ಸಂಜೆ ಒಳಗಾಗಿ ಕೆಎಸ್ ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ, ಕೊಲೆ ಪ್ರಕರಣ ದಾಖಲಿಸಿ, ವಜಾಗೊಳಿಸಿ: ಕಾಂಗ್ರೆಸ್ ಆಗ್ರಹ

| Updated By: ganapathi bhat

Updated on: Apr 12, 2022 | 4:36 PM

ಮುಖ್ಯಮಂತ್ರಿಗಳು ಇವರ ವಿರುದ್ಧ ಸಂಜೆ ಒಳಗಾಗಿ ಈಶ್ವರಪ್ಪನ ವಿರುದ್ಧ ಭ್ರಷ್ಟಾಚಾರ, ಕೊಲೆ ಪ್ರಕರಣ ದಾಖಲಿಸಿ, ಅವರನ್ನು ವಜಾಗೊಳಿಸಿ, ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಿದ್ದರೆ ನಾವು ಮುಖ್ಯಮಂತ್ರಿಗಳಿಗೆ ಘೆರಾವ್ ಹಾಕಿ ಅವರ ರಾಜೀನಾಮೆಗೆ ಆಗ್ರಹಿಸುತ್ತೇವೆ ಎಂಬ ಬಗ್ಗೆ ಹೇಳಲಾಗಿದೆ.

ಸಂಜೆ ಒಳಗಾಗಿ ಕೆಎಸ್ ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ, ಕೊಲೆ ಪ್ರಕರಣ ದಾಖಲಿಸಿ, ವಜಾಗೊಳಿಸಿ: ಕಾಂಗ್ರೆಸ್ ಆಗ್ರಹ
ಕೆ.ಎಸ್.ಈಶ್ವರಪ್ಪ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಭ್ರಷ್ಟಾಚಾರ ಬಸವರಾಜ ಬೊಮ್ಮಾಯಿ ಅವರ ಸರ್ಕಾರವನ್ನು ಸಂಪೂರ್ಣವಾಗಿ ಆವರಿಸಿದೆ. ಬಿಜೆಪಿ ಸರ್ಕಾರದ ಅಡಿಯಿಂದ ಮುಡಿವರೆಗೂ ಭ್ರಷ್ಟಾಚಾರದಲ್ಲಿ ಮುಳುಗಿದೆ. ಬಿಜೆಪಿ ಸರ್ಕಾರದ ಎಲ್ಲ ವಿಭಾಗಗಳಲ್ಲಿ ಭ್ರಷ್ಟಾಚಾರ ಆರೋಪ ಕೇಳಿಬರುತ್ತಿದೆ. 40% ಕಮಿಷನ್ ಆರೋಪ ಕೇವಲ ಒಬ್ಬ ಸಚಿವರ ವಿರುದ್ಧ ಕೇಳಿ ಬಂದಿಲ್ಲ. ಇಡೀ ರಾಜ್ಯ ಸರ್ಕಾರದ ವಿರುದ್ಧವೇ ಕೇಳಿ ಬಂದಿರುವ ಆರೋಪ. ಅಧಿಕಾರದಲ್ಲಿ ಕೂತು ರಾಜ್ಯವನ್ನು ಲೂಟಿ ಮಾಡುತ್ತಿರುವ ಬಿಜೆಪಿ ಸರ್ಕಾರ ತನ್ನ ಕಾರ್ಯಕರ್ತನನ್ನು ಬಿಡದಿರುವ ಮಟ್ಟಿಗೆ ಭ್ರಷ್ಟಾಚಾರ ಮಾಡುತ್ತಿದೆ. ಸಂತೋಷ್ ಪಾಟೀಲ್ ಅವರ ಆರೋಪ ಇದಕ್ಕೆ ಸಾಕ್ಷಿ. ಅವರು ಅಧಿಕೃತ ಪತ್ರದ ಮೂಲಕ ಸಚಿವ ಈಶ್ವರಪ್ಪ ಅವರು ತಮ್ಮ ಬಳಿ 40% ಕಮಿಷನ್ ಕೇಳುತ್ತಿದ್ದಾರೆ ಎಂದು ಆರೋಪ ಮಾಡಿದ್ದರು ಎಂದು ಉಲ್ಲೇಖಿಸಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿನ ವಿಚಾರವಾಗಿ ಕಾಂಗ್ರೆಸ್ ನಾಯಕರು ಮಾಧ್ಯಮ ಪ್ರತಿಕ್ರಿಯೆ ಹೊರಡಿಸಿದ್ದಾರೆ.

