ನವದೆಹಲಿ: ಪಂಜಾಬ್‌ನ ಭವಿಷ್ಯ ಮತ್ತು ಅಭಿವೃದ್ಧಿ ವಿಷಯದಲ್ಲಿ ನಾನು ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ ಎಂಬ ಕಾರಣ ನೀಡಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷನ ಸ್ಥಾನಕ್ಕೆ ಸೆ. 28ರಂದು ನವಜೋತ್ ಸಿಂಗ್ ಸಿಧು ರಾಜೀನಾಮೆ ನೀಡಿದ್ದರು. ಅದಾದ ಬಳಿಕ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪಂಜಾಬ್ ಸಿಎಂ ಚರಣ್ನಿತ್ ಸಿಂಗ್ ಚನ್ನಿ ಇನ್ನೂ ಹಲವು ಕಾಂಗ್ರೆಸ್ ನಾಯಕರು ನವಜೋತ್ ಸಿಂಗ್ ಮನವೊಲಿಸಲು ಪ್ರಯತ್ನಿಸಿದ್ದರು. ಆದರೆ, ನಾನು ರಾಜೀನಾಮೆಯಿಂದ ಹಿಂದೆ ಸರಿಯುವುದಿಲ್ಲ ಎಂದೇ ಹೇಳಿಕೆ ನೀಡಿದ್ದ ಸಿಧು ಇಂದು ತಮ್ಮ ರಾಜೀನಾಮೆಯನ್ನು ವಾಪಾಸ್ ಪಡೆಯುವ ಸಾಧ್ಯತೆಗಳಿವೆ. ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಿದ್ದೇನೆ ಎಂದು ನಿನ್ನೆ ನವಜೋತ್ ಸಿಂಗ್ ಸಿಧು ಹೇಳಿಕೆ ನೀಡಿದ್ದು, ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವ ಸೂಚನೆ ನೀಡಿದ್ದಾರೆ.
ಈ ಮೂಲಕ ಪಂಜಾಬ್ ಕಾಂಗ್ರೆಸ್ನಲ್ಲಿ ಉಂಟಾಗಿರುವ ಆಂತರಿಕ ಕಲಹ ಕೊಂಚ ಮಟ್ಟಿಗೆ ಶಮನವಾಗಿರುವ ಸೂಚನೆಗಳು ಕಾಣುತ್ತಿವೆ. ರಾಜೀನಾಮೆ ನೀಡಿದ್ದ ನವಜೋತ್ ಸಿಂಗ್ ಸಿಧು ಮತ್ತೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಹರೀಶ್ ರಾವತ್ ಹೇಳಿಕೆ ನೀಡಿದ್ದಾರೆ. ಈಗ ಎಲ್ಲ ಗೊಂದಲಗಳು ಶಮನವಾಗಿವೆ. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿ ನವಜೋತ್ ಸಿಂಗ್ ಸಿಧು ಮುಂದುವರಿಯಲಿದ್ದಾರೆ. ನವಜೋತ್ ಸಿಂಗ್ ಸಿಧು ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ಇಂದು ಕಾಂಗ್ರೆಸ್ನಿಂದ ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆಗಳಿವೆ.
ಪಂಜಾಬ್ನಲ್ಲಿ ಅತ್ತ ಅಮರೀಂದರ್ ಸಿಂಗ್ ಕಾಂಗ್ರೆಸ್ಗೆ ರಾಜೀನಾಮೆ ನೀಡುವ ಘೋಷಣೆ ಮಾಡುತ್ತಿದ್ದಂತೆ ಇತ್ತ ನವಜೋತ್ ಸಿಂಗ್ ಸಿಧು ಕಾಂಗ್ರೆಸ್ ಅಧ್ಯಕ್ಷನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಮೂಲಕ ಪಂಜಾಬ್ ಕಾಂಗ್ರೆಸ್ನ ಇಬ್ಬರು ಎದುರಾಳಿಗಳೂ ಹೈಕಮಾಂಡ್‌ಗೆ ದೊಡ್ಡ ಶಾಕ್ ನೀಡಿದ್ದರು. ಸಿಎಂ ಚರಣ್ಜಿತ್ ಸಿಂಗ್ ಚನ್ನಿ ಸಂಪುಟ ವಿಸ್ತರಣೆ ಬಳಿಕ ಅಸಮಾಧಾನಗೊಂಡಿದ್ದ ನವಜೋತ್ ಸಿಂಗ್ ಸಿಧು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಸೋನಿಯಾ ಗಾಂಧಿ ಆ ರಾಜೀನಾಮೆ ಪತ್ರವನ್ನು ಸ್ವೀಕರಿಸಿರಲಿಲ್ಲ.
