ದೆಹಲಿ: ದೇಶದ ಹಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳಿಗೆ ರಾಜಕೀಯ ಪಕ್ಷಗಳು ಸಿದ್ಧತೆ ಮಾಡಿಕೊಳ್ಳುತ್ತಿವೆ. ಕಾಂಗ್ರೆಸ್ ಪಕ್ಷವು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ‘ಮೆಹಂಗಾಯ್ ಪರ್ ಹಲ್ಲಾ ಬೋಲ್ ರ್‍ಯಾಲಿ’ಯನ್ನು (ಬೆಲೆಏರಿಕೆ ವಿರುದ್ಧ ಯುದ್ಧ) ಭಾನುವಾರ ಆಯೋಜಿಸಿದೆ. ದೆಹಲಿಯ ರಾಮಲೀಲ ಮೈದಾನದಲ್ಲಿ ಬೃಹತ್ ಸಮಾವೇಶವೂ ನಡೆಯಲಿದೆ.
ಕಾಂಗ್ರೆಸ್ ಪಕ್ಷದ ಹಲವು ಪ್ರಧಾನ ಕಾರ್ಯದರ್ಶಿಗಳು, ಉನ್ನತ ನಾಯಕರು, ವಿವಿಧ ರಾಜ್ಯಗಳ ಉಸ್ತುವಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಎಐಸಿಸಿ ಪ್ರಧಾನ ಕಚೇರಿಯಿಂದ ರಾಮಲೀಲ ಮೈದಾನಕ್ಕೆ ಬಸ್ಗಳಲ್ಲಿ ತೆರಳಲಿದ್ದಾರೆ. ಸಮಾವೇಶವನ್ನು ಉದ್ದೇಶಿಸಿ ರಾಹುಲ್ ಗಾಂಧಿ ಅವರು ಭಾಷಣ ಮಾಡುವ ಸಾಧ್ಯತೆಯಿದೆ.
ರಾಮಲೀಲ ಮೈದಾನದಲ್ಲಿ ಕಾಂಗ್ರೆಸ್ ರ್‍ಯಾಲಿ ಹಿನ್ನೆಲೆಯಲ್ಲಿ ಪಕ್ಷ ಬಿಗಿ ಭದ್ರತೆ ಒದಗಿಸಲಾಗಿದೆ. ವಿವಿಧ ರಸ್ತೆಗಳಲ್ಲಿ ಸಂಚಾರ ಬದಲಾವಣೆ ಕುರಿತು ದೆಹಲಿ ಪೊಲೀಸರು ಟ್ವಿಟರ್ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯ ಪೊಲೀಸರೊಂದಿಗೆ ಪ್ಯಾರಾ ಮಿಲಿಟರಿ ದಳಗಳನ್ನೂ ಭದ್ರತೆಗೆ ನಿಯೋಜಿಸಲಾಗಿದೆ. ಮೈದಾನದ ಪ್ರವೇಶ ದ್ವಾರದಲ್ಲಿ ಮೆಟಲ್ ಡಿಟೆಕ್ಟರ್ಗಳನ್ನು ಅಳವಡಿಸಲಾಗಿದೆ.
राजा मित्रों की कमाई में व्यस्त
प्रजा महंगाई से त्रस्तआज, लोगों को ज़रूरत का सामान खरीदने से पहले भी दस बार सोचना पड़ रहा है। इन तकलीफों के लिए सिर्फ प्रधानमंत्री ज़िम्मेदार हैं।
हम महंगाई के खिलाफ आवाज़ें जोड़ते जाएंगे, राजा को सुनना ही पड़ेगा।#महंगाई_पर_हल्ला_बोल_रैली
— Rahul Gandhi (@RahulGandhi) September 4, 2022
ಬೆಲೆಏರಿಕೆ ವಿರುದ್ಧ ಯುದ್ಧ
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಾತನಾಡಿ, ಹಣದುಬ್ಬರ ಮತ್ತು ಬೆಲೆಏರಿಕೆ ವಿರುದ್ಧ ಪಕ್ಷವು ನಿರಂತರ ಹೋರಾಟ ನಡೆಸಲಿದೆ. ಸೆಪ್ಟೆಂಬರ್ 7ರಿಂದ ಕಾಂಗ್ರೆಸ್ ಪಕ್ಷವು ಭಾರತ್ ಜೋಡೋ ಯಾತ್ರಾ ಆರಂಭಿಸಲಿದ್ದು, ಪಕ್ಷದ ಹಲವು ಸಂಸದರು ಮತ್ತು ಸ್ಥಳೀಯ ನಾಯಕರು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯಾತ್ರೆಯು ಸಂಚರಿಸಲಿದೆ ಎಂದು ಅವರು ತಿಳಿಸಿದ್ದಾರೆ.
ವಿವಿಧ ರಾಜ್ಯಗಳಲ್ಲಿ ಸರ್ಕಾರಗಳನ್ನು ಕೆಡವುವ, ಶಾಸಕರನ್ನು ಖರೀದಿಸುವ ಕೆಲಸ ಮಾಡುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜನರ ಸಮಸ್ಯೆಗಳ ಬಗ್ಗೆ ಗಮನ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಆಗಸ್ಟ್ 5ರಂದು ಕಾಂಗ್ರೆಸ್ ಕಾರ್ಯಕರ್ತರು ಬೆಲೆಏರಿಕೆ, ನಿರುದ್ಯೋಗ, ಜಿಎಸ್ಟಿ ಹೆಚ್ಚಳ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಕಪ್ಪು ಉಡುಪು ತೊಟ್ಟು ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದರು.