Karnataka Political News Highlights: ಮೂರನೇ ಮಹಡಿಗೆ ನನ್ನ ಬಳಿ ಬರಬೇಕು, ಮತ್ತೊಮ್ಮೆ ಸಿಎಂ ಆಸೆ ಬಿಚ್ಚಿಟ್ಟ ಡಿ.ಕೆ ಶಿವಕುಮಾರ್

Ganapathi Sharma
|

Updated on:Feb 21, 2023 | 9:23 AM

Karnataka Assembly Elections 2023 Live News Highlights; ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕರ್ನಾಟಕ ಪ್ರವಾಸದಲ್ಲಿದ್ದು, ಅತ್ತ ಕಾಂಗ್ರೆಸ್ ನಾಯಕರ ಪ್ರಜಾಧ್ವನಿ ಸಮಾವೇಶವೂ ಮುಂದುವರಿದಿದೆ. ಜೆಡಿಎಸ್​ ಕೂಡ ಚುನಾವಣೆ ಸಿದ್ಧತೆ ಭರ್ಜರಿಯಾಗಿಯೇ ನಡೆಸುತ್ತಿದೆ. ರಾಜ್ಯದ ಇಂದಿನ (ಫೆಬ್ರವರಿ 20) ರಾಜಕೀಯ ವಿದ್ಯಮಾನಗಳ ಲೈವ್ ಅಪ್​​ಡೇಟ್ಸ್ ಇಲ್ಲಿವೆ.

Karnataka Political News Highlights: ಮೂರನೇ ಮಹಡಿಗೆ ನನ್ನ ಬಳಿ ಬರಬೇಕು, ಮತ್ತೊಮ್ಮೆ ಸಿಎಂ ಆಸೆ ಬಿಚ್ಚಿಟ್ಟ ಡಿ.ಕೆ ಶಿವಕುಮಾರ್
ಸಾಂದರ್ಭಿಕ ಚಿತ್ರ

ಕರ್ನಾಟಕ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕರ್ನಾಟಕ ಪ್ರವಾಸದಲ್ಲಿದ್ದು, ಅತ್ತ ಕಾಂಗ್ರೆಸ್ ನಾಯಕರ ಪ್ರಜಾಧ್ವನಿ ಸಮಾವೇಶವೂ ಮುಂದುವರಿದಿದೆ. ಜೆಡಿಎಸ್​ ಕೂಡ ಚುನಾವಣೆ ಸಿದ್ಧತೆ ಭರ್ಜರಿಯಾಗಿಯೇ ನಡೆಸುತ್ತಿದೆ. ರಾಜಕೀಯ ನಾಯಕರ ವಾಕ್ಸಮರ, ಟಿಕೆಟ್​ಗಾಗಿ ಪೈಪೋಟಿ, ರಾಷ್ಟ್ರ ಮಟ್ಟದ ನಾಯಕರ ರಾಜ್ಯ ಭೇಟಿ ಸೇರಿದಂತೆ ಅನೇಕ ವಿದ್ಯಮಾನಗಳು ದಿನಂಪ್ರತಿ ವರದಿಯಾಗುತ್ತಿವೆ. ಇದೇ 27ರಂದು ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಗೆ ಭೇಟಿ ನೀಡಲಿದ್ದು, ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯದ ಇಂದಿನ (ಫೆಬ್ರವರಿ 20) ರಾಜಕೀಯ ವಿದ್ಯಮಾನಗಳ ಲೈವ್ ಅಪ್​​ಡೇಟ್ಸ್ ಇಲ್ಲಿವೆ.

LIVE NEWS & UPDATES

The liveblog has ended.
  • 20 Feb 2023 10:41 PM (IST)

    Karnataka Political News Live: ಮೂರನೇ ಮಹಡಿಗೆ ನನ್ನ ಬಳಿ ಬರಬೇಕು, ಮತ್ತೊಮ್ಮೆ ಸಿಎಂ ಆಸೆ ಬಿಚ್ಚಿಟ್ಟ ಡಿ.ಕೆ ಶಿವಕುಮಾರ್

    ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಭಾಷಣ ಮಾಡುತ್ತ ಸಿಎಂ ಆಗುವ ಕನಸು ಬಿಚ್ಚಿಟ್ಟಿದ್ದಾರೆ. ಕೇವಲ 50 ದಿನ ಮಾತ್ರ ಬಿಜೆಪಿ ಸರ್ಕಾರ ಆಡಳಿತದಲ್ಲಿ ಇರುತ್ತೆ. 50 ದಿನಗಳ ಬಳಿಕ ನಿಮ್ಮ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಆಗ ಮೂರನೇ ಮಹಡಿಗೆ ಬಂದು ನನ್ನ ಭೇಟಿಯಾಗಬೇಕೆಂದು ಹೇಳುವ ಮೂಲಕ ಡಿಕೆಶಿ ಸಿಎಂ ಆಗುವ ಕನಸನ್ನು ಮತ್ತೊಮ್ಮೆ ಬಿಚ್ಚಿಟ್ಟಿದ್ದಾರೆ.