ಬೊಮ್ಮಾಯಿ ಅವರ ಭ್ರಷ್ಟ ಸರ್ಕಾರ ತನ್ನ ಕಾರ್ಯಕರ್ತರನ್ನೇ ಬಿಟ್ಟಿಲ್ಲ ಎಂದಾದರೆ ಜನಸಾಮಾನ್ಯರನ್ನು ಇನ್ಯಾವ ಮಟ್ಟಿಗೆ ಲೂಟಿ ಮಾಡುತ್ತಿರಬಹುದು. ಸರ್ಕಾರ ವಿರುದ್ಧ 40% ಕಮಿಷನ್ ಆರೋಪ ಕೇಳಿ ಬಂದಾಗ ಬೊಮ್ಮಾಯಿ ಅವರು ಮೌನಕ್ಕೆ ಶರಣಾದರು, ಅಮಿತ್ ಶಾ ಅವರು ಕ್ರಮ ಕೈಗೊಳ್ಳಲು ನಿರಾಕರಿಸಿದರು. ಪ್ರಧಾನ ಮಂತ್ರಿಗಳಂತೂ ಯಾವುದೇ ಪ್ರತಿಕ್ರಿಯೆ ನೀಡದ ಪರಿಣಾಮ ಅಂತಿಮವಾಗಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆಗೆ ಶರಣಾಗಿದ್ದು, ತನ್ನ ಸಾವಿಗೆ ಸಚಿವರೇ ಕಾರಣ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಇದೊಂದು ಭ್ರಷ್ಟಾಚಾರ, ಕೊಲೆ ಪ್ರಕರಣವಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರ ವಿರುದ್ಧ ಐಪಿಸಿ ಸೆಕ್ಷನ್ 302 ಅಡಿಯಲ್ಲಿ ಕೊಲೆ ಪ್ರಕರಣ, ಭ್ರಷ್ಟಾಚಾರ ಪ್ರಕರಣ ದಾಖಲಿಸಬೇಕು. ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಕೂಡಲೇ ಅವರನ್ನು ಬಂಧಿಸಬೇಕು. ಮುಖ್ಯಮಂತ್ರಿಗಳು ಅಗತ್ಯ ಕ್ರಮ ಕೈಗೊಳ್ಳದಿದ್ದರೆ, ಅವರೂ ಕೂಡ ಈ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂಬುದು ಸಾಬೀತಾಗುತ್ತದೆ. ಸದಾ ನಾ ಖಾವೂಂಗಾ ನಾ ಖಾನೇದೂಂಗಾ ಎಂದು ಹೇಳುವ ಪ್ರಧಾನ ಮೋದಿಗಳು ಅವರ ಮೂಗಿನ ಕೆಳಗೆ ರಾಜ್ಯದಲ್ಲಿ ಖಾವೂಂಗಾ, ಖಿಲಾವೂಂಗಾ ನಡುತ್ತಿದ್ದರೂ ಅದಕ್ಕೆ ಪ್ರತಿಕ್ರಿಯಿಸುತ್ತಿಲ್ಲ.

ಬೊಮ್ಮಯಾ ಹಾಗೂ ಬಿಜೆಪಿ ಮುಂದೆ ಪರೀಕ್ಷೆ ಇದ್ದು, ಅವರ ನಡೆ ಏನು ಎಂಬುದು ಸಾಬೀತಾಗಲಿದೆ. ಕೇವಲ ಅಲ್ಪಸಂಖ್ಯಾತರ ವಿರುದ್ಧ ದಾಳಿ ಕೋಮು ಗಲಭೆಗಳ ಮೂಲಕ ಈ ವಿಚಾರಗಳನ್ನು ಮರೆಮಾಚುವ ಇವರ ಪ್ರಯತ್ನ ಬಹಿರಂಗವಾಗಲಿದೆ. ಮುಖ್ಯಮಂತ್ರಿಗಳು ಇವರ ವಿರುದ್ಧ ಸಂಜೆ ಒಳಗಾಗಿ ಈಶ್ವರಪ್ಪನ ವಿರುದ್ಧ ಭ್ರಷ್ಟಾಚಾರ, ಕೊಲೆ ಪ್ರಕರಣ ದಾಖಲಿಸಿ, ಅವರನ್ನು ವಜಾಗೊಳಿಸಿ, ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಿದ್ದರೆ ನಾವು ಮುಖ್ಯಮಂತ್ರಿಗಳಿಗೆ ಘೆರಾವ್ ಹಾಕಿ ಅವರ ರಾಜೀನಾಮೆಗೆ ಆಗ್ರಹಿಸುತ್ತೇವೆ ಎಂಬ ಬಗ್ಗೆ ಹೇಳಲಾಗಿದೆ.

