7 ಜನ್ಮ ಎತ್ತಿ ಬಂದರೂ ರಾಮನಗರ ಜಿಲ್ಲೆಯನ್ನು ಛಿದ್ರ ಮಾಡಲು ಆಗಲ್ಲ: ಡಿಕೆಶಿಗೆ ಕುಮಾರಸ್ವಾಮಿ ಎಚ್ಚರಿಕೆ
ಕನಕಪುರ ತಾಲೂಕನ್ನು ಬೆಂಗಳೂರಿಗೆ ಸೇರಿಸವ ವಿಚಾರವಾಗಿ ಉಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿಮ ಹೆಚ್ಡಿ ಕುಮಾರಸ್ವಾಮಿ ನಡುವೆ ಆರೋಪ-ಪ್ರತ್ಯಾರೋಪ ಜೋರಾಗಿದೆ. ಕುಮಾರಸ್ವಾಮಿಗೆ ಕಾಮನ್ ಸೆನ್ಸ್ ಇಲ್ಲ ಎಂದು ಹೇಳಿಕೆ ಡಿಕೆ ಶಿವಕುಮಾರ್ ವಿರುದ್ಧ ಸಿಡಿದೆದ್ದ ಹೆಚ್ಡಿಕೆ ಇದೀಗ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಇದರೊಂದಿಗೆ ಡಿಕೆಶಿ--ಹೆಚ್ಡಿಕೆ ನಡುವಿನ ಮಾತಿನ ಯುದ್ಧ ಮತ್ತೊಂದು ಹಂತಕ್ಕೆ ಹೋಗಿದೆ.
ಬೆಂಗಳೂರು, (ಅಕ್ಟೋಬರ್ 25): ಕನಕಪುರ (Kanakapura) ತಾಲೂಕನ್ನು ಬೆಂಗಳೂರಿಗೆ(Bengaluru) ಸೇರಿಸುತ್ತೇನೆ ಎನ್ನುವ ಡಿಕೆ ಶಿವಕುಮಾರ್ (DK Shivakumar) ಅವರ ಹೇಳಿಕೆಗೆ ಹೆಚ್ಡಿ ಕುಮಾರಸ್ವಾಮಿ(HD Kumaraswamy) ಸಿಡಿದೆದ್ದಿದ್ದಾರೆ. 7 ಜನ್ಮ ಎತ್ತಿ ಬಂದರೂ ರಾಮನಗರ ಜಿಲ್ಲೆಯನ್ನು ಛಿದ್ರ ಮಾಡಲು ಆಗಲ್ಲ. ಚೂರು ಚೂರು ಮಾಡುವುದಕ್ಕೆ ರಾಮನಗರವೇನು ಕಲ್ಲುಬಂಡೆಯೇ? ಬಡವರ ಹೊಟ್ಟೆ ಮೇಲೆ ಒಡೆಯುವ, ಕಂಡವರ ಭೂಮಿಗೆ ಬೇಲಿ ಹಾಕುವ ಬೆಟ್ಟಗುಡ್ಡ ಲೂಟಿ ಮಾಡಿ ವಿದೇಶಗಳಿಗೆ ಸಾಗಿಸಿ ಹಣ ಮಾಡಿಕೊಳ್ಳುವ. ಅದಕ್ಕೆ ಅಡ್ಡ ಬಂದವರ ಜೀವ ತೆಗೆಯುವ ದುಷ್ಟ ಪ್ರಜ್ಞೆ ಖಂಡಿತಾ ನನಗಿಲ್ಲ ಎಂದು ಡಿಕೆ ಶಿವಕುಮಾರ್ ವಿರುದ್ಧ ಗುಡುಗಿದ್ದಾರೆ.
