ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ್​ಗೆ ಬಂಡಾಯದ ಬಿಸಿ; ಯಡಿಯೂರಪ್ಪ ಭೇಟಿಯಾದ ಮಾಜಿ ಶಾಸಕರ ನಿಯೋಗ

| Updated By: Rakesh Nayak Manchi

Updated on: Jan 26, 2024 | 3:03 PM

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಟಿಕೆಟ್ ಲಾಭಿ ಆರಂಭವಾಗಿದೆ. ದಾವಣಗೆರೆ ಸಂಸದರ ವಿರುದ್ಧ ಬಂಡಾಯವೆದ್ದಿರುವ ಮಾಜಿ ಶಾಸಕರು ಹಾಗೂ ಸ್ಥಳೀಯ ನಾಯಕರು ಬೆಂಗಳೂರಿನಲ್ಲಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಈ ಬಾರಿ ಕ್ಷೇತ್ರದಲ್ಲಿ ಹೊಸ ಮುಖಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ.

ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ್​ಗೆ ಬಂಡಾಯದ ಬಿಸಿ; ಯಡಿಯೂರಪ್ಪ ಭೇಟಿಯಾದ ಮಾಜಿ ಶಾಸಕರ ನಿಯೋಗ
ಜಿಎಂ ಸಿದ್ದೇಶ್ವರ್ ಮತ್ತು ಎಸ್​ಎ ರವೀಂದ್ರನಾಥ್
Follow us on

ಬೆಂಗಳೂರು, ಜ.26: ದಾವಣಗೆರೆ ಜಿಲ್ಲೆಯಲ್ಲಿ ಹಾಲಿ ಸಂಸದರಾಗಿರುವ ಜಿಎಂ ಸಿದ್ದೇಶ್ವರ್ (GM Siddeshwar) ವಿರುದ್ಧ ಮಾಜಿ ಶಾಸಕರು ಹಾಗೂ ಸ್ಥಳೀಯ ನಾಯಕರು ಬಂಡಾಯವೆದಿದ್ದಾರೆ. ಸಿದ್ದೇಶ್ವರ್ ಅವರಿಗೆ ಟಿಕೆಟ್ ನೀಡದಂತೆ ಹಾಗೂ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ಮಾಜಿ ಶಾಸಕರ ನಿಯೋಗ ಬಿಎಸ್ ಯಡಿಯೂರಪ್ಪ (BS Yediyurappa) ಅವರನ್ನು ಭೇಟಿಯಾಗಿ ಮನವಿ ಮಾಡಿದೆ.

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನಿವಾಸ ಪವರ್​ ಸೆಂಟರ್​ ಆಗಿದೆ. ಟಿಕೆಟ್ ವಿಚಾರವಾಗಿ ನಾಯಕರು ಯಡಿಯೂರಪ್ಪರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ. ಅದರಂತೆ ದಾವಣಗೆರೆ ಜಿಲ್ಲೆಯ ಬಿಜೆಪಿ ಮುಖಂಡರು ಕೂಡ ಆಗಮಿಸಿದ್ದಾರೆ.

ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ಅವರ ನಿವಾಸಕ್ಕೆ ಮಾಜಿ ಸಚಿವ ರೇಣುಕಾಚಾರ್ಯ, ಎಸ್​ಎ ರವೀಂದ್ರನಾಥ್, ಪರಿಷತ್​ ಮಾಜಿ ಸದಸ್ಯ ಶಿವಯೋಗಿ ಸ್ವಾಮಿ, ಗುರುಸಿದ್ದನಗೌಡ, ಕರುಣಾಕರ, ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಮಲ್ಲಿಕಾರ್ಜುನ ಸೇರಿದಂತೆ 100ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಆಗಮಿಸಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಇದನ್ನೂ ಓದಿ: ಬಿಜೆಪಿಯಿಂದಲೇ ಸ್ಪರ್ಧೆಗೆ ತೀರ್ಮಾನ, ಮಂಡ್ಯ ಬಿಟ್ಟು ಬೇರೆ ಕಡೆ ಟಿಕೆಟ್‌ ನೀಡಿದ್ರೆ ರಾಜಕೀಯವೇ ಬೇಡವೆಂದ ಸುಮಲತಾ