ಕೂಡಲೇ ಬಂಧನವಾಗಿ, ಸಚಿವ ಸಂಪುಟದಿಂದ ವಜಾಗೊಳಿಸಬೇಕು: ವಿಧಾನಸಭೆ ವಿರೋಧ ಪಕ್ಷದ ನಾಯಕ

ಸಂತೋಷ್ ಪಾಟೀಲ್ ಬಿಜೆಪಿ ಕಾರ್ಯಕರ್ತ. ಇವರು ಗ್ರಾಮೀಣ ಅಭಿವೃದ್ಧಿ ಸಚಿವ ಈಶ್ವರಪ್ಪನವರ ಬಳಿ ರಸ್ತೆ ಕೆಲಸ ಪಡೆದಿದ್ದು, ಕಮಿಷನ್ ಕೂಡ ನೀಡಿರುತ್ತಾರೆ. ಈಶ್ವರಪ್ಪನವರು ಹೆಚ್ಚು ಕಮಿಷನ್ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಮಾಡಿದ್ದರು. ಈಗ ಸಂತೋಷ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ವಾಟ್ಸಪ್ ಸಂದೇಶದಲ್ಲಿ ತಮ್ಮ ಸಾವಿಗೆ ಸಚಿವ ಈಶ್ವರಪ್ಪನವರೇ ನೇರ ಹೊಣೆ ಎಂದು ಹೇಳಿದ್ದಾರೆ.

ಈ ರೀತಿ ನೇರ ಆರೋಪ ಮಾಡಿರುವುದು ಡೆತ್ ನೋಟ್ ಇದ್ದಂತೆ. ಹಿಂದೆ ಪೋಲೀಸ್ ಅಧಿಕಾರಿ ಗಣಪತಿ ಅವರ ಪ್ರಕರಣದಲ್ಲಿ ಆಗಿನ ಸಚಿವರಾಗಿದ್ದ ಕೆ.ಜೆ ಜಾರ್ಜ್ ಅವರು ರಾಜೀನಾಮೆ ನೀಡಿದ್ದರು. ಈಗ ಸಂತೋಷ್ ಪಾಟೀಲ್ ಅವರು ನೇರವಾಗಿ ಈಶ್ವರಪ್ಪ ಅವರೇ ಕಾರಣ ಎಂದು ಹೇಳಿದ್ದು, ಈ ಪ್ರಕರಣ ಐಪಿಸಿ ಸೆಕ್ಷನ್ 300 ಅಡಿಯಲ್ಲಿ ದಾಖಲಾಗಿ, ಐಪಿಸಿ ಸೆಕ್ಷನ್ 302 ಅಡಿಯಲ್ಲಿ ಶಿಕ್ಷೆ ಆಗಬೇಕು.

ಈಶ್ವರಪ್ಪ ಅವರ ವಿರುದ್ಧ ಸೆಕ್ಷನ್ 302 ಪ್ರಕರಣ ದಾಖಲಾಗಬೇಕು. ಕೂಡಲೇ ಬಂಧನವಾಗಿ, ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಮುಖ್ಯಮಂತ್ರಿ ಬೊಮ್ಮಾಯಿ ಅವರು ಈಶ್ವರಪ್ಪನವರು ಕೊಲೆ ಆರೋಪ ಹೊತ್ತಿರುವ ಹಿನ್ನೆಲೆಯಲ್ಲಿ ತಮ್ಮ ಸಚಿವ ಸಂಪುಟದಲ್ಲಿ ಮುಂದುವರಿಯಲು ಅವಕಾಶ ನೀಡಬಾರದು. ಇದೊಂದು ದೊಡ್ಡ ಅಪರಾಧ. ಇದಕ್ಕೆ ಜೀವಾವಧಿ ಶಿಕ್ಷೆ ಅಥವಾ ಮರಣದಂಡಣೆ ಶಿಕ್ಷೆ ನೀಡುವ ಅಪರಾಧವಾಗಿದೆ.

ಈಶ್ವರಪ್ಪನವರು ಮಾನಹಾನಿ ಪ್ರಕರಣ ದಾಖಲಿಸಿರುವುದಕ್ಕೂ ಇದಕ್ಕೂ ಸಂಬಂಧವಿಲ್ಲ. ಸತ್ತಿರುವ ವ್ಯಕ್ತಿ ತನ್ನ ಸಾವಿಗೆ ಈಶ್ವರಪ್ಪ ಕಾರಣ, ಅವರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ನೇರ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಇದಕ್ಕಿಂತ ದೊಡ್ಡ ಸಾಕ್ಷಿ ಮತ್ತೇನು ಬೇಕು? ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹ ವ್ಯಕ್ತಪಡಿಸಲಾಗಿದೆ.

