PSI Recruitment Scam: ಎಡಿಜಿಪಿ ಅಮೃತ್​ಪಾಲ್​ ಮಂಪರು ಪರೀಕ್ಷೆಗೆ ಸಿದ್ದರಾಮಯ್ಯ ಆಗ್ರಹ, ಅಧಿವೇಶನದ ಬಗ್ಗೆ ಅಸಮಾಧಾನ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 23, 2022 | 3:22 PM

ಪಿಎಸ್​ಐ ಹಗರಣದ ಸಂಪೂರ್ಣ ಜವಾಬ್ದಾರಿಯನ್ನು ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಹೊರಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

PSI Recruitment Scam: ಎಡಿಜಿಪಿ ಅಮೃತ್​ಪಾಲ್​ ಮಂಪರು ಪರೀಕ್ಷೆಗೆ ಸಿದ್ದರಾಮಯ್ಯ ಆಗ್ರಹ, ಅಧಿವೇಶನದ ಬಗ್ಗೆ ಅಸಮಾಧಾನ
ಸಿದ್ದರಾಮಯ್ಯ
Follow us on

ಬೆಂಗಳೂರು: ಸಬ್​ ಇನ್​ಸ್ಪೆಕ್ಟರ್ ನೇಮಕಾತಿ ಹಗರಣದ ಪ್ರಮುಖ ಆರೋಪಿ ಐಪಿಎಸ್ ಅಧಿಕಾರಿ ಎಡಿಜಿಪಿ ಅಮೃತ್ ಪಾಲ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಶುಕ್ರವಾರ (ಸೆ 23) ಆಗ್ರಹಿಸಿದರು. ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಆರ್​ಪಿಸಿ 164ರ ನಿಯಮಗಳನ್ನು ಅನ್ವಯಿಸಿ ಮ್ಯಾಜಿಸ್ಟ್ರೇಟ್ ಮುಂದೆ ಅವರಿಂದ ಹೇಳಿಕೆ ಕೊಡಿಸಬೇಕು ಎಂದು ಒತ್ತಾಯಿಸಿದರು. ಮಾಧ್ಯಮಗೋಷ್ಠಿಯಲ್ಲಿ ಮಾತನಾಡುವಾಗ ಸಿದ್ದರಾಮಯ್ಯ ಅವರು 40 ಪರ್ಸೆಂಟ್ ಸರ್ಕಾರ ಎಂಬ ಮಾಸ್ಕ್ ಹಾಕಿಕೊಂಡಿದ್ದು ಗಮನ ಸೆಳೆಯಿತು.

ಹಗರಣದಕ್ಕೆ ಸಂಬಂಧಿಸಿದಂತೆ ಕನಕಗಿರಿ ಶಾಸಕ ದಡೇಸಗೂರು ಆಡಿಯೊ ಹೊಬಂದಿದೆ. ಅವರ ವಿಚಾರಣೆಯೂ ಈವರೆಗೆ ನಡೆದಿಲ್ಲ. ಬಿಜೆಪಿ ನಾಯಕ ಯತ್ನಾಳ್ ಅವರು ಹಗರಣದಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬ ಮಗ ಇರುವುದಾಗಿ ಹೇಳಿದ್ದಾರೆ. ಆ ವ್ಯಕ್ತಿ ಯಾರು ಎಂಬುದನ್ನು ತನಿಖೆಯ ಮೂಲಕ ಬಹಿರಂಗಪಡಿಸಬೇಕು. ಮಾಜಿ ಸಿಎಂ ಮಗ ಎಂದರೆ ಅದು ದೇವೇಗೌಡರ ಮಗನಾ? ಯಡಿಯೂರಪ್ಪ ಮಗನಾ? ಸಿದ್ದರಾಮಯ್ಯ ಮಗನಾ ಎಂಬ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಈ ಬಾರಿ ಕೇವಲ ಎರಡು ವಾರಗಳ ಅವಧಿಗೆ ಮಾತ್ರವೇ ಅಧಿವೇಶನ ನಡೆಸಿದರು. ಪ್ರವಾಹ ಮತ್ತು ಅತಿವೃಷ್ಟಿ ಕುರಿತು ಚರ್ಚೆ ಮಾಡಿದ್ದೇವೆ. ಮೊದಮೊದಲು ಪಿಎಸ್​ಐ ನೇಮಕಾತಿ ಹಗರಣವೇ ನಡೆದಿಲ್ಲ ಎಂದಿದ್ದರು. ಆದರೆ ನಂತರ ಹಗರಣದ ಮುಖ್ಯ ಆರೋಪಿ ಎಡಿಜಿಪಿ ಅಮೃತ್ ಪಾಲ್ ಅವರನ್ನು ಅಮಾನತು ಮಾಡಿದರು. ಪ್ರತಿ ಪಕ್ಷಗಳು ಒತ್ತಡ ಹಾಕಿದ ನಂತರ ಎಸ್​ಐಟಿ ತನಿಖೆಗೆ ಕೊಟ್ಟರು. ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದಾಗಲೇ ಅಮೃತ್ ಪಾಲ್ ಅವರ ನೇಮಕವಾಗಿದ್ದು. ಅವರ ನೇಮಕದಲ್ಲೂ ಅಕ್ರಮ ನಡೆದಿತ್ತು ಎಂದು ಸಿದ್ದರಾಮಯ್ಯ ಆರೋಪ ಮಾಡಿದರು.

