ಟಿಕೆಟ್ ಆಕಾಂಕ್ಷಿಗಳ ಸಭೆ ಕರೆದ ಡಿಕೆಶಿ: ಒಬ್ಬರಿಗೆ ಒಂದೇ ಟಿಕೆಟ್ ಎಂದು ಪರೋಕ್ಷವಾಗಿ ಸಿದ್ದರಾಮಯ್ಯಗೆ ಸಂದೇಶ ರವಾನೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 25, 2022 | 1:56 PM

ಸಿದ್ದರಾಮಯ್ಯಗೆ ಎರಡು ಕ್ಷೇತ್ರಗಳಲ್ಲಿ ಟಿಕೆಟ್ ನೀಡುವ ಬಗ್ಗೆ ಮೂಲ ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಡಿಕೆಶಿ ಪರೋಕ್ಷವಾಗಿ ಸಂದೇಶ ರವಾನಿಸಿರಬಹುದು ಎಂದು ಹೇಳಲಾಗುತ್ತಿದೆ.

ಟಿಕೆಟ್ ಆಕಾಂಕ್ಷಿಗಳ ಸಭೆ ಕರೆದ ಡಿಕೆಶಿ: ಒಬ್ಬರಿಗೆ ಒಂದೇ ಟಿಕೆಟ್ ಎಂದು ಪರೋಕ್ಷವಾಗಿ ಸಿದ್ದರಾಮಯ್ಯಗೆ ಸಂದೇಶ ರವಾನೆ
ಡಿಕೆ ಶಿವಕುಮಾರ
Follow us on

ಬೆಂಗಳೂರು: ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸಿ ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳ ಸಭೆಯನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆದಿದ್ದಾರೆ. ನಗರದಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಅವರು, ‘ಸಾವಿರಾರು ಆಕಾಂಕ್ಷಿಗಳು ಟಿಕೆಟ್​ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಕಾಂಗ್ರೆಸ್​ ಟಿಕೆಟ್ ಆಕಾಂಕ್ಷಿಗಳ ಹಿನ್ನೆಲೆ ಮತ್ತು ಜವಾಬ್ದಾರಿ ಏನು? ಪಕ್ಷಕ್ಕಾಗಿ ಅವರು ಹೇಗೆ ಜವಾಬ್ದಾರಿಯುತ ಕೆಲಸ ಮಾಡಲು ಸಿದ್ಧರಿದ್ದಾರೆ ಎಂಬುದನ್ನು ಗಮನಿಸಿ, ಅಗತ್ಯ ಸೂಚನೆ ನೀಡಲು ಸಭೆ ಕರೆದಿದ್ದೇನೆ’ ಎಂದರು. ಬಿಜೆಪಿ ವೋಟ್ ಕೇಳಲು ಏನೇನು ಮಾಡುತ್ತಿದೆ ಎಂದು ಗೊತ್ತಿದೆ. ಬಹಳ ದೊಡ್ಡ ರೀತಿಯಲ್ಲಿ ಅಧಿಕಾರ ದುರುಪಯೋಗ ಆಗುತ್ತಿದೆ. ಭಾರತ್ ಜೋಡೋ ವಿಚಾರವನ್ನು ಪ್ರತಿ ಹಳ್ಳಿಗಳಿಗೂ ತೆಗೆದುಕೊಂಡು ಹೋಗಬೇಕಿದೆ. ಪಕ್ಷಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಕಾಂಗ್ರೆಸ್​​ನಲ್ಲಿ ವ್ಯಕ್ತಿ ಮುಖ್ಯ ಅಲ್ಲ, ಪಕ್ಷವೇ ಮುಖ್ಯ ಎಂದು ನುಡಿದರು.

