ಬಿಬಿಎಂಪಿ ಬಾಕಿ ತೆರಿಗೆ ಸಂಗ್ರಹಕ್ಕೆ ಒನ್ ಟೈಂ ಸೆಟಲ್‌ಮೆಂಟ್ ಅವಧಿ ವಿಸ್ತರಣೆ, ಗೃಹ ಬಳಕೆ ನೀರಿನ ದರ ಹೆಚ್ಚಳ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಾಕಿ ತೆರಿಗೆ ಸಂಗ್ರಹಕ್ಕೆ ಒನ್ ಟೈಂ ಸೆಟಲ್‌ಮೆಂಟ್ ಅವಧಿ ವಿಸ್ತರಣೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ. 2024ರ ಜೂನ್ 30ರವರೆಗೆ ಒನ್ ಟೈಂ ಸೆಟಲ್‌ಮೆಂಟ್ ಅವಧಿ ವಿಸ್ತರಣೆ ಮಾಡಲಾಗಿದೆ.
ಬೆಂಗಳೂರು, ಡಿಸೆಂಬರ್ 21: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಾಕಿ ತೆರಿಗೆ ಸಂಗ್ರಹಕ್ಕೆ ಒನ್ ಟೈಂ ಸೆಟಲ್‌ಮೆಂಟ್ ಅವಧಿ ವಿಸ್ತರಣೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ವಿಧಾನಸೌಧದಲ್ಲಿ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್ಕೆ ಪಾಟೀಲ್ (HK Patil), 2024ರ ಜೂನ್ 30ರವರೆಗೆ ಒನ್ ಟೈಂ ಸೆಟಲ್‌ಮೆಂಟ್ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ನೀರಿನ ಕರ ದರ ಇನ್ನು ಮುಂದೆ ವಾರ್ಷಿಕ ಹಣದುಬ್ಬರ ಸೂಚ್ಯಂಕಕ್ಕೆ ಸಂವಾದಿಯಾಗಿ ಹೆಚ್ಚಳ ಮಾಡುವ ಷರತ್ತಿನೊಂದಿಗೆ ನೀರಿನ ಕರ ವಿಧಿಸುವಿಕೆ ನಿಯಮಕ್ಕೆ ತಿದ್ದುಪಡಿ ಮಾಡಲಾಗಿದೆ. ಪ್ರತಿ ಎಂಸಿಎಫ್ಟಿ ನೀರಿಗೆ ಮೂರು ಲಕ್ಷ ರೂಪಾಯಿ ರಾಜಧನ ನಿಗದಿ ಮಾಡಲಾಗಿದೆ. ಈ ಹಿಂದೆ ಎಂಸಿಎಫ್ಟಿಗೆ ಒಂದು ಲಕ್ಷ ರೂ. ಗೂ ಕಡಿಮೆ ರಾಜಧನ ನಿಗದಿಯಾಗಿತ್ತು.
ಇದನ್ನೂ ಓದಿ: 2024ರ ಫೆಬ್ರವರಿಯಲ್ಲಿ ವಿಧಾನಮಂಡಲ ಜಂಟಿ ಮತ್ತು ಬಜೆಟ್ ಅಧಿವೇಶನ: HK ಪಾಟೀಲ್
ಕಾಲುವೆ, ಕೆರೆ, ಜಲಾಶಯಗಳಿಂದ ಒದಗಿಸುವ ನೀರಿಗೆ ಪ್ರತಿ ಎಂಸಿಎಫ್ಟಿ ಗೆ 3 ಲಕ್ಷ ರೂ. ರಾಜಧನ, ನೈಸರ್ಗಿಕ ಜಲಮಾರ್ಗ, ನದಿ, ಹಳ್ಳಗಳಿಂದ ಪ್ರತಿ ಎಸಿಎಫ್ಟಿ ಗೆ 1.50 ಲಕ್ಷ ರೂ. ರಾಜಧನ ನಿಗದಿಗೊಳಿಸಲಾಗಿದೆ.
ಎಡಿಬಿ ಯೋಜನೆಯಡಿ ಮಂಗಳೂರು ನಗರದಲ್ಲಿ 24/7 ನೀರು ಸರಬರಾಜು ಕಾಮಗಾರಿಯಲ್ಲಿ ಹೊಸದಾಗಿ 125 ಎಂಎಲ್ಡಿ ನೀರು ಶುದ್ದೀಕರಣ ಘಟಕ 127.70 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.
ಇದನ್ನೂ ಓದಿ: ಬುಡಕಟ್ಟು ಪಂಗಡಗಳ ಜನರಿಗೆ ಉಚಿತ ಪೌಷ್ಟಿಕ ಆಹಾರ, ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು ಇಲ್ಲಿವೆ
ಸರ್ಕಾರದ ಹಣ ಬೇರೆ ಬೇರೆ ಬ್ಯಾಂಕ್ಗಳಲ್ಲಿ ಠೇವಣಿ ಇಟ್ಟಿರುವ ವಿಚಾರವಾಗಿ ಮಾತನಾಡಿದ್ದು, ಠೇವಣಿ ಹಣ ಗುರುತಿಸಿ ವಾಪಸ್ ತರಲು ಸಂಪುಟ ಉಪಸಮಿತಿ ರಚನೆ ಮಾಡಲಾಗಿದೆ. ಕೋಟ್ಯಂತರ ಹಣ ಅಧಿಕಾರಿಗಳು ದುರುಪಯೋಗ ಮಾಡಿರುವ ಮಾಹಿತಿ ಇದೆ. ಹಿಂದೆ 680 ಕೋಟಿ ರೂ. ಇದೇ ರೀತಿ ಪತ್ತೆ ಹಚ್ಚಲಾಗಿತ್ತು. ಈಗ ಮತ್ತೆ ಅಂತಹ ಪ್ರಕರಣಗಳನ್ನು ತನಿಖೆ ಮಾಡಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.