ಶಿವಮೊಗ್ಗ, (ಆಗಸ್ಟ್ 03): ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮತ್ತು ಸಚಿವ ಈಶ್ವರ್ ಖಂಡ್ರೆ ಅವರ ವಿಚಾರವಾಗಿ ಮಾಜಿ ಸಚಿವ ಆರಗ ಜ್ಞಾನೇಂದ್ರ(Araga Jnanendra )ಆಡಿರುವ ಮಾತು ಈಗ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ, ಕಾಂಗ್ರೆಸ್-ಬಿಜೆಪಿ ಪಡೆ ನಡುವೆ ಕಾಳಗ ಸೃಷ್ಟಿಸಿದೆ. ಆರಗ ಜ್ಞಾನೇಂದ್ರ ಹೇಳಿಕೆಗೆ ಕಾಂಗ್ರೆಸ್ ನಾಯಕರು ಕೆರಳಿ ನಿಂತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಮೈಬಣ್ಣ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಗ ಜ್ಞಾನೇಂದ್ರ ದೂರು ದಾಖಲಿಸಲಾಗಿದೆ. ದಲಿತ ಮುಖಂಡ ಹರ್ಷೇಂದ್ರ ಕುಮಾರ್ ಎನ್ನುವರು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಆರಗ ಜ್ಞಾನೇಂದ್ರ ವಿರುದ್ಧ ಜಾತಿ ನಿಂದನೆ ದೂರು ನೀಡಿದ್ದಾರೆ.
ಅಷ್ಟಕ್ಕೂ ಆಗಿದ್ದೇನು ಅಂದ್ರೆ, ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ನಿನ್ನೆ(ಆಗಸ್ಟ್ 02) ಶಿವಮೊಗ್ಗದ ಜಿಲ್ಲೆ ತೀರ್ಥಹಳ್ಳಿಯಲ್ಲಿ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಈ ವೇಳೆ ಮಾತನಾಡಿರೋ ಆರಗ ಜ್ಞಾನೇಂದ್ರ, ಅರಣ್ಯವೇ ಇಲ್ಲದ ಪ್ರದೇಶದವರು ಅರಣ್ಯ ಸಚಿವರಾಗುತ್ತಾರೆ. ಇದು ನಮ್ಮ ರಾಜ್ಯದ ದುರಂತ ಎಂದಿದ್ದಾರೆ. ಬೀದರ್ ಜಿಲ್ಲೆಯ ಈಶ್ವರ್ ಖಂಡ್ರೆ ಅರಣ್ಯ ಸಚಿವರಾಗಿರುವುದಕ್ಕೆ ಈ ಹೇಳಿಕೆ ನೀಡಿದ ಮಾಜಿ ಗೃಹ ಸಚಿವರು ಅಷ್ಟಕ್ಕೇ ಸುಮ್ಮನಾಗಿಲ್ಲ. ಆ ಭಾಗದವರು ಸುಟ್ಟು ಕರಕಲಾಗಿರುತ್ತಾರೆ. ಖರ್ಗೆ ಅವರನ್ನು ನೋಡಿದರೆ ಗೊತ್ತಾಗುತ್ತೆ ಎಂದು ನಾಲಗೆ ಹರಿಬಿಟ್ಟಿದ್ದರು. ಜ್ಞಾನೇಂದ್ರ ಅವರ ಈ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಆರಗ ಜ್ಞಾನೇಂದ್ರ ಅವರ ಈ ಹೇಳಿಕೆ ಕಾಂಗ್ರೆಸ್ ಕೆರಳಿ ಕೆಂಡವಾಗುವಂತೆ ಮಾಡಿದೆ. ಖರ್ಗೆ ಅವರ ಮೈಬಣ್ಣದ ಬಗ್ಗೆ ಅವಹೇಳನ ಮಾಡಿ ಆರಗ ಜ್ಞಾನೇಂದ್ರ, ಬಿಜೆಪಿಯವರಲ್ಲಿ ದಲಿತರ ಬಗ್ಗೆ ಇರುವ ಅಸಹನೆ ಅಸಡ್ಡೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಘಟಕ ಸರಣಿ ಟ್ವೀಟ್ ಮೂಲಕ ಕಿಡಿ ಕಿಡಿಕಾರಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