DK Shivakumar: ಡಿಕೆಶಿ ನಿವಾಸದಲ್ಲಿ 50-60 ಶಾಸಕರ ಸಭೆ; ಏನಂದರು ಬೆಂಬಲಿಗರು?
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆರಂಭಕ್ಕೂ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಅವರ ಆಪ್ತ ಶಾಸಕರು ಭಾನುವಾರ ಸಂಜೆ ಸಭೆ ನಡೆಸಿದರು.
ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆರಂಭಕ್ಕೂ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಅವರ ಆಪ್ತ ಶಾಸಕರು ಭಾನುವಾರ ಸಂಜೆ ಸಭೆ ನಡೆಸಿದರು. ಇದರೊಂದಿಗೆ, ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ಪ್ರಬಲವಾಗುವುದು ಖಚಿತವಾಗಿದೆ. ಸಿಎಂ ಸ್ಥಾನಕ್ಕಾಗಿ ಬಲವಾಗಿ ಬೇಡಿಕೆ ಇಡುವಂತೆ ಡಿಕೆ ಶಿವಕುಮಾರ್ ಅವರ ಮೇಲೆ ಬೆಂಬಲಿಗರು ಒತ್ತಡ ಹಾಕಿದ್ದಾರೆ. ಸಿಎಂ ಸ್ಥಾನ ಹೊರತು ಬೇರೆ ಯಾವುದೇ ಹುದ್ದೆ ಸ್ವೀಕರಿಸಬೇಡಿ. ಸಿಎಂ ಸ್ಥಾನವೇ ನಿಮಗೆ ಸೂಕ್ತವಾದುದು ಎಂದು ಆಪ್ತ ಶಾಸಕರು ಒತ್ತಡ ಹೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಡಿಸಿಎಂ ಹುದ್ದೆ ಸೇರಿದಂತೆ ಯಾವುದೇ ಮಂತ್ರಿಗಿರಿಯೂ ಬೇಡ. ಸಿಎಂ ಸ್ಥಾನ ಸಿಗದಿದ್ರೆ ಮಂತ್ರಿ ಸ್ಥಾನದಿಂದಲೂ ದೂರವಿರಿ. ಸರ್ಕಾರದ ಭಾಗವಾಗಬೇಡಿ ಎಂದು ಆಪ್ತ ಶಾಸಕರು ಡಿಕೆಶಿಗೆ ತಿಳಿಸಿದ್ದಾರೆ. ಇದರೊಂದಿಗೆ ಸಿಎಂ ಸ್ಥಾನಕ್ಕೆ ಪೈಪೋಟಿ ಜೋರಾಗಿದೆ.
ಈ ಮಧ್ಯೆ, ಶಾಂಗ್ರಿಲಾ ಹೊಟೇಲ್ನಲ್ಲಿ ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಜೊತೆ ಎಐಸಿಸಿ ವೀಕ್ಷಕರಾಗಿ ನೇಮಕಗೊಂಡಿರುವ ಜಿತೇಂದ್ರ ಸಿಂಗ್, ಸುಶೀಲ್ ಕುಮಾರ್ ಶಿಂಧೆ, ದೀಪಕ್ ಬಬಾರಿಯಾ ಪ್ರತ್ಯೇಕ ಚರ್ಚೆ ನಡೆಸಿದರು. ಹೋಟೆಲ್‌ನ ಕೊಠಡಿಯಲ್ಲಿ ಪ್ರತ್ಯೇಕ ಚರ್ಚೆ ನಡೆಸಿದ ವೀಕ್ಷಕರು ನಂತರ ಶಾಸಕಾಂಗ ಪಕ್ಷದ ಸಭೆ ನಡೆದಿದರು.
ಇದಕ್ಕೂ ಮುನ್ನ ಡಿಕೆ ಶಿವಕುಮಾರ್ ಅವರು, ನೊಣವಿನಕೆರೆ ಅಜ್ಜಯ್ಯನ ಭೇಟಿ ಮಾಡಿದ್ದರು. ನಂತರ ತುಮಕೂರಿನ ಸಿದ್ಧಗಂಗಾ ಮಠಕ್ಕೂ ಭೇಟಿ ನೀಡಿದ್ದರು. ಎಲ್ಲಿ ಭಕ್ತಿ ಇದೆಯೋ ಅಲ್ಲಿ ಭಗವಂತ ಇದ್ದಾನೆ. ನಾನು ನಂಬಿರುವ ಶಕ್ತಿ ನನಗೆ ಮಾರ್ಗದರ್ಶನ ಕೊಟ್ಟಿದೆ ಎಂದು ಅವರು ಹೇಳಿದ್ದರು. ನಂತರ ವಾಪಸಾಗಿ ಸದಾಶಿವನಗರದ ನಿವಾಸದಲ್ಲಿ ಸಭೆ ನಡೆಸಿದ್ದಾರೆ. ಆ ನಂತರ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಿದ್ದಾರೆ.
ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:33 pm, Sun, 14 May 23