ಎಚ್ಚರ ಡಿಕೆಶಿ ಎಚ್ಚರ: ಬಿಜೆಪಿಯಿಂದ ಕಾಂಗ್ರೆಸ್ ಬಣ ರಾಜಕೀಯದ ವ್ಯಂಗ್ಯ, ಸರಣಿ ಟ್ವೀಟ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 01, 2022 | 1:02 PM

ಇತ್ತೀಚೆಗೆ ಕಾಂಗ್ರೆಸ್ ತೊರೆದ ನಾಯಕರ ಹೆಸರು ಕೊಟ್ಟಿರುವ ಬಿಜೆಪಿ, ಕಾಂಗ್ರೆಸ್​​ನಲ್ಲಿ ಈಗ ಪಕ್ಷ ಬಿಡುವ ಅಭಿಯಾನ (ಕಾಂಗ್ರೆಸ್ ಛೋಡೋ ಅಭಿಯಾನ್) ನಡೆಯುತ್ತಿದೆ ಎಂದು ಬಿಜೆಪಿ ಲೇವಡಿ ಮಾಡಿದೆ.

ಎಚ್ಚರ ಡಿಕೆಶಿ ಎಚ್ಚರ: ಬಿಜೆಪಿಯಿಂದ ಕಾಂಗ್ರೆಸ್ ಬಣ ರಾಜಕೀಯದ ವ್ಯಂಗ್ಯ, ಸರಣಿ ಟ್ವೀಟ್
ಕಾಂಗ್ರೆಸ್ ಮತ್ತು ಬಿಜೆಪಿ
Follow us on

ಬೆಂಗಳೂರು: ಕಾಂಗ್ರೆಸ್​ನ ಹಲವು ಹಿರಿಯ ನಾಯಕರು ಸಿದ್ದರಾಮಯ್ಯ ಬಣದ ದಬ್ಬಾಳಿಕೆಗೆ ಬೇಸತ್ತು ದೂರ ಸರಿಯುತ್ತಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಸಹ ಪಕ್ಷ ಬಿಡಬಹುದು ಎಂದು ಭಾರತೀಯ ಜನತಾ ಪಕ್ಷ (Bharatiya Janata Party – BJP) ವ್ಯಂಗ್ಯವಾಡಿದೆ. ಇತ್ತೀಚೆಗೆ ಕಾಂಗ್ರೆಸ್ ತೊರೆದ ನಾಯಕರ ಹೆಸರು ಕೊಟ್ಟಿರುವ ಬಿಜೆಪಿ, ಕಾಂಗ್ರೆಸ್​​ನಲ್ಲಿ ಈಗ ಪಕ್ಷ ಬಿಡುವ ಅಭಿಯಾನ (ಕಾಂಗ್ರೆಸ್ ಛೋಡೋ ಅಭಿಯಾನ್) ನಡೆಯುತ್ತಿದೆ ಎಂದು ಬಿಜೆಪಿ ಲೇವಡಿ ಮಾಡಿದೆ.

‘ಡಿಜಿಟಲ್ ಅಭಿಯಾನದಲ್ಲಿ ಲಕ್ಷಲಕ್ಷ ಸದಸ್ಯರು ಸೇರ್ಪಡೆಯಾಗಿದ್ದಾರೆ ಎಂದು ಅಂಕಿ-ಸಂಖ್ಯೆ ಬಿಡುಗಡೆ ಮಾಡಿರುವ ಡಿ.ಕೆ.ಶಿವಕುಮಾರ್ ಅವರೇ, ಈಗ ಅನೇಕರು ಪಕ್ಷ ತ್ಯಜಿಸುತ್ತಿದ್ದು, ನಾಳೆ ನಡೆಯಲಿರುವ ರಾಜ್ಯ ಚಿಂತನ ಶಿಬಿರದಲ್ಲಿ ಮುಂದೆ ಪಕ್ಷ ತ್ಯಜಿಸುವವರಿಗಾಗಿ ಹೊಸ ಅಭಿಯಾನ ಘೋಷಿಸುವಿರಾ? ಕೆಪಿಸಿಸಿ ಅಧ್ಯಕ್ಷರೇ, ನಿಮ್ಮ ಭಾರತ್‌ ಜೋಡೋ ಅಭಿಯಾನ ಮತ್ತು ಸದಸ್ಯತ್ವ ಅಭಿಯಾನ ಹೇಗಿದೆ? ಅಭಿಯಾನದ ಮೂಲಕ ಕಾಂಗ್ರೆಸ್‌ ಸೇರಿದವರ ಸಂಖ್ಯೆ ಹೆಚ್ಚೋ ಅಥವಾ ಕಾಂಗ್ರೆಸ್‌ ತ್ಯಜಿಸಲಿರುವವರ ಸಂಖ್ಯೆ ಹೆಚ್ಚೋ’ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಇತ್ತೀಚೆಗೆ ಕಾಂಗ್ರೆಸ್ ತೊರೆದ ಹಿರಿಯ ನಾಯಕರ ಪಟ್ಟಿಯನ್ನೇ ಬಿಜೆಪಿ ನೀಡಿದೆ. ಕಪಿಲ್ ಸಿಬಲ್, ಆರ್.ಪಿ.ಎನ್.ಸಿಂಗ್, ಅಶ್ವಿನಿ ಕುಮಾರ್, ಹಾರ್ದಿಕ್ ಪಟೇಲ್, ಸಿ.ಎಂ.ಇಬ್ರಾಹಿಂ, ಪ್ರಮೋದ್ ಮಧ್ವರಾಜ್, ಮುಖ್ಯಮಂತ್ರಿ ಚಂದ್ರು, ಬ್ರಿಜೇಶ್ ಕಾಳಪ್ಪ ಈಗಾಗಲೇ ಪಕ್ಷ ತೊರೆದಿದ್ದಾರೆ. ಕಾಂಗ್ರೆಸ್ಸಿಗರೇ, ನಿಮ್ಮದು ಭಾರತ್‌ ಜೋಡೋ ಅಭಿಯಾನವೋ, ಕಾಂಗ್ರೆಸ್‌ಛೋಡೋಅಭಿಯಾನವೋ? ಎಂದು ಬಿಜೆಪಿ ಪ್ರಶ್ನಿಸಿದೆ.