ಚರಣ್ಜಿತ್ ಸಿಂಗ್ ವಿರುದ್ಧ ಹೇಳಿಕೆಗಳನ್ನು ನೀಡುವ ಮೂಲಕ ಕಾಂಗ್ರೆಸ್ಗೆ ಮುಜುಗರ ಉಂಟುಮಾಡಿದ್ದ ನವಜೋತ್ ಸಿಂಗ್ ಸಿಧು ಸಿಎಂ ಚರಣ್ಜಿತ್ ಸಿಂಗ್ ಚನ್ನಿ ಅವರ ಮಗನ ಮದುವೆಗೂ ಹಾಜರಾಗಿರಲಿಲ್ಲ. ನಿನ್ನೆಯಷ್ಟೆ ದೆಹಲಿಯಲ್ಲಿ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ ಅವರನ್ನು ಭೇಟಿ ಮಾಡಿದ್ದ ನವಜೋತ್ ಸಿಂಗ್ ಸಿಧು ಸುಮಾರು ಒಂದು ಗಂಟೆಗೂ ಅಧಿಕ ಕಾಲ ಚರ್ಚೆ ನಡೆಸಿದ್ದರು. ಬಳಿಕ ಹೈಕಮಾಂಡ್ ನಾಯಕರು ನವಜೋತ್ ಸಿಂಗ್ ಸಿಧು ಅವರ ಮನವೊಲಿಸುವುದರಲ್ಲಿ ಯಶಸ್ವಿಯಾಗಿದ್ದು, ಸಿಧು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರೆಯಲು ಒಪ್ಪಿದ್ದಾರೆ ಎನ್ನಲಾಗಿದೆ.
ಪಂಜಾಬ್ ಭವಿಷ್ಯದ ಬಗ್ಗೆ ನನ್ನ ಕಾಳಜಿಗಳನ್ನು ಕಾಂಗ್ರೆಸ್ ಹೈಕಮಾಂಡ್ ಮುಂದೆ ಇಟ್ಟಿದ್ದೇನೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಅದು ಪಂಜಾಬ್‌ನ ಒಳಿತಿಗಾಗಿಯೇ ಆಗಿರುತ್ತದೆ ಎಂಬ ನಂಬಿಕೆ ನನಗಿದೆ. ನಾನು ಅವರು ಹೇಳಿದಂತೆ ನಡೆದುಕೊಳ್ಳುತ್ತೇನೆ ಎಂದು ನವಜೋತ್ ಸಿಂಗ್ ಸಿಧು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: Navjot Singh Sidhu ಹೈಕಮಾಂಡ್‌ಗೆ ಆಭಾರಿ, ಆದರೆ ರಾಜಿ ಮಾಡಿಕೊಳ್ಳುವುದಿಲ್ಲ: ನವಜೋತ್ ಸಿಂಗ್ ಸಿಧು
ಪಂಜಾಬ್ ಸಿಎಂ ಚರಣ್ಜಿತ್ ಸಿಂಗ್ ಚನ್ನಿ ಮಗನ ಸರಳ ವಿವಾಹ; ಮದುವೆಗೆ ಗೈರಾದ ನವಜೋತ್ ಸಿಂಗ್ ಸಿಧು