ಲೋಕಸಭಾ ಚುನಾವಣೆಗೆ ರಣಕಹಳೆ ಮೊಳಗಿಸಿದ ಕಾಂಗ್ರೆಸ್, ಜ.21 ಬೃಹತ್ ಸಮಾವೇಶ

| Updated By: ರಮೇಶ್ ಬಿ. ಜವಳಗೇರಾ

Updated on: Jan 11, 2024 | 5:05 PM

ಈ ಬಾರಿ ಲೋಕಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಕಾಂಗ್ರೆಸ್​, ರಾಜ್ಯದಲ್ಲಿ ಕನಿಷ್ಟ 20 ಸ್ಥಾನಗಳನ್ನು ಗೆಲ್ಲಲು ರಣತಂತ್ರಗಳನ್ನು ಹೆಣೆಯುತ್ತಿದೆ. ಹೀಗಾಗಿ ಕಾಂಗ್ರೆಸ್ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸಲು ರಾಜ್ಯದ ಮಟ್ಟದ ಸಮಾವೇಶ ಆಯೋಜಿಸಿದೆ.

ಲೋಕಸಭಾ ಚುನಾವಣೆಗೆ ರಣಕಹಳೆ ಮೊಳಗಿಸಿದ ಕಾಂಗ್ರೆಸ್, ಜ.21 ಬೃಹತ್ ಸಮಾವೇಶ
ಡಿಕೆ ಶಿವಕುಮಾರ್, ಸಿದ್ದರಾಮಯ್ಯ
Follow us on

ಬೆಂಗಳೂರು/ಮಂಗಳೂರು, (ಜನವರಿ 11): ಮುಂಬರುವ ಲೋಕಸಭಾ ಚುನಾವಣೆಗೆ (Lok Sabha Election 2024) ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್‌ (Congress) ಸಿದ್ಧತೆ ನಡೆಸಿದ್ದು, 28 ಕ್ಷೇತ್ರಗಳಲ್ಲಿ ಕನಿಷ್ಠ 20 ಕ್ಷೇತ್ರಗಳನ್ನು ಗೆಲ್ಲಲು ಪಣ ತೊಟ್ಟಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ಅಭ್ಯರ್ಥಿಗಳ ಆಯ್ಕೆ ಹಾಗೂ ಚುನಾವಣೆಗೆ ಸಂಬಂಧಿಸಿದ ಕಾರ್ಯತಂತ್ರ ರೂಪಿಸುತ್ತಿದೆ. ಇದರ ಮುಂದುವರೆದ ಭಾಗವಾಗಿ ಜನವರಿ 21ರಂದು ಮಂಗಳೂರಿನಲ್ಲಿ ರಾಜ್ಯಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಆಯೋಜಿಸಿದೆ. ಇದರೊಂದಿಗೆ ಲೋಕಸಭಾ ಚುನಾವಣೆಗೆ ಅಧಿಕೃತವಾಗಿ ರಣಕಹಳೆ ಮೊಳಗಿಸಲು ಕಾಂಗ್ರೆಸ್ ಸಜ್ಜಾಗಿದೆ.

ಜನವರಿ 21ರಂದು ಮಂಗಳೂರಿನಲ್ಲಿ ರಾಜ್ಯಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಭಾಗಿಯಾಗಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಇದನ್ನೂ ಓದಿ: ಪ್ರತಾಪ್ ಸಿಂಹಗೆ ಬೈಯುವ ಭರದಲ್ಲಿ ಮೈಸೂರು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಹೆಸರು ಬಹಿರಂಗಗೊಳಿಸಿದ ಶಾಸಕ

ಲೋಕಸಭೆ ಚುನಾವಣೆ ಹಿನ್ನೆಲೆ ಪಕ್ಷದ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಈ ಸಮಾವೇಶ ನಡೆಸಲಾಗುತ್ತಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಿಂದ ಕಾರ್ಯಕರ್ತರನ್ನು ಒಗ್ಗೂಡಿಸಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ. ಈ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಕಾರ್ಯಕರ್ತರಿಗೆ ಲೋಕಸಭಾ ಚುನಾವಣೆ ಸಂಬಂಧ ಮಾರ್ಗದರ್ಶನ ನೀಡಲಿದ್ದಾರೆ. ಅಲ್ಲದೇ ಬಹುಮುಖ್ಯವಾಗಿ 5 ಗ್ಯಾರಂಟಿಗಳ ಬಗ್ಗೆ ಪ್ರಚಾರ ಮಾಡುವಂತೆ ಕರೆ ನೀಡಲಿದ್ದಾರೆ.

ಕೇವಲ ಮಾರ್ಗದರ್ಶನ ಮಾಡುವುದು ಮಾತ್ರವಲ್ಲದೇ ಹೆಚ್ಚು ಸ್ಥಾನ ಗೆಲ್ಲಲು ಕಾರ್ಯಕರ್ತರಿಂದ ಸಲಹೆಗಳನ್ನು ಸಹ ಪಡೆಯಲು ಮುಂದಾಗಿದ್ದಾರೆ. ಇನ್ನು ಈ ರಾಜ್ಯ ಮಟ್ಟದ ಸಮಾವೇಶದಲ್ಲಿ ಸಚಿವರು, ಕಾಂಗ್ರೆಸ್ ಶಾಸಕರು, ಸಂಸದರು, ಡಿಸಿಸಿ ಅಧ್ಯಕ್ಷರು, KPCC ಪದಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಸದಸ್ಯರು ಭಾಗಿಯಾಗಲಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:04 pm, Thu, 11 January 24