Shivaji Maharaj Jayanti: ಕೆಲವರು ಟಿಪ್ಪುವಿಗೆ ಹುಟ್ಟಿದಂತೆ ಮಾತನಾಡುತ್ತಾರೆ; ಬಸನಗೌಡ ಪಾಟೀಲ್ ಯತ್ನಾಳ್
ಕೆಲವರು ನಾ ಹಿಂದೂ ಅಂತ ಹೇಳಿಕೊಳ್ಳುತ್ತಾರೆ. ಆದರೆ, ಹಿಂದುತ್ವವನ್ನು ಒಪ್ಪುವುದಿಲ್ಲವಂತೆ. ಇಂದು ಅಂತಹ ವ್ಯವಸ್ಥೆಯಲ್ಲಿ ನಾವು ಇದ್ದೇವೆ ಎಂದು ಯತ್ನಾಳ್ ಹೇಳಿದ್ದಾರೆ.
ಬಾಗಲಕೋಟೆ: ಕೆಲವರು ಟಿಪ್ಪುವಿಗೆ ಹುಟ್ಟಿದಂತೆ ಮಾತನಾಡುತ್ತಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಗಲಕೋಟೆಯಲ್ಲಿ (Bagalkot) ಛತ್ರಪತಿ ಶಿವಾಜಿ ಮಹಾರಾಜ ಜಯಂತಿ (Shivaji Maharaj Jayanti) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿವಾಜಿ ಮಹಾರಾಜರ ಸಾಧನೆ ಬಗ್ಗೆ ಮಾತನಾಡಿದರೆ ಕೆಲವರಿಗೆ ನೋವಾಗುತ್ತದೆ. ಆದರೆ, ಟಿಪ್ಪು ಸುಲ್ತಾನ್ ಹಿಂದೂ ದೇವಸ್ಥಾನಗಳನ್ನು ನಾಶ ಮಾಡಿದ. ದೌರ್ಜನ್ಯ ನಡೆಸಿ ಲಕ್ಷಾಂತರ ಜನರನ್ನು ಮತಾಂತರ ಮಾಡಿದ. ಆದರೆ ಕೆಲವರು ಆತನಿಗೆ ಹುಟ್ಟಿದಂತೆ ಮಾತನಾಡುತ್ತಾರೆ ಎಂದು ಹೇಳಿದ್ದಾರೆ. ಕೆಲವರು ನಾ ಹಿಂದೂ ಅಂತ ಹೇಳಿಕೊಳ್ಳುತ್ತಾರೆ. ಆದರೆ, ಹಿಂದುತ್ವವನ್ನು ಒಪ್ಪುವುದಿಲ್ಲವಂತೆ. ಇಂದು ಅಂತಹ ವ್ಯವಸ್ಥೆಯಲ್ಲಿ ನಾವು ಇದ್ದೇವೆ. ಕೆಲವು ಬುದ್ಧಿಜೀವಿಗಳು ಶಿವಾಜಿ ಸಾಧನೆ ಬಗ್ಗೆ ಸ್ವಲ್ಪವೇ ಬರೆಯುತ್ತಾರೆ. ಆದರೆ ಅಕ್ಬರ್ ಬಗ್ಗೆ ಎಷ್ಟು ಬೇಕಾದರೂ ಬರೆಯುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಕ್ಬರ್ನ ದಬ್ಬಾಳಿಕೆ, ಆತ ಹಿಂದೂಗಳನ್ನು ಕೊಂದ ಬಗ್ಗೆ ಬುದ್ಧಿಜೀವಿಗಳು ಬರೆಯುವುದಿಲ್ಲ. ಅಕ್ಬರ್ ಗುಣವಂತ, ‘ಅಕ್ಬರ್ ದಿ ಗ್ರೇಟ್’ ಎಂದು ಬರೆಯುತ್ತಾರೆ. ಹೀಗೆ ಬರೆಯುವವರು ಬುದ್ಧಿಜೀವಿಗಳು ಅಲ್ಲ ಲದ್ದಿಜೀವಿಗಳು ಎಂದು ಯತ್ನಾಳ್ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಒಂದು ಹಿಂದು ಹುಡುಗಿ ಹೋದ್ರೆ, ಹತ್ತು ಮುಸ್ಲಿಂ ಹುಡುಗಿಯರನ್ನು ಹಾರಿಸಿಕೊಂಡು ಹೋಗಿ: ನಿಮಗೆ ರಕ್ಷಣೆ ನಮ್ಮದು ಎಂದ ಮುತಾಲಿಕ್
