ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಬಿಎಸ್​ ಯಡಿಯೂರಪ್ಪ ಆಪ್ತ ಮೋಹನ ಲಿಂಬಿಕಾಯಿ

|

Updated on: Mar 16, 2023 | 8:37 PM

ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯ ಬಿ. ಎಸ್​. ಯಡಿಯೂರಪ್ಪ ಅವರ ಆಪ್ತರಾಗಿದ್ದ ವಿಧಾನ ಪರಿಷತ್​ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಅವರು ಗುರುವಾರ ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಬೆಳಗಾವಿ: ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯ, ಬಿ. ಎಸ್​. ಯಡಿಯೂರಪ್ಪ (BS Yediyurappa) ಅವರ ಆಪ್ತರಾಗಿದ್ದ ವಿಧಾನ ಪರಿಷತ್​ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ (Mohan Limbikai) ಅವರು ಗುರುವಾರ ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಬೆಳಗಾವಿ ಕಾಂಗ್ರೆಸ್ ಕಚೇರಿಯಲ್ಲಿ ಸುರ್ಜೇವಾಲ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಸಮ್ಮುಖದಲ್ಲಿ ಲಿಂಬಿಕಾಯಿಗೆ ಕಾಂಗ್ರೆಸ್​ ಬಾವುಟ ನೀಡಿ ಸ್ವಾಗತಿಸಲಾಗಿದೆ. ಬಿ. ಎಸ್​. ಯಡಿಯೂರಪ್ಪ ಕಾನೂನು ಸಲಹೆಗಾರರಾಗಿ ಮೋಹನ ಲಿಂಬಿಕಾಯಿ ಕೆಲಸ ಮಾಡಿದ್ದಾರೆ. ಈ ವೇಳೆ ಮೋಹನ ಲಿಂಬಿಕಾಯಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ. ಅಲ್ಲಿ ಕಾರ್ಯಕರ್ತರಿಗೆ ಬೆಲೆ ಉಳಿದಿಲ್ಲ. ಕೆಲವೇ ನಾಯಕರು ಎಲ್ಲ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದರಿಂದ ಬೇಸತ್ತು ಕಾಂಗ್ರೆಸ್​ಗೆ ಬಂದಿದ್ದೇನೆ ಎಂದರು. ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ದೂರ ಸರಿದಿವೆ. ಹೀಗಾಗಿ, ಎಐಸಿಸಿ ಹಾಗೂ ಕೆಪಿಸಿಸಿ ತತ್ವಗಳನ್ನು ಮನವರಿಕೆ ಮಾಡಿಕೊಂಡ ಇಲ್ಲಿಗೆ ಬಂದಿದ್ದೇನೆ. ಯಾವುದೇ ಷರತ್ತು ಹಾಕದೇ ಸಾಮಾನ್ಯ ಕಾರ್ಯಕರ್ತನಾಗಿ ಸೇರಿಕೊಂಡಿದ್ದೇನೆ ಎಂದು ತಿಳಿಸಿದರು.

ಇನ್ನು ಈ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ, ಯಾವ ಷರತ್ತು ಇಲ್ಲದೇ ಬಿಜೆಪಿ ಆಡಳಿತ, ಭ್ರಷ್ಟಾಚಾರದ ಬಗ್ಗೆ ಬೇಸರಗೊಂಡು ಇವತ್ತು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವ ಮೆಚ್ಚಿ ಮೋಹನ್ ನಿಂಬಿಕಾಯಿ ಬಂದಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: Chikkamagaluru: ಕಾರ್ಯಕರ್ತರ ಪ್ರತಿಭಟನೆಗೆ ಯಡಿಯೂರಪ್ಪ ಗರಂ; ವಿಜಯಸಂಕಲ್ಪ ಯಾತ್ರೆ ರದ್ದುಗೊಳಿಸಿ ವಾಪಸ್

