ಅಹಂಕಾರಿ ಸಚಿವರಿಂದ ಸ್ವಾಭಿಮಾನಕ್ಕೆ ಧಕ್ಕೆ; ಸಿದ್ದರಾಮಯ್ಯ ಬಳಿ ರಾಜೀನಾಮೆ ಬೆದರಿಕೆ ಹಾಕಿದ ಬಿಆರ್ ಪಾಟೀಲ್
ಸ್ವಾಭಿಮಾನ ಇಲ್ಲದಿದ್ದರೆ ರಾಜೀನಾಮೆ ನೀಡಿ ಹೋಗುತ್ತೇನೆ. ಸಚಿವರು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಸಿದ್ದರಾಮಯ್ಯ ಎದುರು ಬಿಆರ್ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ಅಹಂಕಾರದಿಂದ ವರ್ತಿಸುವ ಸಚಿವರಿಂದ ಸ್ವಾಭಿಮಾನಕ್ಕೆ ಧಕ್ಕೆಯಾದರೆ ರಾಜೀನಾಮೆ ನೀಡುವೆ ಎಂದು ಕಾಂಗ್ರೆಸ್ ಪಕ್ಷದ ಆಳಂದ ಶಾಸಕ ಬಿಆರ್ ಪಾಟೀಲ್ (BR Patil) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಬಳಿ ಹೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗುರುವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (Congress CLP Meeting) ಸಭೆಯಲ್ಲಿ ಪಾಟೀಲ್ ಅವರು ಮುಖ್ಯಮಂತ್ರಿಗಳ ಬಳಿಯೇ ಅಸಮಾಧಾನ ತೋಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಸ್ವಾಭಿಮಾನ ಇಲ್ಲದಿದ್ದರೆ ರಾಜೀನಾಮೆ ನೀಡಿ ಹೋಗುತ್ತೇನೆ. ಸಚಿವರು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.
ಪಾಟೀಲ್ ಹಾಗೂ ಇತರೆ ಶಾಸಕರು ಸಿಎಲ್‌ಪಿ ಸಭೆ ಕರೆಯುವಂತೆ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ ಅಸಮಾಧಾನ ವ್ಯಕ್ತಪಡಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲವನ್ನೂ ನಿಯಂತ್ರಿಸುತ್ತಿದ್ದಾರೆ. ತಮ್ಮ ಮೇಲೆ ಮಾತಿಗೆ ಕಡಿವಾಣ ಹಾಕಿದ್ದಾರೆ ಎಂದು ಅವರು ಅಳಲುತೋಡಿಕೊಂಡಿದ್ದಾರೆ.
ತಮಗೆ ಪತ್ರ ಬರೆಯುವ ಅಗತ್ಯವೇನಿತ್ತು ಎಂದು ಸಿದ್ದರಾಮಯ್ಯ ಪ್ರಶ್ನಿಸಿದಾಗ, ಪಾಟೀಲ್ ತಮ್ಮ ಅಭಿಪ್ರಾಯವನ್ನು ಮಂಡಿಸಿದರು ಎಂದು ಮೂಲಗಳು ತಿಳಿಸಿವೆ. ನಮ್ಮಲ್ಲಿ ‘ಆಂತರಿಕ ಪ್ರಜಾಪ್ರಭುತ್ವ’ವಿದೆ ಎಂದು ಅವರು ಹೇಳಿದ್ದಾರೆ. ಪತ್ರ ಸೋರಿಕೆಯಾಗಲು ಕಾರಣವೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕರು, ಸೋರಿಕೆಗೆ ನಾನು ಹೊಣೆಯಲ್ಲ, ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಪಾಟೀಲ್ ಅವರಿಗೆ ಶಾಸಕರಾದ ವಿನಯ್ ಕುಲಕರ್ಣಿ, ಸಿಎಸ್ ನಾಡಗೌಡ, ಹಮಪನಗೌಡ ಬಾದರ್ಲಿ, ಯಶವಂತರಾಯಗೌಡ ಪಾಟೀಲ್ ಮತ್ತಿತರರ ಬೆಂಬಲ ಸೂಚಿಸಿದ್ದರು.
ಈ ಮಧ್ಯೆ, ಪಾಟೀಲ್ ಅವರು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಲಬುರಗಿ ಜಿಲ್ಲೆಯಲ್ಲಿ ನಿಯೋಜಿಸಿರುವ ಅಧಿಕಾರಿಗಳ ವಿರುದ್ಧವೂ ದೂರು ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಶಾಸಕರ ಅಸಮಾಧಾನದ ಪತ್ರ ಹರಿದು ಹಾಕಿದ ಸಿದ್ದರಾಮಯ್ಯ, ಕಿಚಾಯಿಸಿದ ಬಿಜೆಪಿ
ಆದರೆ, ಪಾಟೀಲ್ ರಾಜೀನಾಮೆ ಬೆದರಿಕೆ ಹಾಕಿದ್ದಾರೆ ಎಂಬ ವರದಿಗಳನ್ನು ಗೃಹ ಸಚಿವ ಜಿ. ಪರಮೇಶ್ವರ ಅಲ್ಲಗಳೆದಿದ್ದಾರೆ. ಅಂಥದ್ದೇನೂ ನಡೆದಿಲ್ಲ. ಪಾಟೀಲ್ ಅವರು ಸಭೆಯಿಂದ ಹೊರಗೆ ಅಥವಾ ಖಾಸಗಿಯಾಗಿ ಯಾರಿಗಾದರೂ ಏನಾದರೂ ಹೇಳಿದ್ದಾರೋ ನನಗೆ ಗೊತ್ತಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ವೈರಲ್ ಆಗಿತ್ತು ಬಿಆರ್ ಪಾಟೀಲ್ ಪತ್ರ
ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಶಾಸಕರ ಸಹಿಯುಳ್ಳ, ಬಿಆರ್ ಪಾಟೀಲ್ ಬರೆದಿದ್ದು ಎನ್ನಲಾದ ಪತ್ರವೊಂದು ಕೆಲವು ದಿನಗಳ ಹಿಂದೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ, ಅದು ನಕಲಿ ಎಂದು ಪಾಟೀಲ್ ಸ್ಪಷ್ಟನೆ ನೀಡಿದ್ದರು. ನಂತರ ಈ ಪ್ರಕರಣಕ್ಕೆ ತೇಪೆಹಚ್ಚುವ ಕೆಲಸವನ್ನು ಕಾಂಗ್ರೆಸ್ ಮಾಡಿತ್ತು.
ಇದನ್ನೂ ಓದಿ: Congress CLP Meeting: ಬಸವರಾಜ ರಾಯರೆಡ್ಡಿಯ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಸಿಎಂ ಸಿದ್ದರಾಮಯ್ಯ
ಪಕ್ಷದ ಆಂತರಿಕ ಭಿನ್ನಾಭಿಪ್ರಾಯ ಹೆಚ್ಚಾಗಿರುವ ಬೆನ್ನಲ್ಲೇ, ಆಗಸ್ಟ್ 2 ರಂದು ಎಲ್ಲಾ ಸಚಿವರು ದೆಹಲಿಗೆ ಬರುವಂತೆ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:12 pm, Fri, 28 July 23