ಸಿದ್ದರಾಮಯ್ಯ ಬಸ್, ಡಿಕೆ ಶಿವಕುಮಾರ್​​ ಬ್ರೇಕ್ ಮತ್ತು ಇತರೇ ಕೈ ಕಥೆಗಳು..!

| Updated By: ವಿವೇಕ ಬಿರಾದಾರ

Updated on: Oct 22, 2022 | 7:51 PM

ಸಿದ್ದರಾಮಯ್ಯ ನೇತೃತ್ವದಲ್ಲಿ ಬಸ್ ಯಾತ್ರೆ ಮಾಡಿ ಪಾಂಚಜನ್ಯ ಊದುವ ಸಿದ್ದತೆಗಳು ಸಿದ್ದರಾಮಯ್ಯ ಬಣದಲ್ಲಿ ಆಗಲೇ ಸಿದ್ದವಾಗಿಬಿಟ್ಟಿದೆ.

ಸಿದ್ದರಾಮಯ್ಯ ಬಸ್, ಡಿಕೆ ಶಿವಕುಮಾರ್​​ ಬ್ರೇಕ್ ಮತ್ತು ಇತರೇ ಕೈ ಕಥೆಗಳು..!
ಸಿದ್ದರಾಮಯ್ಯ, ಡಿಕೆ ಶಿವಕುಮಾರ್
Follow us on

ಬೇಕಾದರೆ ಬೆರೆತು ನಡೆ, ಸಾಕಾದರೆ ಸರಿದು ನಡೆ, ಎರಡೂ ಬೇಡವಾದರೆ ಸುಮ್ಮನೆ ನಡೆ ಹೀಗೊಂದು ಮಾತು ಚಾಲ್ತಿಯಲ್ಲಿದೆ. ವಿರೋಧ ಪಕ್ಷವಾಗಿ ಜನರೊಂದಿಗೆ ಬೆರೆತು ನಡೆಯುವ ಕೆಲಸವನ್ನಂತೂ ಕಾಂಗ್ರೆಸ್ ತುಂಬು ಮನಸ್ಸಿನಿಂದ ಮಾಡುತ್ತಿದೆ. ಕಳೆದ ಹಲವು ತಿಂಗಳುಗಳಿಂದ ಸಾಲು ಸಾಲು ಸಂಘಟಿತ ಕಾರ್ಯಕ್ರಮಗಳು ಕಾಂಗ್ರೆಸ್ ಪಕ್ಷವನ್ನು ಜೀವಂತವಾಗಿಟ್ಟಿದೆ. ಬೇರೆ ರಾಜ್ಯಗಳಷ್ಟು ಕಾಂಗ್ರೆಸ್ ಕರ್ನಾಟಕದಲ್ಲಿ ದುರ್ಬಲವಾಗಿಲ್ಲ ಎನ್ನುವ ಉತ್ಸಾಹದೊಂದಿಗೇ ಭಾರತ್ ಜೊಡೋ ಯಾತ್ರೆಯಲ್ಲಿ ರಾಹುಲ್​ ಗಾಂಧಿ ಮೈಕೈ ಕೊಡವಿ ಹೆಜ್ಜೆ ಹಾಕಿದರು. ಭಾರತ್ ಜೋಡೋ ಯಾತ್ರೆಯ ಪ್ರತಿ ದಿನವನ್ನೂ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಸಂಬಂಧವನ್ನು ಜೋಡಿಸುವ ಸಂದರ್ಭವನ್ನಾಗಿ ರಾಹುಲ್​ ಬಳಸಿಕೊಂಡರು. ರಾಹುಲ್​ ತಲೆಯಲ್ಲಿ ಸಿದ್ದು ಡಿಕೆಶಿ ನಡುವಿನ ಸಮರದ ಮ್ಯಾಟರ್ ಕರಿಶಾಹಿಯಲ್ಲಿ ಛಾಪೊತ್ತಿದ್ದಂತೆ ಕಾಣುತ್ತಿದೆ- ಹೀಗಾಗಿ ಸಿದ್ದರಾಮಯ್ಯ ಡಿಕೆಶಿ ಕೈಯ್ಯನ್ನು ಜೊತೆ ಜೊತೆಯಾಗಿ ಹಿಡಿದುಕೊಂಡೇ ಬಳ್ಳಾರಿ ದಾಟಿದ ರಾಹುಲ್​ ಗಾಂಧಿ ಗುರಿ ಕಾಶ್ಮೀರದ ಕಡೆಗಿದೆ.

