Mangalore: ಕರಾವಳಿಯಲ್ಲಿ ‘ಪೇ ಸಿಎಂ’ ಜೊತೆಗೆ ‘ಪೇ ಎಂಎಲ್ಎ’ ಪೋಸ್ಟರ್ ಅಭಿಯಾನ ಆರಂಭಿಸಿದ ಕೈ ಕಾರ್ಯಕರ್ತರು
ರಾಜ್ಯದಲ್ಲಿ ಸರ್ಕಾರದ ವಿರುದ್ಧ ಅರಂಭಿಸಿದ ಪೇ ಸಿಎಂ ಅಭಿಯಾನವು ಇದೀಗ ಕರಾವಳಿಗೆ ಎಂಟ್ರಿ ಕೊಟ್ಟಿದ್ದು, ಬೆಳ್ತಂಗಡಿ ಶಾಸಕರ ವಿರುದ್ಧ ಪೇ ಎಂಎಲ್ಎ ಪೋಸ್ಟರ್ ಅಭಿಯಾನವನ್ನು ಯೂತ್ ಕಾಂಗ್ರೆಸ್‌ನವರು ಆರಂಭಿಸಿದ್ದಾರೆ.
ಮಂಗಳೂರು: ರಾಜ್ಯದಲ್ಲಿ ಸರ್ಕಾರದ ವಿರುದ್ಧ ಅರಂಭಿಸಿದ ಪೇ ಸಿಎಂ (Pay CM) ಅಭಿಯಾನವು ಇದೀಗ ಕರಾವಳಿಗೆ ಪೇ ಎಂಎಲ್ಎ (Pay MLA) ಮೂಲಕ ಎಂಟ್ರಿ ಕೊಟ್ಟಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ (Harish Poonja) ಅವರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಈ ಅಭಿಯಾನ ಆರಂಭಿಸಿದ್ದು, ಶಾಸಕರ ಫೋಟೋ ಹಾಕಿ ಪೇ ಎಂಎಲ್ಎ ಪೋಸ್ಟರ್ ಅಂಟಿಸಲು ಪ್ರಾರಂಭಿಸಿದ್ದಾರೆ. ಬೆಳ್ತಂಗಡಿ ಬಸ್ ನಿಲ್ದಾಣ, ಸಾರ್ವಜನಿಕ ಶೌಚಾಲಯ ಹಾಗೂ ಬಸ್ಗಳಿಗೆ ಪೇ ಎಂಎಲ್ಎ ಪೋಸ್ಟರ್ ಅನ್ನು ಬೆಳ್ತಂಗಡಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಅಂಟಿಸುತ್ತಿದ್ದಾರೆ. ತಡ ರಾತ್ರಿಯಿಂದ ಕಾರ್ಯಕರ್ತರು ಈ ಅಭಿಯನವನ್ನು ಆರಂಭಿಸಿದ್ದಾರೆ.
ಇತ್ತೀಚೆಗೆ ರಾಜ್ಯ ರಾಜಕೀಯದಲ್ಲಿ ಸದ್ದುಮಾಡಿದ ಪೇ ಸಿಎಂ ಅಭಿಯಾನ ಕರಾವಳಿಯಲ್ಲೂ ಸುದ್ದು ಮಾಡುತ್ತಿದ್ದು, ‘ಪೇ ಎಂಎಲ್ಎ’ ಎಂಬ ಪೋಸ್ಟರ್ ಬೆಳ್ತಂಗಡಿಯಲ್ಲಿ ಕಾಣಿಸಿಕೊಂಡಿದೆ. ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಆರಂಭವಾದ ಈ ಪೋಸ್ಟರ್ ಅಭಿಯಾನ ಇದೀಗ ರಾಜ್ಯದ ಹಲವು ಕಡೆಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಕೈ ನಾಯಕರ ನಡೆಗೆ ಆಕ್ರೋಶಗೊಂಡಿರುವ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದ ಹಗರಣಗಳ ಬಗ್ಗೆ ಕಾರ್ಟೂನ್ ವಿಡಿಯೋ ಬಿಡುಗಡೆ ಮಾಡಿ ಗಮನಸೆಳೆಯುವ ಪ್ರಯತ್ನ ಮಾಡಿದೆ. ಅಲ್ಲದೆ ಪೇ ಸಿಎಂ ಅನ್ನು ಪೇ ಕಾಂಗ್ರೆಸ್ ಮೇಡಂ ಅಂತನೂ ಕರೆಯಲು ಪ್ರಾರಂಭಿಸಿದರು. ಬೆಂಗಳೂರಿನಲ್ಲಿ ಪೋಸ್ಟರ್ ಅಂಟಿಸುತ್ತಿದ್ದ ಕೆಲವು ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಯಾವುದೇ ಅನುಮತಿ ಪಡೆಯದೆ ರಸ್ತೆಗೆ ಏಕಾಏಕಿ ಇಳಿದು ಪೋಸ್ಟರ್ ಅಂಟಿಸಿದ್ದರು. ಈ ಸಂಬಂಧ ಸಿದ್ದರಾಮಯ್ಯ, ಡಿಕೆ.ಶಿವಕುಮಾರ್ ಸೆರಿದಂತೆ ಕೆಲವರ ವಿರುದ್ಧ ಎನ್ಸಿಆರ್ ಕೂಡ ದಾಖಲಾಗಿದೆ.