ಮಾರ್ಚ್ 20ರಂದು ಬೆಳಗಾವಿಯಲ್ಲಿ ಯುವ ಕಾಂಗ್ರೆಸ್ ಸಮಾವೇಶ: ಸಿದ್ದರಾಮಯ್ಯ 

ಮಾರ್ಚ್ 20ರಂದು ಬೆಳಗಾವಿಯಲ್ಲಿ ಯುವ ಕಾಂಗ್ರೆಸ್ ಸಮಾವೇಶ ನಡೆಯಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಯುವಕರನ್ನುದ್ದೇಶಿಸಿ ರಾಹುಲ್ ಗಾಂಧಿ ಭಾಷಣ ಮಾಡಲಿದ್ದಾರೆ. ಐತಿಹಾಸಿಕ ರ‍್ಯಾಲಿ ಮಾಡಲು ಇಂದು ಸಭೆಯಲ್ಲಿ ತೀರ್ಮಾನಿಸಿದ್ದೇವೆ. 4-5 ಲಕ್ಷ ಜನರು ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಚುನಾವಣೆ ಹಿನ್ನೆಲೆ ಯುವ ಕಾಂಗ್ರೆಸ್ ಸಮಾವೇಶ ಆಯೋಜಿಸಿದ್ದೇವೆ. ಚುನಾವಣೆಗೆ ಸಂಬಂಧಿಸಿದ ವಿಷಯವನ್ನು ಪ್ರಸ್ತಾಪ ಮಾಡುತ್ತಾರೆ ಎಂದರು.

ಇದನ್ನೂ ಓದಿ: 224ರ ಪೈಕಿ 135 ಕ್ಷೇತ್ರಗಳಿಗೆ ಕಾಂಗ್ರೆಸ್​ ಅಭ್ಯರ್ಥಿಗಳ ಪಟ್ಟಿ ಸಿದ್ಧ, ಮೊದಲ ಲಿಸ್ಟ್​ನಲ್ಲಿ ಯಾರುಂಟು. ಯಾರಿಲ್ಲ? ಇಲ್ಲಿದೆ ನೋಡಿ

ಮೋದಿ‌ ರೋಡ್ ಶೋ ಬಗ್ಗೆ ರಣದೀಪ್​ ಸಿಂಗ್ ಸುರ್ಜೇವಾಲ ವ್ಯಂಗ್ಯ

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಮಾತನಾಡಿ, ಯುವ ಕ್ರಾಂತಿ ರ‍್ಯಾಲಿಯಲ್ಲಿ ಯುವಕರಿಗೆ ಯೋಜನೆ ಘೋಷಿಸುತ್ತೇವೆ. ಯುವ ಕ್ರಾಂತಿ ರ‍್ಯಾಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಪಾಲ್ಗೊಳ್ಳಲಿದ್ದಾರೆ. ಸಿಎಂ ಬೊಮ್ಮಾಯಿ ಸರ್ಕಾರ ಯುವಕರ ಭವಿಷ್ಯವನ್ನು ಹಾಳು ಮಾಡಿದೆ. PSI ಹುದ್ದೆ ಸೇರಿದಂತೆ ಸರ್ಕಾರಿ ಹುದ್ದೆಗಳನ್ನು ಮಾರಾಟ ಮಾಡಿದ್ದಾರೆ. ಕೈಗಾರಿಕೋದ್ಯಮಗಳು ಅನ್ಯರಾಜ್ಯಗಳ ಪಾಲಾಗುತ್ತಿವೆ. ಪ್ರಧಾನಿ ನರೇಂದ್ರ ಮೋದಿ ರೋಡ್​ ಶೋ ಮಾಡದಿದ್ದರೆ ಒಳ್ಳೆಯದು. ಮೋದಿ ರೋಡ್ ಶೋ ಮಾಡಿದ ಮರುದಿನವೇ ಬೆಲೆ ಏರಿಕೆ ಆಗಿದೆ ಎಂದು ಮೋದಿ‌ ರೋಡ್ ಶೋ ಬಗ್ಗೆ ರಣದೀಪ್​ ಸಿಂಗ್ ಸುರ್ಜೇವಾಲ ವ್ಯಂಗ್ಯವಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.