ಭಾರತವನ್ನು ಜೋಡಿಸುವ ಗುರಿಯೊಂದಿಗೆ ನಡೆಯುತ್ತಿರುವ ರಾಹುಲ್​ ಗಾಂಧಿ ಹಿಮಾಚಲಪ್ರದೇಶ, ಗುಜರಾತ್ ಚುನಾವಣೆಗಳನ್ನು ತ್ಯಾಗ ಮಾಡುತ್ತಿದ್ದಾರೆ. ದೊಡ್ಡ ಕನಸಿನೊಂದಿಗೆ ಹೊರಟ ರಾಹುಲ್​ ಎರಡು ರಾಜ್ಯಗಳ ಚುನಾವಣೆಯ ಸಿದ್ದತೆಗಳಿಂದಲೇ ದೂರವೇ ಉಳಿತಿದ್ದಾರೆ ಎನ್ನುವುದು ಚುನಾವಣಾ ರಾಜಕೀಯದ ವ್ಯಂಗ್ಯದಂತೆ ಕಾಣುತ್ತಿದೆ.

ರಾಹುಲ್​ ಗಾಂಧಿ ಸಿದ್ದರಾಮಯ್ಯ- ಡಿ.ಕೆ ಶಿವಕುಮಾರ್ ಕೈ ಜೋಡಿಸಿದ್ದು ಸತ್ಯ, ಆದರೆ ಒಂದು ಬಸ್ ಒಂದು ಸ್ಟೇರಿಂಗ್ ಮತ್ತೊಂದು ಬ್ರೇಕ್ ಸಿದ್ದರಾಮಯ್ಯ ಡಿ.ಕೆ ಶಿವಕುಮಾರ್ ಜೋಡಿ ಕೈಗಳು ಮತ್ತೆ ದೂರವಾಗಿ ಬಿಡುತ್ತವಾ ಎಂಬ ಸಂಶಯ ಹುಟ್ಟು ಹಾಕಿದೆ. ಭಾರತ್ ಜೊಡೋ ಯಾತ್ರೆಯ ಬಳಿಕ ಮುಂದೇನು ಎಂಬ ಪ್ರಶ್ನೆ ಕಾಂಗ್ರೆಸ್ ನಾಯಕರ ಮುಂದೆ ಬಂದಾಗ ಅದರಲ್ಲೂ ಸಿದ್ದರಾಮಯ್ಯ ಬಣ ಒಂದು ಹೆಜ್ಜೆ ಮುಂದೆ ಯೋಚನೆ ಮಾಡಿತ್ತು. ಸಿದ್ದರಾಮಯ್ಯ ನೇತೃತ್ವದಲ್ಲಿ ಬಸ್ ಯಾತ್ರೆ ಮಾಡಿ ಪಾಂಚಜನ್ಯ ಊದುವ ಸಿದ್ದತೆಗಳು ಸಿದ್ದರಾಮಯ್ಯ ಬಣದಲ್ಲಿ ಆಗಲೇ ಸಿದ್ದವಾಗಿಬಿಟ್ಟಿದೆ. ಸಿದ್ದರಾಮಯ್ಯ ಸ್ಟೇರಿಂಗ್ ಹಿಡಿದು ಕೂತರೆ ಸಮಸ್ಯೆ ಇಲ್ಲ, ಆದರೆ ಸಿದ್ದರಾಮಯ್ಯ ಒಬ್ಬರೇ ಸ್ಟೇರಿಂಗ್ ಹಿಡಿದರೆ ಕಷ್ಟ ಅಲ್ಲವಾ? ಪಕ್ಷ ನಡೆಸುತ್ತಿರುವ ಇನ್ನೊಬ್ಬ ಚಾಣಾಕ್ಷ ಡ್ರೈವರ್​ ಡಿ.ಕೆ ಶಿವಕುಮಾರ್​ಗೂ ತಾನೂ ಸ್ಟೇರಿಂಗ್ ಹಿಡಿಯಬೇಕು ಎಂಬ ಹೆಬ್ಬಯಕೆ ಹುಟ್ಟಿಕೊಂಡಿದೆ.

