ಯಡಿಯೂರಪ್ಪ ಭ್ರಷ್ಟ ಮುಖ್ಯಮಂತ್ರಿ ಹೇಳಿಕೆ ವಿಚಾರ: ಸಿದ್ದರಾಮಯ್ಯ ಹೇಳಿಕೆಗೆ ಶ್ರೀನಿವಾಸ ಪ್ರಸಾದ್ ಲೆಫ್ಟ್-ರೈಟ್
ಮುಂದಿನ ಸಿಎಂ ಯಾರಾಗ್ತಾರೆಂದು ನನಗೆ ಗೊತ್ತಿಲ್ಲ. ನರೇಂದ್ರ ಮೋದಿ, ಅಮಿತ್ ಶಾಗೆ ಮಾತ್ರ ಗೊತ್ತು. ರಾಜ್ಯದ ಬಿಜೆಪಿ ನಾಯಕರಿಗೂ ಈ ಬಗ್ಗೆ ಗೊತ್ತಿಲ್ಲ ಯಾರು ಬಂದರೂ ಭ್ರಷ್ಟರೇ ಎಂದಿದ್ದ ಸಿದ್ದರಾಮಯ್ಯ
ಮೈಸೂರು: ಯಡಿಯೂರಪ್ಪ ಭ್ರಷ್ಟ ಮುಖ್ಯಮಂತ್ರಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಶ್ರೀನಿವಾಸ ಪ್ರಸಾದ್ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಒಬ್ಬರೇ ಪ್ರಾಮಾಣಿಕರಾಗಿದ್ದಾರಾ? ಹಾಗಾದರೆ ಬೇರೆ ಯಾರನ್ನೂ ಸಿಎಂ ಮಾಡಬಾರದಾ? ಜವಾಬ್ದಾರಿಯಿಂದ ಮಾತಾಡುವುದನ್ನು ಇನ್ನೂ ಕಲಿತಿಲ್ಲ. ಸಿದ್ದರಾಮಯ್ಯ ಬಾಲಿಷ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಸಂಸದ ವಿ. ಶ್ರೀನಿವಾಸ ಪ್ರಸಾದ್ ಕಿಡಿಕಾರಿದ್ದಾರೆ.
ಸಿಎಂ ಆಗಿದ್ದುಕೊಂಡೆ ಚುನಾವಣೆಯಲ್ಲಿ ಸೋತರು. ಅವರ ಮಂತ್ರಿಗಳೆಲ್ಲ ಉದುರಿಹೋದರು ಎಂದು ಲೇವಡಿ ಮಾಡಿದ ಒಂದು ಕಾಲದ ಸಿದ್ದರಾಮಯ್ಯನವರ ಆತ್ಮೀಯ ಮಿತ್ರ ಶ್ರೀನಿವಾಸ ಪ್ರಸಾದ್ ಅವರು ಬಾದಾಮಿಯಲ್ಲಿ ಸೋತಿದ್ದರೆ ಸಿದ್ದರಾಮಯ್ಯ ಸ್ಥಿತಿ ಏನಾಗ್ತಿತ್ತು? ಇವರು ವಿರೋಧ ಪಕ್ಷದ ನಾಯಕ ಹೇಗಾಗಿದ್ದಾರೆ ಎಂಬುದು ಗೊತ್ತು. ನಾನು ಹಿರಿಯ ನಾಯಕ, ನನ್ನನ್ನು ವ್ಯವಸ್ಥಿತವಾಗಿ ತುಳಿದರು. ಇದಕ್ಕೆ ಪ್ರತಿಯಾಗಿ ನಾನು ಕೂಡ ತಕ್ಕ ಪಾಠ ಕಲಿಸಿದ್ದೇನೆ ಎಂದು ಸಿದ್ದರಾಮಯ್ಯ ವಿರುದ್ಧ ಶ್ರೀನಿವಾಸ ಪ್ರಸಾದ್ ಆಕ್ರೋಶ ಹೊರಹಾಕಿದರು.
