ಮುಂಬೈ ಬಳಿ 10ನೇ ತರಗತಿ ವಿದ್ಯಾರ್ಥಿಗಳು ಪಿಕ್ನಿಕ್ ಮುಗಿಸಿ ಬರುತ್ತಿದ್ದಾಗ ಬಸ್ ಪಲ್ಟಿ; ಇಬ್ಬರು ಮಕ್ಕಳು ಸಾವು
ಮುಂಬೈನ ಚೆಂಬೂರ್‌ನಲ್ಲಿರುವ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನ 10ನೇ ತರಗತಿಯ 48 ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರನ್ನು ಹೊತ್ತ ಬಸ್ ಲೋನಾವಾಲಾದಿಂದ ಹಿಂತಿರುಗುತ್ತಿತ್ತು. ಆಗ ಅಪಘಾತ ಸಂಭವಿಸಿದೆ.
ಮುಂಬೈ: ಮಹಾರಾಷ್ಟ್ರದ ಮುಂಬೈ (Mumbai Crime) ಬಳಿ ಭಾನುವಾರ ಸಂಜೆ ಬಸ್ ಪಲ್ಟಿಯಾದ ಪರಿಣಾಮ ಇಬ್ಬರು ಶಾಲಾ ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ರಾಯಗಢ (Raigarh) ಜಿಲ್ಲೆಯ ಖೋಪೋಲಿಯಲ್ಲಿ ಕೋಚಿಂಗ್ ತರಗತಿಯ ವಿದ್ಯಾರ್ಥಿಗಳು ಪಿಕ್ನಿಕ್ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಈ ಅಪಘಾತ (Accident) ಸಂಭವಿಸಿದೆ. ಅಪಘಾತದ ಸ್ಥಳ ಮತ್ತು ಆಸ್ಪತ್ರೆಯ ದೃಶ್ಯಗಳ ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿದ್ದು, ವಿದ್ಯಾರ್ಥಿಗಳ ಕೈ ಮತ್ತು ತಲೆಯ ಮೇಲೆ ಗಾಯಗಳಾಗಿರುವುದನ್ನು ನೋಡಬಹುದು.
ಮುಂಬೈನ ಚೆಂಬೂರ್‌ನಲ್ಲಿರುವ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನ 10ನೇ ತರಗತಿಯ 48 ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರನ್ನು ಹೊತ್ತ ಬಸ್ ಲೋನಾವಾಲಾದಿಂದ ಹಿಂತಿರುಗುತ್ತಿತ್ತು. ಆಗ ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಹಳೆ ಮುಂಬೈ-ಪುಣೆ ಹೆದ್ದಾರಿಯಲ್ಲಿ ಬೆಟ್ಟಗಳನ್ನು ಇಳಿಯುತ್ತಿದ್ದಾಗ ಬಸ್ ಪಲ್ಟಿಯಾಗಿದೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಕನ್ನಡ ಶಾಲಾ ಮಕ್ಕಳ ಹಬ್ಬ: ಕನ್ನಡ ಶಾಲೆ ಉಳಿಸಿ ಬೆಳೆಸುವ ವಿಶೇಷ ಕಾರ್ಯಕ್ರಮದಲ್ಲಿ ಮಕ್ಕಳ ಮಸ್ತ್ ಮಜಾ
ಈ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಇತರ ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಲೋನಾವಾಲಾ, ಖೋಪೋಲಿ ಮತ್ತು ಇತರ ಹತ್ತಿರದ ಪ್ರದೇಶಗಳಲ್ಲಿನ ವಿವಿಧ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಮೇಲ್ನೋಟಕ್ಕೆ, ಬ್ರೇಕ್ ವೈಫಲ್ಯದಿಂದ ಬಸ್ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ ಎನ್ನಲಾಗಿದೆ.
Maharashtra: 2 students die, several injured in Raigad bus accident
Read @ANI Story | https://t.co/LaogMsq8Nf#Raigad #BusAccident #Students #Maharashtra pic.twitter.com/bv0JtxkTnq
— ANI Digital (@ani_digital) December 11, 2022
ಲೋನಾವಾಲಾ ಗಿರಿಧಾಮದಿಂದ ಸುಮಾರು 14 ಕಿಮೀ ದೂರದಲ್ಲಿರುವ ಹಳೆ ಮುಂಬೈ-ಪುಣೆ ಹೆದ್ದಾರಿಯ ಮ್ಯಾಜಿಕ್ ಪಾಯಿಂಟ್ ಬೆಟ್ಟದ ಬಳಿ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಂಬೈನ ಉಪನಗರ ಚೆಂಬೂರ್‌ನಿಂದ ಕೋಚಿಂಗ್ ತರಗತಿಯ 48 ವಿದ್ಯಾರ್ಥಿಗಳು ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಅವರೆಲ್ಲರೂ 10 ನೇ ತರಗತಿಯ ವಿದ್ಯಾರ್ಥಿಗಳು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮಂಡ್ಯ: ಎರಡು ಕಾರುಗಳ ನಡುವೆ ಭೀಕರ ಅಪಘಾತ: ನಾಲ್ವರ ಸಾವು
ಈ ಅಪಘಾತದಲ್ಲಿ ಎಲ್ಲಾ ವಿದ್ಯಾರ್ಥಿಗಳು ಮತ್ತು ಚಾಲಕನಿಗೆ ಗಾಯಗಳಾಗಿವೆ. ಗಂಭೀರವಾಗಿ ಗಾಯಗೊಂಡಿದ್ದ 17 ಮತ್ತು 16 ವರ್ಷದ ಇಬ್ಬರು ವಿದ್ಯಾರ್ಥಿಗಳು ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರನ್ನು ಚೆಂಬೂರ್ ಕ್ಯಾಂಪ್ ನಿವಾಸಿ ಹಿತಿಕಾ ಖನ್ನಾ (16) ಮತ್ತು ಉಪನಗರ ಘಾಟ್‌ಕೋಪರ್‌ನ ಅಸಲ್ಫಾ ಗ್ರಾಮದ ನಿವಾಸಿ ರಾಜ್ ರಾಜೇಶ್ ಮಾತ್ರೆ (16) ಎಂದು ಗುರುತಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:51 am, Mon, 12 December 22