ಟಿವಿ9 ವರದಿ ಬೆನ್ನಲ್ಲೆ ಬಿಎಂಟಿಸಿಯ 10 ಭ್ರಷ್ಟ ಅಧಿಕಾರಿಗಳ ಅಮಾನತು, ಇಬ್ಬರು ವರ್ಗಾವಣೆ
ಫೋನ್ಪೇ, ಗೂಗಲ್ ಪೇ ಮೂಲಕ ಲಂಚ ಪಡೆದ ಪ್ರಕರಣ ಸಂಬಂಧ ಬಿಎಂಟಿಸಿಯ ಹತ್ತು ಅಧಿಕಾರಿಗಳನ್ನು ಅಮಾನತು ಮಾಡಿದ್ದು, ಇಬ್ಬರನ್ನು ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು: ಬಿಎಂಟಿಸಿ (BMTC) ವಿಭಾಗದಲ್ಲಿನ ಲಂಚಾವತಾರದ ಬಗ್ಗೆ ಟಿವಿ9 ವರದಿ ಮಾಡಿದ ಬೆನ್ನಲ್ಲೆ ಹತ್ತು ಭ್ರಷ್ಟ ಅಧಿಕಾರಿಗಳನ್ನು ಅಮಾನತು ಮಾಡಲಾಗಿದ್ದು, ಇಬ್ಬರನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಫೋನ್ಪೇ, ಗೂಗಲ್ ಪೇ (Phonepe, Google Pay) ಮೂಲಕ ಲಂಚ (Bribery) ಪಡೆದ ಪ್ರಕರಣ ಸಂಬಂಧ ಬಿಎಂಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಚಂದ್ರಶೇಖರ್ ಹಾಗೂ ಜಗದೀಶ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಜಗದೀಶ್ ಅವರನ್ನು ಕೆಎಸ್ಆರ್ಟಿಸಿ ರಾಮನಗರ ವಿಭಾಗಕ್ಕೆ ವರ್ಗಾವಣೆ ಮಾಡಿದರೆ, ಚಂದ್ರಶೇಖರ್ ಅವರನ್ನು ಕೆಕೆಆರ್ಟಿಸಿ ಕಲಬುರಗಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.
ಲಂಚ ಪಡೆದು ಬಸ್ ಚಾಲಕರಿಗೆ ಹಾಗೂ ನಿರ್ವಾಹಕರಿಗೆ ಡ್ಯೂಟಿ ನೀಡಿದ ಆರೋಪ ಬಿಎಂಟಿಸಿಯ 94 ಅಧಿಕಾರಿಗಳು ವಿರುದ್ಧ ಕೇಳಿಬಂದಿತ್ತು. ಬಿಎಂಟಿಸಿಯಲ್ಲಿ ಡ್ಯೂಟಿ ಬೇಕೆಂದರೆ ಚಾಲಕರು, ನಿರ್ವಾಹಕರು ಲಂಚ ನೀಡಬೇಕಾಗಿತ್ತು. ವಾರಕ್ಕೆ 500 ರೂ., ತಿಂಗಳಿಗೆ 2 ಸಾವಿರ ರೂಪಾಯಿ ಲಂಚ ನೀಡಬೇಕಾಗಿತ್ತು. ಈ ಲಂಚದ ಹಣವನ್ನು ಅಧಿಕಾರಿಗಳು ಗೂಗಲ್ಪೇ, ಫೋನ್ಪೇ ಮೂಲಕ ಪಡೆಯುತ್ತಿದ್ದರು. ಬಿಎಂಟಿಸಿ ಅಧಿಕಾರಿಗಳ ಈ ಲಂಚಾವತಾರದ ಬಗ್ಗೆ ಟಿವಿ9ನಲ್ಲಿ ನಿರಂತರ ವರದಿ ಮಾಡಲಾಗಿತ್ತು.
