ಚುನಾವಣೆ ಭರಾಟೆ ಮಧ್ಯೆ ಬೂಕನಕೆರೆಗೆ ಮಾಜಿ ಸಿಎಂ ಭೇಟಿ: ಹುಟ್ಟೂರು, ಕರ್ಮಭೂಮಿ ಸ್ಮರಿಸಿದ ಯಡಿಯೂರಪ್ಪ

ಚುನಾವಣೆ ಭರಾಟೆ ಮಧ್ಯೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಹುಟ್ಟೂರಾದ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಚುನಾವಣೆ ಭರಾಟೆ ಮಧ್ಯೆ ಬೂಕನಕೆರೆಗೆ ಮಾಜಿ ಸಿಎಂ ಭೇಟಿ: ಹುಟ್ಟೂರು, ಕರ್ಮಭೂಮಿ ಸ್ಮರಿಸಿದ ಯಡಿಯೂರಪ್ಪ
BS Yediyurappa
Updated By: ರಮೇಶ್ ಬಿ. ಜವಳಗೇರಾ

Updated on: Nov 23, 2022 | 8:21 PM

ಮಂಡ್ಯ: ಮುಂಬರುವ ಕರ್ನಾಟಕ ವಿಧಾನಸಭೆಯ ಭರಾಟೆ ಜೋರಾಗಿದೆ. ಅದರಲ್ಲೂ ಬಿಜೆಪಿ ಜನಸಂಕಲ್ಪ ಯಾತ್ರೆ ಮೂಲಕ ಮತದಾರರನ್ನು ಸೆಳೆಯಲು ಮುಂದಾಗಿದೆ.. ಇದರ ಮಧ್ಯೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ(BS Yediyurappa) ಅವರು ಹುಟ್ಟೂರಾದ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಹೌದು…ಇಂದು (ನ,23) ಹುಟ್ಟೂರು ಬೂಕನಕೆರೆಗೆ ಭೇಟಿ ನೀಡಿದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್, ಮನೆ ದೇವರು ಸ್ವತಂತ್ರ ಸಿದ್ದಲಿಂಗೇಶ್ವರ ಹಾಗೂ ಗೂಗಲಮ್ಮ ತಾಯಿ ಆರ್ಶೀವಾದ ಪಡೆದುಕೊಂಡರು. ಬಳಿಕ ಮಾತನಾಡಿದ ಯಡಿಯೂರಪ್ಪ, ಯಾವತ್ತೂ ಹುಟ್ಟೂರನ್ನು ಮರೆಯಬಾರದು, ನಾನು ಸಹ ಮರೆತಿಲ್ಲ. ಜನ್ಮ ಸ್ಥಳ ಬೂಕನಕೆರೆಯಾದರೆ ಸಿಎಂ ಆಗಿ ಮಾಡಿದ್ದು ಶಿಕಾರಿಪುರ. ಶಿಕಾರಿಪುರ ಕ್ಷೇತ್ರದಿಂದ 7 ಬಾರಿ ಶಾಸಕ, 4 ಬಾರಿ ಸಿಎಂ ಆಗಿದ್ದೇನೆ ಎಂದು ಹುಟ್ಟೂರು ಹಾಗೂ ಕರ್ಮಭೂಮಿಯನ್ನು ಸ್ಮರಿಸಿದರು.

ಶಿಕಾರಿಪುರ ತಾಲೂಕಿನಲ್ಲಿ ಹೇಗೆ ಅಭಿವೃದ್ಧಿ ಕಾರ್ಯ ಮಾಡಿದ್ದೇವೋ ಅದೇ ರೀತಿ ಬೂಕನಕೆರೆ ಗ್ರಾಮ ಅಭಿವೃದ್ಧಿ ಪಡಿಸುತ್ತೇವೆ. ಸಚಿವ ನಾರಾಯಣಗೌಡ ಬೂಕನಕೆರೆ ಅಭಿವೃದ್ಧಿಗೆ ಒತ್ತು ನೀಡುತ್ತಾರೆ. ಯಾರೋ ಸಿಎಂ ಆಗುತ್ತೇನೆಂದು ಹಗಲುಗನಸು ಕಾಣುತ್ತಿದ್ದಾರೆ. ಆದ್ರೆ ಅವರು ಯಾವುದೇ ಕಾರಣಕ್ಕು ಸಿಎಂ ಆಗುವುದಿಲ್ಲ. ಮುಂದಿನ ಬಾರಿಯೂ ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರುತ್ತೆ. 140ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದು ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚಿಲುಮೆ ಸಂಸ್ಥೆಯಿಂದ ವೋಟರ್ ಐಡಿ ಮಾಹಿತಿ ಸೋರಿಕೆ ಪ್ರಕರಣದ ವಿಚಾರವಾಗಿ ಪ್ರತಿಕ್ರಿಯಿಸಿದ ಬಿಎಸ್​ವೈ, ಈ ಪ್ರಕರಣದಲ್ಲಿ ಏನು ಅರ್ಥ ಇಲ್ಲ. ಕುಂಟು ನೆಪ ಹೇಳಿಕೊಂಡು ಕಾಂಗ್ರಸ್ ನವರು ಕಾಲ ವ್ಯರ್ಥ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