ಸಾವಿರಾರು ಜನರು ಟಿಕೆಟ್​ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಯಾರೇ ಆದರೂ ಒಬ್ಬರಿಗೆ ಒಂದೇ ಟಿಕೆಟ್ ಸಿಗೋದು. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಪಕ್ಷವು ಅಧಿಕಾರಕ್ಕೆ ಬಂದರೆ ನಂತರ ಎಲ್ಲರಿಗೂ ಸೇರಿ ಅಧಿಕಾರ ಸಿಗುತ್ತೆ. ಇದು ಬಹಳ ಮುಖ್ಯ ಯಾರ ಶಕ್ತಿ ಏನೇನಿದೆ ಎಂದು ಈಗಲೇ ಹೇಳಲು ಆಗುವುದಿಲ್ಲ. ಎಲ್ಲರಿಗೂ ಶಕ್ತಿ ಇರುತ್ತೆ ನಾವು ಕೆಲ ಮಾರ್ಗದರ್ಶನಗಳನ್ನು ಆಕಾಂಕ್ಷಿಗಳಿಗೆ ನೀಡುತ್ತೇವೆ. ಆದೇ ರೀತಿ ಅವರು ಕೆಲಸ ಮಾಡಿಕೊಂಡು ಹೋಗಬೇಕು ಎಂದರು.

ದೇಣಿಗೆ ಸಂಗ್ರಹವು ನಮ್ಮ ಪಕ್ಷದಲ್ಲಿ ಹೊಸತಲ್ಲ. ಈ ಹಿಂದೆಯೂ ಹಲವರು ಪಕ್ಷಕ್ಕೆ ದೇಣಿಗೆ ನೀಡಿದ್ದಾರೆ. ಆಗ ಹೆಚ್ಚು ಸುದ್ದಿ ಆಗಿರಲಿಲ್ಲ. ಆದರೆ ಈ ಬಾರಿ ಆಗಿದೆ. ಚುನಾವಣಾ ತಯಾರಿ, ಜಿಲ್ಲೆ ಹಾಗೂ ಬ್ಲಾಕ್ ಮಟ್ಟದಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣ ಸೇರಿದಂತೆ ಹಲವು ವಿಚಾರಗಳನ್ನು ನಿರ್ವಹಿಸಲು ಆರ್ಥಿಕ ಶಕ್ತಿಯ ಅಗತ್ಯವಿದೆ. ಕಚೇರಿ ನಿರ್ಮಾಣಕ್ಕೆ ಕಾರ್ಯಕರ್ತರು ಆರ್ಥಿಕ ನೆರವು ಕೇಳಿದಾಗ ನಾವು ಹಣ ಸಹಾಯ ಮಾಡುತ್ತೇವೆ. ಕಾರ್ಯಕರ್ತರಿಗೆ ತೊಂದರೆ ಆದಾಗ ಅವರಿಗೆ ಸಹಾಯ ಮಾಡಲು ಹಣದ ಅಗತ್ಯವಿದೆ. ಹೀಗಾಗಿ ದೇಣಿಗೆಯನ್ನು ಸಂಗ್ರಹಿಸಲಾಗಿದೆ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದರು.