  • 20 Feb 2023 10:26 PM (IST)

    Karnataka Political News Live: ಶೃಂಗೇರಿ ಮಠದ ವಿವಿಐಪಿ ಗೆಸ್ಟ್​ಹೌಸ್​ಗೆ ಆಗಮಿಸಿದ ಜೆ.ಪಿ.ನಡ್ಡಾ

    ಶೃಂಗೇರಿ ಮಠದ ವಿವಿಐಪಿ ಗೆಸ್ಟ್​ಹೌಸ್​ಗೆ ಜೆ.ಪಿ.ನಡ್ಡಾ ಆಗಮಿಸಿದ್ದು ಗೆಸ್ಟ್​ಹೌಸ್​ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಬೆಳಗ್ಗೆ ಶೃಂಗೇರಿ ಶಾರದಾಂಬೆ ದರ್ಶನ ಪಡೆಯಲಿದ್ದಾರೆ. ಮುಂಜಾನೆ ಸುಪ್ರಭಾತ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ. ದೇವಾಲಯಕ್ಕೆ ಭೇಟಿ ತಡವಾದ ಹಿನ್ನೆಲೆ ಮುಂಜಾನೆ ಶಾರದಾಂಬೆ ದರ್ಶನ ಮಾಡಲಿದ್ದಾರೆ.

  • 20 Feb 2023 10:04 PM (IST)

    Karnataka Political News Live: ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ನಿವಾರಣೆ ಆಗಿರುವುದಕ್ಕೆ ಡಿಕೆಶಿ ಕಾರಣ

    ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ನಿವಾರಣೆ ಆಗಿರುವುದಕ್ಕೆ ಡಿಕೆ ಶಿವಕುಮಾರ್ ಕಾರಣ. ಇಂಧನ ಸಚಿವರಾಗಿದ್ದ ವೇಳೆ ಡಿಕೆಶಿ ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದು ಧ್ರುವನಾರಾಯಣ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ರನ್ನು​ ಹಾಡಿಹೊಗಳಿದ್ದಾರೆ. ಕೊರೊನಾ ಸಮಯದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಅಂದಿನಿಂದ ನಿರಂತರವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ನನ್ನ ಬೆಳವಣಿಗೆಯಲ್ಲೂ ಡಿ.ಕೆ.ಶಿವಕುಮಾರ್​ ಇದ್ದಾರೆ. ನನಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ನೀಡಿ ಬೆಳವಣಿಗೆಗೆ ಸಹಕರಿಸಿದ್ದಾರೆ. ಅಂದಿನಿಂದ ಇಂದಿನವರೆಗೂ ಡಿ.ಕೆ.ಶಿವಕುಮಾರ್ ನನ್ನ ಜೊತೆಗಿದ್ದಾರೆ ಎಂದು ಪ್ರಜಾಧ್ವನಿ ಸಮಾವೇಶದಲ್ಲಿ ಡಿಕೆಶಿ ಧ್ರುವನಾರಾಯಣ ಹಾಡಿಹೊಗಳಿದ್ದಾರೆ.

  • 20 Feb 2023 08:50 PM (IST)

    Karnataka Political News Live: ಶೃಂಗೇರಿ ಮಠದ ಶ್ರೀಗಳನ್ನು ಭೇಟಿಯಾದ ನಡ್ಡಾ

    ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಮಠದ ಶ್ರೀಗಳನ್ನು ಬಿಜೆಪಿ ಅಧ್ಯಕ್ಷ ನಡ್ಡಾ ಭೇಟಿ ಮಾಡಿದ್ದಾರೆ. ಶೃಂಗೇರಿ ಮಠದ ಗುರು ನಿವಾಸದಲ್ಲಿ ಭೇಟಿಯಾಗಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಚಿವ ಶೋಭಾ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕಟೀಲು, ಶಾಸಕ ಸಿ.ಟಿ.ರವಿ ಈ ವೇಳೆ ಉಪಸ್ಥಿತರಿದ್ದರು.

  • 20 Feb 2023 08:47 PM (IST)

    Karnataka Political News Live: ಚುನಾವಣಾ ಹತ್ತಿರ ಬರುತ್ತಿದ್ದಂತೆ ಮಂಡ್ಯಗೆ ಭರಪೂರ ಆರ್ಥಿಕ ನೆರವು

    ಚುನಾವಣಾ ಹತ್ತಿರ ಬರುತ್ತಿದ್ದಂತೆ ಮಂಡ್ಯಗೆ ಭರಪೂರ ಆರ್ಥಿಕ ನೆರವು ನೀಡಲಾಗಿದೆ. ಮಂಡ್ಯ ಜಿಲ್ಲೆಗೆ ಜಲ ಜೀವನ್ ಮಿಷನ್‌ನಡಿ 800 ಕೋಟಿ ರೂ ಯೋಜನೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

  • 20 Feb 2023 08:08 PM (IST)

    Karnataka Political News Live: ಸಿಎಂ ಬೊಮ್ಮಾಯಿರನ್ನು ಭೇಟಿಯಾದ ಶಾಸಕ ಸಾ.ರಾ.ಮಹೇಶ್‌

    ಶಾಸಕ ಸಾ.ರಾ.ಮಹೇಶ್‌ ಸಿಎಂ ಬೊಮ್ಮಾಯಿರನ್ನು ಭೇಟಿಯಾಗಿದ್ದಾರೆ. ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ಮುಗಿಯುತ್ತಿದ್ದಂತೆ ಸಿಎಂ ಬೊಮ್ಮಾಯಿಗೆ ಕೆಲ ದಾಖಲೆಗಳನ್ನ ನೀಡಿ ಸಾ.ರಾ.ಮಹೇಶ್ ಮಾತುಕತೆ ನಡೆಸಿದ್ದಾರೆ.

