ಲೋಕಸಭೆ ಚುನಾವಣೆಗೆ ನಿಖಿಲ್ ಕುಮಾರಸ್ವಾಮಿಯನ್ನ ಮಂಡ್ಯದಿಂದಲೇ ಸ್ಪರ್ಧೆ ಮಾಡಿಸುತ್ತೇನೆ; ಹೆಚ್ ಡಿ ಕುಮಾರಸ್ವಾಮಿ
ರಾಜ್ಯದಲ್ಲಿ ಹಲಾಲ್, ಧರ್ಮ ವ್ಯಾಪಾರದ ವಿವಾದ ವಿಚಾರಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.
ರಾಮನಗರ: ಮುಂದಿನ ಬಾರಿ ನಡೆಯುವ ಚುನಾವಣೆಗೆ ನಿಖಿಲ್ ಕುಮಾರಸ್ವಾಮಿಯನ್ನ ಮಂಡ್ಯದಿಂದಲೇ ಸ್ಪರ್ಧೆ ಮಾಡಿಸುತ್ತೇನೆ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (HD Kumaraswamy) ತಿಳಿಸಿದ್ದಾರೆ. ಲೋಕಸಭೆಗೆ ನಿಲ್ಲಿಸುತ್ತೇನೆ ಎಂದು ತಿಳಿಸಿದ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ವಿರುದ್ಧ ಸಂಸದೆ ಸುಮಲತಾ (Sumalatha) ವಾಗ್ದಾಳಿ ನಡೆಸಿದ್ದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಮಂಡ್ಯ ಜಿಲ್ಲೆಯ ಜನರು ಮುಂದಿನ ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ. ಇವತ್ತಿನ ಹೇಳಿಕೆಗಳು ನೋಡಿದಾಗ ನನ್ನ ಮನಸ್ಸಿಗೆ ಬಂದಿದೆ . ಅವತ್ತು ನಮ್ಮ ವಿರುದ್ಧ ಕುತಂತ್ರದ ರಾಜಕಾರಣ ನಡೆಯಿತು. ಕಾಂಗ್ರೆಸ್, ಬಿಜೆಪಿ, ರೈತ ಸಂಘ ಸೇರಿದ್ದರು. ನನಗೆ ಮಂಡ್ಯ ಜಿಲ್ಲೆಯ ಜನರ ಮೇಲೆ ನಂಬಿಕೆಯಿದೆ ಎಂದು ಹೇಳಿದರು.
ಸಿಎಂ ಬೊಮ್ಮಾಯಿಗೆ ಗಂಡಸ್ತನ ಇದ್ದರೆ ಇದನ್ನ ತಡೆಯಲಿ: ರಾಜ್ಯದಲ್ಲಿ ಹಲಾಲ್, ಧರ್ಮ ವ್ಯಾಪಾರದ ವಿವಾದ ವಿಚಾರಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಈ ಸರ್ಕಾರಕ್ಕೆ ಮಾನಮರ್ಯಾದೆ ಇದ್ದರೆ ಇದನ್ನ ತಡೆಯಲಿ. ಸಿಎಂ ಬೊಮ್ಮಾಯಿಗೆ ಗಂಡಸ್ತನ ಇದ್ದರೆ ಇದನ್ನ ತಡೆಯಲಿ ಅಂತ ವಾಗ್ದಾಳಿ ನಡೆಸಿದ್ದಾರೆ. ಈ ಬೆಳವಣಿಗೆಗಳ ಬಗ್ಗೆ ಏನೂ ಗೊತ್ತಿಲ್ಲದಂತೆ ಇದ್ದರೆ ಏನರ್ಥ? ನಾನು ಈ ಪದವನ್ನು ಉಪಯೋಗ ಮಾಡಬಾರದು. ಆದರೆ ನಾನು ತಡೆಯಲಾರದೆ ಈ ಪದ ಬಳಸಿದ್ದೇನೆ. ಸಮಾಜ ಒಡೆಯುವ ಹ್ಯಾಂಡ್ ಬಿಲ್ಗಳನ್ನ ಹಂಚುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಯಾವ ಸಂವಿಧಾನವನ್ನು ಗೌರವಿಸುತ್ತಿದ್ದೀರಾ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಯಾವುದಕ್ಕೆ ಅಂಬೇಡ್ಕರ್ ಜಯಂತಿ ಆಚರಣೆ ಮಾಡುತ್ತೀರಾ? ನನಗೆ ಮತ ಮುಖ್ಯವಲ್ಲ ಈ ನಾಡು ಶಾಂತಿಯಿಂದ ಇರಬೇಕು. ಕೇಸರಿ ಬಟ್ಟೆ ಹಾಕಿಕೊಂಡು ವಿಷ ಬೀಜ ಬಿತ್ತಲು ಬಿಡುವುದಿಲ್ಲ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ವಿಶ್ವ ಹಿಂದೂ ಪರಿಷತ್, ಬಜರಂಗದಳದವರು ಕಿಡಿಗೇಡಿಗಳು. ಇವರಿಗೆ ರೈತರ ಬದುಕಿನ ಬಗ್ಗೆ ಗೊತ್ತಿದ್ಯಾ? ರೇಷ್ಮೆ, ಮಾವು ಬೆಳೆ ಮಾರಾಟಕ್ಕೆ ಈ ಪೋಲಿಗಳು ಬರ್ತಾರಾ. ಅಕಾಲಿಕ ಮಳೆಯಿಂದಾಗಿ ಮಾವು ನಷ್ಟವಾಗಿದೆ. ಅದನ್ನು ಖರೀದಿ ಮಾಡಲು ಆ ಸಮಾಜದವರೇ ಬರಬೇಕು. ಇವಱರೋ ವಿಹಿಂಪ, ಬಜರಂಗದಳದವರು ಬರುತ್ತಾರಾ? ಇಷ್ಟು ವರ್ಷ ಹಲಾಲ್ ತಿಂದಿದ್ದೇವೆ, ಏನಾಗಿದೆ ಚೆನ್ನಾಗಿದ್ದೀವಲ್ಲ. ಈಗ ಹಲಾಲ್ ತಿಂದರೆ ತೊಂದರೆ ಆಗುತ್ತಾ, ದೇವರು ಮೆಚ್ಚಲ್ವಾ. ಹಲವಾರು ವರ್ಷಗಳಿಂದ ಹಲಾಲ್ ನಡೆಯುತ್ತಿದೆ, ಈಗಿನದ್ದಲ್ಲ. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಇಲ್ಲದೇ ಜನ ಸತ್ತರು. ಬಿಜೆಪಿ ಸರ್ಕಾರದ ಯೋಗ್ಯತೆಗೆ ಆಸ್ಪತ್ರೆ ನಿರ್ವಹಣೆ ಮಾಡಲಾಗಿಲ್ಲ. ಆಗ ಎಲ್ಲಿದ್ದರೂ ವಿಶ್ವ ಹಿಂದೂ ಪರಿಷತ್, ಬಜರಂಗದಳದವರು ಎಂದು ರಾಮನಗರದಲ್ಲಿ ಕುಮಾರಸ್ವಾಮಿ ಕೇಳಿದ್ದಾರೆ.
ಕಾಂಗ್ರೆಸ್ ನಾಯಕರಿಗೆ ತಾಕತ್ತಿಲ್ಲ: ನನಗೆ ವೋಟ್ ಮುಖ್ಯವಲ್ಲ, ಈ ನಾಡು ಶಾಂತಿಯಿಂದ ಬದುಕಬೇಕು. ನಾನು ಮೌನವಾಗಿರಲು ಸಾಧ್ಯವಿಲ್ಲ. ಕಾಂಗ್ರೆಸ್ ನಾಯಕರಿಗೆ ಈ ಬಗ್ಗೆ ಮಾತನಾಡುವ ತಾಕತ್ತಿಲ್ಲ. ಹಿಂದೂಗಳು ವೋಟ್ ಹಾಕ್ತಾರೋ ಇಲ್ಲವೋ ಎಂಬ ಭಯವಿದೆ. ಉತ್ತರ ಪ್ರದೇಶದಲ್ಲಿ ನಿಮ್ಮ ಆಟ ಆಡಿಕೊಳ್ಳಿ, ಇಲ್ಲಿ ಬೇಡ ಎಂದು ಗರಂ ಆದರು.
ಇದನ್ನೂ ಓದಿ
RCB vs KKR: ಆರ್ಸಿಬಿ vs ಕೆಕೆಆರ್ ಪಂದ್ಯದಲ್ಲಿ ಸಿಎಸ್ಕೆ ಫ್ಯಾನ್ಸ್: ಮೈದಾನದಲ್ಲಿ ಮಾಡಿದ್ದೇನು ನೋಡಿ
ಸಿದ್ದರಾಮಯ್ಯ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಾರೆ; ಕೊಪ್ಪಳದಲ್ಲಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ
Published On - 1:01 pm, Thu, 31 March 22