ಕುಮಾರಸ್ವಾಮಿಗೆ ಕಾಮನ್ ಸೆನ್ಸ್ ಇಲ್ಲ ಎಂದು ಡಿಕೆ ಶಿವಕುಮಾರ್ ಹೇಳಿಕೆಗೆ ಮೂಲಕ ಪ್ರತಿಕ್ರಿಯಿಸಿರುವ ಹೆಚ್ಡಿಕೆ, ಈ ಜನ್ಮವಷ್ಟೇ ಅಲ್ಲ, ಇನ್ನು ಏಳು ಜನ್ಮ ಎತ್ತಿ ಬಂದರೂ ರಾಮನಗರ ಜಿಲ್ಲೆಯನ್ನು ಛಿದ್ರ ಮಾಡಲು ಸಾಧ್ಯವಿಲ್ಲ. ಇದನ್ನು ಡಿ.ಕೆ.ಶಿವಕುಮಾರ್ ಅರಿತುಕೊಳ್ಳಬೇಕು. ಜನರ ಅನುಕೂಲ, ಅನನುಕೂಲಗಳನ್ನು ವೈಜ್ಞಾನಿಕವಾಗಿ ಪರಿಗಣಿಸಿ, ಪರಿಶೀಲಿಸಿ ರಾಮನಗರ ಜಿಲ್ಲೆ ರಚನೆ ಮಾಡಲಾಗಿದೆ. ಈಗ ಜಿಲ್ಲೆ ಒಡೆದು ಕನಕಪುರವನ್ನು ಬೆಂಗಳೂರಿಗೆ ಸೇರಿಸುತ್ತೇವೆ ಎಂದರೆ ಇಡೀ ಜಿಲ್ಲೆಯ ಜನ ತಿರುಗಿಬೀಳುತ್ತಾರೆ ಜೋಕೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಕನಕಪುರ ಗಲಾಟೆ: ಕುಮಾರಸ್ವಾಮಿಗೆ ಕಾಮನ್ ಸೆನ್ಸ್ ಇಲ್ಲ ಎಂದು ಜಾಡಿಸಿದ ಡಿಕೆ ಶಿವಕುಮಾರ್
ಒಡೆದು ಚೂರುಚೂರು ಮಾಡುವುದಕ್ಕೆ ರಾಮನಗರವೇನು ಕಲ್ಲುಬಂಡೆಯೇ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಈ ದೇಶಕ್ಕೆ ವಿದ್ಯಾವಂತರು ಅಲ್ಲದಿದ್ದರೂ, ಬುದ್ದಿವಂತರು ಅಲ್ಲದಿದ್ದರೂ ಪ್ರಜ್ಞಾವಂತರು ಬೇಕು. ನಾನು ಕುಮಾರಸ್ವಾಮಿ ಅವರನ್ನು ಪ್ರಜ್ಞಾವಂತರು ಅಂದುಕೊಂಡಿದ್ದೆ. ಅವರ ತಂದೆಯವರನ್ನು ಕೇಳಿ ತಿಳಿದುಕೊಳ್ಳಬೇಕು ಎಂದು ದರ್ಪದ ಮಾತು ಹೇಳಿದ್ದಾರೆ. ವಿದ್ಯೆ, ಬುದ್ಧಿ ಇಲ್ಲದಿದ್ದರೆ ಪ್ರಜ್ಞಾವಂತರು ಹೇಗಾದಾರು? ಎನ್ನುವ ಸಾಮಾನ್ಯ ಜ್ಞಾನ ಅವರಿಗಿಲ್ಲ. ಅವರ ಪ್ರಜ್ಞಾವಂತಿಕೆ ಎಂಥಹುದು ಎಂಬುದು ಜನಜನಿತ.
‘ದುಷ್ಟ’ಪ್ರಜ್ಞೆ, ‘ಅತಿ’ ಬುದ್ಧಿವಂತಿಕೆ, ‘ಅಸಾಮಾನ್ಯ’ ಜ್ಞಾನ ಮುಖ್ಯಮಂತ್ರಿಗಳು ಬಡವರ ಹೊಟ್ಟೆ ಮೇಲೆ ಒಡೆಯುವ, ಕಂಡೋರ ಭೂಮಿಗೆ ಬೇಲಿ ಹಾಕುವ, ಬೆಟ್ಟಗುಡ್ಡಗಳನ್ನು ಲೂಟಿ ಮಾಡಿ ವಿದೇಶಗಳಿಗೆ ಸಾಗಿಸಿ ಹಣ ಮಾಡಿಕೊಳ್ಳುವ, ಅದಕ್ಕೆ ಅಡ್ಡ ಬಂದವರ ಜೀವ ತೆಗೆಯುವ ‘ದುಷ್ಟ’ಪ್ರಜ್ಞೆ, ‘ಅತಿ’ ಬುದ್ಧಿವಂತಿಕೆ, ‘ಅಸಾಮಾನ್ಯ’ ಜ್ಞಾನ ಖಂಡಿತವಾಗಿಯೂ ನನಗಿಲ್ಲ ಎಂದು ತಿರುಗೇಟು ನೀಡಿದರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:56 pm, Wed, 25 October 23