ಬೆಂಗಳೂರು: ತಮಗೆ ಪ್ರತಿಪಕ್ಷ ನಾಯಕ ಸ್ಥಾನ ಕೈತಪ್ಪಿರುವುದರಿಂದ ಬೇಸರಗೊಂಡು ಕಾಂಗ್ರೆಸ್ನಿಂದ ದೂರ ಸರಿಯುವುದಾಗಿ ಹೇಳುತ್ತಿದ್ದ ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬೆಳಿಗ್ಗೆ 11 ಗಂಟೆಗೆ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿಯಾದ ಇಬ್ರಾಹಿಂ, ರಾಜೀನಾಮೆ ಸಲ್ಲಿಸಿದರು. ಪರಿಷತ್ ಸ್ಥಾನಕ್ಕೆ ಇಬ್ರಾಹಿಂ ಸಲ್ಲಿಸಿದ ರಾಜೀನಾಮೆಯನ್ನು ಸಭಾಪತಿ ಬಸವರಾಜ ಹೊರಟ್ಟಿ ಅಂಗೀಕರಿಸಿದರು.
ಕಳೆದ ಹಲವು ತಿಂಗಳಿಂದ ಕಾಂಗ್ರೆಸ್ ಪಕ್ಷದ ಮೇಲೆ ಮುನಿಸಿಕೊಂಡಿದ್ದ ಅವರು ಜೆಡಿಎಸ್ ಸೇರುವ ಇಂಗಿತ ವ್ಯಕ್ತಪಡಿಸಿದ್ದರು. ಈ ಸಂಬಂಧ ಜೆಡಿಎಸ್ ನಾಯಕರಾದ ಎಚ್.ಡಿ.ಕುಮಾರಸ್ವಾಮಿ ಮತ್ತು ದೇವೇಗೌಡರನ್ನೂ ಸಂಪರ್ಕಿಸಿದ್ದರು ಎಂದು ಮೂಲಗಳು ತಿಳಿಸಿದ್ದವು. ಜೆಡಿಎಸ್ನಲ್ಲಿ ಸಿಗಲಿರುವ ಸ್ಥಾನಮಾನಗಳ ಬಗ್ಗೆ ಈವರೆಗೆ ಇಬ್ರಾಹಿಂ ಅವರಿಗೆ ಯಾವುದೇ ಸ್ಪಷ್ಟ ಭರವಸೆ ಸಿಕ್ಕಿಲ್ಲ. ಮತ್ತೊಂದೆಡೆ ಇಬ್ರಾಹಿಂ ಮನವೊಲಿಸಲು ಕಾಂಗ್ರೆಸ್ನ ಹಿರಿಯ ನಾಯಕರು ಯತ್ನಿಸಿದ್ದರು.
ಇತ್ತೀಚೆಗಷ್ಟೇ ವಿಧಾನಸೌಧದ ಮೊಗಸಾಲೆಯಲ್ಲಿ ಇಬ್ರಾಹಿಂಗೆ ಎದುರು ಸಿಕ್ಕಿದ್ದ ಸಿದ್ಧರಾಮಯ್ಯ ಪಕ್ಷ ಬಿಟ್ಟು ಹೋಗಬೇಡ, ಮಾತನಾಡೋಣ ಎಂದಿದ್ದರು. ಇಬ್ರಾಹಿಂ ಇದಕ್ಕೆ ಪ್ರತಿಕ್ರಿಯೆ ನೀಡಿರಲಿಲ್ಲ. ಸಿದ್ದರಾಮಯ್ಯ ಆಪ್ತ ಎಚ್.ಸಿ.ಮಹದೇವಪ್ಪ ಸಹ ಸಂಧಾನಕ್ಕಾಗಿ ಪ್ರಯತ್ನಿಸಿದ್ದರು. ಆದರೆ ಅದು ಫಲ ನೀಡಿರಲಿಲ್ಲ. ಜೆಡಿಎಸ್ ಸೇರ್ಪಡೆಯ ಒಲವು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ 19ರಂದು ಇಬ್ರಾಹಿಂ ಅವರೊಂದಿಗೆ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಮಾತುಕತೆ ನಡೆಸಿದ್ದರು.
ಇದೀಗ ಇಬ್ರಾಹಿಂ ಅವರು ವಿಧಾನ ಪರಿಷತ್ನ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ವಚನಗಳನ್ನು ಉದಾಹರಿಸಿ ನಿರಂತರವಾಗಿ, ಆಕರ್ಷಕವಾಗಿ ಮಾತನಾಡಬಲ್ಲ ಇಬ್ರಾಹಿಂ ಅವರ ಸೇರ್ಪಡೆಯಿಂದ ಜೆಡಿಎಸ್ಗೆ ಎಷ್ಟು ಅನುಕೂಲವಾಗಲಿವೆ ಎಂಬುದಕ್ಕೆ ಕಾಲವೇ ಉತ್ತರ ಹೇಳಬೇಕಿದೆ. ಆದರೆ ಹಿಂದೊಮ್ಮೆ ಅವರು ಜೆಡಿಎಸ್ನಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದನ್ನು ತಳ್ಳಿ ಹಾಕಲು ಆಗುವುದಿಲ್ಲ.
ಇದನ್ನೂ ಓದಿ: ಇಬ್ರಾಹಿಂ ಕೂಡ ಮಂತ್ರಾಲಯ ರಾಯರ ಭಕ್ತರು: ಸುಭುದೇಂದ್ರ ತೀರ್ಥ ಸ್ವಾಮೀಜಿ
ಇದನ್ನೂ ಓದಿ: ಇಬ್ರಾಹಿಂ ನೋಡಿ ಏಯ್ ಏನ್ ಗುಟುರು ಹಾಕ್ತಿದ್ದೀಯಾ ಎಂದು ತಮಾಷೆ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ
Published On - 11:26 am, Thu, 31 March 22