  • 20 Feb 2023 07:57 PM (IST)

    Karnataka Political News Live: ಭಗವಂತ ವರ ಅಥವಾ ಶಾಪ ಕೊಡುವುದಿಲ್ಲ, ಅವಕಾಶ ಕೊಡ್ತಾನೆ – ಡಿಕೆಶಿ

    ಭಗವಂತ ವರ ಅಥವಾ ಶಾಪ ಕೊಡುವುದಿಲ್ಲ, ಅವಕಾಶ ಕೊಡ್ತಾನೆ. ನಿಮ್ಮ ಆಶೀರ್ವಾದದಿಂದ ಸಿದ್ದರಾಮಯ್ಯ ರಾಜ್ಯಕ್ಕೆ ಸಿಎಂ ಆಗಿದ್ದಾರೆ. ಸಿದ್ದರಾಮಯ್ಯ ಒಳ್ಳೆಯ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ‌. ಅವರ ಕೆಲಸವನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದೀರಿ. ಲೋಕೋಪಯೋಗಿ ಸಚಿವರಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ನಮ್ಮ ನಾಯಕ ಸಿದ್ದರಾಮಯ್ಯನವರ ಕೈಕೆಳಗೆ ಕೆಲಸ ಮಾಡಿದ್ದೇನೆ. ಟಿ.ನರಸೀಪುರ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ನಾನು 7 ಬಾರಿ ಗೆದ್ದಿದ್ದೇನೆ, ಸಿದ್ದರಾಮಯ್ಯ ಸಹ 7 ಬಾರಿ ಗೆದ್ದಿದ್ದಾರೆ. ಸಿದ್ದರಾಮಯ್ಯಗೆ ದೊಡ್ಡ ಅವಕಾಶ ಸಿಕ್ಕಿತು ಎಂದು ಮೇಗಳಾಪುರ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿದರು.

  • 20 Feb 2023 07:15 PM (IST)

    Karnataka Political News Live: ವೇದಿಕೆಯಲ್ಲೇ ಬಾದಾಮಿ‌ ಹಾರ ಚೆಲ್ಲಾಪಿಲ್ಲಿ

    ವೇದಿಕೆಯಲ್ಲೇ ಬಾದಾಮಿ‌ ಹಾರ ಚೆಲ್ಲಾಪಿಲ್ಲಿ ಆಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ರಿಗೆ ವರುಣ ಕ್ಷೇತ್ರದ ಮುಖಂಡರಿಂದ ಬಾದಾಮಿ‌ ಹಾರ ಹಾಕಲಾಯಿತು.

  • 20 Feb 2023 07:11 PM (IST)

    Karnataka Political News Live: ಮೋದಿ ಸರ್ಕಾರದ ಸಾಧನೆ ಅಂದ್ರೆ ಬಡವರು ಬಡವರಾಗೇ ಇದ್ದಾರೆ – ಡಾ.ಯತೀಂದ್ರ

    ಬೊಮ್ಮಾಯಿ ಸರ್ಕಾರ ಅಂದ್ರೆ 40% ಸರ್ಕಾರ ಅಂತಾ ನೆನಪಿಗೆ ಬರುತ್ತೆ ಎಂದು ಮೇಗಳಾಪುರ ಸಮಾವೇಶದಲ್ಲಿ ಕಾಂಗ್ರೆಸ್​​​ ಶಾಸಕ ಯತೀಂದ್ರ ಹೇಳಿಕೆ ನೀಡಿದ್ದಾರೆ. ಈ ಸರ್ಕಾರಕ್ಕೆ ಸಾಮಾನ್ಯ ಜನರ ಧ್ವನಿ ಕೇಳುತ್ತಿಲ್ಲ. ದೆಹಲಿಯಲ್ಲಿ ಪ್ರತಿಭಟನೆ ಮಾಡಿದರೂ ರೈತರ ಕಷ್ಟವನ್ನು ಕೇಳಲಿಲ್ಲ. ಮೋದಿ ನೇತೃತ್ವದ ಸರ್ಕಾರ ಉದ್ಯೋಗ ಸೃಷ್ಟಿ ಮಾಡಲು ವಿಫಲವಾಗಿದೆ. ರಾಜ್ಯದಲ್ಲೂ 2 ಲಕ್ಷ ಹುದ್ದೆ ಖಾಲಿ ಇದೆ. ಮೋದಿ ಸರ್ಕಾರದ ಸಾಧನೆ ಅಂದ್ರೆ ಬಡವರು ಬಡವರಾಗೇ ಇದ್ದಾರೆ. ಕಾಂಗ್ರೆಸ್ ಸರ್ಕಾರ‌ದ ಹಲವು ಯೋಜನೆಗಳು ಜನರ ಮನಸಿನಲ್ಲಿವೆ ಎಂದರು.

