ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ರಾಜೀನಾಮೆಯಿಂದ ನಮಗೆ ಬೇಸರವಾಗಿಲ್ಲ. ನಮ್ಮ ಕುಟುಂಬದ ಯಾರಿಗೂ ಬೇಸರವಾಗಿಲ್ಲ ಎಂದು ನಿರ್ಗಮಿತ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರಿ ಅರುಣಾದೇವಿ ಟಿವಿ9ಗೆ ಹೇಳಿಕೆ ನೀಡಿದ್ದಾರೆ. ರಾಜೀನಾಮೆ ನಿರ್ಧಾರವನ್ನು ಕುಟುಂಬಕ್ಕೂ ಹೇಳಿರಲಿಲ್ಲ. ರಾಜಕೀಯ ನಿರ್ಧಾರಗಳ ಬಗ್ಗೆ ಅವರು ಕುಟುಂಬಕ್ಕೆ ಮಾಹಿತಿ ಹೇಳುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.
ಕೊವಿಡ್ ಸಂಕಷ್ಟದಲ್ಲಿ ಯಡಿಯೂರಪ್ಪ ಉತ್ತಮವಾಗಿ ಕೆಲಸ ಮಾಡಿದ್ದಾರೆ. ನಗುಮುಖದಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಿನ್ನೆ ರಾತ್ರಿ ತುಂಬಾ ಆಲೋಚನೆ ಮಾಡಿ ರಾಜೀನಾಮೆ ನಿರ್ಧಾರ ಕೈಗೊಂಡಿದ್ದಾರೆ. ಯಾವುದು ಸರಿ ಅನಿಸುತ್ತೆ ಅದನ್ನು ಅವರೇ ನಿರ್ಧರಿಸುತ್ತಾರೆ. ರಾಜೀನಾಮೆ ನೀಡಿದ ಬಗ್ಗೆಯೇ ಬಿಎಸ್‌ವೈ ಚಿಂತಿಸುತ್ತಿಲ್ಲ ಎಂದು ಅರುಣಾದೇವಿ ಹೇಳಿದ್ದಾರೆ.
ನಾಳೆಯಿಂದ ಏನು ಮಾಡಬಹುದು ಎಂದು ಅವರು ಚಿಂತಿಸುತ್ತಿದ್ದಾರೆ. ಅಧಿಕಾರ ಇರಲಿ, ಇಲ್ಲದಿರಲಿ ಹೋರಾಟ ಮಾಡಿದ್ದಾರೆ. ರೈತರು, ಬಡವರ ಪರ ನಿರಂತರ ಹೋರಾಟ ಮಾಡ್ತಿದ್ದಾರೆ. ಮುಂದೆ ಮುಖ್ಯಮಂತ್ರಿ ಆಗುವವರಿಗೆ ಯಡಿಯೂರಪ್ಪ ಸ್ಫೂರ್ತಿ ಎಂದು ಟಿವಿ9ಗೆ ಬಿಎಸ್‌ವೈ ಪುತ್ರಿ ಅರುಣಾದೇವಿ ಹೇಳಿಕೆ ನೀಡಿದ್ದಾರೆ.
ಮುಂದಿನ ಸಿಎಂ ಹೆಸರನ್ನು ನಾನು ಸೂಚಿಸಲು ಹೋಗಲ್ಲ
ನನ್ನ ಪರವಾಗಿ ಕೆಲಸ ಮಾಡಿದ ಎಲ್ಲರಿಗೂ ಅಭಿನಂದನೆ. ದೆಹಲಿಯಿಂದ ನನಗೆ ಯಾವುದೇ ಒತ್ತಡ ಇರಲಿಲ್ಲ. ನಾನೇ ನಿರ್ಧಾರ ಮಾಡಿ ರಾಜೀನಾಮೆಯನ್ನ ಸಲ್ಲಿಸಿದ್ದೇನೆ. ಸ್ವಯಂಪ್ರೇರಿತನಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಮುಂದಿನ ಸಿಎಂ ಹೆಸರನ್ನು ನಾನು ಸೂಚಿಸಲು ಹೋಗಲ್ಲ. ಯಾವುದೇ ಹೆಸರು ಹೇಳುವುದಕ್ಕೆ ನಾನು ಇಷ್ಟಪಡುವುದಿಲ್ಲ. ಹೈಕಮಾಂಡ್ ಮುಂದಿನ ಸಿಎಂ ಯಾರೆಂದು ತೀರ್ಮಾನಿಸುತ್ತೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರಲು ಸಂಕಲ್ಪ ಮಾಡಿದ್ದೇವೆ ಎಂದು ಯಡಿಯೂರಪ್ಪ ರಾಜೀನಾಮೆ ಬಳಿಕ ಹೇಳಿದ್ದಾರೆ.
ಯಾವುದೇ ಕಾರಣಕ್ಕೂ ರಾಜಕೀಯ ನಿವೃತ್ತಿ ಇಲ್ಲ. ನಾಳೆಯಿಂದಲೇ ಒಟ್ಟಾಗಿ ಪಕ್ಷದ ಕೆಲಸವನ್ನು ಮಾಡುತ್ತೇನೆ. ರಾಜ್ಯಪಾಲರು ನನ್ನ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ನಾನು ರಾಜ್ಯ ರಾಜಕೀಯದಲ್ಲೇ ಇರುತ್ತೇನೆ. ಯಾವುದೇ ರಾಜ್ಯಪಾಲ ಹುದ್ದೆಯನ್ನು ಅಲಂಕರಿಸುವುದಿಲ್ಲ. ಮುಂದಿನ ಸಿಎಂಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದು ತಿಳಿಸಿದ್ದಾರೆ.
(BS Yediyurappa daughter Aruna Devi on Karnataka CM BS Yediyurappa Resign)
Published On - 2:30 pm, Mon, 26 July 21