ಬೆಳಗಾವಿ: ಭೂ ಅವ್ಯವಹಾರ ಆರೋಪ ಎದುರಿಸುತ್ತಿರುವ ಸಚಿವ ಭೈರತಿ ಬಸವರಾಜ್ ನಡೆಸಿದ್ದಾರೆ ಎನ್ನಲಾದ ಹಗರಣದ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕೆಂದು ಕಾಂಗ್ರೆಸ್ ಶಾಸಕರು ಆಗ್ರಹಿಸಿದರು. ಸ್ಪೀಕರ್ ಅವಕಾಶ ನೀಡದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ಕಲಾಪ ಬಹಿಷ್ಕರಿಸಿ ಹೊರನಡೆದರು. ಸದನದಿಂದ ಹೊರನಡೆದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಭೂ ಅವ್ಯವಹಾರದ ಆರೋಪ ಎದುರಿಸುತ್ತಿರುವ ಐವರಲ್ಲಿ ಇಬ್ಬರು ರಾಜಕಾರಿಣಿಗಳು. ಒಬ್ಬರು ಸಚಿವ ಭೈರತಿ ಬಸವರಾಜ್, ಮತ್ತೊಬ್ಬರು ಶಂಕರ್. ಇವರ ವಿರುದ್ಧ ಸಹಿ ಫೋರ್ಜರಿ, ವಂಚನೆ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗಿ ತಿಂಗಳಾದರೂ ರಾಜೀನಾಮೆ ಪಡೆದಿಲ್ಲ. ಕೂಡಲೇ ರಾಜೀನಾಮೆ ನೀಡಬೇಕೆಂದು ನಾವು ಆಗ್ರಹಿಸಿದ್ದೇವೆ. ಈ ಹಿಂದೆ ಗಣಪತಿ ಪ್ರಕರಣದಲ್ಲಿ ಕೆ.ಜೆ.ಜಾರ್ಜ್ ರಾಜೀನಾಮೆಗೆ ಬಿಜೆಪಿಯವರು ಒತ್ತಾಯಿಸಿದ್ದರು. ಅವರೂ ನೀಡಿದ್ದರು. ಅಂದು ದಾಖಲಾಗಿದ್ದ ಪ್ರಕರಣದ ಮಾದರಿಯಂತೆಯೇ ಇಂದೂ ಪ್ರಕರಣ ದಾಖಲಾಗಿದೆ. ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು ಎನ್ನುವುದು ನಮ್ಮ ಉದ್ದೇಶವಾಗಿತ್ತು. ನಮ್ಮ ಮನವಿಯನ್ನು ಸ್ಪೀಕರ್ ತಿರಸ್ಕಾರ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ದೂರಿದರು.
ಚರ್ಚೆಗೆ ಅವಕಾಶ ನೀಡದ ಕಾರಣ ನಾವು ಧರಣಿ ಮಾಡಿದೆವು. ಸದನದಲ್ಲಿ ನಾವು ಧರಣಿ ಮುಂದುವರಿಸಬೇಕಾಗಿತ್ತು ಆದರೆ ರಾಜ್ಯದಲ್ಲಿ ಹಲವು ಸಮಸ್ಯೆಗಳು ಇವೆ. ವಿಗ್ರಹ ವಿರೂಪಗೊಳಿಸಿದ ಪ್ರಕರಣಗಳು ವರದಿಯಾಗಿವೆ. ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆಯೂ ಚರ್ಚೆಯಾಗಬೇಕಿದೆ. ಸರ್ಕಾರದ ಮೇಲೆ ಇರುವ ಶೇ 40ರಷ್ಟು ಕಮಿಷನ್ ವಿಚಾರ, ಬಿಟ್ ಕಾಯಿನ್ ವಿಚಾರಗಳ ಬಗ್ಗೆಯೂ ಚರ್ಚೆ ನಡೆಯಬೇಕಿದೆ. ಹೀಗಾಗಿ ಸದನವನ್ನು ಇನ್ನೂ ಒಂದು ವಾರದ ಅವಧಿಗೆ ವಿಸ್ತರಿಸುವಂತೆ ಸ್ಪೀಕರ್‌ಗೆ ಪತ್ರ ಬರೆದಿದ್ದೆವು. ಇದನ್ನು ಸ್ಪೀಕರ್ ಒಪ್ಪಲಿಲ್ಲ. ನಮ್ಮ ನಿಲುವಳಿ ಸೂಚನೆ ತಿರಸ್ಕಾರ ಮಾಡಿದ್ದರಿಂದ ಸಭಾತ್ಯಾಗ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ಸದನದಲ್ಲಿ ಕಲಾಪ ನಡೆಯಲು ನಾವು ಅವಕಾಶ ಮಾಡಿಕೊಡುತ್ತೇವೆ, ಮತ್ತೆ ಭಾಗವಹಿಸುತ್ತೇವೆ. ಎಂಇಎಸ್ ಪುಂಡತನವನ್ನೂ ಪ್ರಸ್ತಾಪಿಸುತ್ತೇವೆ ಎಂದರು. ಬಿಜೆಪಿ ನಾಯಕರು ದಿನೇಶ್ ಗುಂಡೂರಾವ್ ವಿರುದ್ಧ ಭೂ ಹಗರಣದ ಆರೋಪ ಪ್ರಸ್ತಾಪಿಸಿದ ಅವರು, ದಿನೇಶ್ ಗುಂಡೂರಾವ್ ಈಗ ಸಚಿವ ಸ್ಥಾನದಲ್ಲಿದ್ದಾರಾ? ಅಕ್ರಮ ಮಾಡಿದ್ದರೆ ಆಗಲೇ ಬಹಿರಂಗ ಮಾಡಬೇಕಿತ್ತು. ಆದರೆ ಈಗ ಭೈರತಿ ಬಸವರಾಜ್ ಸಚಿವ ಸ್ಥಾನದಲ್ಲಿದ್ದಾರೆ. ಹಳೆಯ ಪ್ರಕರಣ ಕೆದಕಿ ಈಗ ಯಾವುದೇ ಪ್ರಯೋಜನವಿಲ್ಲ. ಸಚಿವ ಭೈರತಿ ಬಸವರಾಜ್ ಅವರನ್ನು ಉಳಿಸಿಕೊಳ್ಳಲು ಈ ಸರ್ಕಾರ ಯತ್ನಿಸುತ್ತಿದೆ ಎಂದರು.