  • 20 Feb 2023 06:49 PM (IST)

    Karnataka Political News Live: ಕೋಲಾರದಲ್ಲಿ ಸಿದ್ದರಾಮಯ್ಯ ಗೆಲುವು ಖಚಿತ

    ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ಗೆಲ್ಲೋದು ಎಷ್ಟು ಸತ್ಯವೋ ಕೋಲಾರದಲ್ಲಿ ಸಿದ್ದರಾಮಯ್ಯ ಗೆಲ್ಲೋದು ಅಷ್ಟೇ ಸತ್ಯ. ಚಿನ್ನದ ನಾಡಲ್ಲಿ ಸಿದ್ದರಾಮಯ್ಯ ಗೆಲುವು ಖಚಿತ. ಈ ರಾಜ್ಯದಲ್ಲಿ ಎಸ್ಸಿ, ಎಸ್ಟಿ ಜನಕ್ಕೆ ಶೇ.24 ಮೀಸಲಾತಿ ನೀಡಿದ್ದು ಕಾಂಗ್ರೆಸ್ ಸರ್ಕಾರ. ಬಿಜೆಪಿ ಪಕ್ಷಕ್ಕೆ ಎಸ್ಸಿ ಎಸ್ಟಿ ಸಮುದಾಯದ ಅಭಿವೃದ್ಧಿ ಬೇಕಾಗಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಆದರೂ ಎಸ್ಸಿ ಎಸ್ಟಿ ಸಮುದಾಯಕ್ಕೆ ಮೀಸಲಾತಿ ನೀಡಲು ಆಗುತ್ತಿಲ್ಲ ಎಂದು ವರುಣ ಕ್ಷೇತ್ರದಲ್ಲಿ ಮಾಜಿ ಸಚಿವ‌ ಕೆ.ಹೆಚ್.ಮುನಿಯಪ್ಪ ಹೇಳಿಕೆ ನೀಡಿದರು.

  • 20 Feb 2023 06:44 PM (IST)

    Karnataka Political News Live: ಸಿದ್ದರಾಮಯ್ಯ ಅಭಿಮಾನಿಗಳಿಂದ ವಿಶೇಷ ಹರಕೆ

    ಕೋಲಾರದ ಆವಣಿ ರಾಮಲಿಂಗೇಶ್ವರ ರಥೋತ್ಸವದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಬಾಳೆಹಣ್ಣು ಎಸೆದು ಹರಕೆ ಸಲ್ಲಿಸಿದ್ದಾರೆ. ಮತ್ತೆ ಸಿಎಂ ಸಿದ್ದರಾಮಯ್ಯ ಹಾಗೂ ಕೋಲಾರ ವಿಧಾನಸಭೆ ಕ್ಷೇತ್ರಕ್ಕೆ ಶಾಸಕರು ಎಂದು ಬರೆದು ರಥೋತ್ಸವದಲ್ಲಿ ಹರಕೆ ಸಲ್ಲಿಸಲಾಗಿದೆ.

  • 20 Feb 2023 06:09 PM (IST)

    Karnataka Political News Live: ಮೇಗಳಾಪುರದಲ್ಲಿ ಕಾಂಗ್ರೆಸ್​ ಪ್ರಜಾಧ್ವನಿ ಬೃಹತ್ ಸಮಾವೇಶಕ್ಕೆ ಚಾಲನೆ

    ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರ ವ್ಯಾಪ್ತಿಯ ಮೇಗಳಾಪುರದಲ್ಲಿ ಕಾಂಗ್ರೆಸ್​ ಪ್ರಜಾಧ್ವನಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು ಸಮಾವೇಶಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಚಾಲನೆ ನೀಡಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಶಾಸಕ ಯತೀಂದ್ರ, ​ರಾಜ್ಯಸಭಾ ಸದಸ್ಯ ಚಂದ್ರಶೇಖರ್, ಎಂಎಲ್‌ಸಿ ಡಾ‌.ಡಿ.ತಿಮ್ಮಯ್ಯ, ಮಾಜಿ ಸಚಿವರಾದ ಹೆಚ್.ಸಿ.ಮಹದೇವಪ್ಪ ಹೆಚ್.ಎಂ.ರೇವಣ್ಣ ಭಾಗಿಯಾಗಿದ್ದಾರೆ.

  • 20 Feb 2023 05:54 PM (IST)

    Karnataka Political News Live: ಸಿದ್ದರಾಮಯ್ಯ, ನಾನು ನುಡಿದಂತೆ ನಡೆಯದಿದ್ರೆ ನಿಮ್ಮ ಬಳಿ ಮತ ಕೇಳಲ್ಲ -ಡಿ.ಕೆ.ಶಿವಕುಮಾರ್

