ಚೆಕ್‌ಬೌನ್ಸ್ ಪ್ರಕರಣ: ಶಾಸಕ ಎಂಪಿ ಕುಮಾರಸ್ವಾಮಿ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ
ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿಗೆ ಸಂಕಷ್ಟ ಎದುರಾಗಿದ್ದು, ಚೆಕ್‌ಬೌನ್ಸ್ ಪ್ರಕರಣದಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಿಂದ ಚಿಕ್ಕಮಗಳೂರು ಎಸ್‌ಪಿ ಮೂಲಕ ಜಾಮೀನು ರಹಿತ ವಾರಂಟ್ ಜಾರಿಗೆ ಸೂಚನೆ ನೀಡಲಾಗಿದೆ.
ಚಿಕ್ಕಮಗಳೂರು: ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿಗೆ (MP Kumaraswamy) ಸಂಕಷ್ಟ ಎದುರಾಗಿದ್ದು, ಚೆಕ್‌ಬೌನ್ಸ್ ಪ್ರಕರಣದಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಿಂದ ಚಿಕ್ಕಮಗಳೂರು ಎಸ್‌ಪಿ ಮೂಲಕ ಜಾಮೀನು ರಹಿತ ವಾರಂಟ್ ಜಾರಿಗೆ ಸೂಚನೆ ನೀಡಲಾಗಿದೆ. ಶಾಸಕ ಎಂ.ಪಿ ಕುಮಾರಸ್ವಾಮಿ ವಿರುದ್ಧ ಚಿಕ್ಕಮಗಳೂರು ಮೂಲದ ಹೂವಪ್ಪಗೌಡ ಎನ್ನುವವರು 8 ಚೆಕ್‌ಬೌನ್ಸ್ ಪ್ರಕರಣ ದಾಖಲಿಸಿದ್ದರು. ಸಾಲದ ರೂಪದಲ್ಲಿ ಹಣ ಪಡೆದು ವಂಚಿಸಿದ್ದಾರೆಂದು ದೂರು ನೀಡಲಾಗಿತ್ತು. ಒಟ್ಟು 8 ಕೇಸ್‌ಗಳಲ್ಲಿ 1.38 ಕೋಟಿ ಹಣ ಪಾವತಿಸಬೇಕು. ಇಲ್ಲವಾದರೆ ತಲಾ 6 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು ಎಸಿಎಂಎಂ ನ್ಯಾಯಾಲಯ ತೀರ್ಪು ನೀಡಿತ್ತು. ಆದರೆ 30 ದಿನದೊಳಗೆ ಹಣ ಮರುಪಾವತಿ ಮಾಡದ ಹಿನ್ನೆಲೆ ಕೋರ್ಟ್ ಅರೆಸ್ಟ್ ವಾರಂಟ್ ಜಾರಿ ಮಾಡಿದೆ. ಚಿಕ್ಕಮಗಳೂರು SP ಉಮಾ ಪ್ರಶಾಂತ್ಗೆ ಎಂ.ಪಿ ಕುಮಾರಸ್ವಾಮಿಯನ್ನು ಬಂಧಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ನೋಟಿಸ್ ನೀಡಿದೆ.
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆ ದೂರು
ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆ ಎಂ.ಪಿ.ಕುಮಾರಸ್ವಾಮಿ ವಿರುದ್ಧ ಮೂಡಿಗೆರೆ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಮಹಿಳಾ ಸಂಘಟನೆಗಳಿಗೆ ಸರ್ಕಾರಿ ಅನುದಾನದ ಚೆಕ್ಗಳ ವಿತರಣೆ ಮಾಡಿದ್ದಾರೆ ಎಂದು ಆರೋಪಿ ಮೂಡಿಗೆರೆ ತಾಲೂಕು ಚುನಾವಣಾಧಿಕಾರಿ ಪಿ.ರಾಜೇಶ್ರಿಂದ ದೂರು ನೀಡಲಾಗಿದೆ. ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಿದ್ದ ಚುನಾವಣಾ ಅಧಿಕಾರಿಗಳು ನೀತಿ ಸಂಹಿತೆ ಉಲ್ಲಂಘನೆಯಡಿ ದೂರು ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮೂರು ಬಾರಿ ಶಾಸಕನಾಗಿದ್ದೇನೆ, ಟಿಕೆಟ್ ನೀಡುವಂತೆ ಕೇಳಿದ್ದೇನೆ: ಬಿಜೆಪಿ ಶಾಸಕ ಎಂಪಿ ಕುಮಾರಸ್ವಾಮಿ
