ಮಂತ್ರಘೋಷಗಳ ನಡುವೆ ಮುಖ್ಯಮಂತ್ರಿ ಚೇಂಬರ್ ಪ್ರವೇಶಿಸಿ ಕುರ್ಚಿಯಲ್ಲಿ ಆಸೀನರಾದ ತೆಲಂಗಾಣದ ನೂತನ ಸಿಎಂ ರೇವಂತ್ ರೆಡ್ಡಿ
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಮತದಾರರಿಗೆ 5 ಗ್ಯಾರಂಟಿಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದರೆ ತೆಲಂಗಾಣದಲ್ಲಿ ಅದು 6 ಗ್ಯಾರಂಟಿಗಳನ್ನು ನೀಡಿದೆ. ರೇವಂತ್ ರೆಡ್ಡಿ ಇಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವ ಆದೇಶವೊಂದಕ್ಕೆ ಸಹಿ ಹಾಕಿದರು. ಆದರೆ ಅವುಗಳನ್ನು ಜಾರಿಗೊಳಿಸುವುದು ಅಷ್ಟು ಸುಲಭವಲ್ಲ ಎಂದು ಪ್ರಮಾಣನಚನ ಸ್ವೀಕಾರ ಸಮಾರಂಭದಲ್ಲಿ ಹಾಜರಿದ್ದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿರಬಹುದು.
ಹೈದರಾಬಾದ್: ಗುರುವಾರ ಬೆಳಗ್ಗೆಯೇ ಹೇಳಿದ ಹಾಗೆ ನೆರೆರಾಜ್ಯ ತೆಲಂಗಾಣದಲ್ಲಿ ಅನಮುಲ ರೇವಂತ್ ರೆಡ್ಡಿ (Anamul Revanth Reddy) ಶಕೆ ಆರಂಭವಾಗಿದೆ. ತೆಲಂಗಾಣದ (Telangana) ಎರಡನೇ ಮುಖ್ಯಮಂತ್ರಿಯಾಗಿ ಅವರು ನಗರದ ಎಲ್ ಬಿ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಮಧ್ಯಾಹ್ನದ ಬಳಿಕ ತೆಲಂಗಾಣ ವಿಧಾನ ಸಭೆಯಲ್ಲಿನ ಮುಖ್ಯಮಂತ್ರಿಯ ಕಚೇರಿಯಲ್ಲಿ (CM’s office) ಮಂತ್ರಘೋಷ ಮೊಳಗಿದವು. ದೃಶ್ಯಗಳಲ್ಲಿ ಕಾಣುತ್ತಿರುವ ಹಾಗೆ 54-ವರ್ಷ ವಯಸ್ಸಿನ ರೇವಂತ್ ರೆಡ್ಡಿ ಹಲವಾರು ಅರ್ಚಕರು ವೇದಗಳನ್ನು ಪಠಿಸುತ್ತಾ ವಿಶೇಷ ಪೂಜೆ ನೆರವೇರಿಸಿದ ಬಳಿಕ ತಮ್ಮ ಪತ್ನಿಯೊಂದಿಗೆ ಮುಖ್ಯಮಂತ್ರಿ ಕೋಣೆ ಪ್ರವೇಶಿಸಿ ಅವರಿಗಾಗಿ ಮೀಸಲಾಗಿರುವ ಕುರ್ಚಿಯಲ್ಲಿ ಆಸೀನರಾಗುತ್ತಾರೆ. ಅವರು ಕುರ್ಚಿಯ ಮೇಲೆ ಕುಳಿತ ಮೇಲೆ ಅರ್ಚಕರೊಬ್ಬರು ಅವರ ಮೇಲೆ ಶಾಲು ಹೊದಿಸುತ್ತಾರೆ. ಪೂಜಾವಿಧಿ ಮತ್ತು ಸ್ಥಾನಗ್ರಹಣದ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅಧಿಕಾರಿಗಳೊಂದಿಗೆ ತಮ್ಮ ಮೊದಲ ಸಭೆ ನಡೆಸುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