    ಸಿದ್ದರಾಮಯ್ಯ, ನಾನು ನುಡಿದಂತೆ ನಡೆಯದಿದ್ರೆ ನಿಮ್ಮ ಬಳಿ ಮತ ಕೇಳಲ್ಲ. ಜನರಿಗೆ ಕೊಟ್ಟ ಭರವಸೆಯನ್ನು ನಾವು ಈಡೇರಿಸಿಯೇ ಈಡೇರಿಸ್ತೇವೆ. ಒಬ್ಬ ಮಂತ್ರಿ ಮಂಚಕ್ಕೆ, ಒಬ್ಬ ಮಂತ್ರಿ ಲಂಚಕ್ಕೆ ಸ್ಥಾನ ಬಿಡಬೇಕಾಯ್ತು. ಇಂತಹ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಬೇಕು. ಟಿ.ನರಸೀಪುರದಲ್ಲಿ ಮಹದೇವಪ್ಪ, ಸುನೀಲ್ ಬೋಸ್ ಅಭ್ಯರ್ಥಿಯಲ್ಲ. ಇಲ್ಲಿ ಸಿದ್ದರಾಮಯ್ಯ, ಡಿಕೆಶಿ, ಮಲ್ಲಿಕಾರ್ಜುನ ಖರ್ಗೆಯೇ ಅಭ್ಯರ್ಥಿ. ವಿಧಾನಸೌಧದಲ್ಲಿ ಡಿಕೆಶಿ ಕೂರಿಸಬೇಕಾದರೆ ನಿಮ್ಮ ಮತ ನನಗೆ ಬೇಕು. ನಾನೇ ಹೆಚ್​.ಡಿ.ಕುಮಾರಸ್ವಾಮಿಗೆ ಮೋಸ ಮಾಡಿದ್ದೇನಾ? ಇಲ್ಲ ತಾನೇ. ಹೆಚ್​​.ಡಿ.ಕುಮಾರಸ್ವಾಮಿ ಜೊತೆ ಕೈ ಜೋಡಿಸಿ ನಿಂತಿದ್ದೆ ಅಲ್ಲವೇ?ನಾನು ಸಹ ನಿಮ್ಮ ಸೇವೆ ಮಾಡುವ ಒಂದು ಅವಕಾಶ ಕೊಡಬೇಕು ಎಂದು ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಬನ್ನೂರಿನಲ್ಲಿ ನಡೆದ ‘ಕೈ’ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

  • 20 Feb 2023 05:45 PM (IST)

    Karnataka Political News Live: ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ನಂಬರ್ 1 ಆಗಿದೆ -ಜೆ.ಪಿ.ನಡ್ಡಾ

    ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ನಂಬರ್ 1 ಆಗಿದೆ ಎಂದು ಉಡುಪಿ ಜಿಲ್ಲೆ ಬೈಂದೂರಿನಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿಕೆ ನೀಡಿದ್ದಾರೆ. ಏರ್​ಕ್ರಾಫ್ಟ್ ವಿಭಾಗದಲ್ಲಿ ಕರ್ನಾಟಕದ ಪಾಲು ಶೇ.70ರಷ್ಟು ಇದೆ. ದಲಿತರು, ಬುಡಕಟ್ಟು, ರೈತರು ಸೇರಿ ಎಲ್ಲ ವರ್ಗಗಳಿಗೆ ಬಿಎಸ್​ವೈ ಹಾಗೂ ಸಿಎಂ ಬೊಮ್ಮಾಯಿ ಸರ್ಕಾರದಿಂದ ಅನುಕೂಲ ಆಗಲಿದೆ. ಒಡೆದು ಆಳುವುದು ಕಾಂಗ್ರೆಸ್​​ನವರ ಮೂಲ ಸ್ವಭಾವ. ಕಾನೂನನ್ನು ಕೈಗೆ ತೆಗೆದುಕೊಳ್ಳುವವರನ್ನು ಬಿಡುಗಡೆ ಮಾಡಿದ್ದಾರೆ. ಪಿಎಫ್​ಐನ 1,600 ಕಾರ್ಯಕರ್ತರನ್ನು ಜೈಲಿನಿಂದ ಬಿಡುಗಡೆ. ಕಾಂಗ್ರೆಸ್​ ಸರ್ಕಾರ ಅಶಾಂತಿ ಮೂಡಿಸುವ ಉದ್ದೇಶ ಹೊಂದಿತ್ತು ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

  • 20 Feb 2023 05:42 PM (IST)

    Karnataka Political News Live: ಸದನದಲ್ಲೂ ಪ್ರತಿಧ್ವನಿಸಿದ ಮಹಿಳಾ ಐಎಎಸ್‌, ಐಪಿಎಸ್‌ ವಾರ್‌

    ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮೇಲೆ ಮುಗಿ ಬೀಳುತ್ತಿರುವ ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗೀಲ್ ಅವರು ಮೇಲಿಂದ ಮೇಲೆ ಸಿಂಧೂರಿ ವಿರುದ್ಧ ಪೋಸ್ಟ್​ಗಳನ್ನು ಮಾಡುತ್ತಲೇ ಇದ್ದಾರೆ. ಇವರಿಬ್ಬರ ಜಟಾಪಟಿ ಇದೀಗ ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ್ದು, ಆಡಳಿತ ಮತ್ತು ವಿಪಕ್ಷ ನಡುವೆ ವಾಕ್ಸಮರ ನಡೆಯಿತು. ಬಜೆಟ್ ಮೇಲಿನ ಚರ್ಚೆ ವೇಳೆ ಮಳವಳ್ಳಿ ಜೆಡಿಎಸ್ ಶಾಸಕ ಅನ್ನದಾನಿ ಅವರು ಇಬ್ಬರು ಮಹಿಳಾ ಅಧಿಕಾರಿಗಳ ಜಟಾಪಟಿ ಬಗ್ಗೆ ಪ್ರಸ್ತಾಪ ಮಾಡಿದರು. ಈ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಅಧಿಕಾರಿಗಳ ಕಿತ್ತಾಟದಿಂದ ನಮ್ಮ ಮಾನ ಮರ್ಯಾದೆ ಹರಾಜು ಆಗುತ್ತಿದೆ ಎಂದರು. ಈ ವೇಳೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ, ಮಹಿಳಾ ಐಎಎಸ್‌, ಐಪಿಎಸ್‌ ವಾರ್‌ ಬಗ್ಗೆ ಆ ಮೇಲೆ ಮಾತಾಡೋಣ ಎಂದರು. ಸ್ಪೀಕರ್ ಭರವಸೆ ನೀಡಿದ ಬಳಿಕ ಅನ್ನದಾನಿ ಸುಮ್ಮನಾದರು.

