಸ್ವಯಂಘೋಷಿತ ನಾಯಕ, ಗೋಕಾಕ್ ಶಾಸಕರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ರಮೇಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