ಅರ್ಜಿ ಆಹ್ವಾನಿಸಿ ಹಣ ಸಂಗ್ರಹಿಸುವುದರಲ್ಲಿ ಹೊಸದೇನೂ ಇಲ್ಲ. ಮೊದಲೂ ದೇಣಿಗೆ ಸಂಗ್ರಹಿಸಲಾಗುತ್ತಿತ್ತು. ಆದರೆ ಆದರೆ ಮೊದಲು ಸದ್ದು ಮಾಡುತ್ತಿರಲಿಲ್ಲ. ಈಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಪಾರ್ಟಿ, ಕಾರ್ಯಕರ್ತರು, ತಮಟೆ, ಬಿಲ್ಲು ಬಾಣ ಆಫೀಸ್ ವೆಚ್ಚ ನಿರ್ವಹಿಸಬೇಕಿದೆ. ಎಲ್ಲ ಕ್ಷೇತ್ರಗಳಲ್ಲೂ ಪಕ್ಷದ ಕಚೇರಿ ಕಟ್ಟಬೇಕು ಹೀಗಾಗಿ ಹಣ ಬೇಕಾಗುತ್ತದೆ ಎಂದರು. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಸಿದ್ದರಾಮಯ್ಯ ಅವರನ್ನು ಭೇಟಿಯಾಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರೇ ಬಂದರೂ ಸಹ ಒಂದೇ ಟಿಕೆಟ್ ಕೊಡುವುದು. ಎಲ್ಲರೂ ಒಗ್ಗಟ್ಟಿನಿಂದ ಕೆಲಸವನ್ನು ಮಾಡಬೇಕು ಎಂದು ಖಡಕ್ ಆಗಿ ಹೇಳಿದರು. ಕೆಲವರಿಗೆ 100 ಬೂತ್ ನೋಡುವ ಶಕ್ತಿ ಇರುತ್ತದೆ. ಕೆಲವರಿಗೆ 10 ಬೂತ್ ನೋಡುವ ಶಕ್ತಿ ಇರುತ್ತದೆ. ಕೆಲವರಿಗೆ 50 ಬೂತ್ ನೋಡುವ ಶಕ್ತಿ ಇರುತ್ತದೆ. ಇವನ್ನೆಲ್ಲ ಗಮನಿಸಿ ಟಿಕೆಟ್ ಕೊಡಬೇಕಾಗುತ್ತದೆ ಎಂದರು.

ಸಿದ್ದರಾಮಯ್ಯಗೆ ಕೊಟ್ಟ ಸಂದೇಶ

ಒಬ್ಬರಿಗೆ ಒಂದೇ ಟಿಕೆಟ್ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಯನ್ನು ಹಲವು ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಈ ಹಿಂದೆಯೂ ಒಬ್ಬರಿಗೆ ಒಂದೇ ಟಿಕೇಟ್ ಎಂದು ಡಿಕೆಶಿ ಹೇಳಿದ್ದರು. ಆದರೆ ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ನಿಲ್ಲಲು ಸಿದ್ಧತೆ ನಡೆಸಿದ್ದಾರೆ. ಎರಡು ಕ್ಷೇತ್ರದಲ್ಲಿ ಟಿಕೆಟ್ ನೀಡುವ ಬಗ್ಗೆ ಮೂಲ ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಿಪಡಿಸುತ್ತಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಡಿಕೆಶಿ ಪರೋಕ್ಷವಾಗಿ ಸಂದೇಶ ರವಾನಿಸಿರಬಹುದು ಎಂದು ಹೇಳಲಾಗುತ್ತಿದೆ.

ಆಕಾಂಕ್ಷಿಗಳೊಂದಿಗೆ ಗೌಪ್ಯ ಸಭೆ

ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಗಳೊಂದಿಗೆ ರೆಸಾರ್ಟ್​ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೌಪ್ಯ ಸಭೆ ನಡೆಸುತ್ತಿದ್ದಾರೆ. ಈ ಸಭೆಗೆ ಟಿಕೆಟ್​ಗಾಗಿ ಅರ್ಜಿ ಸಲ್ಲಿಸಿದವರಿಗೆ ಮಾತ್ರವೇ ರೆಸಾರ್ಟ್​ಗೆ ಪ್ರವೇಶ ನೀಡಲಾಗುತ್ತಿದೆ. ಟಿಕೆಟ್ ಆಕಾಂಕ್ಷಿಗಳನ್ನು ಹೊರತುಪಡಿಸಿದರೆ ಸಭೆಗೆ ಯಾರಿಗೂ ಪ್ರವೇಶವಿಲ್ಲ. ಸಭೆಗೆ ಬರುವ ಎಲ್ಲರೂ ಕಡ್ಡಾಯವಾಗಿ ಟಿಕೆಟ್ ಸಲ್ಲಿಕೆಯ ರಸೀದಿ ತೋರಿಸಬೇಕು ಎಂದು ಸೂಚಿಸಲಾಗಿದೆ. ಮೊದಲ ಸುತ್ತಿನಲ್ಲಿ ಬಾಗಲಕೋಟೆ, ವಿಜಯಪುರ, ಬೆಳಗಾವಿ ನಗರ ಮತ್ತು ಗ್ರಾಮೀಣ, ಬೀದರ್, ಹುಬ್ಬಳ್ಳಿ-ಧಾರವಾಡ ನಗರ, ಧಾರವಾಡ ಗ್ರಾಮೀಣ, ಗದಗ, ಕಲಬುರಗಿ, ಹಾವೇರಿ, ರಾಯಚೂರು, ಯಾದಗಿರಿ ಜಿಲ್ಲೆಯ ಆಕಾಂಕ್ಷಿಗಳು ಮೊದಲ ಸುತ್ತಿನ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಬಂಡಾಯದ ಬಿಸಿ ತಣಿಸಲು ಯತ್ನ

