ಕಾಂಗ್ರೆಸ್ ಬ್ರಿಟಿಷ್ ಸಾಮ್ರಾಜ್ಯದ ವಂಶಾವಳಿ, ಅದನ್ನು ಬೇರು ಸಮೇತ ಕಿತ್ತೊಗೆಯಬೇಕು; ಸಿಎಂ ಬೊಮ್ಮಾಯಿ ವಾಗ್ದಾಳಿ

|

Updated on: Mar 02, 2023 | 7:27 PM

ನಮಗೆ ಸ್ವಾತಂತ್ರ್ಯ ದೊರೆತು 75-76ವರ್ಷಗಳಾದವು. ಆದರೂ ಸಣ್ಣ ಪ್ರಮಾಣದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ವಂಶಾವಳಿ ಇನ್ನೂ ಉಳಿದುಕೊಂಡಿದೆ. ಅದನ್ನ ಬೇರು ಸಮೇತ ಕಿತ್ತು ಹಾಕಬೇಕಲು ಹೋರಾಟ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಬ್ರಿಟಿಷ್ ಸಾಮ್ರಾಜ್ಯದ ವಂಶಾವಳಿ, ಅದನ್ನು ಬೇರು ಸಮೇತ ಕಿತ್ತೊಗೆಯಬೇಕು; ಸಿಎಂ ಬೊಮ್ಮಾಯಿ ವಾಗ್ದಾಳಿ
ಸಿಎಂ ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
Follow us on

ಬೆಳಗಾವಿ: ನಮಗೆ ಸ್ವಾತಂತ್ರ್ಯ ದೊರೆತು 75-76ವರ್ಷಗಳಾದವು. ಆದರೂ ಸಣ್ಣ ಪ್ರಮಾಣದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ವಂಶಾವಳಿ ಇನ್ನೂ ಉಳಿದುಕೊಂಡಿದೆ. ಅದನ್ನ ಬೇರು ಸಮೇತ ಕಿತ್ತು ಹಾಕಬೇಕಲು ಹೋರಾಟ ನಡೆಯುತ್ತಿದೆ. ಈ ಹೋರಾಟದ ನೇತೃತ್ವವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ವಹಿಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ (BJP Vijay Sankalpa Yatra) ಭಾಗವಹಿಸಿ ಮಾತನಾಡಿದ ಅವರು, ಸಂಗೊಳ್ಳಿ ರಾಯಣ್ಣನ ಗುಣಗಳು ಪ್ರಧಾನಿ ಮೋದಿಯಲ್ಲಿವೆ. ಚೆನ್ನಮ್ಮ, ರಾಯಣ್ಣ ಅವರ ಕನಸನ್ನು ಈಡೇರಿಸುವ ಕೆಲಸ ಮೋದಿ ಮಾಡುತ್ತಿದ್ದಾರೆ. ಸ್ವಾತಂತ್ರ್ಯಾ ನಂತರದ ವೈರಿಗಳನ್ನು ಮಟ್ಟಹಾಕುವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ ಎಂದರು.

ಕರ್ನಾಟಕವು ಅಭಿವೃದ್ಧಿ ಪಥದಲ್ಲಿ ಮುಂದುವರಿಯಬೇಕು ಎಂದು ಬಿಜೆಪಿ ಸಂಕಲ್ಪ ಮಾಡಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ. ಬರೀ ಭಾಷಣದಿಂದ ಸಾಮಾಜಿಕ ನ್ಯಾಯ ಸಿಗುವುದಿಲ್ಲ. ಹಿಂದುಳಿದವರಿಗೆ ಮೀಸಲಾತಿ ಕೊಟ್ಟಿದ್ದು ನಾವು. ಯಾವುದೇ ಜಾತಿ, ಮತ ನೋಡದೆ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇವೆ. ನಾವು ಜನರ ಮೂಲಕ ರಾಜ್ಯವನ್ನು ಕಟ್ಟುವ ಕೆಲಸ ಮಾಡುತ್ತಿದ್ದೇವೆ. ನಿಮ್ಮ ಆಶೀರ್ವಾದದಿಂದ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆ. ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದು ಜನರ ಸೇವೆ ಮಾಡುತ್ತೇವೆ ಎಂದು ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ: Belagavi: ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ರಾಜನಾಥ್ ಸಿಂಗ್​ರಿಂದ ಬಿಎಸ್​ವೈ ಗುಣಗಾನ

ಈ ಮಧ್ಯೆ, ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರನ್ನು ಹಾಡಿಹೊಗಳಿದರು. ತಮ್ಮ ಆರೋಗ್ಯದ ಕಾರಣಕ್ಕಾಗಿ ಯಡಿಯೂರಪ್ಪ ಅಧಿಕಾರ ತ್ಯಾಗ ಮಾಡಿದ್ದಾರೆ. ಯಡಿಯೂರಪ್ಪ ಸಹಮತದಿಂದಲೇ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದರು. ಬೊಮ್ಮಾಯಿ ಅತ್ಯಂತ ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದಾರೆ. ಯಡಿಯೂರಪ್ಪಗೆ ಇಡೀ ಕರ್ನಾಟಕ ಸನ್ಮಾನ ಮಾಡಬೇಕು. ಅವರನ್ನು ಸಂಸದೀಯ ಮಂಡಳಿಯ ಸದಸ್ಯರನ್ನಾಗಿ ಮಾಡಿದ್ದೇವೆ. ಅವರು ಕರ್ನಾಟಕಕ್ಕೆ ಮಾಡಿದ ಸೇವೆಯನ್ನು ಬಿಜೆಪಿ ಎಂದಿಗೂ ಮರೆಯುವುದಿಲ್ಲ. ಯಡಿಯೂರಪ್ಪ ಇಚ್ಛೆಯೊಂದಿಗೇ ಪೂರ್ಣ ಪ್ರಮಾಣದ ಸರ್ಕಾರ ರಚನೆ ಆಗಬೇಕು ಎಂದು ರಾಜನಾಥ್ ಸಿಂಗ್ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