ಪಿಎಸ್​ಐ ಹಗರಣದ ಸಂಪೂರ್ಣ ಜವಾಬ್ದಾರಿಯನ್ನು ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಹೊರಬೇಕು ಎಂದು ಒತ್ತಾಯಿಸಿದರು. ಗುತ್ತಿಗೆದಾರರ ಸಂಘವು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲರಿಗೂ ಪತ್ರ ಬರೆದಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರೇ ನಮಗೂ ರಾಜಕೀಯ ಪಕ್ಷಗಳಿಗೂ ಸಂಬಂಧ ಇಲ್ಲ ಎಂದಿದ್ದಾರೆ. ಆದರೂ ಇವರು ಸುಮ್ಮನೆ ಕುಂಟು ನೆಪ ಹೇಳುತ್ತಿದ್ದಾರೆ. ಸಚಿವರಾದ ವಿ.ಮುನಿರತ್ನ, ಸುಧಾಕರ್ ಹೆಸರನ್ನೂ ಗುತ್ತಿಗೆದಾರರ ಸಂಘವು ಪ್ರಸ್ತಾಪಿಸಿದೆ. ಆದರೂ ಇವರು ಸುಮ್ಮನಿದ್ದಾರೆ. ಇವರು ಲಜ್ಜೆಗೆಟ್ಟವರು, ಇವರಿಗೆ ಮಾನ ಮರ್ಯಾದೆ ಇಲ್ಲ. ಈ ವಿಚಾರದ ಚರ್ಚೆಗೆ ಸದನದಲ್ಲಿ ಅವಕಾಶವನ್ನೇ ಕೊಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕುಮಾರಸ್ವಾಮಿ ಅವರಿಗೆ ಮಾತನಾಡಲು ನಿನ್ನೆ ಅವಕಾಶ ಕೊಟ್ಟಿದ್ದರು. ನಾಳೆ ಅಥವಾ ಸೋಮವಾರವಾದರೂ ನಮಗೆ ಅವಕಾಶ ಕೊಡಬಹುದಿತ್ತು. ಆದರೆ ಇವರು ಭಂಡತನ ತೋರಿದರು. ‘ಸಿದ್ದರಾಮಯ್ಯ ಸ್ಕ್ಯಾಮ್ ರಾಮಯ್ಯ’ ಎಂದು ಬಿಜೆಪಿಯವರು ಪುಸ್ತಕ ಬಿಟ್ಟಿದ್ದಾರೆ. ಈ ಪುಸ್ತಕದ ಬಗ್ಗೆ ಒಮ್ಮೆಯಾದರೂ ಸದನದ ಒಳಗೆ ಅಥವಾ ಹೊರಗೆ ಪ್ರಸ್ತಾಪಿಸಲಿಲ್ಲ. ರೀಡೂ ಕೇಸ್ ಬಗ್ಗೆ ಈಗ ಮಾತನಾಡುತ್ತಿದ್ದಾರೆ. ಕೆಂಪಣ್ಣ ಆಯೋಗವೇ ಅಂಥ ಯಾವ ಅಕ್ರಮವೂ ನಡೆದಿಲ್ಲ ಎಂದಿದೆ. ಇವರು ‘ಅರ್ಕಾವತಿ ರೀಡೂ, ಅರ್ಕಾವತಿ ರೀಡೂ’ ಎಂದು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಅಮಯಕರಾಗಿದ್ದರೆ ಯಾಕೆ ಹೆದರುತ್ತಿದ್ದರು ಎಂದು ಕೇಳಿದರು.

Published On - 3:19 pm, Fri, 23 September 22