ಚುನಾವಣೆ ಮುಗಿದ ಬಳಿಕ ಪಕ್ಷದ ಬಸ್ ಓಡಿಸಿದ್ದು ಯಾರು ಎಂಬ ಪ್ರಶ್ನೆ ಬಂದಾಗ ಸಿದ್ದರಾಮಯ್ಯ ಒಬ್ಬರೇ ಅನ್ನುವುದಕ್ಕಾಗುವುದಿಲ್ಲ. ಹೀಗಾಗಿ ಸಿದ್ದು ಸ್ಟೇರಿಂಗ್ ಹಿಡಿಯುವ ಸ್ಪೀಡ್​ಗೆ ಡಿ.ಕೆ ಶಿವಕುಮಾರ್ ಬ್ರೇಕ್ ಒತ್ತುವ ಕೆಲಸವನ್ನೂ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಬಸ್ ಯಾತ್ರೆ ಮಾಡಲಿ, ಆದರೆ ತಮ್ಮದೂ ಒಂದು ಬಸ್ ರೆಡಿ ಇದೆ ಅಂತ ಡಿ.ಕೆ ಶಿವಕುಮಾರ್ ಎಐಸಿಸಿ ಮುಂದೆ ವರದಿ ವಾಚನ ಮಾಡಿದ್ದಾರೆ. ಅಲ್ಲಿಗೆ ಒಂದು ಸಂಗತಿ ಸ್ಪಷ್ಟ, ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಇಬ್ಬರೂ ಸ್ಟೇರಿಂಗ್ ಹಿಡಿಯಲೇಬೇಕು ಎನ್ನೋದು.

ಹಳೆ ಮೈಸೂರು ಭಾಗವನ್ನು ತೆಗೆದುಕೊಂಡರೆ ಸಿದ್ದರಾಮಯ್ಯ ಡಿ.ಕೆ ಶಿವಕುಮಾರ್ ಇಬ್ಬರಿಗೂ ಅಲುಗಾಡಿಸಲಾಗದ ಒಂದು ಹಿಡಿತವಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಸಿದ್ದರಾಮಯ್ಯಗೆ ಇರುವಷ್ಟು ಜನ ಬೆಂಬಲ ಡಿ. ಕೆ ಶಿವಕುಮಾರ್​​ಗೆ ಇಲ್ಲ. ಮೊನ್ನೆ ಬಳ್ಳಾರಿಯಲ್ಲಿ ಭಾರತ್ ಜೋಡೋ ಸಮಾವೇಶ ನಡೆದಾಗಲೂ ರಾಹುಲ್​ ಗಾಂಧಿ ನೋಡಲು ಬಂದ ಜನರಿಗಿಂತ ಸಿದ್ದರಾಮಯ್ಯನವರನ್ನು ನೋಡಲು ಹೆಗಲ ಮೇಲೆ ಕುರಿ-ಕಂಬಳಿ ಹೊತ್ತು ಬಂದವರೇ ಜಾಸ್ತಿ. ಹೀಗಾಗಿ ಸಹಜವಾಗಿಯೇ ಎರಡು ಬಸ್ ಯಾತ್ರೆಗಳು ಸಿದ್ದರಾಮಯ್ಯ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಪ್ರತ್ಯೇಕವಾಗಿ ನಡೆದರೆ ಒಂದು ಬಸ್ ಹಳೆ ಮೈಸೂರು ಭಾಗದಿಂದ ಹೊರಡಲಿ- ಇನ್ನೊಂದು ಬಸ್ ಉತ್ತರ ಕರ್ನಾಟಕ ಭಾಗದಲ್ಲಿ ಸಂಚಾರ ಶುರು ಮಾಡಲಿ ಎಂಬ ಸಲಹೆಗಳು ಕಾಂಗ್ರೆಸ್ ತಿಂಕ್ ಟ್ಯಾಂಕ್ ಪಾಳಯದಿಂದ ಕೇಳಿ ಬಂದಿದೆ.

ಡಿ. ಕೆ ಶಿವಕುಮಾರ್ ಹಳೆ ಮೈಸೂರು ಭಾಗದ ಜನರನ್ನು ತಲುಪಿದರೆ ಒಕ್ಕಲಿಗ ಸಮುದಾಯ ಕಾಂಗ್ರೆಸ್ ಪರ ಗಟ್ಟಿಯಾಗಿ ನಿಲ್ಲುವಂತೆ ಮಾಡಬಹುದು. ಸಿದ್ದರಾಮಯ್ಯ ಹೈದ್ರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ ಭಾಗ ತಲುಪಿದರೆ ಅಹಿಂದ ಮತಗಳ ಜೊತೆಗೆ ಬಿಜೆಪಿಗೆ ಪ್ರಬಲ ಕೌಂಟರ್ ಕೊಡಬಹುದು ಎಂಬ ಚರ್ಚೆಗಳು ನಡೆದಿವೆ. ಕರಾವಳಿ ಭಾಗದಲ್ಲಿ ಹಿಂದುತ್ವ ಫೌಜ್​​ನ ಅಬ್ಬರ ಎದುರಿಸಲು ಕಾಂಗ್ರೆಸ್ ತಡಬಡಾಯಿಸಿಬಿಡುತ್ತದೆ. ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ಹಿಂದುತ್ವ ಫೌಜ್​​ನ ಪ್ರಭಾವಳಿ ಅಷ್ಟಾಗಿ ಕಾಂಗ್ರೆಸ್​ಗೆ ಅಡ್ಡಿ ತರುವುದಿಲ್ಲ. ಸಿದ್ದರಾಮಯ್ಯ ಒಂದೊಂದು ಕ್ಷೇತ್ರದಲ್ಲಿ ರೌಂಡ್ ಹೊಡೆದರೆ ಪ್ರತಿ ಕ್ಷೇತ್ರದಲ್ಲೂ ಕನಿಷ್ಟ ಹತ್ತಾರು ಸಾವಿರ ಮತಗಳನ್ನು ತಕ್ಷಣಕ್ಕೆ ಸ್ವಿಂಗ್ ಮಾಡಬಹುದು ಎಂಬುದು ಮೇಲ್ನೋಟದ ಮಾತುಗಳು.