ಕ್ಷಮೆ ಕೇಳುವ ಪರಿಸ್ಥಿತಿ ಬರುತ್ತೆ
ಬಿಜೆಪಿ ನಾಯಕರು ಈ ಮೊದಲು ದೇಶದ ರೈತರಲ್ಲಿ ಕ್ಷಮೆ ಕೋರಿದ್ದರು. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿಯೂ ಅಂಥದ್ದೇ ಪರಿಸ್ಥಿತಿ ಬರುತ್ತದೆ. ಭೂ ಹಗರಣದಲ್ಲಿ ಯಾರೇ ಇದ್ದರೂ ಬಂಧಿಸಲಿ, ಕಾಂಗ್ರೆಸ್‌ನವರು ಇದ್ದರೆ ಮೊದಲು ಅವರನ್ನು ಅರೆಸ್ಟ್ ಮಾಡಲಿ ಎಂದು ಸಿ.ಟಿ.ರವಿ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟಾಂಗ್ ಕೊಟ್ಟರು.
ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ
ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಜನವರಿ 9ರಿಂದ 19ರ ವರೆಗೆ ಕಾಂಗ್ರೆಸ್ ಪಾದಯಾತ್ರೆ ನಡೆಸಲಿದೆ. ಮೇಕೆದಾಟಿನಿಂದ ಆರಂಭವಾಗುವ ಪಾದಯಾತ್ರೆಯು ಬೆಂಗಳೂರಿನಲ್ಲಿ ಅಂತ್ಯಗೊಳ್ಳಲಿದೆ. ದಿನಕ್ಕೆ 10 ಕಿಮೀ ಕಾಲ್ನಡಿಗೆ ನಡೆಯಲಿದೆ. ಕೇವಲ ಕಾಂಗ್ರೆಸ್ ಕಾರ್ಯಕರ್ತರು ಮಾತ್ರವಲ್ಲ, ಜನಸಾಮನ್ಯರೂ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬಹುದು. ಪಾದಯಾತ್ರೆ ಆರಂಭವಾಗುವ ಸ್ಥಳದಲ್ಲಿ ಶಾಸನಗಲ್ಲು ನೆಡಲಾಗುವುದು. ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವವರಿಗೆ ಕಾಂಗ್ರೆಸ್ನಿಂದ ಟಿಶರ್ಟ್, ಸರ್ಟಿಫಿಕೇಟ್ ಕೊಡುತ್ತೇವೆ. ಕೊನೆಯ ದಿನ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಲಿದ್ದು, ಒಂದು ಲಕ್ಷ ಮಂದಿ ಭಾಗವಹಿಸುವ ನಿರೀಕ್ಚೆಯಿದೆ ಎಂದರು.
ಸಿಟಿ ರವಿ ವಿರುದ್ಧ ಹರಿಹಾಯ್ದ ಡಿಕೆಶಿ
ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಬಿಜೆಪಿ ಶಾಸಕ ಸಿ.ಟಿ.ರವಿ ಏನೇನೋ ಮಾತನಾಡುತ್ತಿದ್ದಾರೆ. ನನ್ನ ಹೆಸರು ಹೇಳಿದರೆ ದೊಡ್ಡ ಲೀಡರ್ ಆಗ್ತಾರೆ ಅಂದುಕೊಂಡಿದಾರೆ ಪಾಪಾ. ಅವರು ನ್ಯಾಷನಲ್ ಲೀಡರ್ ಆಗ್ಲಿ ಪಾಪಾ. ಸರ್ಕಾರದ ಮುಂದೆ ನೈಜ ವಿಚಾರಗಳಿದೆ. ಶೇ 40ರ ಕಮಿಷನ್ ಸೇರಿದಂತೆ ಭ್ರಷ್ಟಾಚಾರದ ಆರೋಪಗಳನ್ನು ಬೇರೆಡೆಗೆ ತಿರುಗಿಸಲು ಸಿ.ಟಿ.ರವಿ ಹೀಗೆ ಮಾಡುತ್ತಿದ್ದಾರೆ. ಅವರೇ ಒಂದಷ್ಟು ಮಂದಿಯಿಂದ ಕಲ್ಲೂ ತೂರಾಟ ಮಾಡಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೂ ಇದಕ್ಕೂ ಸಂಬಂಧ ಇಲ್ಲ. ನಾನು ಒಂದು ಪಕ್ಷದ ನಾಯಕನಾಗಿ ಏಕೆ ಎಂಇಎಸ್ ಬಗ್ಗೆ ಮಾತನಾಡಲಿ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಭೈರತಿ ಬಸವರಾಜ್ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ ಧರಣಿ ಮುಂದುವರಿಸಲು ಕಾಂಗ್ರೆಸ್ ನಿರ್ಧಾರ: ಸಿದ್ದರಾಮಯ್ಯ
ಇದನ್ನೂ ಓದಿ: Karnataka Anti Conversion Bill 2021: ಮತಾಂತರ ನಿಷೇಧ ಮಸೂದೆಗೆ ಸಂಪುಟ ಒಪ್ಪಿಗೆ