  • 20 Feb 2023 05:38 PM (IST)

    Karnataka Political News Live: ಬಜೆಟ್​​ ಮೇಲೆ ಚರ್ಚೆ ಆರಂಭಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ

    ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಬಜೆಟ್​​ ಮೇಲೆ ಚರ್ಚೆ ಆರಂಭಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸದನಕ್ಕೆ ಸುಳ್ಳು ಹೇಳಿದ್ದಾರೆ. ಪ್ರಣಾಳಿಕೆಯಲ್ಲಿ ನೀಡಿದ್ದ ಶೇ.90ರಷ್ಟು ಭರವಸೆಯನ್ನು ಈಡೇರಿಸಿದ್ದೇವೆ ಎಂದರು. ಈ ಬಗ್ಗೆ ಬೊಮ್ಮಾಯಿ ತಪ್ಪು ಹೇಳಿದ್ದಾರೆ. ನಮ್ಮ ಅಭಿವೃದ್ಧಿ ಕೆಲಸ, ಅವರ ಅಭಿವೃದ್ಧಿ ಕೆಲಸ ಬಗ್ಗೆ ಚರ್ಚೆಗೆ ಬರಲಿ ಎಂದರು.

  • 20 Feb 2023 04:40 PM (IST)

    Karnataka Political News Live: ದೇಹದಿಂದ ಜೀವ ಹೋದರೆ ಅವರು ಹೆಣಕ್ಕೆ ಸಮ

    ಉಡುಪಿ: ಕೇಸರಿ ಕಂಡರೆ ಆಗದ ಮಾಜಿ ಸಿಎಂ ಒಬ್ಬರು ನಾನು ಹಿಂದೂ ಅಂತಾರೆ. ಆದರೆ ಹಿಂದುತ್ವವಾದಿಯಲ್ಲ ಎಂದು ಹೇಳುತ್ತಾರೆ. ಹಿಂದೂ ಅಂದ್ರೆ ದೇಹ, ಹಿಂದುತ್ವ ಅನ್ನೋದು ಜೀವ. ದೇಹದಿಂದ ಜೀವ ಹೋದರೆ ಅವರು ಹೆಣಕ್ಕೆ ಸಮ ಎಂದು ಮಾಜಿ ಸಿಎಂ ಸಿದ್ಧರಾಮಯ್ಯರನ್ನು ಪರೋಕ್ಷವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೆಣಕ್ಕೆ ಹೋಲಿಸಿದ್ದಾರೆ.

  • 20 Feb 2023 04:11 PM (IST)

    Karnataka Political News Live: ಬಿಜೆಪಿಯದ್ದು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ನೀತಿ

    ಉಡುಪಿ: ಕಲ್ಲಡ್ಕ ಶಾಲೆಯ ಅನ್ನ ಕಿತ್ತದ್ದು ಕಾಂಗ್ರೆಸ್​ನ ನೀತಿ. ದೇಶ ದ್ರೋಹಿ ಪಿಎಫ್ಐನವರನ್ನು ಜೈಲಿನಿಂದ ಬಿಡುಗಡೆ ಮಾಡಿದ್ದು ಕಾಂಗ್ರೆಸ್ ನೀತಿ. ನೀತಿಯೇ ಇಲ್ಲದವರು ಜೆಡಿಎಸ್​ನವರು, ಅವರದ್ದು‌ ಇವತ್ತು ಒಂದು, ನಾಳೆ ಒಂದು ನೀತಿ. ಆದರೆ ಬಿಜೆಪಿಯದ್ದು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ನೀತಿ. ಡಿಎನ್ಎ ಮೂಲಕ ಲೀಡರ್ ಶಿಪ್ ಪಡೆಯುವ ದೌರ್ಬಾಗ್ಯ ನಮ್ಮ ಪಕ್ಷಕ್ಕಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

  • 20 Feb 2023 03:53 PM (IST)

    Karnataka Political News Live: ಕಾರ್ಯಕರ್ತರಿಗೆ ಕರೆ ನೀಡಿದ ಡಿ.ಕೆ. ಶಿವಕುಮಾರ್

    ಮೈಸೂರು: ಜೀವ ಕೊಟ್ಟು ನಿಮಗಾಗಿ ಹೋರಾಟ ಮಾಡುತ್ತೇನೆ. ನೀವು ನನ್ನ ಜೊತೆ ಇರಿ ಸಾಕು ಎಂದು ಕಾರ್ಯಕರ್ತರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕರೆ ಕೊಟ್ಟಿದ್ದಾರೆ. ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಹುಟ್ಟು ಸಾವಿನ ನಡುವೆ ನಾವು ಏನೂ ಕೆಲಸ ಮಾಡುತ್ತೇವೆ ಎಂಬುದು ಮುಖ್ಯ ಎಂದು ಹೇಳಿದರು.

