Gujarat CM Oath Taking: ಗುಜರಾತ್ ಮುಖ್ಯಮಂತ್ರಿಯಾಗಿ ಇಂದು ಭೂಪೇಂದ್ರ ಪಟೇಲ್ ಪ್ರಮಾಣವಚನ; ಪ್ರಧಾನಿ ಮೋದಿ, ಬಿಜೆಪಿ ನಾಯಕರು ಭಾಗಿ

ಇಂದು ಮಧ್ಯಾಹ್ನ 2 ಗಂಟೆಗೆ ಗಾಂಧಿನಗರದ ಬಳಿ ಇರುವ ಹೆಲಿಪ್ಯಾಡ್ ಮೈದಾನದಲ್ಲಿ ಗುಜರಾತ್​ ರಾಜ್ಯಪಾಲ ಆಚಾರ್ಯ ದೇವ್ರತ್ ಸಿಎಂ ಭೂಪೇಂದ್ರ ಪಟೇಲ್ ಅವರಿಗೆ ಪ್ರಮಾಣವಚನ ಭೋದಿಸಲಿದ್ದಾರೆ.

Gujarat CM Oath Taking: ಗುಜರಾತ್ ಮುಖ್ಯಮಂತ್ರಿಯಾಗಿ ಇಂದು ಭೂಪೇಂದ್ರ ಪಟೇಲ್ ಪ್ರಮಾಣವಚನ; ಪ್ರಧಾನಿ ಮೋದಿ, ಬಿಜೆಪಿ ನಾಯಕರು ಭಾಗಿ
ಸಿಎಂ ಭೂಪೇಂದ್ರ ಪಟೇಲ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Dec 12, 2022 | 9:12 AM

ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ (Gujarat Assembly Election Results) ಭರ್ಜರಿ ಗೆಲುವು ಕಂಡಿರುವ ಭೂಪೇಂದ್ರ ಪಟೇಲ್ (Bhupendra Patel) ಇಂದು (ಡಿಸೆಂಬರ್ 12) ಎರಡನೇ ಬಾರಿಗೆ ಗುಜರಾತ್​ನ 18ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi), ಗೃಹ ಸಚಿವ ಅಮಿತ್ ಶಾ (Amit Shah), ರಕ್ಷಣಾ ಸಚಿವ ರಾಜನಾಥ ಸಿಂಗ್, ಬಿಜೆಪಿ ಸರ್ಕಾರವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ. ಇಂದು ಮಧ್ಯಾಹ್ನ 2 ಗಂಟೆಗೆ ಗಾಂಧಿನಗರದ ಬಳಿ ಇರುವ ಹೆಲಿಪ್ಯಾಡ್ ಮೈದಾನದಲ್ಲಿ ಗುಜರಾತ್​ ರಾಜ್ಯಪಾಲ ಆಚಾರ್ಯ ದೇವ್ರತ್ (Governor Acharya Devvrat) ಸಿಎಂ ಭೂಪೇಂದ್ರ ಪಟೇಲ್ ಅವರಿಗೆ ಪ್ರಮಾಣವಚನ ಭೋದಿಸಲಿದ್ದಾರೆ.

ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ 20 ಸಚಿವರು ಕೂಡ ಇದೇ ವೇಳೆ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ನಾಳೆ ಭೂಪೇಂದ್ರ ಪಟೇಲ್ ಮತ್ತು ಇತರೆ ಸಚಿವರು ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಭೂಪೇಂದ್ರ ಪಟೇಲ್ ಅವರು 2017ರಲ್ಲಿ 1.17 ಲಕ್ಷ ಮತಗಳ ಭಾರೀ ಅಂತರದಿಂದ ಗೆದ್ದಿದ್ದರು. ಈ ಚುನಾವಣೆಯ ನಂತರ ಭೂಪೇಂದ್ರ ಪಟೇಲ್ ಅವರನ್ನೇ ಮತ್ತೆ ಮುಖ್ಯಮಂತ್ರಿಯಾಗಿ ನೇಮಿಸಲಾಗುವುದು ಎಂದು ಬಿಜೆಪಿ ಈಗಾಗಲೇ ಘೋಷಿಸಿತ್ತು. ಈ ಬಾರಿಯೂ ಭೂಪೇಂದ್ರ ಪಟೇಲ್ ಗೆಲುವು ಕಂಡಿರುವುದರಿಂದ ಮತ್ತೊಂದು ಅವಧಿಗೆ ಅವರೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಇದನ್ನೂ ಓದಿ: ರಾಜೀನಾಮೆ ಸಲ್ಲಿಸಿದ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್; ಡಿಸೆಂಬರ್ 12ಕ್ಕೆ ಪ್ರಮಾಣ ವಚನ ಸ್ವೀಕಾರ

