PM Modi Birthday ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2ರವರೆಗೆ ಮೋದಿ ಹುಟ್ಟುಹಬ್ಬವನ್ನು ಸೇವಾ ಪಾಕ್ಷಿಕ ಎಂದು ಆಚರಿಸಲು ಬಿಜೆಪಿ ನಿರ್ಧಾರ
Seva Pakhwara ಕಾರ್ಯಕ್ರಮಗಳ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಪತ್ರ ಬರೆದಿದ್ದಾರೆ. ಸೇವಾ ಪಖವಾಡಾ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ರಂದು ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜನ್ಮದಿನದವರೆಗೆ ಆಚರಿಸಲಾಗುತ್ತದೆ
ಬಿಜೆಪಿ ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಜನ್ಮದಿನವನ್ನು 16 ದಿನಗಳ ಅವಧಿಗೆ ಸೇವಾ ಪಖವಾಡಾ (ಸೇವಾ ಪಾಕ್ಷಿಕ) ಎಂದು ಆಚರಿಸಲು ನಿರ್ಧರಿಸಿದೆ. ಬಿಜೆಪಿ (BJP) ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಪ್ರಧಾನಿ ಮೋದಿಯವರ ಜನ್ಮದಿನದಂದು ವ್ಯಾಪಕ ಕಾರ್ಯಕ್ರಮವನ್ನು ಯೋಜಿಸುತ್ತಿದ್ದಾರೆ ಇದಕ್ಕಾಗಿ ಅವರು “ಸೇವಾ ಪಖವಾಡಾ” (Seva Pakhwara)ಎಂದು ಆಚರಿಸಲು ಪಕ್ಷದ ಎಲ್ಲಾ ಕಾರ್ಯಕರ್ತರು ಮತ್ತು ಮುಖಂಡರಿಗೆ ಸೂಚನೆ ನೀಡಿದ್ದಾರೆ. ಕಾರ್ಯಕ್ರಮಗಳ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಪತ್ರ ಬರೆದಿದ್ದಾರೆ. ಸೇವಾ ಪಖವಾಡಾವನ್ನು ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ರಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿವರೆಗೆ ಆಚರಿಸಲಾಗುತ್ತದೆ. ಈ ಅವಧಿಯಲ್ಲಿ ಪಕ್ಷವು ಜಿಲ್ಲಾ ಮಟ್ಟದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಪ್ರದರ್ಶನಗಳನ್ನು ಆಯೋಜಿಸುತ್ತದೆ. ಇದರೊಂದಿಗೆ ಪಕ್ಷವು “ಮೋದಿ @20 ಸಪ್ನೆ ಹುವೇ ಸಕಾರ್” ಪುಸ್ತಕದ ಪ್ರಚಾರಕ್ಕಾಗಿ ತಂತ್ರವನ್ನು ರೂಪಿಸುತ್ತಿದೆ. ರಕ್ತದಾನ ಶಿಬಿರ ಹಾಗೂ ಉಚಿತ ತಪಾಸಣಾ ಶಿಬಿರ, ಕೃತಕ ಕೈಕಾಲು ಮತ್ತು ಉಪಕರಣಗಳ ವಿತರಣೆ ಏರ್ಪಡಿಸಲಾಗುವುದು. ಪಕ್ಷವು ದೇಶವನ್ನು ಕ್ಷಯರೋಗ (ಟಿಬಿ) ಮುಕ್ತಗೊಳಿಸಲು ಒಂದು ವರ್ಷದ ಕಾರ್ಯಕ್ರಮವನ್ನು ನಡೆಸುತ್ತದೆ, ಇದರ ಅಡಿಯಲ್ಲಿ ಪ್ರತಿಯೊಬ್ಬರೂ ಟಿಬಿ ರೋಗಿಯನ್ನು ದತ್ತು ತೆಗೆದುಕೊಂಡು ಒಂದು ವರ್ಷದವರೆಗೆ ಅವರನ್ನು ನೋಡಿಕೊಳ್ಳುತ್ತಾರೆ.
ಸೇವಾ ಪಖವಾಡಾದ ಭಾಗವಾಗಿ, ಕೋವಿಡ್-19 ಬೂಸ್ಟರ್ ಡೋಸ್ ಪ್ರಚಾರಕ್ಕಾಗಿ ಬಿಜೆಪಿ ಅಭಿಯಾನವನ್ನು ನಡೆಸಲಿದೆ.