ಆದರೆ ಸಿದ್ದರಾಮಯ್ಯಗೆ ಮಾತ್ರ ಕ್ರೆಡಿಟ್ ಕೊಟ್ಟರೆ ಬಂಡೆಯ ಕನಸು ನುಚ್ಚು ನೂರಾಗುವುದಿಲ್ಲವೇ? ಹೀಗಾಗಿ ಸಿದ್ದರಾಮಯ್ಯ ಮಾದರಿಯಲ್ಲೇ ಬಸ್ ಯಾತ್ರೆ ಮಾಡುವುದಕ್ಕೆ ಡಿ.ಕೆ ಶಿವಕುಮಾರ್ ಕೂಡ ಸಿದ್ದತೆ ಮಾಡಿಕೊಂಡಿದ್ದಾರೆ. ಬಿಜೆಪಿ ಪಕ್ಷ ಹೀಗೆ ಪ್ರತ್ಯೇಕ ತಂಡ ತಂಡವಾಗಿ ಪ್ರವಾಸ ಮಾಡಿದರೆ ಅದಕ್ಕೊಂದು ಬೇರೆಯದೇ ಸಂದೇಶವಿರುತ್ತಿತ್ತು. ಆದರೆ ಸಿದ್ದರಾಮಯ್ಯ ಡಿ. ಕೆ ಶಿವಕುಮಾರ್ ಪ್ರತ್ಯೇಕ ಯಾತ್ರೆಗಳು ಒಡೆದ ಮನೆ ಎಂಬ ಮಾತೇ ಕೇಳುವಂತೆ ಮಾಡಬಹುದು ಅನ್ನುವ ಆತಂಕವೂ ಕಾಂಗ್ರೇಸಿಗರನ್ನು ಕಾಡುತ್ತಿದೆ. ಕಾಂಗ್ರೆಸ್ ಪಕ್ಷ ಎರಡು ಸ್ಟೇರಿಂಗ್, ಎರಡು ಡೋರ್​ಗಳ ಬಸ್ಸು ಅನ್ನುವ ಲೇವಡಿ ಬಿಜೆಪಿ ಪಾಳಯದಿಂದ ಶುರುವಾಗಬಹುದು. ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರು ಒಟ್ಟಾಗಿ ಹೊರಟರೆ 224 ಕ್ಷೇತ್ರಗಳನ್ನೂ ರೀಚ್ ಆಗುವುದು ಕಷ್ಟ ಸಾಧ್ಯ. ಬೇರೆ ಬೇರೆಯಾಗಿ ಹೊರಟರೆ ಕಾಂಗ್ರೆಸ್ ಒಂದು ಮೂರು ಬಾಗಿಲು ಎಂಬ ಟೀಕೆಗೂ ಗುರಿಯಾಗಬೇಕಾಗಬಹುದು. ಇಂಥ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಬಸ್ ಯಾತ್ರೆಗಳು ಎಲ್ಲಿಗೆ ತಲುಪುತ್ತವೋ, ಯಾರನ್ನು ಅಧಿಕಾರಕ್ಕೆ ತರುತ್ತವೆಯೋ. ಈ ಮಧ್ಯೆ- ಬೇಕಾದರೆ ಬೆರೆತು ನಡೆ, ಸಾಕಾದರೆ ಸರಿದು ನಡೆ, ಎರಡೂ ಬೇಡವಾದರೆ ಸುಮ್ಮನೆ ನಡೆ- ಎಂಬ ಮಾತು ಮತ್ತೆ ನೆನಪಾಗುತ್ತಿದೆ.

ವರದಿ – ಪ್ರಸನ್ನ ಗಾಂವ್ಕರ್, ಟಿವಿ9, ಬೆಂಗಳೂರು

Published On - 7:46 pm, Sat, 22 October 22