ಇದಕ್ಕೂ ಮುನ್ನ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿ ಎಸ್ ಯಡಿಯೂರಪ್ಪ ಅವರು ನಿರ್ಗಮಿಸುತ್ತಿದ್ದಂತೆ ಟಿವಿ9 ಜೊತೆ ಮಾತನಾಡಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಯಡಿಯೂರಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಆರು ತಿಂಗಳ ಹಿಂದೆಯೇ ರಿಸೈನ್ ಮಾಡ್ತಾರೆ ಅಂತಾ ಗೊತ್ತಿತ್ತು. ನನ್ನ ಸರ್ಕಾರವನ್ನು 10 ಪರ್ಸೆಂಟ್ ಸರ್ಕಾರವೆಂದಿದ್ದರು. ಆದ್ರೆ ಬಿಎಸ್‌ವೈ ಸರ್ಕಾರ 30 ಪರ್ಸೆಂಟ್ ಸರ್ಕಾರವಾಗಿತ್ತು.ಈಗ ಸಿಎಂ ಸ್ಥಾನದಿಂದ ಯಡಿಯೂರಪ್ಪ ಬದಲಾವಣೆ ಆಗಬೇಕಾಯಿತು. ಇದರಿಂದ ರಾಜ್ಯಕ್ಕೆ ಯಾವುದೇ ಉಪಯೋಗವಿಲ್ಲ. ಬಿಜೆಪಿಯೇ ಭ್ರಷ್ಟ ಪಕ್ಷ. ಭ್ರಷ್ಟ ಬಿಜೆಪಿ ಆಡಳಿತದಿಂದಾಗಿ ರಾಜ್ಯ 10 ವರ್ಷ ಆರ್ಥಿಕವಾಗಿ ಹಿಂದಕ್ಕೆ ಹೋಗಿದೆ. ಸರ್ಕಾರ ರಚಿಸಲು ಬಿಎಸ್‌ವೈ ಹಣ ಖರ್ಚು ಮಾಡಿದ್ದರು. ಹೀಗಾಗಿ ಬಿಎಸ್‌ವೈರನ್ನು ಬಿಜೆಪಿ ಹೈಕಮಾಂಡ್ ಸಿಎಂ ಮಾಡಿತ್ತು ಎಂದು ಸಿದ್ದರಾಮಯ್ಯ ಹೇಳಿದ್ದರು.
ಮುಂದಿನ ಸಿಎಂ ಯಾರಾಗ್ತಾರೆಂದು ನನಗೆ ಗೊತ್ತಿಲ್ಲ. ನರೇಂದ್ರ ಮೋದಿ, ಅಮಿತ್ ಶಾಗೆ ಮಾತ್ರ ಗೊತ್ತು. ರಾಜ್ಯದ ಬಿಜೆಪಿ ನಾಯಕರಿಗೂ ಈ ಬಗ್ಗೆ ಗೊತ್ತಿಲ್ಲ. ಯಾರು ಬಂದರೂ ಭ್ರಷ್ಟರೇ ಎಂದ ಸಿದ್ದರಾಮಯ್ಯ 17 ಶಾಸಕರು ಹೋಗಿದ್ದಕ್ಕೆ ಬಿಜೆಪಿ ಸರ್ಕಾರ ಬಂದಿದೆ. ಬಿಜೆಪಿಯವರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರ ಉತ್ತಮ ಎಂಬುದು ಜನರ ಅಭಿಪ್ರಾಯ. ಸ್ವತಂತ್ರ ಭಾರತದಲ್ಲೇ ಬಿಜೆಪಿಯದ್ದು ಅತ್ಯಂತ ಭ್ರಷ್ಟ ಸರ್ಕಾರ ಇದು. IAS, IPS ಅಧಿಕಾರಿಗಳ ವರ್ಗಾವಣೆ ದಂಧೆ ನಡೆಯುತ್ತಿದೆ. ಇವರ ಭ್ರಷ್ಟಾಚಾರವನ್ನು ರಾಜ್ಯದ ಜನರ ಮುಂದಿಡುತ್ತೇವೆ. BSY ನೇತೃತ್ವದಲ್ಲಿ ಯಾವಾಗಲಾದ್ರೂ ಬಹುಮತ ಬಂದಿದೆಯಾ? ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು, ಆದ್ರೆ ಬಹುಮತ ಬಂದಿಲ್ಲ. ಆಪರೇಷನ್ ಕಮಲ ಮೂಲಕವೇ ಸರ್ಕಾರ ರಚಿಸಿದ್ದ ಯಡಿಯೂರಪ್ಪ ಎಂದು ಟಿವಿ9ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದರು.
(bjp mp v srinivas prasad criticises siddaramaiah over bs yediyurappa corruption allegations)
Published On - 2:32 pm, Mon, 26 July 21