‘ಕಾಂಗ್ರೆಸ್‌ ಪಕ್ಷ ಯಾವ ದಯನೀಯ ಸ್ಥಿತಿ ತಲುಪಿದೆ ಎಂದರೆ ಡಿಜಿಟಲ್ ಸದಸ್ಯತ್ವ ಅಭಿಯಾನಕ್ಕೆ ಸಂಖ್ಯೆ ತೋರಿಸಲು ಟಿವಿ, ಫ್ರಿಡ್ಜ್, ಫೋನ್ ಆಮಿಷ ಒಡ್ಡಲಾಗಿತ್ತು. ಈಗ ಹತ್ತಾರು ವರ್ಷ ಕಾಂಗ್ರೆಸ್‌ ಪಕ್ಷಕ್ಕೆ ದುಡಿದವರು ಪಕ್ಷ ತ್ಯಜಿಸುತ್ತಿದ್ದಾರೆ. ನಕಲಿ ಗಾಂಧಿಗಳ ನಾಯಕತ್ವಕ್ಕೆ ಕಾರ್ಯಕರ್ತರೇ ಬೇಸತ್ತಿದ್ದಾರೆ. ರಾಜಸ್ಥಾನದ ಚಿಂತನ ಶಿಬಿರದ ಬಳಿಕ ಕಾಂಗ್ರೆಸ್‌ ಖಾಲಿಯಾಗುತ್ತಿದೆ, G23 ಗುಂಪಿನ ಸಂಖ್ಯೆ ಕರಗುತ್ತಿದೆ. ಕಾರಣ ಸ್ಪಷ್ಟ, ನಕಲಿ ಗಾಂಧಿ ಕುಟುಂಬದ ನಾಯಕತ್ವವನ್ನು ಕಾಂಗ್ರೆಸ್ ಕಾರ್ಯಕರ್ತರೇ ಒಪ್ಪುತ್ತಿಲ್ಲ’ ಎಂದು ಬಿಜೆಪಿ ಆರೋಪ ಮಾಡಿದೆ.

‘ರಾಜ್ಯದಲ್ಲೂ ಕಾಂಗ್ರೆಸ್‌ ಚಿಂತನಾ ಶಿಬಿರ ಹಮ್ಮಿಕೊಂಡಿದೆ. ಅದರ ಮುನ್ನವೇ ರಾಜಿನಾಮೆ ಪರ್ವ ಆರಂಭಗೊಂಡಿದೆ. ಪರಿಷತ್ ಟಿಕೆಟ್‌, ರಾಜ್ಯಸಭಾ ಟಿಕೆಟ್‌, ಪದಾಧಿಕಾರಿಗಳ ಪಟ್ಟಿ ಹೀಗೆ ಪಕ್ಷದ ವಿಚಾರದಲ್ಲಿ ಸಿದ್ದರಾಮಯ್ಯ ಛಾಪು ಎದ್ದು ಕಾಣುತ್ತಿದೆ. ಕೆಪಿಸಿಸಿ ಅಧ್ಯಕ್ಷರು ಸಿದ್ದರಾಮಯ್ಯ ಬಣದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ ಮುಂದೊಂದು ದಿನ ಕಾಂಗ್ರೆಸ್‌ ತ್ಯಜಿಸಬಹುದಾದ ದಿನ ದೂರವೇನು ಇಲ್ಲ. ಎಚ್ಚರ ಡಿಕೆಶಿ ಎಚ್ಚರ’ ಎಂದು ಬಿಜೆಪಿ ಸಲಹೆ ಮಾಡಿದೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:02 pm, Wed, 1 June 22