ರಾಜ್ಯದಲ್ಲಿ ಗುಜರಾತ್ ಮಾದರಿಯಲ್ಲಿ ಟಿಕೆಟ್ ಹಂಚಿಕೆ; ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಗುಜರಾತ್ ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿಯಲ್ಲಿ ಹೊಸ ಹುಮ್ಮಸ್ಸು ಶುರುವಾಗಿದ್ದು ಒಂದು ಕಡೆಯಾದರೆ ಇತ್ತ ಕೆಲವರಿಗೆ ಟಿಕೆಟ್ ಕೈ ತಪ್ಪುವ ಆತಂಕ ಎದುರಾಗಿದೆ. ಗುಜರಾತ್ ಮಾದರಿಯಲ್ಲಿಯೇ ರಾಜ್ಯ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯನ್ನ ಹೈಕಮಾಂಡ್ ಮಾಡಲಿದ್ದಾರೆ ಎನ್ನುವ ವಿಚಾರ ಇದೀಗ ಕೆಲವರಿಗೆ ನಡುಕ ಹುಟ್ಟುವಂತೆ ಮಾಡಿದೆ.
ಬೆಳಗಾವಿ: ರಾಜ್ಯದಲ್ಲಿ ಗುಜರಾತ್ ಮಾದರಿಯಂತೆ ಟಿಕೆಟ್ ಹಂಚಿಕೆಯಾಗಲಿದೆ. ಗುಜರಾತ್ ಚುನಾವಣೆಯಲ್ಲಿ ಹಾಲಿ ಶಾಸಕರು ಸೇರಿದಂತೆ ಘಟಾನುಘಟಿ ನಾಯಕರಿಗೆ ಟಿಕೆಟ್ ನೀಡದೇ ಹೊಸಬರಿಗೆ ಅವಕಾಶ ನೀಡಲಾಗಿದ್ದು, ಈ ಪ್ರಯೋಗದಲ್ಲಿ ಬಿಜೆಪಿ ಹೈಕಮಾಂಡ್ ಸಕ್ಸಸ್ ಆಗಿದೆ. ಇದೇ ಮಾದರಿಯನ್ನ ರಾಜ್ಯದಲ್ಲಿ ಅಳವಡಿಕೆ ಮಾಡಲು ಸಜ್ಜಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದು, ಇದೀಗ ಹಲವು ಬಿಜೆಪಿ ನಾಯಕರ ನಿದ್ದೆಗೆಡಿಸಿದೆ.
ಇತ್ತೀಚೆಗಷ್ಟೇ ಗುಜರಾತ್ ವಿಧಾಸಭಾ ಚುನಾವಣೆಯಲ್ಲಿ ಭರ್ಜರಿಯಾಗಿ ಗೆದ್ದು ಬೀಗಿರುವ ಬಿಜೆಪಿ ಇದೀಗ ಕರ್ನಾಟಕದ ಮೇಲೆ ಕಣ್ಣಿಟ್ಟಿದೆ. ರಾಜ್ಯದಲ್ಲೂ ದಿಗ್ವಿಜಯ ಸಾಧಿಸಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಪ್ರಧಾನಿ ಮೋದಿ ಸೇರಿದಂತೆ ಕೇಂದ್ರ ಸಚಿವ ಅಮಿತ್ ಶಾ, ಜೆ.ಪಿ ನಡ್ಡಾ ಸಾಕಷ್ಟು ಪ್ಲ್ಯಾನ್ ಮಾಡಿಕೊಂಡಿದ್ದು ಜನವರಿಯಿಂದಲೇ ರಾಜ್ಯದಲ್ಲೇ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ. ಇನ್ನು ಗುಜರಾತ್ ಗೆಲುವು ರಾಜ್ಯ ಬಿಜೆಪಿ ಕಾರ್ಯಕರ್ತರ ಹುಮ್ಮಸ್ಸನ್ನು ಇನ್ನಷ್ಟು ಹೆಚ್ಚಾಗುವಂತೆ ಮಾಡಿದ್ದು ಈ ಬಾರಿ ಗೆಲುವಿಗೆ ಶ್ರಮ ಹಾಕಲು ಸಿದ್ದರಾಗಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಇದೀಗ ಟಿಕೆಟ್ ಹಂಚಿಕೆ ವಿಚಾರ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು ಹಾಲಿ ಮತ್ತು ಮಾಜಿ ಶಾಸಕರಿಗೆ ಟಿಕೆಟ್ ಕೈತಪ್ಪುವ ಭೀತಿ ಎದುರಾಗಿದೆ.ಇದಕ್ಕೆ ಕಾರಣ ಗುಜರಾತ್ ಚುನಾವಣೆಯ ರಿಸಲ್ಟ್, ಇನ್ನೂ ಸಿಎಂ ಬಸವರಾಜ ಬೊಮ್ಮಾಯಿ ಗುಜರಾತ್ ಪ್ರವಾಸದಲ್ಲಿರುವಾಗಲೇ ರಾಜ್ಯದಲ್ಲಿ ಟಿಕೆಟ್ ಹಂಚಿಕೆ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಸದ್ಯ ಯಾರಿಗೆ ಟಿಕೆಟ್ ಸಿಗುತ್ತದೆ ಎನ್ನುವುದು ಸಸ್ಪೇನ್ಸ್ ಆಗಿದೆ.
