ನವದೆಹಲಿ: ಕರ್ನಾಟಕದ ಮುಖ್ಯಮಂತ್ರಿ ಸ್ಥಾನದಿಂದ ಬಿ ಎಸ್ ಯಡಿಯೂರಪ್ಪ ಅವರನ್ನು ಕೆಳಗಿಳಿಸುವಲ್ಲಿ ವಿರೋಧಿ ಬಣ ಕೊನೆಗೂ ಯಶಸ್ಸು ಸಾಧಿಸಿದೆ. ಅದೂ ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆ ವೇಳೆಗೆ ಹೊಸ ಸಿಎಂ ಇರ್ತಾರೆ ಎಂದೇ ಬಿಂಬಿಸಿಕೊಂಡು ಬಂದಿದ್ದ ವಿರೋಧಿ ಪಡೆ ಮೇಲುಗೈ ಸಾಧಿಸಿದೆ.
ಗಮನಾರ್ಹವೆಂದ್ರೆ ಕೇವಲ ವಯೋ ಸಹಜ ಕಾರಣಗಳನ್ನು ಮಾತ್ರ ಯಡಿಯೂರಪ್ಪ ವಿರುದ್ದ ಬಳಸಲ್ಪಟ್ಟಿಲ್ಲ. ಬದಲಿಗೆ ಯಡಿಯೂರಪ್ಪ ಹೊರತುಪಡಿಸಿ, ಅವರ ಕುಟುಂಬಸ್ಥರ ದಾಖಲೆಗಳನ್ನೂ ಸಹ ಬಿಎಸ್ವೈ ವಿರೋಧಿ ಬಣ ಹೈಕಮಾಂಡ್ ನಾಯಕರಿಗೆ ತಲುಪಿಸಿತ್ತು.
ಸಿಎಂ ಪುತ್ರ ವಿಜಯೇಂದ್ರಗೆ ಸಂಬಂಧಪಟ್ಟ ದಾಖಲೆಗಳನ್ನು ಸಂಗ್ರಹಿಸಿ ಹೈಕಮಾಂಡ್ ಗೆ ರವಾನೆಯಾಗಿದೆ. ಸಿಎಂ ಯಡಿಯೂರಪ್ಪ ಅವರ ದಿನಚರಿಯ ವಿವರಗಳನ್ನು ಕೂಡ ವಿರೋಧಿ ಟೀಂ ಸಂಗ್ರಹಿಸಿ, ಹೈಕಮಾಂಡ್ ಗಮನಕ್ಕೆ ತಂದಿತ್ತು.
ಯಡಿಯೂರಪ್ಪ ತಾವೇ ಐದಕ್ಕೂ ಹೆಚ್ಚು ಪ್ರಮುಖ ಖಾತೆಗಳನ್ನು ಇಟ್ಟುಕೊಂಡಿರುವ ಬಗ್ಗೆ ಸವಿವರ ತಲುಪಿಯಾಗಿತ್ತು. ಪ್ರತಿ ಇಲಾಖೆಯಲ್ಲೂ ವಿಜಯೇಂದ್ರ ಹಸ್ತಕ್ಷೇಪ, ಟೆಂಡರ್ ಪ್ರಕ್ರಿಯೆಗಳಲ್ಲಿ ವಿಜಯೇಂದ್ರ ಮೂಗು ತೂರಿಸುವುದು, ಈ ಎಲ್ಲ ವಿಚಾರಗಳನ್ನು ದಾಖಲೆ ಸಮೇತ ಕೊಂಡೊಯ್ದು ಹೈಕಮಾಂಡ್ ನಾಯಕರಿಗೆ ಅದೇ ಟೀಂ ತಲುಪಿಸಿತ್ತು.
ರಾಜ್ಯಕ್ಕೆ ಅರುಣ್ ಸಿಂಗ್ ಭೇಟಿಗೂ ಮೊದಲೇ ಸಂಘ ಪರಿವಾರದ ನಾಯಕರಿಂದಲೂ ಮಾಹಿತಿ ಸಂಗ್ರಹಗೊಂಡಿತ್ತು. ಅರುಣ್ ಸಿಂಗ್ ಭೇಟಿ ಕಾಲಕ್ಕೆ ಇನ್ನೂ ಕೆಲ ಶಾಸಕರಿಂದಲೂ ಮಾಹಿತಿ ಪೂರೈಕೆಯಾಗಿದೆ. ಅರುಣ್ ಸಿಂಗ್ ರಾಜ್ಯ ಭೇಟಿ ಅಭಿಪ್ರಾಯ ಸಂಗ್ರಹವೂ ನಾಯಕತ್ವದ ಬದಲಾವಣೆ ಭಾಗವೇ ಆಗಿತ್ತು ಎಂಬುದು ಕುತೂಹಲಕಾರಿಯಾಗಿದೆ. ಕೊನೆಗೂ ತಮ್ಮ ಪ್ರಯತ್ನದಲ್ಲಿ ಯಡಿಯೂರಪ್ಪ ವಿರೋಧಿ ಬಣ ಯಶಸ್ಸು ಕಂಡಿದೆ.
ಈ ಸಂದರ್ಭಕ್ಕೆ ತಕ್ಕಂತೆ ಪದ- ಪದವಿ ಪೋಣಿಸುವುದಾದರೆ ಅದು ಹೀಗಾಗಬಹುದೇ?
ನಾಳೆ ಯಾರ ‘ಜೋಶ್‘ ಉಳಿಯುತ್ತದೋ..?
ಯಾರಿಗೆ ಸಿಗುತ್ತೋ ‘ಬೆಲ್ಲ‘ದ ಹೋಳಿಗೆ..?
ಯಾರು ‘ಸೀಟಿ‘ ಹೊಡೆಯುತ್ತಾರೋ…?
ಯಾರಾಗುತ್ತಾರೋ ಕರ್ನಾಟಕದ ‘ಮುರುಗೇಶ‘…
ಯಾರ ಯತ್ನಾ(ಳ) ಫಲ ಕೊಡುತ್ತದೋ ಗೊತ್ತಿಲ್ಲ..
ಒಟ್ನಲ್ಲಿ ಯಾರೇ ಆದರೂ ‘ಸಂತೋಷ…’
(corruption allegations team opposite to bs yediyurappa successful in pulling him down timely)
Published On - 3:41 pm, Mon, 26 July 21