ಎಟಿಎಂ ಸರ್ಕಾರದ ಕಲೆಕ್ಷನ್ ಬಾಕ್ಸ್ ಬೇಗ ತುಂಬಿಸುವವರಿಗೆ ಕುರ್ಚಿ: ಕಾಂಗ್ರೆಸ್ ವಿರುದ್ಧ ಬಿಜೆಪಿ ಟೀಕೆಗಳ ಸುರಿಮಳೆ

|

Updated on: Oct 25, 2023 | 2:44 PM

BJP vs Congress Fight: ‘ಯಾರು ನನ್ನನ್ನು ವೇಗವಾಗಿ ತುಂಬಿಸುತ್ತಾರೋ, ಅವರಿಗೆ ನನ್ನ ಈ ಕುರ್ಚಿ ಮೀಸಲು. #ATMSarkara ದ ಕಲೆಕ್ಷನ್ ಬಾಕ್ಸ್ ಉವಾಚ’ ಎಂದು ಸಂದೇಶದಲ್ಲಿ ಬಿಜೆಪಿ ಉಲ್ಲೇಖಿಸಿದೆ. ಇಷ್ಟೇ ಅಲ್ಲದೆ ಇನ್ನೂ ಹಲವು ವಿಚಾರಗಳನ್ನಿಟ್ಟುಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಎಟಿಎಂ ಸರ್ಕಾರದ ಕಲೆಕ್ಷನ್ ಬಾಕ್ಸ್ ಬೇಗ ತುಂಬಿಸುವವರಿಗೆ ಕುರ್ಚಿ: ಕಾಂಗ್ರೆಸ್ ವಿರುದ್ಧ ಬಿಜೆಪಿ ಟೀಕೆಗಳ ಸುರಿಮಳೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಅಕ್ಟೋಬರ್ 25: ಕಳೆದ ಕೆಲವು ದಿನಗಳಿಂದ ಸದಾ ಒಂದಿಲ್ಲೊಂದು ‘ಎಕ್ಸ್​​’ ಸಂದೇಶಗಳ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರದ (Congress Government) ವಿರುದ್ಧ ವ್ಯಂಗ್ಯ, ಆಕ್ರೋಶ ವ್ಯಕ್ತಪಡಿಸುತ್ತಾ ಬಂದಿರುವ ಬಿಜೆಪಿ (BJP) ಇದೀಗ ಮತ್ತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಟೀಕಾ ಪ್ರಹಾರ ನಡೆಸಿದೆ. ಲೂಟಿ ಸರ್ಕಾರ, ಎಟಿಎಂ ಸರ್ಕಾರ ಎಂಬ ವ್ಯಂಗ್ಯಾಸ್ತ್ರಗಳನ್ನು ಮತ್ತೆ ಬಳಸಿದೆ.

ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅಕ್ಕ ಪಕ್ಕ ಕುಳಿತಿರುವ ಹಾಗೂ ಮಧ್ಯದಲ್ಲಿ ಖಾಲಿ ಕುರ್ಚಿ ಇರುವ ಚಿತ್ರ ಪ್ರಕಟಿಸಿರುವ ಬಿಜೆಪಿ ಖಾಲಿ ಕುರ್ಚಿಯಲ್ಲಿ ‘ಎಟಿಎಂ ಸರ್ಕಾರದ ಕಲೆಕ್ಷನ್ ಬಾಕ್ಸ್’ ಎಂಬ ಬರಹದ ಜತೆ ಪೆಟ್ಟಿಗೆಯೊಂದರ ಚಿತ್ರವನ್ನು ಎಡಿಟ್ ಮಾಡಿ ಸೇರಿಸಿದೆ. ಜತೆಗೆ ಅದರ ಮೇಲೆ ಲೂಟಿ ಸರ್ಕಾರ ಎಂಬ ಬರಹವನ್ನೂ ಸೇರಿಸಿದೆ.

‘ಯಾರು ನನ್ನನ್ನು ವೇಗವಾಗಿ ತುಂಬಿಸುತ್ತಾರೋ, ಅವರಿಗೆ ನನ್ನ ಈ ಕುರ್ಚಿ ಮೀಸಲು. #ATMSarkara ದ ಕಲೆಕ್ಷನ್ ಬಾಕ್ಸ್ ಉವಾಚ’ ಎಂದು ಸಂದೇಶದಲ್ಲಿ ಬಿಜೆಪಿ ಉಲ್ಲೇಖಿಸಿದೆ.

ಇಷ್ಟೇ ಅಲ್ಲದೆ ಇನ್ನೂ ಹಲವು ವಿಚಾರಗಳನ್ನಿಟ್ಟುಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಕಾಂಗ್ರೆಸ್‌ನ ಐದು ತಿಂಗಳ ಆಡಳಿತದಲ್ಲಿ ಬ್ರ್ಯಾಂಡ್ ಬೆಂಗಳೂರಿನ ಅಸಲಿ ಚಿತ್ರಣ ಬೆಳಕಿಗೆ ಬಂದಿದೆ! ಒಂದೆಡೆ ರಸ್ತೆಯೊಳಗೆ ಗುಂಡಿಯೋ, ಗುಂಡಿಯೊಳಗಡೆ ರಸ್ತೆಯೋ ಎಂಬ ಸ್ಥಿತಿ ಬೆಂಗಳೂರಿಗರದ್ದು! ಗ್ರೀನ್ ಸಿಟಿ, ಗಾರ್ಡನ್ ಸಿಟಿಯಾಗಿದ್ದ ಬೆಂಗಳೂರು ಗಾರ್ಬೆಜ್ ಸಿಟಿಯಾಗುತ್ತಿದೆ. ಕೇವಲ ರಿಯಲ್ ಎಸ್ಟೇಟ್ ಮಾಫಿಯಾಗಳಿಗೆ, ಗೂಂಡಾಗಳಿಗೆ, ಭಯೋತ್ಪಾದಕರ ಅಡಗುತಾಣಗಳಿಗೆ ಮಾತ್ರ ಬೆಂಗಳೂರು ಸ್ವರ್ಗವಾಗಿದೆ ಹೊರತು ಜನಸಾಮಾನ್ಯರಿಗಲ್ಲ ಎಂದು ಮತ್ತೊಂದು ಸಂದೇಶದಲ್ಲಿ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.


ಜನರ ಕಣ್ಣಿಗೆ ಮಣ್ಣೆರಚಿ ಮೋಸದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ತೊಡಗಿರುವುದು ತನ್ನ ಅಸಾಮರ್ಥ್ಯ ಮರೆಮಾಚುವ ತಂತ್ರಗಾರಿಕೆಯಲ್ಲಿ. ಅತ್ತ ಗ್ಯಾರಂಟಿ ಮುಂದಿಟ್ಟು ಇತರೆ ಎಲ್ಲಾ ಯೋಜನೆಗಳನ್ನೂ ಹಳ್ಳಹಿಡಿಸಿದ್ದಾಗಿದೆ, ಇತ್ತ ತಾನೇ ಹೇಳಿದ ಗ್ಯಾರಂಟಿಗಳು ಹಳ್ಳ ಹಿಡಿದಿವೆ. ಗೃಹಲಕ್ಷ್ಮಿ ಹೆಸರಲ್ಲಿ ಮನೆಮನೆಯಲ್ಲೂ ಲಕ್ಷ್ಮಿಯರಿಗೆ ಮೋಸ ಮಾಡುತ್ತಿರುವ ಸಿದ್ದರಾಮಯ್ಯ ಅವರ ಸರ್ಕಾರಕ್ಕೇ ತಾಂತ್ರಿಕ ದೋಷದ ಸನ್ನಿ ಹಿಡಿದಿದೆ ಎಂದು ಬಿಜೆಪಿ ಟೀಕಿಸಿದೆ.