  • 20 Feb 2023 03:19 PM (IST)

    Karnataka Political News Live: ಗೋ ಹತ್ಯಾ ನಿಷೇಧ ಕಾನೂನು ಸಮರ್ಪಕ ಜಾರಿಗೆ ತನ್ನಿ

    ಉಡುಪಿ: ದೇಶ ದ್ರೋಹಿ ಮತ್ತು ಉಗ್ರವಾದಿ ಚಟುವಟಿಕೆಗಳನ್ನು ಮಟ್ಟಹಾಕಬೇಕು. ಕರಾವಳಿ ಮಲೆನಾಡು ಜಿಲ್ಲೆಗಳನ್ನು ಕೇಂದ್ರವಾಗಿಟ್ಟುಕೊಂಡು ರಾಷ್ಟ್ರೀಯ ತನಿಖಾ ದಳದ ವಿಭಾಗವನ್ನು ಶೀಘ್ರ ಆರಂಭಿಸುವುದು. ಗೋ ಹತ್ಯಾ ನಿಷೇಧ ಕಾನೂನು ಸಮರ್ಪಕ ಜಾರಿಗೆ ತನ್ನಿ. ಗೋಸಂರಕ್ಷಣೆಗೆ ಪೂರಕ ಯೋಜನೆಗಳಿಗೆ ನೆರವು ನೀಡುವುದು. ಭ್ರಷ್ಟಾಚಾರ ಮುಕ್ತ, ಸ್ವಚ್ಛ, ಪಾರದರ್ಶಕ ಆಡಳಿತ ನೀಡುವುದು. ದೇವಸ್ಥಾನಗಳ ಭೂಮಿ ಅತಿಕ್ರಮಣ ತಡೆಗಟ್ಟಲು ಕ್ರಮಕೈಗೊಳ್ಳುವುದು ಹೀಗೆ ಹಲವು ಬೇಡಿಕೆಗಳನ್ನು ನಡ್ಡಾ ಮುಂದಿಡಲಾಗಿದೆ.

  • 20 Feb 2023 03:06 PM (IST)

    Karnataka Political News Live: ನಡ್ಡಾ ಬಳಿ ಹಲವು ಬೇಡಿಕೆಯಿಟ್ಟ: ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

    ಉಡುಪಿ: ಕರಾವಳಿ ಭಾಗದ ಸಾಧು ಸಂತರಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಬಳಿ ಹಲವು ಬೇಡಿಕೆ ಮುಂದಿಟ್ಟಿದ್ದೇವೆ ಎಂದು ಉಡುಪಿಯಲ್ಲಿ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. ತುಳು ಭಾಷೆಗೆ ಸೂಕ್ತ ಮಾನ್ಯತೆ ನೀಡಬೇಕು. ಸನಾತನ ಧರ್ಮ‌, ಸಂಸ್ಕೃತಿ ಸದ್ವಿಚಾರಗಳಿಗೆ ಸದಾ ಮನ್ನಣೆ ನೀಡಬೇಕು. ರಾಜ್ಯದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸಲು ಕ್ರಮಕೈಗೊಳ್ಳಬೇಕು. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದ್ದಾರೆ.

  • 20 Feb 2023 02:48 PM (IST)

    Karnataka Political News Live: ಸರಕಾರದ ಮೇಲೆ ಸುಮ್ಮನೆ ಆರೋಪ ಮಾಡುವುದಲ್ಲ: ಸಿಎಂ ಬೊಮ್ಮಾಯಿ

    ಬೆಂಗಳೂರು: ಸರಕಾರದ ಮೇಲೆ ಸುಮ್ಮನೆ ಆರೋಪ ಮಾಡುವುದಲ್ಲ. ಯಾವುದೇ ದಾಖಲೆ ಇದ್ದರೆ ನೇರವಾಗಿ ಸರ್ಕಾರದ ಬಳಿಗೆ ಬನ್ನಿ. ತನಿಖೆ ಮಾಡಲು ನಾವು ಸದಾ ಸಿದ್ಧ ಇದ್ದೇವೆ. ಹಾಲು ಹಾಲಾಗಲಿ, ನೀರು ನೀರಾಗಲಿ ಎಂದು ಸದನದಲ್ಲಿ ಹೇಳಿದ ಸಿಎಂ ಬೊಮ್ಮಾಯಿ‌ ಹೇಳಿದರು. ಮಧ್ಯೆ ಪ್ರವೇಶ ಮಾಡಿದ ದೇವರ ಹಿಪ್ಪರಗಿ ಶಾಸಕ ದೇವಾನಂದ ಚೌಹಾಣ್, ವಿಜಯಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡನೊಬ್ಬ ನಕಲಿ ದಾಖಲೆ ಇಟ್ಟುಕೊಂಡು ಟೆಂಡರ್​ಗೆ ಮುಂದಾಗಿದ್ದಾನೆ. ಭಜಂತ್ರಿ ಎಂಬಾತ ಇಂತಹದೊಂದು ಕೆಲಸ ಮಾಡ್ತಿದ್ದಾನೆ ಎಂದು ಹೇಳಿದರು.

  • 20 Feb 2023 02:30 PM (IST)

    Karnataka Political News Live: ಕಾಂಗ್ರೆಸ್ ನಾಯಕರು ಮತ್ತೆ ನಿರುದ್ಯೋಗಿಗಳಾಗ್ತಾರೆ; ಕಟೀಲ್

    ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಮುಖ್ಯಮಂತ್ರಿ ಕುರ್ಚಿ ಕನಸು ಕಾಣುವ ಕಾಂಗ್ರೆಸ್ಸಿಗರು ನಿರುದ್ಯೋಗಿಗಳಾಗ್ತಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್​ ಕುಮಾರ್ ಕಟೀಲ್ ಉಡುಪಿಯಲ್ಲಿ ಹೇಳಿದ್ದಾರೆ.

