ವೀರ ಸಾವರ್ಕರ್ ನಿಮ್ಮಂತೆ ವಂಶವಾದದಿಂದ ಬೆಳೆದವರಲ್ಲ: ಸಚಿವ ಪ್ರಿಯಾಂಕ್ ಖರ್ಗೆಗೆ ಸಿಟಿ ರವಿ ತೀಕ್ಷ್ಣ ತಿರುಗೇಟು

| Updated By: Ganapathi Sharma

Updated on: Dec 07, 2023 | 8:27 PM

ಪರಿವಾರವಾದದ ಬಲದಿಂದ ಬೆಳೆದಂತಹ ಹೊಗಳುಭಟ್ಟರು ಬೇಕು ಎಂದಾಗ ಭಾವಚಿತ್ರ ಇಡಲಿಕ್ಕೆ, ಬೇಡ ಅಂದಾಗ ತೆಗಯಲಿಕ್ಕೆ, ವೀರ ಸಾವರ್ಕರ್ ಅವರು ನಿಮ್ಮ ಹಾಗೆ ಅಥವಾ ನೆಹರು ಅವರ ಹಾಗೆ ವಂಶವಾದದಿಂದ ಬೆಳೆದವರಲ್ಲ ಎಂದು ಪ್ರಿಯಾಂಕ್ ಖರ್ಗೆಗೆ ರವಿ ಟಾಂಗ್ ನೀಡಿದ್ದಾರೆ.

ವೀರ ಸಾವರ್ಕರ್ ನಿಮ್ಮಂತೆ ವಂಶವಾದದಿಂದ ಬೆಳೆದವರಲ್ಲ: ಸಚಿವ ಪ್ರಿಯಾಂಕ್ ಖರ್ಗೆಗೆ ಸಿಟಿ ರವಿ ತೀಕ್ಷ್ಣ ತಿರುಗೇಟು
ಸಿಟಿ ರವಿ & ಪ್ರಿಯಾಂಕ್ ಖರ್ಗೆ
Follow us on

ಬೆಂಗಳೂರು, ಡಿಸೆಂಬರ್ 7: ಬೆಳಗಾವಿಯ ಸುವರ್ಣ ಸೌಧದಿಂದ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ (Veer Savarkar) ಫೋಟೋ ತೆರವುಗೊಳಿಸುವ ಪ್ರಸ್ತಾವ ಬಂದಿಲ್ಲ ಎಂದು ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಹೇಳಿದ ಬಳಿಕವೂ ಆ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವಣ ವಾಕ್ಸಮರ ಮುಂದುವರಿದಿದೆ. ಈ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರಿಗೆ ತೀಕ್ಷ್ಣ ತಿರುಗೇಟು ನೀಡಿರುವ ಬಿಜೆಪಿ ನಾಯಕ ಸಿಟಿ ರವಿ (CT Ravi), ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಇರುವ ಸೆಲ್ಯುಲರ್ ಜೈಲಿಗೆ ಭೇಟಿ ನೀಡಲು ನಿಮ್ಮನ್ನು ಆಹ್ವಾನಿಸುತ್ತೇನೆ. ಸಾವರ್ಕರ್ ಮತ್ತು ನೆಹರು ಇವರಿಬ್ಬರಲ್ಲಿ ನಿಜವಾದ ಸ್ವಾತಂತ್ರ್ಯ ಹೋರಾಟಗಾರ ಯಾರು ಎಂಬ ಕುರಿತು ಅಲ್ಲೇ ಬಹಿರಂಗ ಚರ್ಚೆ ನಡೆಸೋಣ ಎಂದು ಸವಾಲು ಹಾಕಿದ್ದಾರೆ.

‘ಆತ್ಮೀಯರಾದ ಪ್ರಿಯಾಂಕ್ ಖರ್ಗೆ ಅವರೇ, ತಾಯಿ ಭಾರತಿಯ ಮಡಿಲಿನಲ್ಲಿ ಜನಿಸಿದ ಮಹಾನ್ ರಾಷ್ಟ್ರೀಯವಾದಿ, ಕರಿನೀರ ವೀರ, ಹುತಾತ್ಮ ವೀರ್ ಸಾವರ್ಕರ್ ಅವರು, ಬ್ರಿಟಿಷರಿಂದ ಕಠಿಣ ಕಾರಾಗ್ರಹ ಶಿಕ್ಷೆಗೊಳಪಡಿಸುವ ತೀರ್ಪಿನಂತೆ, ಘೋರ ಕರಿನೀರಿನ ಶಿಕ್ಷೆ ಅನುಭವಿಸಿದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಇರುವ ಸೆಲ್ಯುಲರ್ ಜೈಲಿಗೆ ಭೇಟಿ ನೀಡಲು ನಿಮ್ಮನ್ನು ಆಹ್ವಾನಿಸುತ್ತೇನೆ. ಅಂದ ಹಾಗೆ ನಿಮ್ಮ ಪ್ರವಾಸದ ಸಂಪೂರ್ಣ ಖರ್ಚುವೆಚ್ಚ ನಾನೇ ಭರಿಸುತ್ತೇನೆ’ ಎಂದು ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಸಿಟಿ ರವಿ ಸಂದೇಶ ಪ್ರಕಟಿಸಿದ್ದಾರೆ.