ಶಾಸಕ ಕುಮಾರಸ್ವಾಮಿ ವಿರುದ್ಧ ಸ್ವಪಕ್ಷೀಯ ಕಾರ್ಯಕರ್ತರ ಬಂಡಾಯ
ಎಂ.ಪಿ. ಕುಮಾರಸ್ವಾಮಿ ವಿರುದ್ಧ ಬಿಜೆಪಿ ಕಾರ್ಯಕರ್ತರ ಬಂಡಾಯ ಮುಂದುವರೆದಿದೆ. ಮಾರ್ಚ್ 22ರಂದು ನೂರಾರು ಕಾರ್ಯಕರ್ತರು ಸಿ.ಟಿ. ರವಿ ಮನೆಗೆ ಮುತ್ತಿಗೆ ಹಾಕಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರಿಗೆ ಈ ಬಾರಿ ಟಿಕೆಟ್ ನೀಡಬಾರದು ಎಂದು ಒತ್ತಾಯಿಸಿದ್ದರು. ಇದಕ್ಕೆ ಕಾರಣ, ಮೂಡಿಗೆರೆ ಶಾಸಕ ಕುಮಾರಸ್ವಾಮಿಗೆ ಜೆಡಿಎಸ್ ಮುಖಂಡೆ ಭಾರತಿ ಕಂಟಕವಾಗಿದ್ದಾರಂತೆ. ತನ್ನ ಆಪ್ತೆಯ ಮೇಲಿನ ವ್ಯಾಮೋಹದಿಂದಲೇ ಶಾಸಕರು ತಮ್ಮ ಕಾರ್ಯಕರ್ತರನ್ನು ದೂರ ಮಾಡಿದ್ದು ಈ ವಿಚಾರ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಮೂಡಿಗೆರೆ ಜೆಡಿಎಸ್ ಮುಖಂಡೆ ಭಾರತಿಗಾಗಿ ಎಂ.ಪಿ. ಕುಮಾರಸ್ವಾಮಿಯವರು ಜನರ ಕೋಟ್ಯಾಂತರ ರೂಪಾಯಿ ತೆರಿಗೆ ಹಣ ಖರ್ಚು ಮಾಡಿದ್ದಾರೆ. ಕಾರ್ಯಕರ್ತರ ವಿರೋಧದ ನಡುವೆಯೂ ಸರ್ಕಾರಿ ದುಡ್ಡನ್ನ ತನ್ನ ಆಪ್ತೆಗಾಗಿ ಖರ್ಚು ಮಾಡಿದ್ದಾರೆ. ತನ್ನ ಆಪ್ತೆಯ ಹೋಂ ಸ್ಟೇ ರಸ್ತೆಗೆ ಲಕ್ಷಾಂತರ ರೂಪಾಯಿ ಅನುದಾನ ನೀಡಿದ್ದಾರೆ. ನೆರೆ ಪರಿಹಾರದ ಹಣವನ್ನು ಹೋಂ ಸ್ಟೇ ರಸ್ತೆಗಾಗಿ ಖರ್ಚು ಮಾಡಿದ್ದಾರೆ. ಹೋಂ ಸ್ಟೇಗೆ ಸಿಮೆಂಟ್ ರಸ್ತೆ, ಚರಡಿ, ವಿದ್ಯುತ್ ಪೂರೈಕೆಗಾಗಿ 80 ಲಕ್ಷ ಅನುದಾನ ನೀಡಿದ್ದಾರೆ ಎಂದು ಕಾರ್ಯಕರ್ತರು ಶಾಸಕನ ಮೇಲೆ ಅಸಮಾಧಾನಗೊಂಡಿದ್ದಾರೆ.
ಇದನ್ನೂ ಓದಿ: ಚುನಾವಣಾಧಿಕಾರಿಗಳ ವಿರುದ್ಧವೇ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ ಶಾಸಕ ಕೃಷ್ಣ ಭೈರೇಗೌಡ
ನಾನು ಗೆದ್ದು ಬರುತ್ತೇನೆ
ಇದಕ್ಕೂ ಮುನ್ನ ಮಾರ್ಚ್ 16ರಂದು ಎಂ.ಪಿ. ಕುಮಾರಸ್ವಾಮಿಯವರನ್ನು ವಿರೋಧಿಸಿ ಸ್ವಪಕ್ಷದ ಕಾರ್ಯಕರ್ತರೇ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಕಾರಿಗೆ ಮುತ್ತಿಗೆ ಹಾಕಿದ್ದ ಘಟನೆ ನಡೆದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು, ನನಗೆ 2004 ರಿಂದಲೂ ಇರುವ ವಿರೋಧಿಗಳು ಇಂದಿಗೂ ಇದ್ದಾರೆ. ಆದರೂ ಕೂಡಾ ನಾನು ಗೆಲ್ಲುತ್ತಲೇ ಬಂದಿದ್ದೇನೆ. ಸದ್ಯ ನಾನು ಗೆಲ್ಲಬಾರದು ಅಂತ ಹೀಗೆ ಮಾಡಿದ್ದಾರೆ. ನನಗೆ ಟಿಕೆಟ್ ಕೊಟ್ಟರೆ ನನ್ನ ಗೆಲುವಿಗೆ ಯಾರೂ ಅಡ್ಡಿಪಡಿಸಲು ಆಗಲ್ಲ. ನಾನು ಗೆದ್ದು ಬರುತ್ತೇನೆ ಎಂದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:11 pm, Thu, 30 March 23