ರಾಹುಲ್ ಗಾಂಧಿ ವಿರುದ್ಧವೂ ಟೀಕಾ ಪ್ರಹಾರ

ಕುಟುಂಬ ರಾಜಕಾರಣದ ಯುವರಾಜ ರಾಹುಲ್ ಗಾಂಧಿ ಅವರು ಪುಂಗಿ ಪುರುಷೋತ್ತಮ ಎಂಬ ಸತ್ಯವನ್ನು ಸ್ವತಃ ಸಿದ್ದರಾಮಯ್ಯ ಅವರ ಸರ್ಕಾರವೇ ಸಾಬೀತು ಮಾಡಿದೆ. ಬಳ್ಳಾರಿಯನ್ನು ಜೀನ್ಸ್ ಕ್ಯಾಪಿಟಲ್ ಮಾಡುತ್ತೇನೆ,‌ ಇದಕ್ಕಾಗಿ ₹5,000 ಕೋಟಿ ನೀಡುತ್ತೇವೆ, ಇದು ನನ್ನ ಪರ್ಸನಲ್ ಗ್ಯಾರಂಟಿ ಎಂದು ‘ತೋಡೋ’ ಯಾತ್ರೆಯಲ್ಲಿ ರಾಹುಲ್ ಗಾಂಧಿ ಪುಂಗಿ ಊದಿದ್ದರು. ಹೇಳಿದ್ದು ಕೊಡುವುದು ಬಿಡಿ, ಈಗ ಕೈಗಾರಿಕೆ ನಡೆಯಲು ಅಗತ್ಯವಾದ ವಿದ್ಯುತ್‌ ಕೂಡ ಕೊಡಲಾಗದೆ ಕಾಂಗ್ರೆಸ್ ಕೈ ಎತ್ತಿದೆ. ಅನಿಯಮಿತ ಲೋಡ್ ಶೆಡ್ಡಿಂಗ್‌ನಿಂದ ಜೀನ್ಸ್ ಬಟ್ಟೆ ಉದ್ಯಮವನ್ನೇ ಮೂರಾಬಟ್ಟೆ ಮಾಡಿರುವ ಕಾಂಗ್ರೆಸ್‌ ಸರ್ಕಾರ 80 ಸಾವಿರಕ್ಕೂ ಅಧಿಕ ಕುಟುಂಬಗಳನ್ನು ಬೀದಿಗೆ ತಂದಿದೆ ಎಂದು ಬಿಜೆಪಿ ಆರೋಪಿಸಿದೆ.

ಇದನ್ನೂ ಓದಿ: ಬಿಜೆಪಿ ಅವಧಿಯ ಅರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸುತ್ತೇನೆ: ಸಿಎಂ ಸಿದ್ದರಾಮಯ್ಯ

ಕೋಮುಗಲಭೆಗೆ ಮುನ್ನುಡಿ ಇಟ್ಟ ಗೂಂಡಾಗಳು: ಬಿಜೆಪಿ ಕಿಡಿ

ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರಕ್ಕೆ ಬಂದಿದ್ದೇ ತಡ ಮತಾಂಧರು, ಗಲಭೆಕೋರರು, ಪಿಎಫ್‌ಐ ಗೂಂಡಾಗಳು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕದಡಿ ಕೋಮುಗಲಭೆಗೆ ಮುನ್ನುಡಿ ಇಟ್ಟಿದ್ದಾರೆ. ಶಾಲಾ-ಕಾಲೇಜಿನಲ್ಲಿ ಮಕ್ಕಳ ನಡುವೆ ಸಮಾನತೆ ಕಾಪಾಡುವುದಕ್ಕಾಗಿ ಸಮವಸ್ತ್ರ ನಿಯಮ ಜಾರಿಯಲ್ಲಿದೆ. ಉಪಿಯ ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್ ಆದೇಶವಿದ್ದರೂ ಕಾಂಗ್ರೆಸ್ ಸರ್ಕಾರ ಇದೀಗ ಮತ್ತೆ ವಿಷಯವನ್ನು ಮುನ್ನಲೆಗೆ ತಂದು ಶಾಲೆಗಳಲ್ಲಿ ಹಿಜಾಬ್‌ ಅನ್ನು ಅಧಿಕೃತಗೊಳಿಸಿ ಪಿಎಫ್‌ಐಗೆ ಋಣ ಸಂದಾಯ ಮಾಡಿ ಸಂತೃಪ್ತಿಗೊಳಿಸುತ್ತಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