ಉಡುಪಿ: ಕೇಸರಿ ಕಂಡರೆ ಆಗದ ಮಾಜಿ ಸಿಎಂ ಒಬ್ಬರು ನಾನು ಹಿಂದೂ ಅಂತಾರೆ. ಆದರೆ ಹಿಂದುತ್ವವಾದಿಯಲ್ಲ ಎಂದು ಹೇಳುತ್ತಾರೆ. ಹಿಂದೂ ಅಂದ್ರೆ ದೇಹ, ಹಿಂದುತ್ವ ಅನ್ನೋದು ಜೀವ. ದೇಹದಿಂದ ಜೀವ ಹೋದರೆ ಅವರು ಹೆಣಕ್ಕೆ (Dead body) ಸಮ ಎಂದು ಮಾಜಿ ಸಿಎಂ ಸಿದ್ಧರಾಮಯ್ಯರನ್ನು ಪರೋಕ್ಷವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೆಣಕ್ಕೆ ಹೋಲಿಸಿದ್ದಾರೆ. ಜಿಲ್ಲೆಯ ಎಂಜಿಎಂ ಮೈದಾನದಲ್ಲಿ ನಡೆಯುತ್ತಿರುವ ಜಿಲ್ಲಾ ಬೂತ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಜೀವ ಇಲ್ಲದ ಕಾಂಗ್ರೆಸ್ ಪಕ್ಷವನ್ನು ಬಹಳ ಹೊತ್ತು ಇಟ್ಟುಕೊಳ್ಳಬಾರದು. ಹಾಗಾಗಿ ವಿಧಿವಿಧಾನ ಮಾಡಿ ಸ್ಮಶಾನಕ್ಕೆ ತೆಗೆದುಕೊಂಡು ಹೋಗಬೇಕು. ಅಂದರೆ ಕಾಂಗ್ರೆಸ್ನ್ನ ರಾಜಕೀಯವಾಗಿ ಸ್ಮಶಾನಕ್ಕೆ ಕಳುಹಿಸಬೇಕು. ಹೂಳುವವರು ಹೂಳಲಿ, ಸುಡೋರು ಸುಡಲಿ, ಹೂ ಹಾಕಿ ಸ್ಮಶಾನಕ್ಕೆ ಕಳುಹಿಸಿ. ಪಿಂಡ ಹಾಕುವ ಜವಾಬ್ದಾರಿ ಇಲ್ಲ, ಆ ದಂಡ ಪಿಂಡಗಳು ಇದ್ದಾಗ ಸರಿಯಾಗಿ ತಿಂದಿದಾರೆ ಎಂದು ತೀರ್ವ ವಾಗ್ದಾಳಿ ಮಾಡಿದರು.
ಕಲ್ಲಡ್ಕ ಶಾಲೆಯ ಅನ್ನ ಕಿತ್ತದ್ದು ಕಾಂಗ್ರೆಸ್ನ ನೀತಿ. ದೇಶ ದ್ರೋಹಿ ಪಿಎಫ್ಐನವರನ್ನು ಜೈಲಿನಿಂದ ಬಿಡುಗಡೆ ಮಾಡಿದ್ದು ಕಾಂಗ್ರೆಸ್ ನೀತಿ. ನೀತಿಯೇ ಇಲ್ಲದವರು ಜೆಡಿಎಸ್ನವರು, ಅವರದ್ದು ಇವತ್ತು ಒಂದು, ನಾಳೆ ಒಂದು ನೀತಿ. ಆದರೆ ಬಿಜೆಪಿಯದ್ದು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ನೀತಿ. ಡಿಎನ್ಎ ಮೂಲಕ ಲೀಡರ್ ಶಿಪ್ ಪಡೆಯುವ ದೌರ್ಬಾಗ್ಯ ನಮ್ಮ ಪಕ್ಷಕ್ಕಿಲ್ಲ. ಇಲ್ಲಿ ಪ್ರತಿಯೊಬ್ಬ ಕಾರ್ಯಕರ್ತನೂ ನಾಯಕನೇ, ನೇತಾರನೇ ಆಗಿದ್ದಾರೆ. ಬಿಜೆಪಿಯ ಒಬ್ಬೊಬ್ಬ ಕಾರ್ಯಕರ್ತನೂ ಪಕ್ಷದ ಮಾಲೀಕ ಎಂದು ಹೇಳಿದರು.
ಇದನ್ನೂ ಓದಿ: ಇಂದು ಕೃಷ್ಣ ಮಠಕ್ಕೆ ಭೇಟಿ ನೀಡಿ ನನ್ನ ಜೀವನ ಪಾವನವಾಗಿದೆ ಎಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ
ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕಟೀಲು ಮಾತನಾಡಿ, ಕಾಂಗ್ರೆಸ್ ನಾಯಕರು ಮತ್ತೆ ನಿರುದ್ಯೋಗಿಗಳಾಗುತ್ತಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್ನಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣವಿದೆ. ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಸಿಎಂ ಕುರ್ಚಿ ಕನಸು ಕಾಣುವ ಕಾಂಗ್ರೆಸ್ಸಿಗರು ನಿರುದ್ಯೋಗಿಗಳಾಗ್ತಾರೆ ಎಂದು ಹರಿಹಾಯ್ದರು.
ಇದನ್ನೂ ಓದಿ: Shivaji Maharaj Jayanti: ಕೆಲವರು ಟಿಪ್ಪುವಿಗೆ ಹುಟ್ಟಿದಂತೆ ಮಾತನಾಡುತ್ತಾರೆ; ಬಸನಗೌಡ ಪಾಟೀಲ್ ಯತ್ನಾಳ್
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮಾತನಾಡಿ, ಕಾಂಗ್ರಸ್, ಜೆಡಿಎಸ್ ಶಿವಸೇನೆ ಸೇರಿದಂತೆ ಇತರ ಪಕ್ಷ ಪರಿವಾರದ ಪಾರ್ಟಿಗಳಾಗಿವೆ. ಕಾಂಗ್ರೆಸ್ನಲ್ಲಿ ತಾಯಿ, ಮಗ, ಮಗಳು ಮತ್ತು ಅಳಿಯಂದೇ ಪಕ್ಷವಾಗಿದೆ. ಜೆಡಿಎಸ್ ಕೂಡ ಕೇವಲ ಒಂದು ಕುಟುಂಬದ ಪಾರ್ಟಿಯಾಗಿದೆ. ಆದರೆ ಬಿಜೆಪಿಗೆ ಪಾರ್ಟಿಯೇ ಪರಿವಾರವಾಗಿದೆ. ಇದು ನಮ್ಮ ಮತ್ತು ಬೇರೆ ಪಕ್ಷಗಳಿಗಿರುವ ವ್ಯತ್ಯಾಸ ಎಂದು ಜೆ.ಪಿ.ನಡ್ಡಾ ವಾಗ್ದಾಳಿ ಮಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:38 pm, Mon, 20 February 23