ಬಿಜೆಪಿಯು ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ 156 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಗೆಲುವು ಸಾಧಿಸಿದೆ. ಇದು 1960ರಲ್ಲಿ ಗುಜರಾತ್ ರಾಜ್ಯ ರಚನೆಯಾದ ನಂತರ ಒಂದು ಪಕ್ಷ ಗೆದ್ದಿರುವ ಅತ್ಯಧಿಕ ಸಂಖ್ಯೆಯ ಸ್ಥಾನವಾಗಿದೆ. ಗುಜರಾತ್‌ನಲ್ಲಿ ಬಿಜೆಪಿಯ ಸತತ 7ನೇ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ.

ಇಂದು ಗಾಂಧಿನಗರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಮತ್ತು ಇತರ ಕೇಂದ್ರ ಸಚಿವರು ಭಾಗವಹಿಸಲಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳು ಮತ್ತು ಮಿತ್ರಪಕ್ಷಗಳ ಮುಖ್ಯಮಂತ್ರಿಗಳೂ ಪಾಲ್ಗೊಳ್ಳಲಿದ್ದಾರೆ. ಪಟ್ಟಿಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಸ್ಸಾಂನ ಹಿಮಂತ ಬಿಸ್ವಾ ಶರ್ಮಾ, ಹರಿಯಾಣದ ಮನೋಹರ್ ಲಾಲ್ ಖಟ್ಟರ್, ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್, ಕರ್ನಾಟಕದ ಬಸವರಾಜ ಬೊಮ್ಮಾಯಿ, ಉತ್ತರಾಖಂಡದ ಪುಷ್ಕರ್ ಸಿಂಗ್ ಧಾಮಿ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕೂಡ ಪಾಲ್ಗೊಳ್ಳಲಿದ್ದಾರೆ. ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ, ಹಿರಿಯ ನಾಯಕ ಬಿಎಲ್ ಸಂತೋಷ್ ಮತ್ತು ಗುಜರಾತ್‌ನಲ್ಲಿ ಪ್ರಚಾರ ನಡೆಸಿರುವ ಸಂಸದರು ಸಹ ಈ ವೇಳೆ ಉಪಸ್ಥಿತರಿರುವರು ಎಂದು ಮೂಲಗಳು ತಿಳಿಸಿವೆ.

ಪ್ರಧಾನ ವೇದಿಕೆಯ ಬಲಭಾಗದಲ್ಲಿರುವ ವೇದಿಕೆಯಲ್ಲಿ ಪ್ರಧಾನಿ ಮತ್ತು ವಿವಿಐಪಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಎಡಭಾಗದಲ್ಲಿ ರಾಜ್ಯದ 200 ಸಾಧುಗಳಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಅವರನ್ನು ಸಮಾರಂಭಕ್ಕೆ ವಿಶೇಷವಾಗಿ ಆಹ್ವಾನಿಸಲಾಗಿದೆ.

ಇದನ್ನೂ ಓದಿ: Bhupat Bhayani ನಾನು ಎಎಪಿಯಲ್ಲೇ ಇದ್ದೇನೆ, ಬಿಜೆಪಿ ಸೇರುವುದಿಲ್ಲ: ಗುಜರಾತ್ ಶಾಸಕ ಭೂಪತ್ ಭಯಾನಿ

ಭೂಪೇಂದ್ರ ಪಟೇಲ್ 2021ರ ಸೆಪ್ಟೆಂಬರ್ 13ರಂದು ಗುಜರಾತ್‌ನ 17ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಅವರು 2021ರ ಸೆಪ್ಟೆಂಬರ್ 12ರಂದು ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರಾಗಿ ಮೊದಲ ಬಾರಿಗೆ ಆಯ್ಕೆಯಾಗಿದ್ದರು. ಅವರು ಮೆಮ್‌ನಗರ ಪುರಸಭೆಯಲ್ಲಿ ಸದಸ್ಯರಾಗಿ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದರು. ನಂತರ ಘಟ್ಲೋಡಿಯಾದಿಂದ ಶಾಸಕರಾಗಿ ಆಯ್ಕೆಯಾದರು.

ತಮ್ಮದೇ ದಾಖಲೆಯನ್ನು ಮುರಿದು ಭೂಪೇಂದ್ರ ಪಟೇಲ್ ಮತ್ತೊಮ್ಮೆ 2022ರ ಚುನಾವಣೆಯಲ್ಲಿ ಘಟ್ಲೋಡಿಯಾ ಕ್ಷೇತ್ರದಿಂದ 1,91,000 ಮತಗಳ ಭರ್ಜರಿ ಅಂತರದಿಂದ ಗೆದ್ದರು. ಗುಜರಾತ್‌ನಲ್ಲಿ ಬಿಜೆಪಿಯ ಈ ಅಗಾಧ ಬಹುಮತವು ಪಟೇಲರ ನಾಯಕತ್ವದಲ್ಲಿ ಜನರ ಸಂಪೂರ್ಣ ನಂಬಿಕೆಯನ್ನು ಬಿಂಬಿಸುತ್ತದೆ. 1962ರ ಜುಲೈ 15ರಂದು ಅಹಮದಾಬಾದ್‌ನಲ್ಲಿ ಜನಿಸಿದ ಭೂಪೇಂದ್ರ ಪಟೇಲ್ ಅಹಮದಾಬಾದ್‌ನ ಸರ್ಕಾರಿ ಪಾಲಿಟೆಕ್ನಿಕ್‌ನಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ಅವರು ಆರ್​ಎಸ್​ಎಸ್​ (RSS) ಸದಸ್ಯರಾಗಿದ್ದಾರೆ.

ಭೂಪೇಂದ್ರ ಪಟೇಲ್ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (AMC) ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಮತ್ತು 2010ರಿಂದ 2015ರವರೆಗೆ ಥಾಲ್ತೇಜ್ ವಾರ್ಡ್‌ಗೆ ಕಾರ್ಪೊರೇಟರ್ ಆಗಿ ಸೇವೆ ಸಲ್ಲಿಸಿದ ಆಡಳಿತದಲ್ಲಿ ಅಪಾರ ಅನುಭವವನ್ನು ಹೊಂದಿದ್ದಾರೆ. ಅವರು 1995ರಲ್ಲಿ ಮೆಮ್‌ನಗರ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡಾಗ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ಅವರು ಒಂದು ದಶಕಕ್ಕೂ ಹೆಚ್ಚು ಕಾಲ ಪುರಸಭೆಗೆ ಸೇವೆ ಸಲ್ಲಿಸಿದರು. 1999-2000 ಮತ್ತು 2004-2006ರ ಅವಧಿಯಲ್ಲಿ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದರು.

ಇದನ್ನೂ ಓದಿ: Gujarat Elections: ಬಿಜೆಪಿಗೆ ಪ್ರಚಂಡ ಗೆಲುವು ತಂದುಕೊಟ್ಟ ಗುಜರಾತ್ ಜನರಿಗೆ ನಮೋ ನಮಃ ಎಂದ ಪ್ರಧಾನಿ ನರೇಂದ್ರ ಮೋದಿ

ಅವರು 2008 ಮತ್ತು 2010 ರ ನಡುವೆ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಸ್ಕೂಲ್ ಬೋರ್ಡ್‌ನ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ನಂತರ ಅವರು 2010ರಿಂದ 2015ರವರೆಗೆ ಥಾಲ್ತೇಜ್ ವಾರ್ಡ್‌ನಿಂದ ಕಾರ್ಪೊರೇಟರ್ ಆಗಿ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ ಅವರು ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (AMC) ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 2015ರಲ್ಲಿ ಅವರು ಅಹಮದಾಬಾದ್ ನಗರಾಭಿವೃದ್ಧಿ ಪ್ರಾಧಿಕಾರದ (AUDA) ಅಧ್ಯಕ್ಷರಾಗಿ ನೇಮಕಗೊಂಡರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