ಸಂಸದ ಜಿ.ಎಂ.ಸಿದ್ದೇಶ್ವರ್ ಚಿತ್ರದುರ್ಗದವರಾಗಿದ್ದು, ಅವರಿಗೆ ದಾವಣಗೆರೆ ಕ್ಷೇತ್ರದ ಟಿಕೆಟ್ ನೀಡದಂತೆ ಒತ್ತಾಯಿಸದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಸ್ಥಳೀಯರಿಗೆ ಟಿಕೆಟ್ ಕೊಡುವಂತೆ ಮನವಿ ಮಾಡಿದ ನಾಯಕರು, ಸರ್ವೆ ಮಾಡಿಸಿ ಯಾರ ಹೆಸರು ಬರುತ್ತದೋ ಅವರಿಗೆ ಟಿಕೆಟ್ ಕೊಡಿ ಎಂದು ಮನವಿ ಮಾಡಿದ್ದಾರೆ.

ಯಡಿಯೂರಪ್ಪ ಭೇಟಿ ಬಳಿಕ ಮಾತನಾಡಿದ ಮಾಜಿ ಶಾಸಕ ಎಸ್​ಎ ರವೀಂದ್ರನಾಥ್, ಸ್ಥಳೀಯರಿಗೆ ಬಿಜೆಪಿ ಟಿಕೆಟ್​ ಕೊಡುವಂತೆ ನಾವು ಮನವಿ ಮಾಡಿದ್ದೇವೆ. ಕೊಟ್ರೇಶ್, ರವಿ, ಶಿವಯೋಗಿ ಸ್ವಾಮಿ, ರೇಣುಕಾಚಾರ್ಯ ಆಕಾಂಕ್ಷಿಗಳಾಗಿದ್ದಾರೆ. ನಾನು ಲೋಕಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿ ಅಲ್ಲ. ಯಾರೇ ನಿಂತರೂ ಗೆಲ್ಲುತ್ತಾರೆ, ಸಿದ್ದೇಶ್ವರ್​ಗೆ ಟಿಕೆಟ್ ನೀಡದಂತೆ ಮನವಿ ಮಾಡಲಾಗಿದೆ ಎಂದರು.

ದಾವಣಗೆರೆ ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ, ದಾವಣಗೆರೆಯಲ್ಲಿ ಚುನಾವಣೆ ಪೂರ್ವ ಪಾರದರ್ಶಕ ಸಮೀಕ್ಷೆ ಮಾಡಲಿ. ನನಗೆ ಟಿಕೆಟ್​​ ಕೋಡಿ ಅಂದಿಲ್ಲ, ಸಮೀಕ್ಷೆ ಮಾಡಿ ಯಾರಿಗಾದರೂ ಕೊಡಲಿ. ಯಡಿಯೂರಪ್ಪ ಬಳಿ ಕಾರ್ಯಕರ್ತರ ಭಾವನೆಯನ್ನು ತಿಳಿಸುತ್ತೇನೆ ಎಂದರು. ಬೆಂಗಳೂರಿನಲ್ಲಿ ಯಡಿಯೂರಪ್ಪ ಭೇಟಿ ಬಳಿಕ ಮಾಜಿ ಸಚಿವ ಕರುಣಾಕರ ರೆಡ್ಡಿ, ಯಾರಿಗೂ ಟಿಕೆಟ್ ಕೊಡಬಾರದು ಅಂತಾ ಹೇಳಿಲ್ಲ. ಸಮೀಕ್ಷೆ ಮಾಡಿ ಟಿಕೆಟ್ ಕೊಡಿ ಎಂದು ಹೇಳಿದ್ದಾಗಿ ತಿಳಿಸಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