ಕೈ ಕಾರ್ಯಕರ್ತರ ಬಂಧನ, ಯು.ಟಿ.ಖಾದರ್ ಆಕ್ರೋಶ
ಪೇಸಿಎಂ ಪೋಸ್ಟರ್ ಅಂಟಿಸಿದ ಕೈ ಕಾರ್ಯಕರ್ತರ ಬಂಧನ ಹಿನ್ನೆಲೆ ಮಂಗಳೂರಿನಲ್ಲಿ ಮಾಜಿ ಸಚಿವ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಪೇಸಿಎಂ ಪೋಸ್ಟರ್ ಅಂಟಿಸುವ ಅಭಿಯಾನ ಮಾಡಿದ್ದೇವೆ. ಆದರೆ ನಾವು ಮಾಡಿದರೆ ಅದು ತಪ್ಪು. ಸೋನಿಯಾ, ರಾಹುಲ್, ಸಿದ್ದರಾಮಯ್ಯ ಬಗ್ಗೆ ಏನೂ ಹಾಕಿಲ್ವಾ? ಬಿಜೆಪಿಯವರು ಜಾಲತಾಣದಲ್ಲಿ ಏನು ಬೇಕಾದರೂ ಹಾಕಬಹುದು. ಆಗ ಯಾಕೆ ತನಿಖೆ ಮಾಡಿಲ್ಲ, ಆ ಬಗ್ಗೆಯೂ ತನಿಖೆ ಆಗಲಿ ಎಂದರು.
ಕೆಳ ಹಂತದ ರಾಜಕೀಯ ಮಾಡುವುದರಲ್ಲಿ ಕಾಂಗ್ರೆಸಿಗರು ನಿಸ್ಸೀಮರು
ಬೆಂಗಳೂರು: ಪೇ ಸಿಎಂ ಪೋಸ್ಟರ್ ಅಭಿಯಾದ ಬಗ್ಗೆ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ ಸಚಿವ ಡಾ.ಕೆ.ಸುಧಾಕರ್, ಕಾಂಗ್ರೆಸ್‌ನವರು ಇಷ್ಟು ಕೆಳ ಹಂತಕ್ಕೆ ಹೋಗಿ ರಾಜಕೀಯ ಮಾಡುವುದರಲ್ಲಿ ನಿಸ್ಸೀಮರು ಎಂದು ಬಹಳ ಸ್ಪಷ್ಟವಾಗಿದೆ. ಈ ಮೂಲಕ ಕಾಂಗ್ರೆಸ್ ದೇಶದ ಮುಂದೆ ಬೆತ್ತಲಾಗಿದೆ ಎಂದರು. ಕಾಂಗ್ರೆಸ್‌ನ ಅನೇಕರಿಗೆ ವಯಸ್ಸಾಗಿದೆ. ಹೇಗಾದರೂ ಮಾಡಿ ವೈಯಕ್ತಿಕ ಲಾಭಕ್ಕೊಸ್ಕರ ಪೇ ಸಿಎಂ ಅಂತ ಮಾಡಿದ್ದಾರೆ. ನಟ ಅನಿಲ್ ಅಯ್ಯರ್ ನನ್ನ ಅನುಮತಿ ಇಲ್ಲದೇ ನನ್ನ ಪೋಟೊ ಬಳಸಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ರಾಜಕೀಯ ದುರುದ್ದೇಶದ ಅಭಿಯಾನ ಇದು ಎಂದರು.
ಎಷ್ಟು ಜನ ಕಾಂಗ್ರೆಸ್ಸಿಗರು ಜೈಲಿಗೆ ಹೋಗಿ ಬಂದಿದ್ದಾರೆ? ಎಷ್ಟು ಜನ ಜಾಮೀನಿನ ಮೇಲೆ ಹೊರಗಿದ್ದಾರೆ? ಅವರ ಹಿರಿಯ ನಾಯಕರೇ ಬೇಲ್ ಮೇಲೆ ಇದ್ದಾರೆ. ಭ್ರಷ್ಟಾಚಾರದ ಕಾರಣ ಸರ್ಕಾರಗಳನ್ನೇ ಕಳೆದುಕೊಂಡಿದ್ದಾರೆ. ಇವರೆಲ್ಲರೂ ಸತ್ಯ ಹರಿಶ್ಚಂದ್ರರಾ ಎಂದು ಪ್ರಶ್ನಿಸಿದಸಚಿವ ಸುಧಾಕರ್, ನಾಚಿಕೆ ಆಗಲ್ವಾ ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಎಂದರು.
ಬಹಳ ಜೋರಾಗಿ ಮಾತನಾಡಿದರೆ, ಪದೇ ಪದೇ ಮಾತನಾಡಿದರೆ ಜನರು ನಂಬುತ್ತಾರೆ ಎಂದು ಭಾವಿಸಿಕೊಂಡಿದ್ದಾರೆ. ಜನರು ಮೂರ್ಖರಲ್ಲ. ಕರ್ನಾಟಕದ ರಾಜಕೀಯ ಘನತೆಯನ್ನು ಕಾಂಗ್ರೆಸ್ ಹಾಳು ಮಾಡುತ್ತಿದೆ. ಇದರಲ್ಲಿ ಯಾವ ಹಿಟ್ ಇಲ್ಲ ರನ್ ಇಲ್ಲ. ಕೇವಲ ರಾಜಕೀಯ ದುರುದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆ. ಅವರು ಏನೇ ಮಾಡಿದರೂ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಈ ಹಿಂದೆ ಶೇ 1 ಅಥವಾ 2ರಷ್ಟು ಕಾಂಗ್ರೆಸ್ಗೆ ಅವಕಾಶವಿತ್ತು. ಆದರೀಗ ಇಂತಹ ಅಭಿಯಾನದಿಂದ ಅವರು ಅದನ್ನೂ ಕಳೆದುಕೊಂಡಿದ್ದಾರೆ ಎಂದರು.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