ಛತ್ರಪತಿ ಶಿವಾಜಿ ಮಹಾರಾಜರು ಇಲ್ಲದೇ ಇದ್ದರೆ ನಾವು ನೀವ್ಯಾರೂ ಹಿಂದೂಗಳಾಗಿ ಇರುತ್ತಿರಲಿಲ್ಲ. ಗಡ್ಡ ಬಿಟುಗೊಂಡು ಪಾಕಿಸ್ತಾನ ಸೆಷನ್ನಲ್ಲಿ ಕೂತಿರುವಂತೆ ಕೂತಿರಬೇಕಾಗುತ್ತಿತ್ತು. ಶಿವಾಜಿ ಮೂರ್ತಿಗೆ ರಾತ್ರಿ ಕಪ್ಪು ಮಸಿ ಹಚ್ಚಿದರು. ಭಾರತದಲ್ಲಿ ಕ್ಷತ್ರೀಯರು ಇದ್ದಾರೆನ್ನುವ ಕಾರಣಕ್ಕೆ ಹಿಂದು ಸಮಾಜ ಉಳಿದಿದೆ ಎಂದು ಯತ್ನಾಳ್ ಹೇಳಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ ಎನ್ನುತ್ತೀರಿ. ಆದರೆ ಮನೆಯಲ್ಲಿ ಒಂದು ಬಡಿಗೆ ಇಲ್ಲ, ಚಾಕು ಸಹ ಇಲ್ಲ. ಎಲ್ಲ ಹಿಂದೂಗಳು ಮನೆಯಲ್ಲಿ ಒಂದು ತಲವಾರ್ ಇಟ್ಟುಕೊಳ್ಳಿ. ಅಲ್ಲದೇ ಒಂದು ಹಿಂದೂ ಹುಡುಗಿ ಹೋದರೆ ಹತ್ತು ಮುಸ್ಲಿಂ ಹುಡುಗಿಯರನ್ನು ಹಾರಿಸಿಕೊಂಡು ಹೋಗಿ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಭಾನುವಾರ ಕರೆ ಕೊಟ್ಟಿದ್ದರು.
ಧಿಕ್ಕಾರ ಹಾಕುವವರು ಪಾಕಿಸ್ತಾನಕ್ಕೆ ಹೋಗಲಿ
ಪಾಕಿಸ್ತಾನದಲ್ಲಿ ಎಲ್ಪಿಜಿ ಸಿಲಿಂಡರ್ ದರ 10 ಸಾವಿರ ರೂಪಾಯಿ ಆಗಿದೆ. ನಮ್ಮಲ್ಲಿ 100 ರೂ. ಹೆಚ್ಚಾದರೆ ಪ್ರಧಾನಿ ಮೋದಿ ಕಾರಣ ಅಂತ ದೂರುತ್ತಾರೆ. ಪೆಟ್ರೋಲ್, ಡೀಸೆಲ್ ದರ ಸ್ವಲ್ಪ ಹೆಚ್ಚಾದ್ರೂ ಧಿಕ್ಕಾರ ಕೂಗುತ್ತಾರೆ. ಧಿಕ್ಕಾರ ಹಾಕುವವರು ಪಾಕಿಸ್ತಾನಕ್ಕೆ ಹೋಗಲಿ ಎಂದು ಯತ್ನಾಳ್ ಹೇಳಿದ್ದಾರೆ.
ಶಿವಾಜಿ ಜಯಂತಿ ಬಗ್ಗೆ…
ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಸಮಾಜ ಸುಧಾರಕ ಮಹಾತ್ಮ ಜ್ಯೋತಿರಾವ್ ಫುಲೆ ಅವರು 1870 ರಲ್ಲಿ ಪ್ರಾರಂಭಿಸಿದ್ದರು. ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಮೊದಲು ಪುಣೆಯಲ್ಲಿ ಆಚರಿಸಲಾಯಿತು. ಮರಾಠ ರಾಜನ ಜಯಂತಿಯನ್ನು ಆಚರಿಸುವ ಸಂಪ್ರದಾಯವನ್ನು ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕರು ಮುಂದುವರಿಸಿದರು. ಶಿವಾಜಿಯ ಕೊಡುಗೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಅವರು ಈ ಕಾರ್ಯಕ್ರಮ ಆಯೋಜಿಸುತ್ತಿದ್ದರು. ಕರ್ನಾಟಕದ ಹಲವೆಡೆಯೂ ಶಿವಾಜಿ ಜಯಂತಿ ಆಚರಿಸಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:01 am, Mon, 20 February 23