  • 20 Feb 2023 11:37 AM (IST)

    Bangalore, Karnataka News Live: ಒಂದು ಗಂಟೆ ತಡವಾಗಿ ಆರಂಭವಾದ ವಿಧಾನಸಭೆ ಕಲಾಪ

    ವಿಧಾನಸಭೆ ಕಲಾಪ ಒಂದು ಗಂಟೆ ತಡವಾಗಿ ಆರಂಭವಾಯಿತು. ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ರಾಜ್ಯ ಸರ್ಕಾರದ ಉತ್ತರವನ್ನು ಸಿಎಂ ಬೊಮ್ಮಾಯಿ‌ ಆರಂಭಿಸಿದ್ದಾರೆ.

  • 20 Feb 2023 10:37 AM (IST)

    Bangalore, Karnataka News Live: ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ಜೆಪಿ ನಡ್ಡಾ

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಉಡುಪಿ ಶ್ರೀಕೃಷ್ಣ ಮಠಕ್ಕೆ ತೆರಳಿ ಶ್ರೀಕೃಷ್ಣನ ದರ್ಶನ ಪಡೆದರು. ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಸಿ.ಟಿ.ರವಿ, ಸುನೀಲ್ ​ಕುಮಾರ್ ಉಪಸ್ಥಿತರಿದ್ದರು.

  • 20 Feb 2023 10:30 AM (IST)

    Bangalore, Karnataka News Live: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್​​​ಗೆ ಅನಾರೋಗ್ಯ

    ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್​​​ಗೆ ಮಂಗಳೂರಿನಲ್ಲಿ ಅನಾರೋಗ್ಯ ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ತೆರಳಿದ್ದಾರೆ. ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

  • 20 Feb 2023 09:43 AM (IST)

    Bangalore, Karnataka News Live: ಬೂತ್​ ಮಟ್ಟದ ಕಾರ್ಯಕರ್ತರ ಜತೆ ಎಚ್​ಡಿಕೆ ಸಭೆ

    ಜೆಡಿಎಸ್ ನಾಯಕ ಎಚ್​ಡಿ ಕುಮಾರಸ್ವಾಮಿ ಇಂದು ವರ್ಚುವಲ್ ಆಗಿ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರ ಜತೆ ಸಭೆ ನಡೆಸಲಿದ್ದಾರೆ. ಅಭ್ಯರ್ಥಿಗಳ ಗ್ರೌಂಡ್​​ ರಿಪೋರ್ಟ್​ ಪಡೆಯಲಿದ್ದು, ನಂತರ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.

  • 20 Feb 2023 09:39 AM (IST)

    Bangalore, Karnataka News Live: ದೇವನಹಳ್ಳಿ ಟಿಕೆಟ್​​ಗಾಗಿ ಕಾಂಗ್ರೆಸ್ ಪಕ್ಷದಲ್ಲಿ ಬಿನ್ನಮತ

    ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ ಮತ್ತು ಕೆಪಿಸಿಸಿ ಸದಸ್ಯ ಎ.ಸಿ.ಶ್ರೀನಿವಾಸ್​​ರಿಂದ ಟಿಕೆಟ್​​​ಗಾಗಿ ಲಾಬಿ ನಡೆಯುತ್ತಿದ್ದು, ಕಾಂಗ್ರೆಸ್​ನಲ್ಲಿ ಭಿನ್ನಮತ ಸೃಷ್ಟಿಯಾಗಿದೆ. ಕೆ.ಹೆಚ್ ಮುನಿಯಪ್ಪ ನಂತರ ಎಸಿ ಶ್ರೀನಿವಾಸ್ ಟಿಕೆಟ್ ಪಡೆಯಲು ಭಾರಿ ಕಸರತ್ತು ನಡೆಸುತ್ತಿದ್ದಾರೆ.

  • 20 Feb 2023 09:25 AM (IST)

    Bangalore, Karnataka News Live: ಸಿದ್ದರಾಮಯ್ಯ ತವರಲ್ಲಿ ಡಿಕೆಶಿ ಪ್ರಜಾಧ್ವನಿ

    ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತವರಿನಲ್ಲಿ ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಜಾಧ್ವನಿ ಯಾತ್ರೆ ನಡೆಸಲಿದ್ದಾರೆ. ಮೈಸೂರು ಜಿಲ್ಲೆ ಟಿ.ನರಸೀಪುರ, ವರುಣ, ನಂಜನಗೂಡಲ್ಲಿ ಯಾತ್ರೆ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ವರುಣ ಕ್ಷೇತ್ರದಲ್ಲಿ ಹಾಗೂ ಸಂಜೆ 5ಕ್ಕೆ ನಂಜನಗೂಡು ಕ್ಷೇತ್ರದಲ್ಲಿ ಕಾಂಗ್ರೆಸ್​ ಪ್ರಜಾಧ್ವನಿ ಯಾತ್ರೆ ನಡೆಯಲಿದೆ.

  • Published On - Feb 20,2023 9:24 AM

    Follow us