ಬಿಜೆಪಿ ಸಂಸದ, ಮಾಜಿ ಶಾಸಕರ ಜತೆ ಲಕ್ಷ್ಮಣ ಸವದಿ ಸುತ್ತಾಟ, ಕುತೂಹಲ ಮೂಡಿಸಿದ ಸಾಹುಕಾರ್ ನಡೆ
ಲೋಕಸಭಾ ಚುನಾವಣಾ ಹೊತ್ತಲಿ ಕಾಂಗ್ರೆಸ್ ತೊರೆದು ಮತ್ತೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆಯಾದ ಬೆನ್ನಲ್ಲೇ ಶಾಸಕ ಲಕ್ಷ್ಮಣ್ ಸವದಿ ಕೂಡಾ ಬಿಜೆಪಿಗೆ ವಾಪಸ್ ಆಗುತ್ತಾರೆ ಎನ್ನುವ ಚರ್ಚೆ ರಾಜ್ಯ ರಾಜಕಾರಣದಲ್ಲಿ ಶುರುವಾಗಿದೆ. ಇದರ ಮಧ್ಯೆ ಲಕ್ಷ್ಮಣ ಸವದಿ ಸಹ ಬಿಜೆಪಿ ನಾಯಕರ ಜೊತೆ ಓಡಾಡುತ್ತಿದ್ದು, ಸಂಚಲನ ಮೂಡಿಸಿದೆ.
ಬೆಳಗಾವಿ, (ಜನವರಿ 29): ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ವಾಪಸ್ ಆಗಿದ್ದಾರೆ. ಇದರ ಬೆನ್ನಲ್ಲೇ ಲಕ್ಷ್ಮಣ ಸವದಿ (Laxman Savadi) ಸಹ ಬಿಜೆಪಿಗೆ ಘರ್ ವಾಪ್ಸಿ ಮಾಡುತ್ತಾರೆ ಎನ್ನುವ ಚರ್ಚೆಗಳು ನಡೆದಿವೆ. ಆದ್ರ, ಬಿಜೆಪಿಗೆ ಹೋಗಲ್ಲ ಎಂದು ಲಕ್ಷ್ಮಣ ಸವದಿ ಕಡ್ಡಿ ಮುರಿದಂತೆ ಹೇಳಿದ್ದಾರೆ. ಆದರೂ ಇದರ ನಡುವೆ ಲಕ್ಷ್ಮಣ ಸವದಿ ಅವರು ಬಿಜೆಪಿ ನಾಯಕರ ಜತೆಗೆ ಓಡಾಟ ಮಾಡುತ್ತಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಹೌದು…ಇಂದು(ಜನವರಿ 29) ಲಕ್ಷ್ಮಣ ಸವದಿ ಕಾರಿನಲ್ಲೇ ಬಿಜೆಪಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಬಿಜೆಪಿಯ ಮಾಜಿ ಶಾಸಕ ಮಹಾಂತೇಶ್ ದೊಡ್ಡಗೌಡರ ಸುತ್ತಾಡಿದ್ದಾರೆ. ಅಲ್ಲದೇ ಡಿಸಿಸಿ ಬ್ಯಾಂಕ್ ಸಾಮಾನ್ಯ ಸಭೆಗೆ ಒಟ್ಟಾಗಿ ಆಗಮಿಸಿದ್ದಾರೆ. ಆದರೆ, ಬ್ಯಾಂಕ್ ಸಭೆಗೆ ಬರುವ ಮುನ್ನ ಬೆಳಗಾವಿಯ ಸದಾಶಿವನಗರದಲ್ಲಿರುವ ಸವದಿ ನಿವಾಸದಲ್ಲಿ ಊಟದ ನೆಪದಲ್ಲಿ ಗೌಪ್ಯ ಸಭೆ ನಡೆಸಿದ್ದಾರೆ.
ಕಾಂಗ್ರೆಸ್ ಬಿಡುವುದಿಲ್ಲ ಎಂದು ಹೇಳುತ್ತಿರುವ ಶಾಸಕ ಲಕ್ಷ್ಮಣ ಸವದಿ, ಡಿಸಿಸಿ ಬ್ಯಾಂಕ್ ಸಾಮಾನ್ಯ ಸಭೆಯ ನೆಪದಲ್ಲಿ ರಾಜಕೀಯ ಚರ್ಚೆ ನಡೆಸಿದ್ರಾ ? ಸವದಿ ವಾಪಸ್ ಬಿಜೆಪಿಗೆ ಹೋಗುತ್ತಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿರುವ ಮಧ್ಯೆ ಸವದಿ ಬಿಜೆಪಿ ನಾಯಕರ ಜತೆ ಓಡಾಡುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಬಿಎಸ್ವೈಗೆ ತಿರುಗೇಟು
ಸವದಿ ಮನಸ್ಸಿನಲ್ಲಿ ಏನಿದೆ ಎಂದು ತಿಳಿದು ಮಾತಾಡ್ತೇನೆಂದು ಬಿಎಸ್ವೈ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಸವದಿ, ನನ್ನ ಮನಸ್ಸಿನಲ್ಲಿ ಏನಿದೆ ಎಂದು ತಿಳಿದುಕೊಳ್ಳಲು ಯಾರಿಗೂ ಆಗಲ್ಲ. ಅದು ನನಗೆ ಮತ್ತು ಆ ಭಗವಂತನಿಗೆ ಮಾತ್ರ ಗೊತ್ತು. ಬಿ.ಎಲ್.ಸಂತೋಷ್ ಸೇರಿ ಯಾರೂ ಸಂಪರ್ಕಿಸಿಲ್ಲ, ಈ ಪ್ರಶ್ನೆ ಉದ್ಭವಿಸಲ್ಲ. ಅವರಿಗೆ ನನ್ನ ಅವಶ್ಯಕತೆ ಅನಿವಾರ್ಯವಿದ್ದಾಗ ಸ್ವಾಭಾವಿಕವಾಗಿ ಕೇಳುತ್ತಾರೆ. ಆದ್ರೆ ತೀರ್ಮಾನ ಮಾಡುವುದು ನಾನೇ ಅಲ್ಲವಾ ಎಂದು ತಿರುಗೇಟು ನೀಡಿದರು.
ಇದೇ ವೇಳೆ ಸಿಎಂ-ಡಿಸಿಎಂ ಜೊತೆ ಚರ್ಚೆ ಬಗ್ಗೆ ಮಾತನಾಡಿದ ಸವದಿ, ಸಿಎಂ ನಮ್ಮ ಮನೆ ಯಜಮಾನ, ಅವರ ಜತೆ ಮಾತಾಡೋದು ತಪ್ಪಾ? ನಾನು ಪಕ್ಷ ಬಿಡುತ್ತೇನೆ ಎಂದಾದರೆ ಅವರು ಎನಾದ್ರೂ ಹೇಳಲು ಸಾಧ್ಯ. ಕ್ಷೇತ್ರದ ನೀರಾವರಿ ಯೋಜನೆ ಸಂಬಂಧ ಇತ್ತೀಚೆಗೆ ಡಿಕೆ ಶಿವಕುಮಾರ್ ಅವರನ್ನು ಭೇಟಿ ಆಗಿದ್ದೆ ಎಂದು ಸ್ಪಷ್ಟಪಡಿಸಿದರು.