ಪ್ರಧಾನಿ ಮೋದಿಯವರ ಹುಟ್ಟುಹಬ್ಬದ ಆಚರಣೆಗಾಗಿ ಆಯೋಜಿಸಲಾದ ಕಾರ್ಯಕ್ರಮಗಳಲ್ಲಿ ಗಿಡ ನೆಡುವ ಅಭಿಯಾನ ಮತ್ತು ಹಲವಾರು ಸ್ವಚ್ಛತಾ ಅಭಿಯಾನಗಳೂ ಇವೆ. ನಮೋ ಆಪ್‌ನಲ್ಲಿ ಕಾರ್ಯಕ್ರಮಗಳ ಫೋಟೋಗಳನ್ನು ಅಪ್‌ಲೋಡ್ ಮಾಡುವಂತೆ ಜೆಪಿ ನಡ್ಡಾ ಅವರು ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.
ಆಚರಣೆಯ ಭಾಗವಾಗಿ ವಿವಿಧತೆಯಲ್ಲಿ ಏಕತೆ ಮತ್ತು ‘ಏಕ್ ಭಾರತ್ ಶ್ರೇಷ್ಠ ಭಾರತ್’ಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಉತ್ತೇಜಿಸಲು ಅವರು ನಿರ್ದೇಶನ ನೀಡಿದ್ದಾರೆ. ಸೆಪ್ಟೆಂಬರ್ 25 ರಂದು ಭಾರತೀಯ ಜನಸಂಘದ ನಾಯಕ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನದ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಉಪಾಧ್ಯಾಯ ಅವರಿಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಮತ್ತು ಅವರ ವ್ಯಕ್ತಿತ್ವದ ಕುರಿತು ಚರ್ಚೆಗಳನ್ನು ನಡೆಸಲು ನಡ್ಡಾ ಸೂಚನೆ ನೀಡಿದ್ದಾರೆ.
ಮಹಾತ್ಮಾ ಗಾಂಧೀಜಿಯವರ ಜನ್ಮದಿನದಂದು ವಿಶೇಷ ಕಾರ್ಯಕ್ರಮ ನಡೆಸಲು ಬಿಜೆಪಿ ಅಧ್ಯಕ್ಷರು ಸೂಚಿಸಿದ್ದಾರೆ. ಇದರ ಅಡಿಯಲ್ಲಿ, “ಖಾದಿ” ಬಳಕೆ ಮತ್ತು ರಾಷ್ಟ್ರಪಿತನ ತತ್ವಗಳ ಬಗ್ಗೆ ಚರ್ಚಿಸಲು ಹೇಳಲಾಗಿದೆ.
ಇಡೀ ದೇಶದಲ್ಲಿ ಸೇವಾ ಪಖವಾಡಾ ಸುಗಮವಾಗಿ ನಡೆಸಲು ಕೇಂದ್ರ ಸಮಿತಿಯನ್ನು ರಚಿಸಲಾಗಿದೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ರಾಷ್ಟ್ರೀಯ ಉಪಾಧ್ಯಕ್ಷ ರಘುಬರ್ ದಾಸ್, ರಾಷ್ಟ್ರೀಯ ಕಾರ್ಯದರ್ಶಿ ವಿಜಯ ರಹತ್ಕರ್, ರಾಷ್ಟ್ರೀಯ ಕಾರ್ಯದರ್ಶಿ ಅರವಿಂದ್ ಮೆನನ್, ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ಕಿಸಾನ್ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ರಾಜ್‌ಕುಮಾರ್ ಚಹಾರ್, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಜಮಾಲ್ ಸಿದ್ದಿಕಿ ಅವರಿಗೆ ಜವಾಬ್ದಾರಿ ವಹಿಸಲಾಗಿದೆ.
ಕಳೆದ ವರ್ಷ, ಬಿಜೆಪಿಯು ಮೋದಿ ಹುಟ್ಟುಹಬ್ಬದಂದು ಗರಿಷ್ಠ ಸಂಖ್ಯೆಯ ಕೊವಿಡ್ ಲಸಿಕೆ ಚುಚ್ಚುಮದ್ದಿನ ದಾಖಲೆಯನ್ನು ಸ್ಥಾಪಿಸುವ ಮೂಲಕ ಹುಟ್ಟುಹಬ್ಬವನ್ನು ಐತಿಹಾಸಿಕವಾಗಿಸುವ ಗುರಿಯನ್ನು ಹೊಂದಿತ್ತು. 2.50 ಕೋಟಿಗೂ ಹೆಚ್ಚು ಕೋವಿಡ್-19 ಲಸಿಕೆ ಡೋಸ್‌ಗಳನ್ನು ನೀಡುವುದರೊಂದಿಗೆ, ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರ 71 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಭಾರತವು ಒಂದು ದಿನದಲ್ಲಿ ಅತಿ ಹೆಚ್ಚು ಕೋವಿಡ್ ಲಸಿಕೆ ನೀಡಿಕೆಯ ವಿಶ್ವ ದಾಖಲೆಯನ್ನು ಸೃಷ್ಟಿಸಿದೆ.
Published On - 1:09 pm, Wed, 7 September 22