ಬೆಳಗಾವಿಯಲ್ಲಿ ಟಿಕೆಟ್ ಹಂಚಿಕೆ ಕುರಿತು ಮಾತನಾಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈ ಬಾರಿ ರಾಜ್ಯದಲ್ಲಿ ಗುಜರಾತ್ ಮಾದರಿಯಲ್ಲೇ ಟಿಕೆಟ್ ಹಂಚಿಕೆ ಮಾಡುತ್ತಾರೆ. ಬಹಳಷ್ಟು ಬದಲಾವಣೆ ಆಗಲಿದೆ. ಯಾರ ಮೇಲೆ ಆರೋಪ ಇದೆ ಅಂತವರನ್ನ ತೆಗೆಯಲಿದ್ದಾರೆ, ಜೊತೆಗೆ ಒಂದೇ ಕುಟುಂಬದಲ್ಲಿ ಎರಡು ಮೂರು ಟಿಕೆಟ್ ಈ ಬಾರಿ ಸಿಗುವುದಿಲ್ಲ. ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಸಿಗುತ್ತದೆ. ಈ ಮೂಲಕ ಕರ್ನಾಟಕ ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಬೀಳುತ್ತದೆ ಎಂಬ ಹೇಳಿಕೆಯನ್ನ ಯತ್ನಾಳ ನೀಡಿದ್ದಾರೆ.
ಇನ್ನು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರವಾಸ ಮಾಡಲಿದ್ದು, ಇದು ಬಿಜೆಪಿಗೆ ಹೊಸ ಚೈತನ್ಯ ತುಂಬುವಂತೆ ಮಾಡಲಿದೆ. ಆದರೆ ಸದ್ಯ ಟಿಕೆಟ್ ವಿಚಾರದಲ್ಲಿ ಕೆಲವರಿಗೆ ಕೋಕ್ ಬೀಳುವ ಸಾಧ್ಯತೆ ಇದ್ದು, ಹೀಗಾಗಿ ಲಾಬಿಯನ್ನ ಮಾಡಲು ಶುರು ಮಾಡಿದ್ದಾರೆ. ಇತ್ತ ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಎನ್ನುವುದು ಕೂಡ ಚರ್ಚೆ ಆಗುತ್ತಿದ್ದು, ಇದನ್ನು ಬಿಜೆಪಿ ಹೈಕಮಾಂಡ್ ಹೇಗೆ ನಿಭಾಯಿಸಲಿದೆ ಎನ್ನುವುದನ್ನ ಕಾದುನೋಡಬೇಕಾಗಿದೆ. ಆದರೆ ಟಿಕೆಟ್ ವಿಚಾರ ಕೆಲವರ ನಿದ್ದೆಗೆಡಿಸಿದ್ದಂತೂ ಸುಳ್ಳಲ್ಲ.
ವರದಿ: ಸಹದೇವ ಮಾನೆ ಟಿವಿ9 ಬೆಳಗಾವಿ
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