ಸುರ್ಜೇವಾಲ ನೇತೃತ್ವದ ನಿಯೋಗದಿಂದ ನಾಳೆ ರಾಜ್ಯಪಾಲರ ಭೇಟಿ

ಸಂತೋಷ್ ಪಾಟೀಲ್ ಆತ್ಮಹತ್ಯೆ ಬಗ್ಗೆ ಸೂಕ್ತ ತನಿಖೆ ಆಗಬೇಕು. ಬಿಜೆಪಿ ಸರ್ಕಾರದಲ್ಲಿ ವಿಶೇಷವಾಗಿ ಗುತ್ತಿಗೆದಾರರು ಬೇಸತ್ತಿದ್ದಾರೆ. ಕರ್ನಾಟಕದ ಇತಿಹಾಸದಲ್ಲಿ ಎಂದೂ ಈ ರೀತಿ ಘಟನೆ ಆಗಿರಲಿಲ್ಲ. ಗುತ್ತಿಗೆದಾರರು ಪ್ರಧಾನಿ ನರೇಂದ್ರ ಮೋದಿಗೆ ದೂರು ನೀಡಿದ್ದರು. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಕಡಿವಾಣಕ್ಕೆ ಮುಂದಾಗಿಲ್ಲ. ಸಿಎಂ ದೆಹಲಿಗೆ ಬಂದಾಗ ನಾನು ಕೂಡ ಈ ಬಗ್ಗೆ ಅವರನ್ನು ಹೇಳಿದ್ದೆ. ಪ್ರಧಾನಿ ಮೋದಿ ಕಣ್ಣುತೆರೆದು ನೋಡಬೇಕು. ರಾಜ್ಯದಲ್ಲಿ ಇಷ್ಟೆಲ್ಲಾ ನಡೆದ್ರೂ ಜನ ಅವರಿಗೆ ಬೆಂಬಲಿಸುತ್ತಿದ್ದಾರೆ. ಇದು ನೋವಿನ ವಿಚಾರವಾಗಿದೆ ಎಂದು ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಗ್ಗೆ ಕಲಬುರಗಿಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ.

ಸಚಿವ ಈಶ್ವರಪ್ಪನನ್ನು ಸಂಪುಟದಿಂದ ವಜಾಕ್ಕೆ ಕಾಂಗ್ರೆಸ್‌ನಿಂದ ಒತ್ತಾಯ ಕೇಳಿಬಂದಿದೆ. ಈ ಸಂಬಂಧ ಕಾಂಗ್ರೆಸ್‌ ನಾಳೆ (ಏಪ್ರಿಲ್ 13) ಬೆಳಗ್ಗೆ 10 ಗಂಟೆಗೆ ರಾಜ್ಯಪಾಲರನ್ನು ಭೇಟಿಯಾಗಲಿದೆ. ರಾಜ್ಯ ಕಾಂಗ್ರೆಸ್ ಪಕ್ಷದ ಉಸ್ತುವಾರಿ ರಣದೀಪ್‌ ಸಿಂಗ್ ಸುರ್ಜೇವಾಲ ನೇತೃತ್ವದ ನಿಯೋಗದಿಂದ ನಾಳೆ ರಾಜ್ಯಪಾಲರ ಭೇಟಿ ಆಗಲಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಬಿ.ಕೆ.ಹರಿಪ್ರಸಾದ್‌ ಸೇರಿ ಹಲವು ನಾಯಕರು ನಿಯೋಗದಲ್ಲಿ ಭಾಗಿ ಆಗಲಿದ್ದಾರೆ.

ಇದನ್ನೂ ಓದಿ: Santosh Suicide: ಸಚಿವ ಈಶ್ವರಪ್ಪ ವಿರುದ್ಧ ಗುತ್ತಿಗೆದಾರ ಸಂತೋಷ್ ಲಂಚದ ಕುರಿತು ಮಾಡಿದ್ದ ಗಂಭೀರ ಆರೋಪಗಳ ವಿವರ ಇಲ್ಲಿದೆ

ಇದನ್ನೂ ಓದಿ: Santosh Suicide: ಈಶ್ವರಪ್ಪ ವಜಾ ಮಾಡದಿದ್ದರೆ ಸಿಎಂ ಮನೆಗೆ ಮುತ್ತಿಗೆ, ಕಾಂಗ್ರೆಸ್ ಎಚ್ಚರಿಕೆ

Published On - 4:12 pm, Tue, 12 April 22