ಅತ್ತ ನಿಮ್ಮ ನೆಚ್ಚಿನ ನೆಹರು ಶಿಕ್ಷೆಯ ನೆಪದಲ್ಲಿ ಬ್ರಿಟಿಷರ ಜೈಲುಗಳಲ್ಲಿ ಐಷಾರಾಮಿ ಉಪಚಾರ ಪಡೆಯುತ್ತಿರುವಾಗ, ಇತ್ತ ಅಂಡಮಾನಿನ ಜೈಲಿನಲ್ಲಿ ವೀರ್ ಸಾವರ್ಕರ್ ಯಾವ ರೀತಿಯ ನೋವು ಮತ್ತು ಸಂಕಟವನ್ನು ಅನುಭವಿಸಿದರು ಎಂಬ ಸಣ್ಣ ಅನುಭೂತಿ ನಿಮಗಾಗಬಹುದು. ಸೆಲ್ಲ್ಯುಲರ್ ಜೈಲಿನ ಆವರಣದಲ್ಲೇ ಸಾವರ್ಕರ್ ಮತ್ತು ನೆಹರು ಇವರಿಬ್ಬರಲ್ಲಿ ನಿಜವಾದ ಸ್ವಾತಂತ್ರ್ಯ ಹೋರಾಟಗಾರ ಯಾರು? ಎಂಬುದರ ಕುರಿತು ಬಹಿರಂಗ ಚರ್ಚೆ ನಡೆಸಲು ನಾನು ನಿಮಗೆ ಸವಾಲು ಹಾಕುತ್ತೇನೆ ಎಂದು ಸಿಟಿ ರವಿ ಉಲ್ಲೇಖಿಸಿದ್ದಾರೆ.


ವಿನಾಯಕ ದಾಮೋದರ್ ಸಾವರ್ಕರ್ ಅವರ ಫೋಟೋವನ್ನು ವಿಧಾನಸಭೆ ಅಥವಾ ಪರಿಷತ್ತಿನಿಂದ ತೆಗೆಯುವ ದುಸ್ಸಾಹಸ ಮಾಡಿದರೆ ಇಡೀ ರಾಜ್ಯದ ಜನತೆಯಾದಿಯಾಗಿ ನಾವೆಲ್ಲರೂ ಉಗ್ರ ಪ್ರತಿಭಟನೆ ನಡೆಸುತ್ತೇವೆ. ಇಂದು ನೀವು ಅಧಿಕಾರದಲ್ಲಿರಬಹುದು, ನೆನಪಿಡಿ, ಮುಂದೆ ನಾವು ಅಧಿಕಾರಕ್ಕೆ ಬಂದಾಗ ನೆಹರೂ ಅವರ ಭಾವಚಿತ್ರ ವಿಧಾನಸೌಧದಲ್ಲಿ ಹೇಗೆ ಇರುತ್ತದೆ ನೋಡೋಣ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಸುವರ್ಣ ಸೌಧದಿಂದ ಸಾವರ್ಕರ್ ಫೋಟೋ ತೆಗೆಯುವ ಪ್ರಸ್ತಾವ ಬಂದಿಲ್ಲ: ಸ್ಪೀಕರ್ ಯುಟಿ ಖಾದರ್

ನೆನಪಿಡಿ, ಪರಿವಾರವಾದದ ಬಲದಿಂದ ಬೆಳೆದಂತಹ ಹೊಗಳುಭಟ್ಟರು ಬೇಕು ಎಂದಾಗ ಭಾವಚಿತ್ರ ಇಡಲಿಕ್ಕೆ, ಬೇಡ ಅಂದಾಗ ತೆಗಯಲಿಕ್ಕೆ, ವೀರ ಸಾವರ್ಕರ್ ಅವರು ನಿಮ್ಮ ಹಾಗೆ ಅಥವಾ ನೆಹರು ಅವರ ಹಾಗೆ ವಂಶವಾದದಿಂದ ಬೆಳೆದವರಲ್ಲ ಎಂದು ರವಿ ಟಾಂಗ್ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