ಇದನ್ನೂ ಓದಿ: Crime News: ಶೂಟೌಟ್ ಪ್ರಕರಣ: ಚುರುಕುಗೊಂಡ ತನಿಖೆ, ಮೂವರ ರೌಡಿಗಳ ಬಂಧನ
ಆರ್ಆರ್ ನಗರ ಡಿಪೋ ಬಸ್ ಚಾಲಕ ಕಂ ಕಂಡಕ್ಟರ್ ಹೊಳೆಬಸಪ್ಪ ಲಂಚ ನೀಡಿರಲಿಲ್ಲ. ಲಂಚ ನೀಡದಿದ್ದಕ್ಕೆ ಡಿಪೋ ಮ್ಯಾನೇಜರ್ ಮಲ್ಲಿಕಾರ್ಜುನಯ್ಯ ಇವರಿಗೆ ಡ್ಯೂಟಿ ನೀಡಿರಲಿಲ್ಲ. ಇದರಿಂದ ನೊಂದ ಹೊಳೆಬಸಪ್ಪ, ವಿಭಾಗದಲ್ಲಿನ ಲಂಚಾವತಾರದ ಬಗ್ಗೆ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದರು. ಡೆತ್ನೋಟ್ ಆಧಾರಿಸಿ ಬಿಎಂಟಿಸಿ ಎಂಡಿ ಜಿ.ಸತ್ಯವತಿ ಅವರು ತನಿಖೆಗೆ ಆದೇಶಿಸಿದ್ದರು. ಅದರಂತೆ, ನಿತಂತರ ತನಿಖೆ ಮಾಡುತ್ತಿರುವ ಜಿ.ರಾಧಿಕಾ ಅವರು ಭ್ರಷ್ಟ ಅಧಿಕಾರಿಗಳಿಗೆ ಬಿಸಿಮುಟ್ಟಿಸುತ್ತಿದ್ದಾರೆ. ಬಿಎಂಟಿಸಿ ಭದ್ರತೆ ಮತ್ತು ಜಾಗೃತದಳದ ಮುಖ್ಯಸ್ಥೆ ಜಿ.ರಾಧಿಕಾ ಅವರಿಂದ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ತನಿಖಾ ಭಾಗವಾಗಿ ಹತ್ತು ಮಂದಿಯನ್ನು ಅಮಾನತು ಮಾಡಲಾಗಿದೆ.
ಫೋನ್ಪೇ ಮೂಲಕ 51,630 ರೂ. ಲಂಚ ಪಡೆದಿದ್ದ ಬಿಎಂಟಿಸಿ ಡಿಪೋ 8ರ ಕಾನ್ಸ್ಟೇಬಲ್ ಕೆ.ರಮೇಶ್ ಅಮಾನತು ಆಗಿದ್ದಾರೆ. ಗೂಗಲ್ಪೇ ಮೂಲಕ 20,600 ರೂ. ಲಂಚ ಪಡೆದಿದ್ದ ಬಿಎಂಟಿಸಿ ಡಿಪೋ 8ರ ಮೇಲ್ವಿಚಾರಕ ಮೊಹಮ್ಮದ್ ರಫಿ, ಗೂಗಲ್ ಪೇ ಮೂಲಕ 7,28,045 ರೂ. ಲಂಚ ಪಡೆದಿದ್ದ ಬಿಎಂಟಿಸಿ ಡಿಪೋ 8ರ ಕಿರಿಯ ಸಹಾಯಕ ಕೆ.ಎಸ್.ಚಂದನ್, ಫೋನ್ಪೇ ಮೂಲಕ 46,631 ರೂ. ಲಂಚ ಪಡೆದಿದ್ದ ಬಿಎಂಟಿಸಿ ಡಿಪೋ 8ರ ಕಾನ್ಸ್ಟೇಬಲ್ ಇಬ್ರಾಹಿಂ ಜಬೀವುಲ್ಲಾ, ಗೂಗಲ್ಪೇ, ಫೋನ್ಪೇ ಮೂಲಕ 3,15,182 ರೂ. ಲಂಚ ಪಡೆದಿದ್ದ ಬಿಎಂಟಿಸಿ ಡಿಪೋ 8ರ ಚಾಲಕ ಹೆಚ್.ಎಂ.ಗೋವರ್ಧನ್, ಗೂಗಲ್ಪೇ, ಫೋನ್ಪೇ ಮೂಲಕ 64,500 ರೂ. ಲಂಚ ಪಡೆದಿದ್ದ ಬಿಎಂಟಿಸಿ ಡಿಪೋ 8ರ ಅಂಕಿ ಅಂಶ ಸಹಾಯಕ ಕೆ.ಶರವಣ ಅವರನ್ನು ಅಮಾನತು ಮಾಡಲಾಗಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