ಚುನಾವಣಾ ರಣೋತ್ಸಾಹದಲ್ಲಿರುವ ಕಾಂಗ್ರೆಸ್​​ಗೆ ಬಂಡಾಯದ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್ ಆಕಾಂಕ್ಷಿಗಳಿಗೆ ಇಂದು ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಡಿ.ಕೆ.ಶಿವಕುಮಾರ್ ಪಾಠ ಮಾಡಲಿದ್ದಾರೆ. ಈ ಮೂಲಕ ಬಂಡಾಯವನ್ನು ಆರಂಭದಲ್ಲೇ ಕಟ್ಟಿ ಹಾಕಿ, ಆಕಾಂಕ್ಷಿಗಳನ್ನು ಹಿಡಿತಕ್ಕೆ ತರಲು ಯೋಜನೆ ರೂಪಿಸಿದ್ದಾರೆ ಕಾಂಗ್ರೆಸ್​​​ ಟಿಕೆಟ್​ಗಾಗಿ ಅರ್ಜಿ ಸಲ್ಲಿಸಿರುವ ಒಟ್ಟು 1,350 ಮಂದಿ ಅರ್ಜಿ ಸಲ್ಲಿಸಿದ್ದಾರೆ.

ಪಕ್ಷವು ಯಾರಿಗೇ ಟಿಕೇಟ್ ನೀಡಿದರೂ ಪಕ್ಷಕ್ಕೆ ದುಡಿಯಬೇಕು. ಟಿಕೆಟ್​ಗೆ ಅರ್ಜಿ ಸಲ್ಲಿಸಿದವರಿಗೆ ಭವಿಷ್ಯದಲ್ಲಿ ಅವಕಾಶ ಇದ್ದೇ ಇದೆ. ಟಿಕೆಟ್ ಅರ್ಜಿ ಸಲ್ಲಿಸಿದವರು ತಮ್ಮ ತಮ್ಮ ಬೂತ್​ಗಳಲ್ಲಿ ವೋಟರ್​ಐಡಿ ಅಕ್ರಮದ ಬಗ್ಗೆ ಗಮನ ಹರಿಸಬೇಕು. ಮತದಾರರ ಪಟ್ಟಿಯಿಂದ ಕೈಬಿಟ್ಟವರು ಹಾಗೂ ಹೊಸದಾಗಿ ಹೆಸರು ಸೇರ್ಪಡೆಯಾದ ಬಗ್ಗೆಯೂ ಗಮನಿಸಬೇಕು. ತಮ್ಮ ಬೂತ್​ಗಳಲ್ಲಿ ಇರುವ ಮತದಾರರ ಪಟ್ಟಿಯ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಬೇಕು ಎಂದು ಸಭೆಯಲ್ಲಿ ಸೂಚಿಸುವ ಸಾಧ್ಯತೆಯಿದೆ.

Published On - 1:54 pm, Fri, 25 November 22