ನಿಗಮ ಮಂಡಳಿ ಬೇಡವೆಂದು ಸಿದ್ದರಾಮಯ್ಯಗೆ ಪತ್ರ ಬರೆದ ಕಾಂಗ್ರೆಸ್ ಶಾಸಕ!
ನಿಗಮ ಮಂಡಳಿ ನೇಮಕಾತಿ ಫೈನಲ್ ಆಗಿದೆ. ಮೊದಲ ಹಂತದಲ್ಲಿ ಶಾಸಕರು ಹಾಗೂ ಕಾರ್ಯಕರ್ತರಿಗೆ ಮಣೆ ಹಾಕಲಾಗಿದ್ದು, ಈ ತಿಂಗಳ ಅಂತ್ಯಕ್ಕೆ ಅಧಿಕೃತ ಪಟ್ಟಿ ಬಿಡುಗಡೆಯಾಗಲಿದೆ. ಇದರ ನಡುವೆ ಶಾಸಕ ಟಿ.ರಘುಮೂರ್ತಿ ಅವರು ತಮಗೆ ನಿಗಮ ಮಂಡಳಿ ಬೇಡ ಎಂದು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.
ಚಿತ್ರದುರ್ಗ, (ಜನವರಿ 11): ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ರಾಜ್ಯಕ್ಕೆ ಆಗಮಿಸಿದ ಬೆನ್ನಲ್ಲೇ ಹಲವು ತಿಂಗಳಿನಿಂದ ನನೆಗುದಿಗೆ ಬಿದ್ದಿದ್ದ ನಿಗಮ ಮಂಡಳಿ ಅಧ್ಯಕ್ಷ ( corporation board chairman) ನೇಮಕಾತಿ ಪಟ್ಟಿಗೆ ಮರುಜೀವ ಬಂದಿದೆ. ಸುರ್ಜೆವಾಲ ಅವರು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಸುದೀರ್ಘವಾಗಿ ಮಾತುಕತೆ ನಡೆಸಿ ನಿಗಮ ಮಂಡಳಿ ಪಟ್ಟಿ ಅಂತಿಮಗೊಳಿಸಿದ್ದಾರೆ. ಇದರ ಮಧ್ಯೆ ನಾನು ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಹೀಗಾಗಿ ನನ್ನನ್ನು ಪರಿಗಣಿಸಬೇಡಿ ಎಂದು ಚಳ್ಳಕೆರೆ ಶಾಸಕ ಟಿ ರಘುಮೂರ್ತಿ (raghumurthy) ಅವರು ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ.
ನನ್ನನ್ನು ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬೇಡಿ. ಕಾಂಗ್ರೆಸ್ ಪಕ್ಷ ನನಗೆ ಮೂರು ಬಾರಿ ಸ್ಪರ್ಧೆಗೆ ಅವಕಾಶ ನೀಡಿದೆ. ಕ್ಷೇತ್ರದ ಜನ ನಿರಂತರವಾಗಿ ನನಗೆ ಆಶೀರ್ವದಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷದ ವರಿಷ್ಠರು, ಕಾರ್ಯಕರ್ತರಿಗೆ ಋಣಿಯಾಗಿದ್ದೇನೆ. ಆದ್ರೆ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಪರಿಗಣಿಸಬೇಡಿ. ನಾನು ಪಕ್ಷಕ್ಕೆ ಮುಜುಗರ ಆಗದಂತಿರಲು ಯತ್ನಿಸಿದ್ದೇನೆ. ಇನ್ಮುಂದೆ ಸಹ ಪಕ್ಷಕ್ಕೆ ಮುಜುಗರ ಆಗದಂತೆ ಇರುತ್ತೇನೆ. ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ ಸಹಕಾರ ನಿರೀಕ್ಷಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: 3 ಡಿಸಿಎಂ ಡಿಶುಂ ಡಿಶುಂಗೆ ಕೊನೆಗೂ ಬಿತ್ತು ಫುಲ್ ಸ್ಟಾಪ್: ಎಲ್ಲಾ ಗೊಂದಲಗಳಿಗೆ ಸುರ್ಜೆವಾಲ ತೆರೆ
ಈ ತಿಂಗಳಲ್ಲೇ ನಿಗಮ ಮಂಡಳಿ ನೇಮಕಾತಿ
ಹೌದು…ನಿಗಮ ಮಂಡಳಿ ನೇಮಕಾತಿ ಪಟ್ಟಿ ಸಿದ್ಧಗೊಂಡಿದ್ದು, ಇದೇ ಜನವರಿ ತಿಂಗಳಲ್ಲೇ ಪ್ರಕಟವಾಗಲಿದೆ. ಈಗಾಗಲೇ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಸಿಎಂ, ಡಿಸಿಎಂ ಹಾಗೂ ಹಿರಿಯ ನಾಯಕರ ಜತೆ ಚರ್ಚಿಸಿ ಪಟ್ಟಿಯನ್ನು ಫೈನಲ್ ಮಾಡಿದ್ದಾರೆ. ಮೊದಲ ಹಂತದಲ್ಲಿ ಶಾಸಕರು ಮತ್ತು ಕಾರ್ಯಕರ್ತರಿಗೆ ಮಣೆ ಹಾಕಿದ್ದು, ಈ ತಿಂಗಳ ಅಂತ್ಯಕ್ಕೆ ಅಧಿಕೃತ ಪಟ್ಟಿ ಪ್ರಕಟವಾಗಲಿದೆ. ಈ ಬಗ್ಗೆ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
Published On - 7:58 pm, Thu, 11 January 24