ಹೊಸಪೇಟೆ, ನವೆಂಬರ್ 1: ಪಕ್ಷದ ಚೌಕಟ್ಟು ಮೀರಿ ಸಚಿವರು, ಶಾಸಕರು ಮಾತನಾಡುವಂತಿಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್ (Congress High Command) ನೀಡಿರುವ ಸೂಚನೆ ಚಿಕ್ಕವರಿಂದ ಹಿಡಿದು ದೊಡ್ಡ ನಾಯಕರವರೆಗೆ ಅನ್ವಯವಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಗುರುವಾರ ಹೇಳಿದರು. ಮುಖ್ಯಮಂತ್ರಿಯಾಗಿ ನಾನೇ ಮುಂದುವರಿಯುತ್ತೇನೆ ಎಂದು ಸಿದ್ದರಾಮಯ್ಯ (Siddaramaiah) ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾಯಕತ್ವ ಸೇರಿದಂತೆ ಅನೇಕ ವಿಚಾರ ಬಹಿರಂಗವಾಗಿ ಹೇಳದಂತೆ ವರಿಷ್ಠರು ಸೂಚಿಸಿದ್ದಾರೆ. ಇದು ಎಲ್ಲರಿಗೂ ಅನ್ವಯವಾಗುತ್ತದೆ ಎಂದರು.
ವಿಜಯನಗರ ಜಿಲ್ಲೆ ಹಂಪಿಯಲ್ಲಿ ಮಾತನಾಡಿದ ರಾಮಲಿಂಗಾರೆಡ್ಡಿ, ನಾಯಕತ್ವ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಯಾರೂ ಮಾತನಾಡಬಾರದು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಯಾರು ಕೂಡ ಮಾತನಾಡಬಾರದು ಅಂದರೆ ಅದು ಎಲ್ಲರಿಗೂ ಅನ್ವಯವಾಗುತ್ತದೆ. ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ. ನಮ್ಮ ಸರ್ಕಾರ 10 ವರ್ಷ ಅಸ್ತಿತ್ವದಲ್ಲಿರಲಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಇದಕ್ಕೂ ಮುನ್ನ, ಹೊಸಪೇಟೆಯಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ಸದ್ಯ ನಾನು ಮುಖ್ಯಮಂತ್ರಿಯಾಗಿದ್ದೇನೆ. ನಾನೇ ಹುದ್ದೆಯಲ್ಲಿ ಮುಂದುವರಿಯಲಿದ್ದೇನೆ ಎಂದು ಹೇಳಿದ್ದಾರೆ. ರಡೂವರೆ ವರ್ಷದ ಬಳಿಕ ಅಧಿಕಾರ ಹಂಚಿಕೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು, ಆ ಹೇಳಿಕೆ ನೀಡಿದ್ದರು. ಇದು ಮತ್ತೆ ಕಾಂಗ್ರೆಸ್ನಲ್ಲಿ ಆಂತರಿಕವಾಗಿ ಬಿರುಕು ಮೂಡಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: ಹೊಸಪೇಟೆ: ಗೊಂದಲವಿಲ್ಲ, ನಾನೇ ಸಿಎಂ ಆಗಿ ಮುಂದುವರಿಯುತ್ತೇನೆ ಎಂದ ಸಿದ್ದರಾಮಯ್ಯ
ಪಕ್ಷದೊಳಗಣ ಆಂತರಿಕ ಕಲಹ, ಅಸಮಾಧಾನ, ವಿಭಿನ್ನ ಹೇಳಿಕೆಗಳು ಹೆಚ್ಚಾಗುತ್ತಿರುವಂತೆಯೇ ಅದಕ್ಕೆ ತೇಪೆ ಹಚ್ಚಲು ಮುಂದಾಗಿದ್ದ ಕಾಂಗ್ರೆಸ್ ಹೈಕಮಾಂಡ್, ಪಕ್ಷದ ನಾಯಕರ ಜತೆ ಸಮಾಲೋಚನೆ ನಡೆಸಿತ್ತು. ರಾಜ್ಯಕ್ಕೆ ಆಗಮಿಸಿದ್ದ ರಣದೀಪ್ ಸುರ್ಜೇವಾಲ, ಕೆಸಿ ವೇಣುಗೋಪಾಲ್ ಬುಧವಾರ ಪಕ್ಷದ ನಾಯಕರ ಜತೆ ಸಮಾಲೋಚನೆ ನಡೆಸಿದ್ದರು. ಬಳಿಕ, ಪಕ್ಷದ ಚೌಕಟ್ಟು ಮೀರಿ ಸಚಿವರು, ಶಾಸಕರು ಮಾತನಾಡುವಂತಿಲ್ಲ. ನಾಯಕತ್ವದ ವಿಚಾರವಾಗಿಯೂ ಬಹಿರಂಗ ಹೇಳಿಕೆ ನೀಡುವಂತಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದರು.
ಮುಂದೆಯೂ ನಾನೇ ಸಿಎಂ ಆಗಿ ಮುಂದುವರೆಯುವೆ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಸಚಿವ ಹೆಚ್‌ಸಿ ಮಹದೇವಪ್ಪ, ಈಗ ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ ಇದ್ದಾರಲ್ಲವೇ? ಐದು ವರ್ಷ ಅಂಬಾರಿ ಹೊತ್ತ ಆನೆ ತರ ಕಾಂಗ್ರೆಸ್ ಅಧಿಕಾರದಲ್ಲಿ ಇರಲಿದೆ. ಮುಂದಿನ ಚುನಾವಣೆಯಲ್ಲೂ ಕಾಂಗ್ರೆಸ್ಸೇ ಅಧಿಕಾರಕ್ಕೆ ಬರಲಿದೆ. ಅಧಿಕಾರ ಹಂಚಿಕೆ ಬಗ್ಗೆ ನನ್ನ ಕರೆದು ಮಾತನಾಡಿಲ್ಲ. ಹೈಕಮಾಂಡ್ ಹಾಗೂ ಸಿಎಂ ಅವರ ಬಳಿಯೇ ಹೋಗಿ ಕೇಳಿ ಎಂದರು.
ರಾಜಕಾರಣಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