ಟಿಕೆಟ್ ಕೊಟ್ಟರೆ ಬಿಜೆಪಿಯಿಂದ ಸ್ಪರ್ಧೆ, ಇಲ್ಲವೇ ಪಕ್ಷೇತರವಾಗಿ ಕಣಕ್ಕೆ: ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್
ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಮತ್ತು ಖನಿಜ ನಿಗಮ ಮಾಜಿ ಅದ್ಯಕ್ಷ ಎಸ್.ಲಿಂಗಮೂರ್ತಿ ನಡುವಿನ ಶೀತಲಸಮರ ಹಿನ್ನಲೆ ನಡೆಸಲಾದ ಸಂಧಾನಸಭೆ ವಿಫಲಗೊಂಡಿದೆ.
ಚಿತ್ರದುರ್ಗ: ಹೊಸದುರ್ಗ ಕ್ಷೇತ್ರದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ (MLA Goolihatti Sekhar) ಮತ್ತು ಖನಿಜ ನಿಗಮ ಮಾಜಿ ಅದ್ಯಕ್ಷ ಎಸ್.ಲಿಂಗಮೂರ್ತಿ (S.Lingamurthy) ನಡುವೆ ನಡೆಯುತ್ತಿರುವ ವಾಕ್ಸಮರವು ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟುಮಾಡುತ್ತಿದೆ. ಹೀಗಾಗಿ ಇಬ್ಬರನ್ನು ರಾಜಿ ಮಾಡಲು ಹೊಸದುರ್ಗ (Hosadurga) ಪಟ್ಟಣದಲ್ಲಿ ನಡೆದ ಸಂಧಾನ ಸಭೆ ನಡೆಸಲಾಯಿತು. ಆದರೆ ಈ ಸಭೆಯು ವಿಫಲಗೊಂಡಿದೆ. ಮುಂದಿನ ಬಾರಿ ಪಕ್ಷದಿಂದ ತನಗೆ ಟಿಕೆಟ್ ಕೊಟ್ಟರೆ ಬಿಜೆಪಿಯಿಂದ ಸ್ಪರ್ಧಿಸುತ್ತೇನೆ, ನೀಡದಿದ್ದರೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಸವಾಲು ಹಾಕಿದ್ದಾರೆ. ಈ ರಾಜಕೀಯ ಬೆಳವಣಿಗೆಯು ಚುನಾವಣೆ ಸಮಯದಲ್ಲಿ ಬಿಜೆಪಿಗೆ ಹೊಡೆತ ನೀಡುವ ಸಾಧ್ಯತೆ ಇದೆ.
ಹೊಸದುರ್ಗದ ಪಟ್ಟಣದಲ್ಲಿ ಕಳಪೆ ಕಾಮಗಾರಿ ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ರೋಶಗೊಂಡಿದ್ದ ಖನಿಜ ನಿಗಮ ಮಾಜಿ ಅದ್ಯಕ್ಷ ಎಸ್.ಲಿಂಗಮೂರ್ತಿ ಅವರು, ಹೊಸದುರ್ಗದಲ್ಲಿ ಜನರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಭ್ರಷ್ಟ ಶಾಸಕ ಎಂದಿದ್ದರು. ಇದಕ್ಕೆ ಪ್ರತಿಯಾಗಿ ಶಾಸಕರು, ಎಸ್.ಲಿಂಗಮೂರ್ತಿ ಭ್ರಷ್ಟ ಎಂಬುದು ರಾಜ್ಯಕ್ಕೆ ಗೊತ್ತಿದೆ. ಬಿಜೆಪಿ ಟಿಕೆಟ್ ತಪ್ಪಿಸಲು ಅಪಪ್ರಚಾರ ನಡೆಯುತ್ತಿದೆ ಎಂದಿದ್ದರು.
ಇದನ್ನೂ ಓದಿ: ರಾಜ್ಯದ 20 ಜಿಲ್ಲೆಗಳಲ್ಲಿ ನಾವೆಲ್ಲರೂ ಒಟ್ಟಿಗೆ ಬಸ್ ಯಾತ್ರೆ ಮಾಡುತ್ತೇವೆ: ಸಿದ್ದರಾಮಯ್ಯ
ಹೊಸದುರ್ಗ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿರುವ ಗೂಳಿಹಟ್ಟಿ ಶೇಖರ್ ಮತ್ತು ಲಿಂಗಮೂರ್ತಿ ನಡುವಿನ ಟೀಕಾಪ್ರಹಾರಗಳು ಪಕ್ಷಕ್ಕೆ ಧಕ್ಕೆ ಉಂಟು ಮಾಡಿದ್ದಲ್ಲದೆ, ಗೊಂದಲದ ವಾತಾವಣ ನಿರ್ಮಾಣವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ನಾಯಕರು ಸಂಧಾನ ಸಭೆಗೆ ಮುಂದಾಗಿದ್ದರು. ಅದರಂತೆ ಹೊಸದುರ್ಗ ನಗರದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ, ಎಂಎಲ್ಸಿ ಕೆ.ಎಸ್.ನವೀನ್, ಬಿಜೆಪಿ ಜಿಲ್ಲಾದ್ಯಕ್ಷ ಎ.ಮುರುಳಿ ನೇತೃತ್ವದಲ್ಲಿ ಸಂಧಾನ ಸಭೆ ನಡೆಸಲಾಯಿತು.
ಇಬ್ಬರು ನಾಯಕರ ನೇತೃತ್ವದಲ್ಲಿ ನಡೆದ ಸಂಧಾನ ಸಭೆಗೆ ಗೂಳಿಹಟ್ಟಿ ಶೇಖರ್ ಮತ್ತು ಲಿಂಗಮೂರ್ತಿ ಅವರು ಭಾಗಿಯಾಗಿದ್ದರು. ಪಕ್ಷದ ಸೂಚನೆಯಂತೆ ನಡೆದುಕೊಳ್ಳಲು ಸಭೆಯಲ್ಲಿ ಸೂಚನೆ ನೀಡಲಾಯಿತು. ಆದರೆ ಈ ಸಭೆ ಬಹುತೇಕ ವಿಫಲಗೊಂಡಂತೆ ಎದ್ದು ಕಾಣುತ್ತಿದೆ. ಸಭೆಯಲ್ಲಿ ಸಮಾಧಾನಗೊಂಡಂತೆ ಕಾಣದ ಗೂಳಿಹಟ್ಟಿ ಶೇಖರ್, ಬಿಜೆಪಿ ಟಿಕೆಟ್ ನೀಡಿದರೆ ಬಿಜೆಪಿಯಿಂದ ಸ್ಪರ್ದಿಸುತ್ತೇನೆ, ಬಿಜೆಪಿ ಟಿಕೆಟ್ ನೀಡದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಸೋತರೆ ಲೋಕಸಭೆ ಚುನಾವಣೆಗೂ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